ಫಾ.ಪತ್ರಾವೋ ಸರ್ಕಲ್ ಬಳಿ ಉದ್ಘಾಟನೆ | ಗಾಂಧಿ ಕಟ್ಟೆ ಬಳಿ ಸಮಾಪನ | ಸಾವಿರಕ್ಕೂ ಮಿಕ್ಕಿ ಕ್ರೈಸ್ತ ಬಾಂಧವರು ಭಾಗಿ
ಪುತ್ತೂರು: ಪುತ್ತೂರು, ಮರೀಲು ಹಾಗೂ ಬನ್ನೂರು ಚರ್ಚ್ ವ್ಯಾಪ್ತಿಯ ಕ್ರೈಸ್ತ ಹಬ್ಬಗಳ ಆಚರಣಾ ಸಮಿತಿ(ಪಿ.ಎಂ.ಬಿ) ವತಿಯಿಂದ ಕ್ರೈಸ್ತ ಬಾಂಧವರಿಂದ ಪ್ರಮುಖ ಹಬ್ಬವೆನಿಸಿದ ಪ್ರಭು ಯೇಸುಕ್ರಿಸ್ತರು ಜನನ ಸಾರುವ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕ್ರಿಸ್ಮಸ್ ಸಂಭ್ರಮದ(ದಬಾಜೊ) ಮೆರವಣಿಗೆಯು ದರ್ಬೆ ಶಿಕ್ಷಣ ಶಿಲ್ಪಿ ಫಾ.ಪತ್ರಾವೋ ಸರ್ಕಲ್ ಬಳಿಯಿಂದ ದರ್ಬೆ-ಕಲ್ಲಾರೆ ಮಾರ್ಗವಾಗಿ ಪುತ್ತೂರು ಗಾಂಧಿ ಕಟ್ಟೆ ಬಳಿ ಆಕರ್ಷಕವಾಗಿ ಸಾಗಿ ಯಶಸ್ವಿಯಾಗಿ ಸಮಾಪನಗೊಂಡಿತು.
ಕಳೆದ ಹತ್ತು ವರ್ಷಗಳ ಬಳಿಕ ಈ ಕ್ರಿಸ್ಮಸ್ ಸಂಭ್ರಮದ ಮೆರವಣಿಗೆಯು ಜರಗಿದ್ದು, ಮೆರವಣಿಗೆಯುದ್ದಕ್ಕೂ ಕೊಂಕಣಿ ಬ್ಯಾಂಡ್, ನಾಸಿಕ್ ಬ್ಯಾಂಡ್, ಡಿ.ಜೆ, ಡ್ಯಾನ್ಸ್, ಅಜ್ಜ ಸಾಂತಾಕ್ಲಾಸ್, ಬಾಲ ಯೇಸು ಟ್ಯಾಬ್ಲೋ, ಮರಿ ಸಾಂತಾಕ್ಲಾಸ್ ಇತ್ಯಾದಿಗಳ ಜೊತೆಗೆ ಸಾಗಿದ ಮೆರವಣಿಗೆಯು ನೋಡುಗರಿಗೆ ರಂಗು ರಂಗೇರಿಸಿತ್ತು. ಸಾವಿರಕ್ಕೂ ಮಿಕ್ಕಿ ಪುತ್ತೂರು, ಮರೀಲು, ಬನ್ನೂರು, ಉಪ್ಪಿನಂಗಡಿ, ನಿಡ್ಪಳ್ಳಿ ಆಸುಪಾಸಿನ ಕ್ರೈಸ್ತ ಬಾಂಧವರು ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರವಣಿಗೆಯ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದರು.
ಯೇಸುಕ್ರಿಸ್ತರ ಬೋಧನೆಗಳು ಇಂದಿಗೂ, ಎಂದೆಂದಿಗೂ ಅಮರ-ಅಮಲ ರಾಮಚಂದ್ರ:
ಮಾನವ ಬಂಧುತ್ವ ವೇದಿಕೆಯ ಸದಸ್ಯ, ಪ್ರಗತಿಪರ ಕೃಷಿಕ ಅಮಲ ರಾಮಚಂದ್ರ ಮಾತನಾಡಿ, ಎರಡು ಸಾವಿರ ವರ್ಷಗಳ ಹಿಂದೆ ಲೋಕೋದ್ಧಾರಕ ಯೇಸು ಕ್ರಿಸ್ತರ ಜನನವಾಗಿದ್ದು ಮನುಷ್ಯನ ಪಾಪ ಪರಿಹಾರಗೋಸ್ಕರ ಯೇಸುಕ್ರಿಸ್ತರು ಭುವಿಗೆ ಬಂದಿದ್ದಾಗಿದೆ. ಯೇಸುಕ್ರಿಸ್ತರ ಬೋಧನೆಗಳು ಇಂದಿಗೂ, ಎಂದೆಂದಿಗೂ ಅಮರವಾಗಿದ್ದು, ಇಂದಿಗೂ ಕ್ಯಾಲೆಂಡರ್ ವರ್ಷದಲ್ಲಿ ಕ್ರಿಸ್ತಶಕ, ಕ್ರಿಸ್ತಪೂರ್ವ ಎಂದೇ ಉಲ್ಲೇಖವಾಗಿದೆ. ಯೇಸುಕ್ರಿಸ್ತರ ಜನನವಾಗಿದ್ದು ಗೋದಲಿಯಲ್ಲಿ. ಬಡತನ, ನೋವಿನ ಬೇಗೆಯಲ್ಲಿರುವ ಜನರ ಬಾಳಿಗೆ ಬೆಳಕು, ಪ್ರೀತಿ ಚೆಲ್ಲಿದವರು ಯೇಸುಕ್ರಿಸ್ತರು ಆಗಿದ್ದಾರೆ ಎಂದು ಹೇಳಿ ಶುಭ ಹಾರೈಸಿದರು.
ಜಗತ್ತಿಗೆ ಶಾಂತಿಯ ಸಂದೇಶವನ್ನು ನೀಡಿದವರು ಯೇಸುಕ್ರಿಸ್ತರು-ಮೊಹಮ್ಮದ್ ರಫೀಕ್:
ರೋಟರಿ ವಲಯ ಐದರ ವಲಯ ಸೇನಾನಿ ಮೊಹಮದ್ ರಫೀಕ್ ದರ್ಬೆ ಮಾತನಾಡಿ, ಜಗತ್ತಿಗೆ ಶಾಂತಿಯ ಸಂದೇಶವನ್ನು ನೀಡಿದವರು ಯೇಸುಕ್ರಿಸ್ತರು. ಹಿಂದೂಗಳಲ್ಲಿ ಶ್ರೀ ಗಣೇಶೋತ್ಸವ, ಮುಸ್ಲಿಂಮರಲ್ಲಿ ಈದ್ ಮಿಲಾದ್, ಕ್ರೈಸ್ತರಲ್ಲಿ ಕ್ರಿಸ್ಮಸ್ ಹಬ್ಬಗಳು ಸಾರುವುದು ಶಾಂತಿ, ಸೌಹಾರ್ದತೆ, ಮಾನವೀಯತೆ, ಬಂಧುತ್ವ, ಪರರಿಗೆ ನೆರವಾಗುವುದಾಗಿದೆ. ಪ್ರಭು ಯೇಸುಕ್ರಿಸ್ತರ ಬೋಧನೆಗಳು ಒಂದು ಮತಕ್ಕೆ ಸೀಮಿತವಾಗದೆ ಅದು ಎಲ್ಲಾ ಜಾತಿಗೆ ಅನ್ವಯಿಸುವುದಾಗಿದೆ. ಶಿಕ್ಷಣಕ್ಕೆ ಮಹತ್ವ ನೀಡಿದ ಪ್ರಭು ಯೇಸುಕ್ರಿಸ್ತರ ಹಬ್ಬವು ವರ್ಷಂಪ್ರತಿ ನಡೆಯಲಿ ಎಂದು ಹೇಳಿ ಶುಭ ಹಾರೈಸಿದರು.
ಕ್ರೈಸ್ತ ಹಬ್ಬಗಳ ಆಚರಣಾ ಸಮಿತಿಯು ಉತ್ತಮ ಹೆಜ್ಜೆಯನ್ನಿಟ್ಟಿದೆ-ವಲೇರಿಯನ್ ಡಾಯಸ್:
ಎಪಿಎಂಸಿ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ವಲೇರಿಯನ್ ಡಾಯಸ್ ಮಾತನಾಡಿ, ಕ್ರಿಸ್ಮಸ್ ಹಬ್ಬವು ಪ್ರಭು ಕ್ರಿಸ್ತನ ಬೋಧನೆಯ ಪ್ರಮುಖ ಅಂಶಗಳಾದ ಪ್ರೀತಿ, ಸಮಾಧಾನ, ಸೌಹಾರ್ದತೆ, ಸಾಮರಸ್ಯ, ಸಹೋದರತೆಯನ್ನು ಸಾರುವ ಹಬ್ಬವಾಗಿದೆ. ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಈ ಸಂಭ್ರಮಾಚರಣೆಗೆ ಮತ್ತೆ ಚಾಲನೆ ಸಿಕ್ಕಿರುವುದು ಖುಶಿ ತಂದಿದೆ. ಪುತ್ತೂರು, ಮರೀಲು, ಬನ್ನೂರು ಕ್ರೈಸ್ತ ಹಬ್ಬಗಳ ಆಚರಣಾ ಸಮಿತಿಯು ಈ ನಿಟ್ಟಿನಲ್ಲಿ ಉತ್ತಮ ಹೆಜ್ಜೆಯನ್ನಿಟ್ಟಿದೆ ಎಂದು ಹೇಳಿ ಶುಭ ಹಾರೈಸಿದರು.
ಕ್ರಿಶ್ಚಿಯನ್ಸ್ ಯೂನಿಯನ್ ಪುತ್ತೂರು ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ಸ್ವಾಗತಿಸಿ, ಪುತ್ತೂರು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ|ಝೇವಿಯರ್ ಡಿ’ಸೋಜ ವಂದಿಸಿದರು. ಪುತ್ತೂರು, ಮರೀಲ್ ಹಾಗೂ ಬನ್ನೂರು ಕ್ರೈಸ್ತ ಹಬ್ಬಗಳ ಆಚರಣಾ ಸಮಿತಿಯ ಸದಸ್ಯರು, ಪುತ್ತೂರು, ಮರೀಲು, ಬನ್ನೂರು, ನಿಡ್ಪಳ್ಳಿ, ಉಪ್ಪಿನಂಗಡಿ ಚರ್ಚ್ ವ್ಯಾಪ್ತಿಯ ಕ್ರೈಸ್ತ ಬಾಂಧವರು ಪಾಲ್ಗೊಂಡಿದ್ದರು. ಪುತ್ತೂರು ನಗರ ಠಾಣೆ ಪೊಲೀಸರು ಬಂದೋಬಸ್ತ್ ಒದಗಿಸಿದ್ದರು.
ಯಶಸ್ವಿ ಸಂಭ್ರಮದ ಸಾರಥಿ ಮೌರಿಸ್ ಮೌಸ್ಕರೇನ್ಹಸ್..
ಕಳೆದ ಹತ್ತು ವರ್ಷಗಳಿಂದ ಸ್ಥಗಿತಗೊಂಡಿದ್ದ ಕ್ರಿಸ್ಮಸ್ ಮೆರವಣಿಗೆ ಸಂಭ್ರಮಕ್ಕೆ ಇದೀಗ ಮತ್ತೇ ಚಾಲನೆ ದೊರಕಿದೆ. ಕ್ರಿಶ್ಚಿಯನ್ ಯೂನಿಯನ್ ಪುತ್ತೂರು ಇದರ ಸ್ಥಾಪಕಾಧ್ಯಕ್ಷರೂ, ಪ್ರಸ್ತುತ ಅಧ್ಯಕ್ಷರೂ, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಮಾಜಿ ಉಪಾಧ್ಯಕ್ಷರಾಗಿರುವ ಮೌರಿಸ್ ಮಸ್ಕರೇನ್ಹಸ್ರವರು ಈ ಕ್ರಿಸ್ಮಸ್ ಆಕರ್ಷಕ ಮೆರವಣಿಗೆಗೆ ಪುತ್ತೂರು, ಮರೀಲು, ಬನ್ನೂರು ಚರ್ಚ್ ವ್ಯಾಪ್ತಿಯ ಸಮಾನ ಮನಸ್ಕ ತರುಣರರನ್ನು ಜೊತೆಗೂಡಿಸಿ ಮೆರವಣಿಗೆಗೆ ವಿಶೇಷ ಕಳೆ ತಂದಿದ್ದಾರೆ.
ಹಲವಾರು ಮಂದಿ ಕ್ರೈಸ್ತ ಬಾಂಧವರು ಕ್ರಿಸ್ಮಸ್ ಮೆರವಣಿಗೆ ಬೇಕೇ ಬೇಕು ಎಂದು ಹಠ ಹಿಡಿದಿದ್ದರಿಂದ ಮಾತ್ರವಲ್ಲ ಮೆರವಣಿಗೆಗೆ ಕ್ರೈಸ್ತ ಬಾಂಧವರು ಧನ ಸಹಾಯದ ಮೂಲಕ ಸಾಥ್ ನೀಡಿದ್ದರಿಂದ ಕ್ರಿಸ್ಮಸ್ ಮೆರವಣಿಗೆಯು ರಂಗು ರಂಗೇರಿದೆ. ಸಾರಥಿ ಭವನ, ಸರಕಾರಿ ನೌಕರರ ಸಂಘದ ಕಟ್ಟಡವನ್ನು ನಿರ್ಮಿಸಿ ಹೇಗೆ ಸಾರಥಿ ಎನಿಸಿಕೊಂಡಿದ್ದಾರೋ ಹಾಗೆಯೇ ಈ ಕ್ರಿಸ್ಮಸ್ ಮೆರವಣಿಗೆಯ ಅಭೂತಪೂರ್ವ ಯಶಸ್ಸಿನ ಹಿಂದೆಯೂ ಮೌರಿಸ್ ಮಸ್ಕರೇನ್ಹಸ್ರವರು ನಿಜವಾದ ಸಾರಥಿ ಎನಿಸಿಕೊಂಡಿದ್ದಾರೆ ಎಂದು ಪುತ್ತೂರು, ಮರೀಲು, ಬನ್ನೂರು ಕ್ರೈಸ್ತ ಹಬ್ಬಗಳ ಆಚರಣಾ ಸಮಿತಿಯು ಸುದ್ದಿಗೆ ತಿಳಿಸಿದ್ದಾರೆ.
ಹೈಲೈಟ್ಸ್..
-ತಂದೆ ಜೋಸೆಫ್, ತಾಯಿ ಮರಿಯಾಳದೊಂದಿಗೆ ಬಾಲಯೇಸು
-ಅಜ್ಜ ಸಾಂತಾಕ್ಲಾಸ್ನೊಂದಿಗೆ ಮರಿ ಸಾಂತಾಕ್ಲಾಸ್
-ಹಿರಿಯ ವ್ಯಕ್ತಿಯೊಬ್ಬರಿಂದ ಕೋಟು, ಕಚ್ಚೆ ಧರಿಸಿ, ಊರುಗೋಲಿನಿನೊಂದಿಗೆ ಹೆಜ್ಜೆ
-ದಾರಿಯುದ್ಧಕ್ಕೂ ಗೊಂಬೆ ಕುಣಿತ
-ಕೊಂಕಣಿ ಬ್ಯಾಂಡ್, ನಾಸಿಕ್ ಬ್ಯಾಂಡ್, ಡಿ.ಜೆ, ಡ್ಯಾನ್ಸ್
-ಕ್ರೈಸ್ತ ಬಾಂಧವರಿಂದ ಕೆಂಪು ಡ್ರೆಸ್, ಕೆಂಪು ಟೊಪ್ಪಿ ಧರಿಸಿ ದಾರಿಯುದ್ದಕ್ಕೂ ಹೆಜ್ಜೆ
-ದಾರಿಯುದ್ದಕ್ಕೂ ಗರ್ನಲ್ ಸೌಂಡ್, ಸಿಡಿಮದ್ದು ಪ್ರದರ್ಶನ
ನಿಜವಾದ ಬಂಧುತ್ವ..
ಸಂಜೆ ಫಾ.ಪತ್ರಾವೋ ಬಳಿ ಆಕರ್ಷಕ ಮೆರವಣಿಗೆಯ ಉದ್ಘಾಟನೆ ಕಾರ್ಯ ನೆರವೇರಿದ್ದು, ಮಾನವ ಬಂಧುತ್ವ ವೇದಿಕೆಯ ಸದಸ್ಯ, ಪ್ರಗತಿಪರ ಕೃಷಿಕ ಅಮಲ ರಾಮಚಂದ್ರ, ರೋಟರಿ ವಲಯ ಐದರ ವಲಯ ಸೇನಾನಿ ಮೊಹಮದ್ ರಫೀಕ್ ದರ್ಬೆ, ಎಪಿಎಂಸಿ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ವಲೇರಿಯನ್ ಡಾಯಸ್ರವರು ಜಂಟಿಯಾಗಿ ಬಲೂನ್ ಗೊಂಚಲನ್ನು ಆಗಸಕ್ಕೆ ಹಾರಿಸುವ ಮೂಲಕ ಉದ್ಘಾಟಿಸಿ ನಿಜವಾದ ಬಂಧುತ್ವ ಮೆರಯಲಾಯಿತು.