ಪುತ್ತೂರು: ಕಳೆದ ನಾಲ್ಕು ವರ್ಷದ ಹಿಂದೆ ನಡೆದ ಇಳಂತಿಲ ಗ್ರಾಮ ಪಂಚಾಯತಿನ ನಾಲ್ಕನೇ ವಾರ್ಡ್ ನ ಚುನಾವಣೆಯ ಮರು ಮತ ಎಣಿಕೆ ನಡೆಸುವಂತೆ ಬೆಳ್ತಂಗಡಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಿ ನೀಡಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಗ್ರಾ.ಪಂ. ಚುನಾವಣೆಯಲ್ಲಿ ಕೆ. ಇಸುಬು ಅವರು 2 ಮತಗಳ ಅಂತರದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾಗಿ ವಿಜೇತರಾಗಿದ್ದರು. ಇದನ್ನು ಪ್ರಶ್ನಿಸಿ ಪರಾಜಿತ ಅಭ್ಯರ್ಥಿ ನಾರಾಯಣ ಭಟ್ ಅವರು ಬೆಳ್ತಂಗಡಿಯ ನ್ಯಾಯಾಲಯದಲ್ಲಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಮಧ್ಯೆ ನಾರಾಯಣ ಭಟ್ರವರು ನ್ಯಾಯಾಧೀಶರ ಸಮ್ಮುಖದಲ್ಲಿ ನ್ಯಾಯಾಲಯದಲ್ಲಿ ಮತ ಪತ್ರಗಳನ್ನು ಮರು ಎಣಿಕೆ ನಡೆಸುವಂತೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಸದ್ರಿ ಅರ್ಜಿಯನ್ನು ಪುರಸ್ಕರಿಸಿ ಬೆಳ್ತಂಗಡಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಡಿಸೆಂಬರ್ 19ರಂದು 3 ಗಂಟೆಗೆ ನ್ಯಾಯಾಲಯದಲ್ಲಿ ಮತಗಳ ಮರು ಎಣಿಕೆ ನಡೆಸುವಂತೆ ಅಂದು ಚುನಾವಣಾಧಿಕಾರಿಯಾಗಿದ್ದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗುರುಪ್ರಸಾದ್ರವರಿಗೆ ದಿನಾಂಕ: 30.11.2024 ರಂದು ನೀಡಿದ ಮಧ್ಯಂತರ ಆದೇಶದಲ್ಲಿ ನಿರ್ದೇಶನ ನೀಡಿದ್ದರು.
ಸದ್ರಿ ಆದೇವನ್ನು ರದ್ದುಗೊಳಿಸುವಂತೆ ವಿಜೇತ ಅಭ್ಯರ್ಥಿ ಯು. ಕೆ. ಇಸುಬು ರವರು ಹೈಕೋರ್ಟ್ ಮೊರೆ ಹೋಗಿದ್ದರು.ಯು. ಕೆ. ಇಸುಬು ಅವರ ಪರ ವಕೀಲರ ವಾದವನ್ನು ಪುರಸ್ಕರಿಸಿ ದಿನಾಂಕ: 17.12.2024 ರಂದು ಹೈಕೋರ್ಟ್ ಬೆಳ್ತಂಗಡಿಯ ನ್ಯಾಯಾಲಯ ದಿನಾಂಕ: 30.11.2024ರಂದು ನೀಡಿದ್ದ ಮಧ್ಯಂತರ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.