ಪುತ್ತೂರು: ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲು ಹೋಗುತ್ತಿದ್ದ ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ವೈದ್ಯರು ಕರ್ತವ್ಯಕ್ಕೆ ತಡವಾಗಿ ಹೋಗುತ್ತಿದ್ದಾರೆಂದು ಸುಳ್ಳು ಆಪಾದನೆ ಬಿಂಬಿಸುವ ವಿಡಿಯೋ ವೈರಲ್ ಮಾಡಿದ ವ್ಯಕ್ತಿ ಇದೀಗ ತಪ್ಪೊಪ್ಪಿಕೊಂಡಿರುವುದಾಗಿ ವರದಿಯಾಗಿದೆ.
ಡಿ.10ರಂದು ಬೆಳಿಗ್ಗೆ ಪುಂಜಾಲಕಟ್ಟೆಯ ಮೃತಪಟ್ಟ ವ್ಯಕ್ತಿಯೊಬ್ಬರ ಮರಣೋತ್ತರ ಪರೀಕ್ಷೆ ಮಾಡಲು ವೈದ್ಯರು ತಡಮಾಡಿರುವುದಾಗಿ ಕರಾಯ ಮೂಲದ ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ವೈರಲ್ ಮಾಡಿದ್ದರು. ವಾಸ್ತವ ಅರಿಯದೆ ಆಸ್ಪತ್ರೆಯ ವಿರುದ್ಧ ಸುಳ್ಳು ಆಪಾದನೆ ವಿಡಿಯೋ ವೈರಲ್ ಮಾಡಿದ್ದಾರೆಂದು ಆಸ್ಪತ್ರೆಯ ವೈದ್ಯಾಧಿಕಾರಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿ ವಿಡಿಯೋ ಹರಿಯಬಿಟ್ಟ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಈ ಮಧ್ಯೆ ವೈದ್ಯರ ಕರ್ತವ್ಯದ ಕುರಿತು ನನಗೆ ವಾಸ್ತವ ಅರಿಯದೇ ವಿಡಿಯೋ ವೈರಲ್ ಮಾಡಿದ್ದೇನೆ. ಅದನ್ನು ಯಾರೂ ಶೇರ್ ಮಾಡಬೇಡಿ. ನಾನು ವೈದ್ಯರಲ್ಲಿ ಕ್ಷಮೆ ಕೇಳುತ್ತಿದ್ದೇನೆ ಎಂದು ವಿಡಿಯೋ ಮಾಡಿದ್ದ ವ್ಯಕ್ತಿ ಹೇಳಿರುವುದಾಗಿ ವರದಿಯಾಗಿದೆ.