ಧರ್ಮಸೂಕ್ಷ್ಮ ಅರಿತು ಪರಸ್ಪರ ಗೌರವ ಕೊಡಬೇಕು- ಶ್ರೀಕೃಷ್ಣ ಉಪಾಧ್ಯಾಯ
ಹೃದಯವನ್ನು ಗೆದ್ದಾಗ ಧರ್ಮವೂ ಗೆಲ್ಲುತ್ತದೆ- ಪಿ.ಎ. ಝಕರಿಯಾ ಅಸ್ಲಮಿ
ಮಾನವೀಯತೆಯ ಸಂಬಂಧದಿಂದ ಸುದೃಢ ಸಮಾಜ-ವಂ.ಸೈಮನ್ ಡಿಸೋಜ
ಪುತ್ತೂರು : ಪ್ರಭು ಯೇಸುಕ್ರಿಸ್ತರ ಜನುಮ ದಿನಾಚರಣೆ ಸಂಕೇತವಾಗಿ ಆಚರಿಸುವ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಪುತ್ತೂರು ಮಾಯ್ ದೆ ದೇವುಸ್ ಚರ್ಚ್ನಲ್ಲಿ ಬಂಧುತ್ವ ಕ್ರಿಸ್ಮಸ್ ಕಾರ್ಯಕ್ರಮ ಶಾಂತಿ ಸಂದೇಶ ಮತ್ತು ಸಾಂಸ್ಕೃತಿಕ ಸಂಜೆಯೊಂದಿಗೆ ವೈಭವಯುತವಾಗಿ ನಡೆಯಿತು.
ಖ್ಯಾತ ವಾಗ್ಮಿ, ಕೆದಿಲ ಪರಮಹಂಸದ ಶ್ರೀಕೃಷ್ಣ ಉಪಾಧ್ಯಾಯರವರು ಶಾಂತಿ ಸಂದೇಶ ನೀಡಿ ಸ್ವಾಮಿ ವಿವೇಕಾನಂದರು ನನಗೆ ಹಿಂದೂ ಧರ್ಮವನ್ನು ಪರಿಚಯ ಮಾಡಿಕೊಟ್ಟವರು. ವಿವೇಕಾನಂದರ ಗುರು ಪರಮಹಂಸರು ಕ್ರಿಶ್ಚಿಯಾನಿಟಿಯನ್ನು ಅಧ್ಯಯನ ಮಾಡಿ ಕ್ರಿಶ್ಚಿಯಾನಿಟಿ ಸತ್ಯ. ಏಸುಕ್ರಿಸ್ತ ಒಬ್ಬ ಮಹಾತ್ಮ. ಬೈಬಲ್ ಧರ್ಮಗ್ರಂಥ ಎಂದಿದ್ದಾರೆ. ಅದೇ ರೀತಿ ಇಸ್ಲಾಮ್ನ್ನು ಕೂಡ ಅವರು ಅಧ್ಯಯನ ಮಾಡಿದವರು. ಜಗತ್ತಿನಲ್ಲಿ ಎಷ್ಟು ಮತಗಳಿವೆಯೋ ಅವುಗಳು ಭಗವಂತನನ್ನು ಪಡೆಯುವ ಪಥಗಳು ಎಂದರು. ಪ್ರತೀ ಕ್ರಿಶ್ಚಿಯನ್, ಮುಸ್ಲಿಮನು ಅವರವರ ಧರ್ಮವನ್ನು ಪ್ರೀತಿಸಬೇಕು. ಅವರ ಧರ್ಮಗ್ರಂಥ ಏನು ಹೇಳುತ್ತದೋ ಅದನ್ನು ಪಾಲನೆ ಮಾಡಬೇಕು. ಧರ್ಮಗುರುಗಳಿಂದಲೇ ಧರ್ಮ ಬೋಽಸಲ್ಪಡಬೇಕು ವಿನಾ ರಾಜಕಾರಣಿಗಳಿಂದಲ್ಲ ಎಂದರು. ರಾಜಕೀಯಕ್ಕಾಗಿ ಜನರನ್ನು ವಿಭಜಿಸಿ ಓಟ್ಬ್ಯಾಂಕ್ಗೆ ಜನರ ಮನಸ್ಸನ್ನು ಒಡೆಯುವವರಿಂದ ಪ್ರಾಮಾಣಿಕವಾಗಿ ಹೊರಬರದೇ ಬಂಧುತ್ವ ಸಾಧ್ಯವಿಲ್ಲ. ಧರ್ಮಸೂಕ್ಷ್ಮಗಳನ್ನು ಅರಿತು ಪರಸ್ಪರ ಗೌರವ ಕೊಡದಿದ್ದರೆ ಬಂಧುತ್ವ ಸಾಧ್ಯವಿಲ್ಲ ಎಂದರು. ಸತ್ಯವನ್ನು ಮುಚ್ಚಿಡುವುದು ಸೌಹಾರ್ದತೆ ಅಲ್ಲ. ಪರಸ್ಪರ ಪ್ರೀತಿ, ಕಾಳಜಿಯಿಂದ ನಾವೆಲ್ಲರೂ ಭಾರತೀಯರಾಗಿ ಬಾಳಬೇಕಾದ ಅವಶ್ಯಕತೆ ಇದೆ. ಧರ್ಮ ವಿಶ್ವದ ಶಾಂತಿಗಾಗಿ ಹುಟ್ಟಿರುವುದು ಎಂದು ಹೇಳಿ ಶುಭಹಾರೈಸಿದರು.
ದ.ಕ.ಈಸ್ಟ್ ಜಿಲ್ಲೆ ಎಸ್ಕೆಎಸ್ಎಸ್ಎಫ್ ಉಪಾಧ್ಯಕ್ಷ ಪಿ.ಎ. ಝಕರಿಯಾ ಅಸ್ಲಮಿ ಮರ್ದಾಳರವರು ಶಾಂತಿ ಸಂದೇಶ ನೀಡಿ ಬಂಧುತ್ವ ಅಂದರೆ ನಾವು ಅಂಗೀಕರಿಸುವ, ನಂಬಿರುವ ಧರ್ಮವನ್ನು ಅದರದೇ ಆದ ರೀತಿಯಲ್ಲಿ ಸ್ವೀಕರಿಸಿಕೊಂಡು, ಜೀವನದಲ್ಲಿ ಅನುಷ್ಠಾನ ಮಾಡಿಕೊಂಡು, ಇತರರು ನಂಬಿಕೊಂಡು ಬರುವ ಧರ್ಮವನ್ನು ಗೌರವಿಸುವುದು ಬಂಧುತ್ವವಾಗಿದೆ. ಬಂಧುತ್ವ ನದಿಗಳ ಹಾಗೆ. ಅದು ಅದರ ಸ್ಥಾನದಿಂದ ಜನ್ಮಗೊಂಡು ವಿಭಿನ್ನವಾದ ಹೆಸರುಗಳಿಂದ ಹರಿಯುತ್ತದೆ. ಅದು ಸಮುದ್ರವನ್ನು ಸೇರಿದ ಬಳಿಕ ನೀರು ಯಾವ ನದಿಯದ್ದು ಎಂದು ನೀರನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಅದೇ ರೀತಿ ಜೀವಾತ್ಮ ಶರೀರದಲ್ಲಿ ಇರುವಾಗ ವಿವಿಧ ಧರ್ಮ, ಜಾತಿ ಎಂದು ಗುರುತಿಸಲ್ಪಡುತ್ತದೆ. ಜೀವಾತ್ಮ ಶರೀರ ಬಿಟ್ಟು ಪರಮಾತ್ಮನಲ್ಲಿಗೆ ಸೇರಿದಾಗ ಜಾತಿ, ಧರ್ಮ ಇರುವುದಿಲ್ಲ. ಧರ್ಮ, ಜಾತಿಗಾಗಿ ಕಚ್ಚಾಡುವ ನಾವು ಚಿಂತಿಸಬೇಕಾಗಿದೆ ಎಂದರು. ಧರ್ಮ ಅಡಗಿರುವುದು ಮಾನವನ ಹೃದಯದಲ್ಲಿ. ಹೃದಯ ಯಾವಾಗ ಗೆಲ್ಲುತ್ತದೋ ಆವಾಗ ಧರ್ಮ ಗೆಲ್ಲುತ್ತದೆ. ಬಂಧುತ್ವ ಎಂದರೆ, ಹೃದಯದಲ್ಲಿರಬೇಕು. ನಮ್ಮ ಧರ್ಮವನ್ನು ಅನುಸರಿಸಿದ ಹಾಗೆ ಇನ್ನೊಬ್ಬರ ಧರ್ಮವನ್ನು ಗೌರವಿಸಬೇಕು ಎಂದು ಎಲ್ಲಾ ಧರ್ಮಗಳು ಹೇಳುತ್ತದೆ ಎಂದು ಹೇಳಿ ಶುಭಹಾರೈಸಿದರು.
ಪೆರುವಾಯಿ ಫಾತಿಮಾ ಚರ್ಚ್ನ ಧರ್ಮಗುರು ವಂ.ಸೈಮನ್ ಡಿಸೋಜ ಶಾಂತಿ ಸಂದೇಶ ನೀಡಿ ಈ ದೇಶದ ಉದ್ದಗಲಕ್ಕೂ ಅಸಂಖ್ಯಾತ ಚರ್ಚ್, ಮಸೀದಿ ಮಂದಿರಗಳಿವೆ. ಭಗವದ್ಗೀತೆ, ಕುರಾನ್, ಬೈಬಲ್ ಗ್ರಂಥಗಳಿವೆ. ಮಾನವನು ದ್ವೇಷದ ಮಾರ್ಗವನ್ನು ಹಿಡಿಯಬಾರದು. ಮನುಷ್ಯತ್ವ, ಮಾನವೀಯತೆಯನ್ನು ಮರೆಯಬಾರದು. ಅಜ್ಞಾನ, ಅಂಧಕಾರ, ಪಾಪದಲ್ಲಿ ನಾಶವಾಗಬಾರದು. ಮನಷ್ಯರ ಜೊತೆ ಮನುಷ್ಯರಾಗಿ ಜೀವಿಸಬೇಕು ಎಂದರು. ದೇವರು ದೇವತ್ವ ತೊರೆದು ಗೋದಲಿಯಲ್ಲಿ ಬಾಲಯೇಸುವಾಗಿ ಹುಟ್ಟಿದರು. ಗೋದಲಿಯಲ್ಲಿ ಕ್ರಿಸ್ತನ ಜನನದ ಸಂದೇಶ ದೊರೆಯುತ್ತದೆ. ಯಾರನ್ನೂ ಬಿಡದೆ ಎಲ್ಲರನ್ನು ಒಂದುಗೂಡಿಸಿದ್ದು ಈ ಗೋದಲಿ. ಎಲ್ಲರನ್ನು ಒಂದುಗೂಡಿಸುವ ಐಕ್ಯತೆಯ ಸಿದ್ಧಾಂತ ಗೋದಲಿಯಲ್ಲಿ ಗೋಚರಿಸುತ್ತದೆ. ವಿಭಜನೆಯ ಗೋಡೆಯನ್ನು ಮೀರಲು ಸಾಧ್ಯ ಎಂಬುದು ಕ್ರಿಸ್ಮಸ್ ಹಬ್ಬದ ಸಂದೇಶ. ಹೃದಯವನ್ನು ಕಸದ ತೊಟ್ಟಿಯ ಹಾಗೆ ಮಾಡದೆ, ಮಾನವೀಯತೆಯ ಸಂಬಂಧಗಳಾಗಿ ಮಾಡಿದರೆ ಸುದೃಢ ಸಮಾಜ ನಿರ್ಮಾಣವಾಗುತ್ತದೆ. ಯೇಸು ಧರ್ಮ ಸ್ಥಾಪನೆಗೆ ಬರಲಿಲ್ಲ. ಒಡೆದು ಹೋದ ಜೀವಿತವನ್ನು ಕಟ್ಟಲು ಯೇಸು ಬಂದಿದ್ದಾರೆ. ಪ್ರೀತಿ, ಕರುಣೆ, ಕ್ಷಮೆಯಿಂದ ಶಾಂತಿಯ ಸ್ಥಾಪನೆಗಾಗಿ ಯೇಸುಕ್ರಿಸ್ತರು ಬಂದರು ಎಂದು ಹೇಳಿದ ಅವರು ನಾವು ಬೆಳಕು ಹಚ್ಚುವ ವ್ಯಕ್ತಿಗಳಾಗೋಣ. ಭರವಸೆಯ ವ್ಯಕ್ತಿಗಳಾಗೋಣ ಎಂದು ಹೇಳಿ ಶುಭಹಾರೈಸಿದರು.
ಮಾಯ್ ದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ. ಲಾರೆನ್ಸ್ ಮಾಸ್ಕರೇನಸ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗೌರವ ಉಪಸ್ಥಿತರಾಗಿ ಪುತ್ತೂರು ನಗರಸಭಾ ಪೌರಾಯುಕ್ತ ಮಧು ಎಸ್. ಮನೋಹರ್, ವಂ.ಡಾ.ಎಲ್ದೊ ಪುತ್ತೆನ್ ಕಂಡತ್ತಿಲ್ ಕೋರ್ ಎಪಿಸ್ಕೋಪ, ಪುತ್ತೂರು ಸುದಾನ ವಿದ್ಯಾಸಂಸ್ಥೆಗಳ ಸಂಚಾಲಕ ವಂ.ವಿಜಯ ಹಾರ್ವಿನ್, ಪುತ್ತೂರು ಸಾನ್ ತೋಮ್ ಗುರುಮಂದಿರದ ರೆಕ್ಟರ್ ವಂ.ಜೋಸೆಫ್ ಕೇಳಪರಂಬಿಲ್, ಪುತ್ತೂರು ಜಿ.ಎಲ್ ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕ ಬಲರಾಮ ಆಚಾರ್ಯ, ಪುತ್ತೂರು ಕೇಂದ್ರ ಅನ್ಸಾರುದ್ದಿನ್ ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಆಜಾದ್ ಗೌರವ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ:
ಮಾಯ್ ದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆ, ಬೆಥನಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ, ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, ಸಂತ ವಿಕ್ಟರನ ಬಾಲಿಕಾ ಪ್ರೌಢಶಾಲೆ, ಬೆಥನಿ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆ, ಸಂತ ವಿಕ್ಟರನ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ಸಂತ ಫಿಲೋಮಿನಾ ಪದವಿ ಕಾಲೇಜಿನ ವಿದ್ಯಾರ್ಥಿಗಳಿಂದ ನೃತ್ಯ, ರೂಪಕ, ಯಕ್ಷಗಾನ ಪ್ರದರ್ಶನ ನಡೆಯಿತು.
ಗಣ್ಯರನ್ನು ಶಾಲು, ಸ್ಮರಣಿಕೆ, ಹೂ ನೀಡಿ ಗೌರವಿಸಲಾಯಿತು. ಮಾಯ್ ದೆ ದೇವುಸ್ ಚರ್ಚ್ ಸಹಾಯಕ ಧರ್ಮಗುರು ವಂ.ಲೋಹಿತ್ ಅಜಯ್ ಮಾಸ್ಕರೇನಸ್, ಫಿಲೋಮೀನಾ ಪ.ಪೂ ಕಾಲೇಜಿನ ಪ್ರಾಂಶುಪಾಲ ವಂ.ಅಶೋಕ್ ರಾಯನ್ ಕ್ರಾಸ್ತ, ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಮುಖ್ಯಗುರು ವಂ.ಮ್ಯಾಕ್ಸಿಮ್ ಡಿ’ಸೋಜ, ಸಂತ ಫಿಲೋಮೀನಾ ಹಾಸ್ಟೆಲ್ ವಾರ್ಡನ್ ವಂ.ರೂಪೇಶ್ ತಾವ್ರೋ, ಫಿಲೊಮೀನಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯಗುರು ಸಿಸ್ಟರ್ ಭಗಿನಿ ಲೋರ ಪಾಯಸ್, ಚರ್ಚ್ ಪಾಲನಾ ಸಮಿತಿ ಕಾರ್ಯದರ್ಶಿ ಯೆವುಲಿನ್ ಡಿ’ಸೋಜ, 20 ಆಯೋಗಗಳ ಸಂಯೋಜಕ ಜಾನ್ ಡಿಸೋಜ, ಪೂವರಿ ಪತ್ರಿಕೆಯ ಸಂಪಾದಕ ವಿಜಯ ಕುಮಾರ್ ಹೆಬ್ಬಾರಬೈಲು ಸೇರಿದಂತೆ ವಿವಿಧ ಧರ್ಮದ ಗಣ್ಯರು ಉಪಸ್ಥಿತರಿದ್ದರು. ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ತಾ ವಂದಿಸಿ ಶಿಕ್ಷಕಿ ಮೋಲಿ ವಿಲ್ಮಾ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.
ಬಲಿಪೂಜೆ, ಸಂದೇಶ:
ಡಿ.24ರಂದು ರಾತ್ರಿ ಚರ್ಚ್ ವಠಾರದಲ್ಲಿ ಬಲಿಪೂಜೆ ಹಾಗೂ ಕ್ರಿಸ್ಮಸ್ ಸಂದೇಶ ಕಾರ್ಯಕ್ರಮ ನಡೆಯಿತು. ವಂ.ಅಶೋಕ್ ರಾಯನ್ ಕ್ರಾಸ್ತ ಬಲಿಪೂಜೆ ನೆರವೇರಿಸಿದರು. ಚರ್ಚ್ ಸಹಾಯಕ ಧರ್ಮಗುರು ವಂ.ಲೋಹಿತ್ ಅಜಯ್ ಮಸ್ಕರೆನಸ್ ಮನುಕುಲದ ಮೇಲೆ ದೇವರು ತೊರಿಸಿದ ಪ್ರೀತಿಯ ಸಂದೇಶದ ಕುರಿತು ಪ್ರವಚನ ನೀಡಿ ದೇವರ ಪ್ರೀತಿ ಆಗಾಧ ಹಾಗೂ ವರ್ಣಿಸಲು ಆಸಾಧ್ಯ. ಯೇಸುಕ್ರಿಸ್ತರು ಮನುಕುಲದ ರಕ್ಷಣೆಗೆ ಧರೆಗಿಳಿದು ಬಂದರು. ಇದು ದೇವರ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ. ದೇವರ ಪ್ರೀತಿಗೆ ಉತ್ತರವಾಗಿ ನಾವು ದೇವರನ್ನು ಪ್ರೀತಿಸಬೇಕು ಮತ್ತು ಪ್ರೀತಿಯನ್ನು ಇತರರಿಗೆ ಹಂಚಬೇಕು ಎಂದು ಆಹ್ವಾನ ನೀಡಿದರು. ಚರ್ಚ್ನ ಪ್ರಧಾನ ಧರ್ಮಗುರು ವಂ. ಲಾರೆನ್ಸ್ ಮಸ್ಕರೇನಸ್, ವಂ.ರೂಪೇಶ್ ತಾವ್ರೋ, ವಂ.ಮ್ಯಾಕ್ಸಿಮ್ ಡಿಸೋಜಾ ಉಪಸ್ಥಿತರಿದ್ದರು.
ಕೇಕ್ ಕತ್ತರಿಸಿ ಚಾಲನೆ
ಬಂಧುತ್ವ ಕ್ರಿಸ್ಮಸ್ ಕಾರ್ಯಕ್ರಮದ ಆರಂಭದಲ್ಲಿ ಚರ್ಚ್ನ ಪ್ರಧಾನ ಧರ್ಮಗುರು ವಂ.ಲಾರೆನ್ಸ್ ಮಸ್ಕರೇನಸ್ರವರು ಸೇರಿದ್ದ ಗಣ್ಯರೊಂದಿಗೆ ಕ್ರಿಸ್ಮಸ್ ಕೇಕ್ ಕಟ್ ಮಾಡುವ ಮೂಲಕ ಬಂಧುತ್ವ ಕ್ರಿಸ್ಮಸ್ಗೆ ಚಾಲನೆ ನೀಡಿದರು.