ವಸ್ತುಪ್ರದರ್ಶನ, ನೂತನ ರಂಗಮಂದಿರ ಉದ್ಘಾಟನೆ
ಬೆಟ್ಟಂಪಾಡಿ: ನಿಡ್ಪಳ್ಳಿ ಗ್ರಾಮದ ಮುಂಡೂರು-1 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಿರಿಯ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಶಾಲಾ ವಾರ್ಷಿಕೋತ್ಸವ, ನೂತನ ರಂಗಮಂದಿರ ಉದ್ಘಾಟನೆ ಡಿ. 14 ರಂದು ಬೆಳಿಗ್ಗೆ ನಡೆಯಿತು.
ಸಭಾಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಭಾಸ್ಕರ ಕರ್ಕೇರರವರು ಮಾತನಾಡಿ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಶಿಕ್ಷಣದ ಜೊತೆಗೆ ಪಡೆದಾಗ ಜೀವನ ಅತ್ಯಂತ ಮೌಲ್ಯಯುತವಾಗಿ ನಡೆಯುತ್ತದೆ. ಆ ದಿಶೆಯಲ್ಲಿ ಈ ಶಾಲೆಯ ಅಭಿವೃದ್ಧಿಗೆ ಮುಂದಾದೆವು. ಪೋಷಕರ ಹೃದಯತುಂಬಿದ ಸಹಕಾರ ಇಲ್ಲಿಯವರೆಗೆ ನಮ್ಮನ್ನು ತಲುಪಿಸಿದೆ. ಮುಂದಿನ ದಿನಗಳಲ್ಲಿಯೂ ಶಾಲೆ ಸಂಪೂರ್ಣ ಯಶಸ್ಸಿನ ಹಾದಿಯಲ್ಲಿ ಸಾಗುತ್ತದೆ ಎಂಬ ಭರವಸೆ ನಮಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಬಿ.ಕೆ. ಹೆಗ್ಡೆಯವರು ಮಾತನಾಡಿ ಬ್ರಹ್ಮಕಲಶೋತ್ಸವದ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಿರುವುದನ್ನು ಕಂಡು ಸಂತೋಷಪಟ್ಟೆ. ಅಂಕಗಳಿಗಿಂತ ಸಂಸ್ಕಾರ ಅವಶ್ಯಕವಾದುದು. ಸಂಸ್ಕಾರಭರಿತ ಶಿಕ್ಷಣ ಕೊಡುವ ಕಾರ್ಯ ಇಲ್ಲಿ ಆಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಶಾಲೆಯ ಹಿರಿಯ ವಿದ್ಯಾರ್ಥಿ, ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ಹಿರಿಯ ವಿಜ್ಞಾನಿ ಗಂಗಾಧರ ರೈ ಮಾತನಾಡಿ ತಾನು ಶಾಲೆಯಲ್ಲಿ ಕಳೆದ ದಿನಗಳು, ಆ ಕಾಲದ ಜೀವನ ಪರಿಸ್ಥಿತಿ ಮತ್ತು ಶಾಲಾ ದಿನಚರಿಗಳನ್ನು ಮೆಲುಕು ಹಾಕಿದರು. ನಿವೃತ್ತ ಡಿವೈಎಸ್ಪಿ ನುಳಿಯಾಲು ಭಾಸ್ಕರ ರೈ ಯವರು ಮಾತನಾಡಿ ನಮ್ಮ ಬ್ಯಾಚ್ ನಲ್ಲಿ ಈ ಶಾಲೆ ಪ್ರಪ್ರಥಮ ಬಾರಿಗೆ ಶೇಕಡಾ ನೂರು ಫಲಿತಾಂಶ ದಾಖಲಿಸಿತ್ತು. ನಮ್ಮನ್ನು ಈ ಮಟ್ಟಿಗೆ ಬೆಳೆಸಿದ ಶಾಲೆ ಇದು. ಹಬ್ಬದ ರೀತಿಯಲ್ಲಿ ವಾರ್ಷಿಕೋತ್ಸವ ಆಚರಿಸುತ್ತಿರುವುದು ಖುಷಿ ನೀಡಿದೆ ಎಂದರು.
ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಶಿವಪ್ಪ ಪೂಜಾರಿ ನುಳಿಯಾಲುರವರು ಮಾತನಾಡಿ ದೇವಸ್ಥಾನದ ಕಾರ್ಯಕ್ರಮದಂತೆ ಭಾಸವಾಗುತ್ತಿದೆ. ಇದರ ಹಿಂದಿನ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು. ಈ ಶಾಲೆಯಲ್ಲಿ ಎರಡಕ್ಷರ ಕಲಿತು ತಾಲೂಕು ಪಂಚಾಯತ್ ಅಧ್ಯಕ್ಷನಾಗಿದ್ದಾಗ ಈ ಭಾಗದಲ್ಲಿ ಸಮಾಜ ಸೇವೆ ಮಾಡುವ ಅವಕಾಶ ದೊರೆತಿತ್ತು ಎಂದರು.
ಶಿಕ್ಷಣ ಇಲಾಖೆಯ ಇಸಿಒ ಹರಿಪ್ರಸಾದ್ ರವರು ಮಾತನಾಡಿ ಗುಣಮಟ್ಟದ ಶಿಕ್ಷಣ ಈ ಶಾಲೆಯಲ್ಲಿ ನೀಡಲಾಗುತ್ತಿದೆ ಎಂಬುದು ನಮಗೆಲ್ಲಾ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿ ಶುಭ ಹಾರೈಸಿದರು. ಕ್ಲಸ್ಟರ್ ಸಿಆರ್‌ಪಿ ಪರಮೇಶ್ವರಿಯವರು ಮಾತನಾಡಿ ವ್ಯವಸ್ಥಿತವಾಗಿ, ಸಮುದಾಯ ಬೆರೆತು ಶಾಲೆ ವಾರ್ಷಿಕೋತ್ಸವ ಆಚರಿಸಿರುವುದಕ್ಕೆ ಇಲಾಖೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಹಿರಿಯ ವಿದ್ಯಾರ್ಥಿ, ಪತ್ರಕರ್ತ ಶೇಷಕೃಷ್ಣ ನುಳಿಯಾಲುರವರು ಮಾತನಾಡಿ ಸರಕಾರಿ ಕನ್ನಡ ಶಾಲೆಗಳನ್ನು ಕಡೆಗಣಿಸುವಂತಿಲ್ಲ. ವಾರ್ಷಿಕೋತ್ಸವದ ಹುರುಪು ನಿತ್ಯ ನಿರಂತರವಾಗಿರಲಿ. ಈ ಶಾಲೆಯಲ್ಲೂ ಆಂಗ್ಲಮಾಧ್ಯಮ ಶಾಲೆ ಆರಂಭಿಸುವಲ್ಲಿ ನಾವೆಲ್ಲಾ ಶ್ರಮಿಸೋಣ ಎಂದರು.
ಸನ್ಮಾನ
ನೂತನ ರಂಗಮಂದಿರದ ಸುಮಾರು 1.5 ಲಕ್ಷ ವೆಚ್ಚವನ್ನು ಭರಿಸಿದ ನುಳಿಯಾಲು ದಿ. ಪಟೇಲ್ ರಾಮಯ್ಯ ರೈ ಮತ್ತು ಸುಮತಿ ರಾಮಯ್ಯ ರೈ ಸ್ಮರಣಾರ್ಥ ಅವರ ಪುತ್ರಿಯರಾದ ನವೀನ ಪ್ರಕಾಶ್ಚಂದ್ರ ರೈ, ಸಹನಾ ರಾಧಾಕೃಷ್ಣ ರೈ, ಪ್ರವೀಣ ಬಿ.ಕೆ. ಹೆಗ್ಡೆ ಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಿವೃತ್ತ ಡಿವೈಎಸ್ಪಿ ಭಾಸ್ಕರ ರೈ ನುಳಿಯಾಲು, ಎಸ್‌ಡಿಎಂಸಿ ಅಧ್ಯಕ್ಷ ಭಾಸ್ಕರ ಕರ್ಕೇರ, ನಿವೃತ್ತ ವಿಜ್ಞಾನಿ ಗಂಗಾಧರ ರೈ ನುಳಿಯಾಲು, ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಎಸ್‌ಎಸ್ಎಲ್‌ಸಿಯಲ್ಲಿ ಪ್ರಥಮ ಸ್ಥಾನಿಯಾದ ಪ್ರಥಮ್ ಮತ್ತು ಪಿಯುಸಿಯಲ್ಲಿ ಪ್ರಥಮ ಸ್ಥಾನಿಯಾದ ಹರ್ಷಿತ್ ರವರನ್ನು ಸನ್ಮಾನಿಸಲಾಯಿತು.
ಉದ್ಯಮಿ ಜನಾರ್ಧನ ಪೂಜಾರಿ ಪದಡ್ಕ, ನಿಡ್ಪಳ್ಳಿ ಗ್ರಾ.ಪಂ. ಉಪಾಧ್ಯಕ್ಷೆ ಸೀತಾ, ಸದಸ್ಯರಾದ ನಂದಿನಿ ಆರ್. ರೈ, ಅವಿನಾಶ್ ರೈ, ಸತೀಶ್ ರೈ ನೆಲ್ಲಿಕಟ್ಟೆ, ಹೆಸರಾಂತ ಜೇನು ಕೃಷಿಕ ಮನಮೋಹನ ಅರಂಭ್ಯ ಶುಭ ಹಾರೈಸಿದರು.
ಬೆಳಿಗ್ಗೆ ಎಸ್‌ಡಿಎಂಸಿ ಅಧ್ಯಕ್ಷ ಭಾಸ್ಕರ ಕರ್ಕೇರ ಧ್ವಜಾರೋಹಣ ನೆರವೇರಿಸಿದರು. ರಂಗಮಂದಿರವನ್ನು ದಾನಿಗಳು ಉದ್ಘಾಟಿಸಿದರು. ಸಾಂಪ್ರದಾಯಿಕ ವಸ್ತುಗಳ ವಸ್ತುಪ್ರದರ್ಶನವನ್ನು ಬೇಂಗಪದವು ಶಾಲಾ ಮುಖ್ಯಗುರು ಶಿವಕುಮಾರ್ ರವರು ಉದ್ಘಾಟಿಸಿದರು. ವಾರ್ಷಿಕೋತ್ಸವ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ನಡೆಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಶಿಕ್ಷಕರು ನಿರ್ವಹಣೆ ಮಾಡಿದರು.
ವಿದ್ಯಾರ್ಥಿಗಳು ಪ್ರಾರ್ಥಿಸಿದರು. ನುಳಿಯಾಲು ರಾಧಾಕೃಷ್ಣ ರೈ ಸ್ವಾಗತಿಸಿ, ವಾರ್ಷಿಕೋತ್ಸವ ಸಮಿತಿಯ ಕಾರ್ಯದರ್ಶಿ ಗುರುವ ಬಿ. ರವರು ವಂದಿಸಿದರು. ಪ್ರಿಯದರ್ಶಿನಿ ಆಂಗ್ಲಮಾಧ್ಯಮ ಶಾಲೆಯ ಮುಖ್ಯಗುರು ರಾಜೇಶ್ ಎನ್. ಕಾರ್ಯಕ್ರಮ ನಿರೂಪಿಸಿದರು. ವೇದಿಕೆಗೆ ‘ಮಯೂರ ವೇದಿಕೆ’ ಎಂದು ಹೆಸರಿಸಿದ ಪ್ರಕಾಶ್ಚಂದ್ರ ರೈ ನುಳಿಯಾಲುರವರನ್ನು ಗೌರವಿಸಲಾಯಿತು.
ಅತಿಥಿ ಅಭ್ಯಾಗತರನ್ನು ಸುಧೀರ್ ದುರ್ಗಾ, ತೇಜಸ್ವಿನಿ, ಸೌಮ್ಯಲತಾ, ಬಾಲಕೃಷ್ಣ ನೆಲ್ಲಿತ್ತಡ್ಕ, ಶರ್ಮಿಳಾ ಕತ್ತಲಕಾನ, ಅಣ್ಣು ಕೆ., ನಿರ್ಮಲಾ, ನಯನ ಬೀಜಂತ್ತಡ್ಕ, ಸೀತಮ್ಮ ಬೀಜಂತ್ತಡ್ಕ, ಪ್ರದೀಪ್ ರೈ ನುಳಿಯಾಲು, ಮೋಕ್ಷಿತಾ, ವಿದ್ಯಾ ಸುರೇಶ್ ಪೂಜಾರಿ ಶಾಲು ಸ್ಮರಣಿಕೆ ನೀಡಿ ಗೌರವಿಸಿದರು.
ವೇದಿಕೆಯಲ್ಲಿ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಶಾಲಾ ಮುಖ್ಯಗುರು ಆಶಾ ಗೋವಿಂದ ಭಟ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಧರ ಬಂಟಾಜೆ ಉಪಸ್ಥಿತರಿದ್ದರು. ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಸಹಭೋಜನ ನಡೆಯಿತು. ಅಪರಾಹ್ನ ಮಕ್ಕಳಿಗೆ ಮತ್ತು ಪೋಷಕರಿಗೆ ಛದ್ಮವೇಷ ಸ್ಪರ್ಧೆ ನಡೆಯಿತು.