ರೋಟರಿಯಿಂದ ಸಮಾಜಕ್ಕೆ ಅರಿವು ಮೂಡಿಸುವ ಕಾರ್ಯ ಶ್ಲಾಘನೀಯ-ವಿಕ್ರಂ ದತ್ತ
ಪುತ್ತೂರು:ರೋಟರಿ ಸೆಂಟ್ರಲ್ ಹದಿಹರೆಯದ ಮಕ್ಕಳ ಮುಂದಿನ ಭವಿಷ್ಯ ಉಜ್ವಲಗೊಳ್ಳಲು ತನ್ನ ಸಿಗ್ನೇಚರ್ ಪ್ರಾಜೆಕ್ಟ್ ಎನಿಸಿದ ಅರಿವು ಕಾರ್ಯಕ್ರಮ ಹಮ್ಮಿಕೊಂಡಿರುವುದು ಒಳ್ಳೆಯ ಕಾರ್ಯಕ್ರಮ ಇದೇ ರೀತಿ ರೋಟರಿ ಕ್ಲಬ್ಗಳು ಸಮಾಜದಲ್ಲಿ ಅನೇಕ ಸಮಾಜಮುಖಿ ಚಟುವಟಿಕೆಗಳನ್ನು ಮಾಡುವ ಮೂಲಕ ಸಮಾಜದಲ್ಲಿ ಅರಿವು ಮೂಡಿಸುವ ಕಾರ್ಯ ಆಗುತ್ತಿರುವುದು ಶ್ಲಾಘನೀಯ ಎಂದು ರೋಟರಿ 3181, ವಲಯ ಐದರ ರೋಟರಿ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರು ಹೇಳಿದರು.
ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ಗೆ ರೋಟರಿ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರು ಡಿ.17 ರಂದು ಪುತ್ತೂರು-ಬಪ್ಪಳಿಗೆ ಆಶ್ಮಿ ಕಂಫರ್ಟ್ ಸಭಾಂಗಣದಲ್ಲಿ ನಡೆದ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಸಂದರ್ಭ ಕ್ಲಬ್ನ ವಿವಿಧ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ಕಾರ್ಯಕ್ರಮ ನಮ್ಮದು ಎಂಬಂತೆ ತೊಡಗಿಸಿಕೊಳ್ಳಿ-ಸೂರ್ಯನಾಥ ಆಳ್ವ:
ರೋಟರಿ ಅಸಿಸ್ಟೆಂಟ್ ಗವರ್ನರ್ ಸೂರ್ಯನಾಥ ಆಳ್ವರವರು ಕ್ಲಬ್ ಸದಸ್ಯ ಸನತ್ ರೈ ಸಂಪಾದಕತ್ವದ ಕ್ಲಬ್ ಬುಲೆಟಿನ್ ಅನಾವರಣಗೊಳಿಸಿ ಮಾತನಾಡಿ, ರೋಟರಿಯ ಪ್ರತಿ ಸದಸ್ಯರು ನಿಜ ಸೌರಭ ಸೂಸುವ ಮಲ್ಲಿಗೆಯಂತೆ ಕಾರ್ಯ ನಿರ್ವಹಿಸಿ ಕ್ಲಬ್ ಬೆಳವಣಿಗೆಗೆ ಸಹಕರಿಸಬೇಕು ಜೊತೆಗೆ ಕ್ಲಬ್ ಹಮ್ಮಿಕೊಳ್ಳುವ ಪ್ರತಿ ಚಟುವಟಿಕೆಗೆ ಸದಸ್ಯರು ಕಾರ್ಯಕ್ರಮ ನಮ್ಮದು ಎಂಬಂತೆ ಪೂರ್ಣರೀತಿಯಲ್ಲಿ ತೊಡಗಿಸಿಕೊಳ್ಳಿ ಎಂದರು.
ರೋಟರಿಯು ವ್ಯಕ್ತಿಯನ್ನು, ನಾಡನ್ನು ಬೆಳೆಸುತ್ತದೆ-ಮೊಹಮ್ಮದ್ ರಫೀಕ್:
ರೋಟರಿ ವಲಯ ಸೇನಾನಿ ಮೊಹಮ್ಮದ್ ರಫೀಕ್ ದರ್ಬೆ ಮಾತನಾಡಿ, ಪುತ್ತೂರಿನಲ್ಲಿ ಎಂಟು ರೋಟರಿ ಕ್ಲಬ್ಗಳಿದ್ದು ಇದರಲ್ಲಿ ರೋಟರಿ ಸೆಂಟ್ರಲ್ ಆರನೇ ಕ್ಲಬ್ ಆಗಿದ್ದು, ಆರನೇ ವರ್ಷ ಆಚರಿಸುತ್ತಿದ್ದು, ಆರು ತಿಂಗಳ ಅವಧಿಯಲ್ಲಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ನಡೆಯುತ್ತಿದೆ. ರೋಟರಿಯು ಓರ್ವ ವ್ಯಕ್ತಿಯನ್ನು, ವಿದ್ಯಾರ್ಥಿಯನ್ನು ಬೆಳೆಸುತ್ತದೆ ಜೊತೆಗೆ ನಾಡನ್ನು ಬೆಳೆಸುವ ಪೂರಕ ವ್ಯವಸ್ಥೆ ಕೂಡ ಕಲ್ಪಿಸುತ್ತದೆ. ಕರ್ನಾಟಕದಲ್ಲಿ ಅತೀ ಹೆಚ್ಚು ಕ್ಲಬ್ ಪುತ್ತೂರಿನಲ್ಲಿ ಇದ್ದು ಸಮಾಜ ಸೇವೆಗೆ ಇಲ್ಲಿ ಉತ್ಕೃಷ್ಟ ಅವಕಾಶವಿದೆ ಎಂದರು.
ಅಧ್ಯಕ್ಷ ಅನ್ನೋದು ಅಧಿಕಾರವಲ್ಲ, ಅದು ಜವಾಬ್ದಾರಿ-ಪಿ.ಎಂ ಅಶ್ರಫ್:
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಪಿ.ಎಂ ಅಶ್ರಫ್ ಮಾತನಾಡಿ, ನಾಯಕತ್ವ ವಹಿಸುವುದು ಸುಲಭ, ನಿರ್ವಹಿಸುವುದು ಕಷ್ಟ. ಆದರೆ ಸಂಸ್ಥೆಯ ಸದಸ್ಯರ ಸಹಕಾರವಿದ್ದಾಗ ಇದು ಸರಳ. ಅಧ್ಯಕ್ಷ ಅನ್ನೋದು ಅದು ಅಧಿಕಾರವಲ್ಲ, ಅದೊಂದು ಜವಾಬ್ದಾರಿ. ಕ್ಲಬ್ನ ಸಾರಥ್ಯ ವಹಿಸಿದಾಗ ಕನಸುಗಳಿದ್ದವು, ಯೋಜನೆಗಳಿದ್ದವು, ಸವಾಲುಗಳು ಇದ್ದವು. ಆದರೆ ಅವೆಲ್ಲವುಗಳನ್ನು ಸುಲಲಿತವಾಗಿ ನಿಭಾಯಿಸಿಕೊಂಡು ಹೋಗಲು ಸಾಧ್ಯವಾಗಿದ್ದು ಸದಸ್ಯರ ಸಹಕಾರದಿಂದ ಆಗಿದೆ ಎಂದರು.
ಧತ್ತಿನಿಧಿ ವಿದ್ಯಾರ್ಥಿ ವೇತನ ವಿತರಣೆ:
ಕ್ಲಬ್ ಸದಸ್ಯರಾಗಿದ್ದು, ಕಂದಾಯ ಇಲಾಖೆಯಲ್ಲಿ ಉಪ ತಹಶಿಲ್ದಾರ್ ಆಗಿದ್ದ ಕೊರೋನಾ ಸಂದರ್ಭದಲ್ಲಿ ಅಗಲಿದ ಶ್ರೀಧರ್ ಕೋಡಿಜಾಲು ಸ್ಮರಣಾರ್ಥ ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯ ಮೋಕ್ಷಿತಾ,ನಿರೀಕ್ಷಾ, ಚಿನ್ಮಯ, ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಮೇಘಶ್ರೀ, ಧನುಶ್ರೀರವರಿಗೆ ಧತ್ತಿನಿಧಿ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ನೂತನ ಸದಸ್ಯರ ಸೇರ್ಪಡೆ:
ಕ್ಲಬ್ ಸರ್ವಿಸ್ನಡಿಯಲ್ಲಿ ನ್ಯಾಯವಾದಿ ದಿವಾಕರ್ ರೈ, ಕ್ಲಾಸ್ ವನ್ ಪಿಡಬ್ಲ್ಯೂಡಿ ಕಾಂಟ್ರಾಕ್ಟರ್ ಗಿರೀಶ್ ಕೆ.ಎಸ್ರವರುಗಳಿಗೆ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರು ರೋಟರಿ ಪಿನ್ ತೊಡಿಸಿ, ಪ್ರತಿಜ್ಞಾ ವಿಧಿ ಬೋಧಿಸಿ ಕ್ಲಬ್ಗೆ ಅಧಿಕೃತವಾಗಿ ಸೇರ್ಪಡೆಗೊಳಿಸಿದರು.
ಟಿ.ಆರ್.ಎಫ್ ಗೌರವ:
ಅಂತರರಾಷ್ಟ್ರೀಯ ರೋಟರಿ ಸಂಸ್ಥೆಗೆ ಟಿ.ಆರ್.ಎಫ್ ಹಾಗೂ ಪಲ್ಸ್ ಪೋಲಿಯೋಗೆ ಶೇ.ನೂರು ದೇಣಿಗೆ ನೀಡಿರುತ್ತೇವೆ. ಟಿ.ಆರ್.ಎಫ್ ಹಾಗೂ ಪಲ್ಸ್ ಪೋಲಿಯೊ ಕಾರ್ಯಕ್ರಮಗಳಿಗೆ ಶೇ.70 ಸದಸ್ಯರು ತಮ್ಮ ಮೊತ್ತವನ್ನು ಭಾರತೀಯ ಕರೆನ್ಸಿ ಮೂಲಕ ಪಾವತಿಸಿರುತ್ತಾರೆ. ಆದ್ದರಿಂದ ಉಳಿಕೆ ಮೊತ್ತದ ಚೆಕ್ ಅನ್ನು ಟಿ.ಆರ್.ಎಫ್ ಚೇರ್ಮನ್ ಜಯಪ್ರಕಾಶ್ ಅಮೈರವರು ಡಿಜಿ ವಿಕ್ರಂ ದತ್ತರವರಿಗೆ ಹಸ್ತಾಂತರಿಸಲಾಯಿತು.
ಅಭಿನಂದನೆ/ಗೌರವ/ಹಸ್ತಾಂತರ:
ಡಿಸೆಂಬರ್ ತಿಂಗಳಲ್ಲಿ ಹುಟ್ಟು ಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವ ಆಚರಿಸಿದ ಕ್ಲಬ್ ಸದಸ್ಯರನ್ನು ಈ ಸಂದರ್ಭದಲ್ಲಿ ಹೂ ನೀಡಿ ಅಭಿನಂದಿಸಲಾಯಿತು. ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷೆಯಾಗಿ ಆಯ್ಕೆಯಾದ ಕ್ಲಬ್ ಅಧ್ಯಕ್ಷರ ಪುತ್ರಿ ತಾಜುನ್ನೀಸರವರಿಗೆ ಹೂ ನೀಡಿ ಗೌರವಿಸಲಾಯಿತು. ರೋಟರಿ ಸೆಂಟ್ರಲ್ ಅಧ್ಯಕ್ಷ ಪಿ.ಎಂ ಅಶ್ರಫ್ ರವರ ಅಣ್ಣ ಜಮಾಲುದ್ದೀನ್ ಹಾಜಿ ಹಾಗೂ ಮಂಗಳೂರು ಸಿ.ಡಿ ಕನ್ಸ್ಟ್ರಕ್ಷನ್ ನ ರಮೇಶ್ ಇಂಜಿನಿಯರ್ರವರ ಪ್ರಾಯೋಜಕತ್ವದಲ್ಲಿ ಪುತ್ತೂರಿನ ಜ್ಯೂನಿಯರ್ ಕಾಲೇಜಿಗೆ ರೂ.10 ಸಾವಿರ ಮೊತ್ತದ ನೋಟೀಸ್ ಬೋರ್ಡ್ ಅನ್ನು ಹಸ್ತಾಂತರಿಸಲಾಯಿತು.
ನಿಯೋಜಿತ ಅಧ್ಯಕ್ಷ ಚಂದ್ರಹಾಸ ರೈರವರು ಸನ್ಮಾನಿತ ಭಾಗ್ಯೇಶ್ ರೈಯವರನ್ನು ಸಭೆಗೆ ಪರಿಚಯಿಸಿದರು. ಕ್ಲಬ್ ಅಧ್ಯಕ್ಷ ಪಿ.ಎಂ ಅಶ್ರಫ್ ಸ್ವಾಗತಿಸಿದರು. ಕೋಶಾಧಿಕಾರಿ ನವೀನ್ ಚಂದ್ರ ನಾಕ್, ಪ್ರದೀಪ್ ಪೂಜಾರಿ, ಜಯಪ್ರಕಾಶ್ ಅಮೈರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಕಾರ್ಯದರ್ಶಿ ಬಿ.ವಸಂತ್ ಶಂಕರ್ ವರದಿ ಮಂಡಿಸಿ, ವಂದಿಸಿದರು.ಸದಸ್ಯ ಶಾಂತಕುಮಾರ್ ಪ್ರಾರ್ಥಿಸಿದರು. ಸದಸ್ಯ ರಮೇಶ್ ರೈ ಬೋಳೋಡಿ ಜಿಲ್ಲಾ ಗವರ್ನರ್ರವರನ್ನು ಸಭೆಗೆ ಪರಿಚಯಿಸಿದರು. ನಿರ್ಗಮನ ಕಾರ್ಯದರ್ಶಿ ಡಾ.ರಾಮಚಂದ್ರ ಕೆ ಕಾರ್ಯಕ್ರಮ ನಿರೂಪಿಸಿದರು. ಸಾರ್ಜೆಂಟ್ ಎಟ್ ಆರ್ಮ್ಸ್ ಶಿವರಾಮ ಎಂ.ಎಸ್, ಕ್ಲಬ್ ಸರ್ವಿಸ್ ನಿರ್ದೇಶಕ ಜಯಪ್ರಕಾಶ್ ಎ.ಎಲ್, ವೊಕೇಶನಲ್ ಸರ್ವಿಸ್ ನಿರ್ದೇಶಕರ ಪರವಾಗಿ ನಿಯೋಜಿತ ಅಧ್ಯಕ್ಷ ಚಂದ್ರಹಾಸ ರೈ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್, ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕ ಸನತ್ ರೈ, ಟಿಆರ್ಎಫ್ ಚೇರ್ಮ್ಯಾನ್ ಜಯಪ್ರಕಾಶ್ ಅಮೈ, ಯೂತ್ ಸರ್ವಿಸ್ ನಿರ್ದೇಶಕ ಜಗನ್ನಾಥ್ ಅರಿಯಡ್ಕ ಸಹಿತ ಕ್ಲಬ್ ಸದಸ್ಯರು ಸಹಕರಿಸಿದರು.
ರೋಟರಿ ಬಿಸಿನೆಸ್ ಎಕ್ಸ್ಪೋ ಅಧ್ಯಕ್ಷರಾಗಿ ಪದ್ಮನಾಭ ಶೆಟ್ಟಿ..
ರೋಟರಿ ಸೆಂಟ್ರಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾಗಿ ಸಂತೋಷ್ ಶೆಟ್ಟಿ..
ಕ್ಲಬ್ ನಿಕಟಪೂರ್ವ ಅಧ್ಯಕ್ಷ ಡಾ.ರಾಜೇಶ್ ಬೆಜ್ಜಂಗಳರವರು ರೋಟರಿ ಸೆಂಟ್ರಲ್ ನಿಂದ ಕಳೆದ ವರ್ಷ ಹಮ್ಮಿಕೊಂಡ ವ್ಯವಹಾರಸ್ಥರ ಮಧ್ಯೆ ಸಂಬಂಧವನ್ನು ಕಲ್ಪಿಸುವ ನಿಟ್ಟಿನಲ್ಲಿ ರೋಟರಿ ಬಿಸಿನೆಸ್ ಕಾನ್ಕ್ಲೇವ್ ರೂವಾರಿ, ರೋಟರಿ ಬಿಸಿನೆಸ್ ಎಕ್ಸ್ಪೋ ಬಗ್ಗೆ ಜೊತೆಗೆ ನೋಂದಾವಣೆಗೊಂಡ ರೋಟರಿ ಸೆಂಟ್ರಲ್ ಚಾರಿಟೇಬಲ್ ಟ್ರಸ್ಟ್ ಬಗ್ಗೆ ಮಾತನಾಡಿದರು. ಮುಂದಿನ ವರ್ಷದ ರೋಟರಿ ಬಿಸಿನೆಸ್ ಎಕ್ಸ್ಪೋ ಅಧ್ಯಕ್ಷರಾಗಿ ಪದ್ಮನಾಭ ಶೆಟ್ಟಿಯವರು ಆಯ್ಕೆಯಾಗಿದ್ದು, ಪದ್ಮನಾಭ ಶೆಟ್ಟಿಯವರಿಗೆ ಈ ಸಂದರ್ಭದಲ್ಲಿ ಹೂ ನೀಡಿ ಗೌರವಿಸಲಾಯಿತು. ರೋಟರಿ ಸೆಂಟ್ರಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾಗಿ ಕ್ಲಬ್ ಸ್ಥಾಪಕಾಧ್ಯಕ್ಷ ಸಂತೋಷ್ ಶೆಟ್ಟಿ ಹಾಗೂ ಸ್ಥಾಪನೆಯಾಗುವಲ್ಲಿ ಸಹಕರಿಸಿದ ನ್ಯಾಯವಾದಿ ಕೃಷ್ಣಪ್ರಸಾದ್ ನಡ್ಸಾರ್ ರವರಿಗೂ ಹೂ ನೀಡಿ ಗೌರವಿಸಲಾಯಿತು.
ಕೊಡುಗೆಗಳು..
ಮುಕ್ವೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಆಯಿಶತ್ ಸ್ವಾಲಿಹರವರಿಗೆ ಎಲೆಕ್ಟ್ರಿಕಲ್ ಬೆಡ್, ಬಲ್ಮಾಡು ಸರಕಾರಿ ಶಾಲೆಯ ಶಿವಾನಿ ಭಟ್, ಹಿರ್ತಡ್ಕ ಶಾಲೆಯ ಖದಿಜತ್ ರಹಿಯಾನ, ಕೊಡಿಪಾಡಿ ಶಾಲೆಯ ಸಾಜಿತಾ, ಪುತ್ತೂರು ಸರಕಾರಿ ಶಾಲೆಯ ಸುಪ್ರೀತ್ ಪಾಯಿಸ್, ಮುಬಶಿರಾರವರುಗಳಿಗೆ ಡೈಯಪರ್, ಕನ್ಯಾನ ಸೇವಾಶ್ರಮಕ್ಕೆ ಆರ್ಥಿಕ ಸಹಾಯ, ರೋಟರಿ ಸೆಂಟ್ರಲ್ ಎಮರ್ಜೆನ್ಸಿ ಫಂಡ್ ನಿಂದ ಬಲ್ನಾಡಿನ ರಮೇಶ್ ಪೈಂಟರ್ ರವರ ವೈದ್ಯಕೀಯ ಚಿಕಿತ್ಸಾ ವೆಚ್ಚಕ್ಕೆ ಆರ್ಥಿಕ ಸಹಾಯವನ್ನು ಕಮ್ಯೂನಿಟಿ ಸರ್ವಿಸ್ನಡಿಯಲ್ಲಿ ಹಸ್ತಾಂತರಿಸಲಾಯಿತು.
ಸನ್ಮಾನ..
ಯುವಸಮುದಾಯದವರಿಗೆ ಸೂಕ್ತ ತರಬೇತಿಯೊಂದಿಗೆ ಸರಕಾರಿ ಹಾಗೂ ಖಾಸಗಿ ರಂಗದ ವಿವಿಧ ಇಲಾಖೆಗಳಲ್ಲಿ ಹುದ್ದೆಗಳಿಗೆ ನೇಮಕಗೊಳ್ಳುವಂತೆ ಮಾಡುತ್ತಾ ಅವರ ಬಾಳಿಗೆ ಬೆಳಕಾಗಲು ಸಹಕರಿಸಿದ ಇಲ್ಲಿನ ಹಿಂದುಸ್ತಾನ್ ಕಾಂಪ್ಲೆಕ್ಸ್ನಲ್ಲಿ ಕಾರ್ಯಾಚರಿಸುತ್ತಿರುವ ವಿದ್ಯಾಮಾತಾ ಅಕಾಡೆಮಿ ಮುಖ್ಯಸ್ಥ ಭಾಗ್ಯೇಶ್ ರೈ ಕೆಯ್ಯೂರು, ಕರಾಟೆ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿ ಬ್ಲ್ಯಾಕ್ ಬೆಲ್ಟ್ ಪದಕ ಪಡೆದು ಡ್ಯಾನ್ ಗ್ರೇಡಿಗೆ ಭಡ್ತಿ ಹೊಂದಿದ ಇಂಪ್ಯಾಕ್ಟ್ ಆರ್ಟ್ ಆಂಡ್ ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ಸದಸ್ಯೆಯಾಗಿದ್ದು, ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿನಿ ಖುಶಿ ಕೆ.ಎಂ.,ಕ್ಲಬ್ ಸದಸ್ಯ, 65 ಮಂದಿಗೆ ರಕ್ತದಾನ ಮಾಡುವ ಮೂಲಕ ಮಹಾ ರಕ್ತದಾನಿ ಎನಿಸಿಕೊಂಡಿದ್ದು ಸಮಾಜ ಸೇವಾ ವಿಭಾಗದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್, ಕೊಂಬೆಟ್ಟು ಜ್ಯೂನಿಯರ್ ಕಾಲೇಜಿನಲ್ಲಿ ಚಿತ್ರಕಲಾ ಶಿಕ್ಷಕ, ಇತ್ತೀಚೆಗೆ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ಜಗನ್ನಾಥ ಅರಿಯಡ್ಕ, ಕಳೆದ 50 ವರ್ಷಗಳ ಪೊಟೋಗ್ರಾಫರ್ ವೃತ್ತಿ ಸೇವೆಯನ್ನು ಪೂರೈಸಿರುವ ಕ್ಲಬ್ ಹಿರಿಯ ಸದಸ್ಯ ಹಾಗೂ ಕ್ರೀಡಾ ಕ್ಷೇತ್ರದಲ್ಲೂ ಭಾಗವಹಿಸುತ್ತಿರುವ ಶಾಂತಕುಮಾರ್ ದಂಪತಿ, ಕ್ಲಬ್ ನಿಕಟಪೂರ್ವ ಅಧ್ಯಕ್ಷ, ತನ್ನ ಅಧ್ಯಕ್ಷಾವಧಿಯಲ್ಲಿ ರೋಟರಿ ಬಿಸಿನೆಸ್ ಎಕ್ಸ್ ಪೋ ಸೃಷ್ಟಿಕರ್ತ, ಇದೀಗ ರೋಟರಿ ಸೆಂಟ್ರಲ್ ಚಾರಿಟೇಬಲ್ ಟ್ರಸ್ಟ್ ಚಾಲನೆಗೆ ಕಾರಣಕರ್ತರಾಗಿರುವ ಡಾ.ರಾಜೇಶ್ ಬೆಜ್ಜಂಗಳರವರುಗಳನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಭಾಗ್ಯೇಶ್ ರೈರವರು ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿ ತನ್ನ ಸನ್ಮಾನವನ್ನು ಕಳೆದ ಎರಡು ವರ್ಷಗಳಲ್ಲಿ ಭಾರತೀಯ ಸೇನೆಯಲ್ಲಿ ವಿದ್ಯಾಮಾತಾ ಅಕಾಡೆಮಿ ಮೂಲಕ ಸೇರ್ಪಡೆಗೊಂಡ 26 ಯುವಕರಿಗೆ ಅರ್ಪಿಸುತ್ತೇನೆ ಎಂದರು.