ಹಿರೇಬಂಡಾಡಿ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ಕಾಡಾನೆ

0

ಉಪ್ಪಿನಂಗಡಿ: ಹಿರೇಬಂಡಾಡಿ ಗ್ರಾಮದ ಅಡೆಕ್ಕಲ್ ನಲ್ಲಿ ಡಿ.25ರ ಸಂಜೆಯೇ ಕಾಡಾನೆಯು ಕಾಣಿಸಿಕೊಂಡಿದ್ದು, ಇಲ್ಲಿ ತೋಟದಲ್ಲಿ ಹುಲ್ಲು ಕೊಯ್ಯುತ್ತಿದ್ದ ಮಹಿಳೆಯೋರ್ವರನ್ನು ಅಟ್ಟಾಡಿಸಿಕೊಂಡು ಬಂದ ಘಟನೆ ನಡೆದಿದೆ.


ಕೆಲ ದಿನಗಳ ಹಿಂದೆ ಕುಮಾರಧಾರ ನದಿ ದಾಟಿ ಹಿರೇಬಂಡಾಡಿ ಗ್ರಾಮ ವ್ಯಾಪ್ತಿಗೆ ಬಂದಿದ್ದ ಕಾಡಾನೆಯು ಪರಿಸರದಲ್ಲಿ ಭಯದ ವಾತಾವರಣ ಸೃಷ್ಟಿಸಿತ್ತು. ಭಾನುವಾರ ತಡರಾತ್ರಿ ಮತ್ತೆ ನದಿ ದಾಟಿ ಬೀರಮಂಗಲದತ್ತ ಕಾಡಾನೆ ಸಾಗಿದೆ ಎಂದು ಆನೆಯ ಸಾಗಿದ ಕುರುಹು ನೋಡಿ ಅರಣ್ಯಾಧಿಕಾರಿಗಳು ತಿಳಿಸಿದ್ದರು. ಆದರೆ ಡಿ.24ರ ರಾತ್ರಿ ನಿನ್ನಿಕಲ್ಲ್‌ನಲ್ಲಿರುವ ಪ್ರಕಾಶ್ ರೈ ಬೆಳ್ಳಿಪ್ಪಾಡಿ ಅವರ ತೋಟಕ್ಕೆ ಕಾಡಾನೆ ಬಂದಿದ್ದು, ಆನೆಯ ಲದ್ದಿ, ಅದರ ಹೆಜ್ಜೆಯ ಗುರುತು ಸಿಕ್ಕಿದೆ. ಡಿ.25ರ ಸಂಜೆ ಸ್ಥಳೀಯರಿಗೆ ಕಾಡಾನೆ ಕಾಣ ಸಿಕ್ಕಿದ್ದು, ಸ್ಥಳೀಯರಲ್ಲಿ ಭಯದ ವಾತಾವರಣ ಮೂಡಿಸಿದೆ. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅರಣ್ಯಾಧಿಕಾರಿಗಳ ತಂಡ ಪಟಾಕಿ ಸಿಡಿಸಿ ಕಾಡಾನೆಯನ್ನು ಓಡಿಸುವ ಪ್ರಯತ್ನ ನಡೆಸಿದ್ದು, ಕಾಡಾನೆಯು ರಾತ್ರಿಯ ಸಮಯದಲ್ಲಿ ಅಡೆಕ್ಕಲ್ ಪರಿಸರದತ್ತ ಸಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಎರಡು ಆನೆಗಳು ?:
ನಿನ್ನಿಕಲ್ಲ್ ಪರಿಸರದಲ್ಲಿ ಮಧ್ಯಮ ಗಾತ್ರದ ಕಾಡಾನೆ ಇದ್ದರೆ, ಅಡೆಕಲ್ಲ್ ಪರಿಸರದಲ್ಲಿ ದೊಡ್ಡ ಗಾತ್ರದ ಕಾಡಾನೆಯೊಂದು ಇದೆ ಎಂದು ಸ್ಥಳೀಯರು ಆಡಿಕೊಳ್ಳುತ್ತಿದ್ದು, ಆದರೆ ಈ ಬಗ್ಗೆ ಅರಣ್ಯಾಧಿಕಾರಿಗಳಿಗೂ ಸ್ಪಷ್ಟತೆ ಸಿಕ್ಕಿಲ್ಲ. ರಾತ್ರಿಯೂ ಅರಣ್ಯಾಧಿಕಾರಿಗಳ ತಂಡ ಈ ಭಾಗದಲ್ಲಿ ಬೀಡು ಬಿಟ್ಟಿದ್ದು, ಆನೆಯನ್ನು ಓಡಿಸುವ ಪ್ರಯತ್ನ ನಡೆಸುತ್ತಿದೆ.
ಹಿರೇಬಂಡಾಡಿಯೆಂಬುದು ಉಪ್ಪಿನಂಗಡಿ ಪೇಟೆಗೆ ಹತ್ತಿರದಲ್ಲಿರುವ ಪ್ರದೇಶವಾಗಿದ್ದು, ಇಲ್ಲಿ ಹೆಚ್ಚಿನ ಕಾಡುಗಳಿಲ್ಲ. ಇಲ್ಲಿ ಗದ್ದೆ, ತೋಟ, ಗುಡ್ಡ ಬಿಟ್ಟರೆ ಜನವಸತಿ ಪ್ರದೇಶವೇ ಹೆಚ್ಚಾಗಿದೆ. ಈ ಭಾಗಕ್ಕೆ ಇದೇ ಮೊದಲ ಬಾರಿ ಕಾಡಾನೆಯ ಪ್ರವೇಶವಾಗಿದ್ದು, ಸುತ್ತಮುತ್ತಲಿನ ಜನ ಭಯಭೀತರಾಗುವಂತಾಗಿದೆ.

LEAVE A REPLY

Please enter your comment!
Please enter your name here