ಪುತ್ತೂರು: ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ದೀಪಾವಳಿ, ರಂಜಾನ್ ಹಾಗೂ ಕ್ರಿಸ್ಮಸ್ ಹಬ್ಬಗಳ ಆಚರಣೆ ಶಾಲಾ ಸಭಾಭವನದಲ್ಲಿ ಜರುಗಿತು.
ಮುಖ್ಯ ಅತಿಥಿ, ಮಾಯಿದೆ ದೇವುಸ್ ಚರ್ಚ್‌ನ ಸಹಾಯಕ ಗುರು ವಂ. ಫಾ. ಅಜಯ್ ಲೋಹಿತ್ ಮಸ್ಕರೇನ್ಹಸ್ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಮುಗಿದ ಮೇಲೆ ಶಾಲೆಯಲ್ಲಿ ಕಲಿತ ಒಗ್ಗಟ್ಟು, ಸಾಮರಸ್ಯ ಜೀವನ, ಶಾಂತಿಯ ಸಂದೇಶವನ್ನು ಮಂದಿನ ಜೀವನದಲ್ಲಿ ಪಾಲಿಸುವುದು ಅಗತ್ಯವಾದದ್ದು. ಶಾಲೆಯಲ್ಲಿ ನಾವೆಲ್ಲರೂ ಸಮಾನತೆ, ನಾವೆಲ್ಲರೂ ಒಂದೇ ಎಂಬ ಐಕ್ಯತಾ ಮನೋಭಾವವನ್ನು ಕಲಿಯುತ್ತೇವೆ ಎಂದು ಸಂದೇಶ ನೀಡಿದರು.
ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ದೀಪಾವಳಿ ಹಬ್ಬದ ಆಚರಣೆಯ ಬಗ್ಗೆ ಮಾತನಾಡಿ ಭಾರತವು ವಿವಿಧ ಜಾತಿ, ವೈವಿಧ್ಯತೆಯನ್ನು ಹೊಂದಿರುವ ದೇಶ, ನಾವೆಲ್ಲರೂ ಒಂದೇ, ಭಾರತೀಯರು, ಎಲ್ಲಾ ಧರ್ಮಗಳು ಮಾನವೀಯತೆಯ ಗುಣವನ್ನು ಸಾರುತ್ತವೆ. ಹಿಂದು ಧರ್ಮದ ಪ್ರಮುಖ ಆಚರಣೆಗಳಲ್ಲಿ ದೀಪಾವಳಿಯು ಒಂದು. ಒಂದು ದೀಪವು ಸಾವಿರಾರು ದೀಪಗಳನ್ನು ಬೆಳಗುವುದರ ಮೂಲಕ ಇಡಿ ಜಗತ್ತಿಗೆ ಹೊಸ ಚೈತನ್ಯದ ಬೆಳಕನ್ನು ನೀಡಲು ಸಾಧ್ಯವಾಗುತ್ತದೆ. ಎಂದು ದೀಪಾವಳಿಯ ಹಬ್ಬದ ಹಿನ್ನೆಲೆ, ಆಚರಣೆಯ ಅರ್ಥವನ್ನು ತಿಳಿಸಿದರು.
ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ವಿಲ್ಮಾ ಫೆರ್ನಾಂಡಿಸ್ ಕ್ರಿಸ್‌ಮಸ್ ಹಬ್ಬದ ಆಚರಣೆಯ ಬಗ್ಗೆ ಮಾತನಾಡಿ ಪ್ರೀತಿ ಇದ್ದಲ್ಲಿ ಬಡವ-ಶ್ರೀಮಂತ ಎಂಬ ಭೇದವಿಲ್ಲ. ಕ್ರಿಸ್-ಮಸ್ ಹಬ್ಬವೆಂದರೆ ಮನುಷ್ಯನ ಬಂಧುತ್ವದ ಸಂಬಂಧ ಸೂಚಿಸುವ ಹಬ್ಬ. ಈ ಹಬ್ಬದ ಮುಖಾಂತರ ನಮ್ಮಲ್ಲಿ ಹೃದಯವಂತಿಕೆಯನ್ನು ಬೆಳೆಸಬೇಕು ಎಂದು ಹೇಳಿ ಶುಭ ಹಾರೈಸಿದರು.
ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಪಿ.ಎಂ. ಅಶ್ರಫ್ ರಂಝಾನ್ ಹಬ್ಬದ ಆಚರಣೆಯ ಬಗ್ಗೆ ಮಾತನಾಡಿ ಒಂದು ತಿಂಗಳ ಕಾಲ ಉಪವಾಸವನ್ನು ಆಚರಿಸುವ ರಂಝಾನ್ ಮಾಸದಲ್ಲಿ ದಾನ ಧರ್ಮ, ಸ್ನೇಹ, ಉಪಚಾರಕ್ಕೆ ಹೆಚ್ಚು ಆದ್ಯತೆಯನ್ನು ನೀಡಲಾಗುತ್ತದೆ ಎಂದು ಹೇಳಿದರು.
ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ರೋಸಲಿನ್ ಲೋಬೋ ಅಧ್ಯಕ್ಷತೆ ವಹಿಸಿ ಮಾತನಾಡಿ ಹಬ್ಬಗಳು, ಸಂತೋಷ, ಸಂಭ್ರಮವನ್ನು ನಮ್ಮಲ್ಲಿ ಮೂಡಿಸುವ ಆಚರಣೆಗಳಾಗಿವೆ. ಎಲ್ಲಾ ಧರ್ಮಗಳ ಸಾರ, ಪ್ರೀತಿ, ಪ್ರೇಮ, ಶಾಂತಿ, ಉತ್ತಮ ಸಂಸ್ಕಾರ, ಸಮನ್ವಯತೆಯನ್ನು ಸಾರುವುದೇ ಆಗಿದೆ ಎಂದು ಹೇಳಿ ಶುಭಹಾರೈಸಿದರು.
ಸನ್ಮಾನ: ಅತಿಥಿಗಳಾದ ಬಾಲಕೃಷ್ಣ ಪೊರ್ದಾಲ್ ಹಾಗೂ ವಿಲ್ಮಾ ಫೆರ್ನಾಂಡಿಸ್‌ರವರನ್ನು ಸನ್ಮಾನಿಸಲಾಯಿತು. ಶಿಕ್ಷಕಿ ಪಲ್ಲವಿ ಭಟ್ ಹಾಗೂ ಶಿಕ್ಷಕಿ ಲೆನಿಟಾ ಮೊರಾಸ್ ಸನ್ಮಾನಿತರ ಪರಿಚಯ ಮಾಡಿದರು.
ಶಾಲೆ ಹಾಗೂ ಶಾಲಾ ಹೊರಗಿನ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ಶಿಕ್ಷಕರಾದ ಭವ್ಯ, ಅನುಷಾ, ದೀಕ್ಷಾರವರು ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ಅತಿಥಿಗಳಿಗೆ ಹಬ್ಬದ ಕಾಣಿಕೆ ನೀಡಿ ಗೌರವಿಸಲಾಯಿತು. ಶಾಲಾ ಕ್ವಿಜ್ ಹಾಗೂ ಸ್ವಚ್ಛಗ್ರಹದಳ ಇದರ ಮುಂದಾಳುತ್ವದಲ್ಲಿ ಕಾರ್ಯಕ್ರಮ ನಡೆಯಿತು. ಸ್ವಚ್ಛಗ್ರಹದಳ ಸಂಘದ ಅಧ್ಯಕ್ಷೆ ಸಿಂಚನಾ ಸ್ವಾಗತಿಸಿ, ಉಪಾಧ್ಯಕ್ಷೆ ತಾಜುನ್ನಿಸಾ ವಂದಿಸಿದರು. ಸಿಂಚನಾ ಹಾಗೂ ಧೃತಿ ಸಭಾಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶ್ರೀರಕ್ಷಾ, ರಿಹಾನ, ಜೊಸ್ವಿಟಾ, ಕ್ರಿಶಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.