ಹಿರೇಬಂಡಾಡಿ: ಸಂಜೀವಿನಿ ಮಿತ್ರವೃಂದ ಕೊಯಿಲ-ಹಿರೆಬಂಡಾಡಿ ಇದರ ಆಶ್ರಯದಲ್ಲಿ 6ನೇ ವರ್ಷದ ಕಥಾಸಹಿತ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ, ‘ಪೊರಿಪುದಪ್ಪೆ ಜಲದುರ್ಗೆ’ ತುಳು ಪೌರಾಣಿಕ ನಾಟಕ ಡಿ.21ರಂದು ಶಾಖೆಪುರ ಮೈದಾನದಲ್ಲಿ ನಡೆಯಿತು.
ರಾತ್ರಿ ಸಂಜೀವಿನಿ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು, ನಮ್ಮ ಸಂಸ್ಕೃತಿ ಹಾಗೂ ರಾಷ್ಟ್ರೀಯತೆಯ ಮೇಲೆ ನಿಷ್ಠೆ ಇಲ್ಲದೇ ಇದ್ದಲ್ಲಿ ಬದುಕು ಸಾರ್ಥಕವಾಗದು. ನಮ್ಮಲ್ಲಿ ಸಾತ್ವಿಕತೆಯ ಮನೋಭಾವ ಇರಬೇಕು. ಪ್ರತಿಯೊಬ್ಬರಲ್ಲೂ ರಾಷ್ಟ್ರಪ್ರೇಮ ಜಾಗೃತವಾಗಬೇಕೆಂದು ಹೇಳಿದರು. ಯುವ ಜನತೆ ಸೇನೆಗೆ ಸೇರಿ ದೇಶಸೇವೆ ಸಮರ್ಪಿತರಬಾಗಬೇಕು. ಶಾಖೆಪುರ ಸಂಜೀವಿನಿ ಮಿತ್ರವೃಂದದ ವತಿಯಿಂದ ಯೋಧರಿಗೆ ಗೌರವಾರ್ಪಣೆ ಮಾಡುವ ಮೂಲಕ ಉತ್ತಮ ಕಾರ್ಯವಾಗಿದೆ ಎಂದು ನುಡಿದರು.
ದಿಕ್ಸೂಚಿ ಭಾಷಣ ಮಾಡಿದ ಯುವ ವಾಗ್ಮಿ ಬೆಂಗಳೂರಿನ ಹಾರಿಕಾ ಮಂಜುನಾಥ್ ಅವರು, ಹಿಂದೂಗಳು ಸಂಘಟಿತರಾದಲ್ಲಿ ಧರ್ಮ ರಕ್ಷಣೆಯಾಗಲಿದೆ. ಜಾತಿಯ ಹೆಸರಿನಲ್ಲಿ ಹಿಂದೂ ಸಮಾಜ ಒಡೆದುಹೋಗುತ್ತಿದೆ. ಆದ್ದರಿಂದ ಜಾತಿಗಳು ಮನೆಯ ದೇವರ ಕೋಣೆಯೊಳಗೆ ಸೀಮಿತ ಆಗಿರಬೇಕು. ಮನೆ ಹೊಸ್ತಿಲು ದಾಟಿ ಬರುವ ವೇಳೆ ಪ್ರತಿಯೊಬ್ಬರೂ ಹಿಂದೂ ಆಗಿರಬೇಕು. ಆಗ ಧರ್ಮದ ರಕ್ಷಣೆಯಾಗಲಿದೆ ಎಂದು ಹೇಳಿದರು. ಮಕ್ಕಳಲ್ಲಿ ಭಕ್ತಿ ತುಂಬಬೇಕು. ಶ್ರೀರಾಮಚಂದ್ರನ ಆದರ್ಶವನ್ನು ಮಕ್ಕಳಿಗೆ ನೀಡಬೇಕು. ಮನೆ ಮನೆಯಲ್ಲೂ ಧರ್ಮ ಜಾಗೃತಿ ಮಾಡುವ ಕಾರ್ಯ ತಾಯಂದಿರಿಂದ ಆಗಬೇಕು ಎಂದು ಹಾರಿಕಾ ಮಂಜುನಾಥ್ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಸಂಜೀವಿನಿ ಮಿತ್ರವೃಂದದ ಸದಸ್ಯ ಮೋಹನ್‌ಚಂದ್ರ ಮಾಳ ಅವರು ಮಾತನಾಡಿ, ಶಾಖೆಪುರ ಮೈದಾನದಲ್ಲಿ ಸ್ಥಳೀಯರ ಸಹಕಾರದೊಂದಿಗೆ ಪ್ರತಿವರ್ಷ ಸಾರ್ವಜನಿಕ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ ನಡೆಸಲಾಗುತ್ತಿದೆ. ಈ ವರ್ಷ ಯೋಧರನ್ನು ಗೌರವಿಸಲಾಗಿದೆ. ಯುವ ಜನತೆ ದುಶ್ಚಟಗಳಿಗೆ ಬಲಿಯಾಗದೆ. ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬೆಳಗಬೇಕೆಂದು ಹೇಳಿದರು.
ಸನ್ಮಾನ:
ಸಮಾರಂಭದಲ್ಲಿ ನಿವೃತ್ತ ಯೋಧರಾದ ಚೆನ್ನಪ್ಪ ಗೌಡ ಬೇಂಗದಪಡ್ಪು, ಮೋಹನ ಪೆರ್ಲ, ಗುಣಕರ ಕೆರ್ನಡ್ಕ, ಚಂದ್ರಶೇಖರ ಕುಬಲ, ಮೋಹನ ಎಸ್.ಸೀಂಕ್ರಕೊಡಂಗೆ ಅವರಿಗೆ ಶಾಲು, ಫಲತಾಂಬೂಲ, ಸ್ಮರಣಿಕೆ, ಹಾರಾರ್ಪಣೆ ಮಾಡಿ ಸನ್ಮಾನಿಸಿ ಗೌರವಿಸಲಾಯಿತು. ಅಶೋಕ್ ಅವರು ಸನ್ಮಾನಿತರನ್ನು ಪರಿಚಯಿಸಿದರು.
ಸಂಜೀವಿನಿ ಮಿತ್ರವೃಂದದ ಸದಸ್ಯ ಸೋಮೇಶ ಕೇಪುಳು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹೊನ್ನಪ್ಪ ಖಂಡಿಗ ವಂದಿಸಿದರು. ಸುಧಾಕರ ಕಾರ್ಯಕ್ರಮ ನಿರೂಪಿಸಿದರು. ಯಶ್ವಿನಿ ಪೆರ್ಲ, ಪೂರ್ವಿ, ದೀಪ್ತಿ ಬಂಗೇರಗುಡ್ಡೆ ಪ್ರಾರ್ಥಿಸಿದರು. ಸಂಜೀವಿನಿ ಮಿತ್ರವೃಂದದ ಸದಸ್ಯರು ಸಹಕರಿಸಿದರು.
ಗಣಹೋಮ/ಸತ್ಯನಾರಾಯಣ ಪೂಜೆ:
ಬೆಳಿಗ್ಗೆ 9 ಗಂಟೆಗೆ ಶಾಖೆಪುರ ಮೈದಾನದಲ್ಲಿ ಗಣಹೋಮ ನಡೆಯಿತು. ಸಂಜೆ ಮಂಜುಶ್ರೀ ಭಜನಾ ಮಂಡಳಿ ಶಿವನಗರ ಹಿರೆಬಂಡಾಡಿ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂಡಳಿ ಕೊನೆಮಜಲು ಕೊಯಿಲ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಕಶೆಕೋಡಿ ಸೂರ್ಯನಾರಾಯಣ ಭಟ್‌ರವರ ನೇತೃತ್ವದಲ್ಲಿ ಕಥಾಸಹಿತ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಧಾರ್ಮಿಕ ಸಭೆಯ ಬಳಿಕ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಬಳಿಕ ಬೆನಕ ಆರ್ಟ್ಸ್ ಕುಡ್ಲ ಕಲಾವಿದರಿಂದ ಚಿತ್ರಾಪುರದ ಸತ್ಯ ಕಥೆ ಆಧಾರಿತ ‘ ಪೊರಿಪುದಪ್ಪೆ ಜಲದುರ್ಗೆ ‘ ತುಳು ಪೌರಾಣಿಕ ನಾಟಕ ನಡೆಯಿತು.