ಪುತ್ತೂರು: ಡಿ.28ರಿಂದ 30ರ ತನಕ ಬೆಂಗಳೂರಿನಲ್ಲಿ ಅಖಿಲ ಭಾರತ ಮಟ್ಟದ ಹವ್ಯಕ ಸಮ್ಮೇಳನ ನಡೆಯಲಿದೆ. ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ವಿತರಣೆ, ಸನ್ಮಾನ ನಡೆಯಲಿದ್ದು ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಕಾಂಚನ ಸುಂದರ ಭಟ್ ಅವರಿಗೆ ಸನ್ಮಾನ ನಡೆಯಲಿದೆ.
ಕಾಂಚನ ಸುಂದರ ಭಟ್ ಪರಿಚಯ:
ಕಾಂಚನ ಸುಂದರ ಭಟ್ ಅವರು ಜನಿಸಿದ್ದು ನೇತ್ರಾವತಿ- ಕುಮಾರಧಾರ ನದಿಗಳ ಸಂಗಮ ಕ್ಷೇತ್ರ ದಕ್ಷಿಣ ಕನ್ನಡದ ಉಪ್ಪಿನಂಗಡಿ ಸಮೀಪದ ಸಂಗೀತ ಕಾಶಿ ಎನಿಸಿದ ಕಾಂಚನದಲ್ಲಿ. ಸಂಸ್ಕಾರವಂತ ಕೃಷಿ ಕುಟುಂಬದಲ್ಲಿ ಜನಿಸಿ, ಬಡತನ, ಕಷ್ಟಕಾರ್ಪಣ್ಯಗಳ ಹಳ್ಳಿ ಬದುಕು ಕಂಡವರು. ಶಿಕ್ಷಕರಾಗಿ ವೃತ್ತಿಗೆ ಸೇರಿ ಮುಖ್ಯ ಶಿಕ್ಷಕ, ಸಹಾಯಕ ಶಿಕ್ಷಣಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ವಿದ್ಯಾಧಿಕಾರಿ ಹೀಗೆ ದಕ್ಷಿಣ ಕನ್ನಡದಲ್ಲಿ ಬಹು ವಿಧದ ಶೈಕ್ಷಣಿಕ ಪಾತ್ರಗಳು ಇವರದಾಯಿತು. ಬೋಧನೆಯ ಅನುಭವದಿಂದ ಪಕ್ವಗೊಂಡು ಬೋಧಿಸುವ ಸಹಸ್ರಾರು ಶಿಕ್ಷಕರ ಕಣ್ಮನಗಳಲ್ಲಿ ಕನಸುಗಳ ಬಿತ್ತಿ ಚೆಲುವು ತುಂಬಿದರು. ಇಪ್ಪತ್ತನೆಯ ಶತಮಾನದ ಕೊನೆಯಲ್ಲಿ ಶಾಲೆಗಳೆಂದರೆ ಕೊರತೆಗಳದೇ ಸಾಮ್ರಾಜ್ಯ. ಕೊಠಡಿ, ಶೌಚಾಲಯ, ಭೂದಾಖಲೆ, ಪೀಠೋಪಕರಣ, ಶಿಕ್ಷಕರು ಹೀಗೆ ಎಷ್ಟು ಸಾಧ್ಯವೊ ಅವೆಲ್ಲವನ್ನು ತನ್ನ ವ್ಯಾಪ್ತಿಯ ಶಾಲೆಗಳಿಗೆ ಸರಕಾರ ಹಾಗೂ ದಾನಿಗಳಿಂದ ಒದಗಿಸಿ ಗಟ್ಟಿಗೊಳಿಸಿದರು. ನಿಂತ ನೀರಿನಂತಿದ್ದ ವಿದ್ಯಾಲಯ ಹಾಗೂ ಗುರುಗಡಣಕ್ಕೆ ಜೀವಂತಿಕೆಯ ಸ್ವರೂಪವಿತ್ತರು. ಹೇಗಿರಬೇಕೋ ಹಾಗಿರುವ ಶಿಕ್ಷಕ -ಶಿಕ್ಷಣಾಧಿಕಾರಿಯಾಗಿ ಆದರ್ಶ ಮೆರೆದವರು.
ನಿರ್ಮಲ ಆಕಾಶದಂತಹ ವ್ಯಕ್ತಿತ್ವ. ವಿದ್ಯೆಗೆ ವಿನಯ ಬೆರೆಸಿ, ಶಿಕ್ಷಣಕ್ಕೆ ಸಂಸ್ಕಾರ ತುಂಬಿ, ವೈಜ್ಞಾನಿಕತೆಗೆ ವೈಚಾರಿಕತೆಯಿತ್ತು, ಮಾತಿಗೆ ಮಮತೆ ಸುರಿಸಿ, ಘನತೆ ಪಡೆದರು. ರಾಜ್ಯದಲ್ಲೇ ಉತ್ತಮ ಶಿಕ್ಷಣಾಧಿಕಾರಿ ಎಂದು ಜನಮಾನಸದಲ್ಲಿ ನೆಲೆಯಾದವರು. ವೃತ್ತಿಯಿಂದ ನಿವೃತ್ತಿಯಾದರೂ ಸಂತಸಕ್ಕೆ ಪ್ರವೃತ್ತಿ ಹವ್ಯಾಸವಾಯಿತು. ಜೆಸಿ, ರೋಟರಿ, ಲಯನ್ಸ್, ನಿವೃತ್ತ ನೌಕರರ ಸಂಘ, ಶಾಲಾ ದತ್ತು ಯೋಜನೆಗಳಿಗೆ ಸಂಪಾದನೆಯ ಭಾಗ ಸುರಿದು ಸೇವಾಗಂಗೆಯಲ್ಲಿ ಮಿಂದೆದ್ದವರು. ಎಲ್ಲರಿಗೂ ಒಪ್ಪಿತ ವ್ಯಕ್ತಿತ್ವ. ಚಲನಶೀಲ ಆದರ್ಶ ಶಿಕ್ಷಕರಾಗಿ ಶಿಕ್ಷಣ ಕ್ಷೇತ್ರಕ್ಕೆ ಮೆರುಗು ತುಂಬಿದರು.
ತಿರುಮಲೇಶ್ವರ ಭಟ್, ಲಕ್ಷ್ಮೀ ಅಮ್ಮನವರ ಸುಪುತ್ರ ಇವರು. ಪತ್ನಿ ಸರಸ್ವತಿ ಸಮಾಜ ಸೇವಕಿ, ಗೃಹಿಣಿಯಾಗಿ ಪತಿಯ ಅಕ್ಷರ ಸೇವೆಗೆ ಆಸರೆಯಾದವರು. ಮಗ ಆದರ್ಶ ಕಾಂಚನ ಜರ್ಮನಿಯಲ್ಲಿ ಕಂಪೆನಿಯೊಂದರ ಸಿಇಒ. ಸೊಸೆ ಡಾ. ಅರುಣಾ ದಂತ ವೈದ್ಯೆ. ಮಗಳು ಅಕ್ಷತಾ ಬಡೆಕಿಲ ಇಂಜಿನಿಯರ್, ಅಳಿಯ ಜಗದೀಶ್ ಬಡೆಕಿಲ ಕಂಪನಿಯೊಂದರ ಮುಖ್ಯಸ್ಥರಾಗಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ದುಡಿಯುತ್ತಿರುವರು. ಸಾರ್ಥಕ ಬದುಕು ಕಂಡ ಇವರನ್ನು ಲಯನ್ಸ್, ಜೇಸಿಐ, ರೋಟರಿ, ದೇವಾಲಯ, ವಿದ್ಯಾಲಯಗಳು ಹಲವಾರು ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಿ ಗೌರವಿಸಿವೆ.