ನಕಲಿ ಚಿನ್ನ ಅಡವಿಟ್ಟು ಸಾಲ ಪಡೆದು‌ ಸಹಕಾರಿ ಸಂಘಕ್ಕೆ ರೂ.2,11,89,800 ನಷ್ಟ:ಪ್ರಮುಖ ಆರೋಪಿ ಈಶ್ವರಮಂಗಲದ ಅಬೂಬಕ್ಕರ್ ಸಿದ್ದಿಕ್‌ಗಾಗಿ ಶೋಧ

0

ಪುತ್ತೂರು:ಈಶ್ವರಮಂಗಲ ಮೂಲದ ವ್ಯಕ್ತಿಯೋರ್ವರು ಸಹಕಾರಿ ಸಂಘವೊಂದರಲ್ಲಿ ನಕಲಿ ಚಿನ್ನ ಅಡವಿಟ್ಟು ರೂ.2 ಕೋಟಿಗೂ ಅಧಿಕ ಸಾಲ ಪಡೆದು ವಂಚಿಸಿರುವ ಆರೋಪದಡಿ ದಾಖಲಾಗಿರುವ ಪ್ರಕರಣವೊಂದರಲ್ಲಿ ಸಂಘದ ಅಧ್ಯಕ್ಷ,ನಿರ್ದೇಶಕರು ಮತ್ತು ಮ್ಯಾನೇಜರ್ ಸಹಿತ 28 ಜನರ ವಿರುದ್ಧ ಕೇಸು ದಾಖಲಿಸಿಕೊಂಡಿರುವ ಪೊಲೀಸರು ಸಂಘದ ಸರಫರನ್ನು ಬಂಧಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.


ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ಕಳೆತ್ತಿಮಾರು ದಿ.ಅಬ್ದುಲ್ ಖಾದರ್ ಅವರ ಮಗ ಪ್ರಸ್ತುತ ವಿದೇಶದಲ್ಲಿ ಉದ್ಯೋಗದಲ್ಲಿರುವ ಅಬೂಬಕ್ಕರ್ ಸಿದ್ದಿಕ್ ಎಂಬಾತ ನಕಲಿ ಚಿನ್ನವಿಟ್ಟು ವಂಚಿಸಿದ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಬಂಟ್ವಾಳದ ಬೈಪಾಸ್ ಜಂಕ್ಷನ್‌ನಲ್ಲಿ ಪ್ರಧಾನ ಕಛೇರಿ ಹೊಂದಿರುವ ಸಮಾಜ ಸೇವಾ ಸಹಕಾರಿ ಸಂಘದ ಮಂಗಳೂರು ಪಡೀಲ್ ಶಾಖೆಯಲ್ಲಿ ಅಬೂಬಕ್ಕರ್ ಸಿದ್ದಿಕ್ ನಕಲಿ ಚಿನ್ನದ ಬಳೆಗಳನ್ನು ಅಡವಿಟ್ಟು ರೂ.2,11,89,800 ಸಾಲ ಪಡೆದು ವಂಚನೆ ಮಾಡಿರುವುದಾಗಿ ಆರೋಪಿಸಲಾಗಿದೆ.


ಚಿನ್ನ ಪರೀಕ್ಷೆ ನಡೆಸುವ ಸರಾಫ,ಬ್ಯಾಂಕ್ ಅಧ್ಯಕ್ಷ, ನಿರ್ದೇಶಕರು,ಜನರಲ್ ಮ್ಯಾನೇಜರ್,ಸಿಬ್ಬಂದಿಗಳು, ಆಂತರಿಕ ಲೆಕ್ಕಪರಿಶೋಧಕರುಗಳ ಸಹಕಾರದಿಂದ ಈ ವಂಚನೆ ವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು ಚಿನ್ನ ಪರೀಕ್ಷೆ ನಡೆಸುವ ಸರಫಾ ವಿವೇಕ್ ಆಚಾರ್ಯ ಎಂಬಾತನನ್ನು ಬಂಧಿಸಲಾಗಿದೆ.


28 ಆರೋಪಿಗಳ ವಿರುದ್ಧ ಪ್ರಕರಣ-ಓರ್ವನ ಬಂಧನ:
ಸಮಾಜ ಸೇವಾ ಸಹಕಾರಿ ಸಂಘ ನಿ.ಕೇಂದ್ರ ಕಚೇರಿ ಬಂಟ್ವಾಳ ಇದರ ಸದಸ್ಯ ಹಾಗೂ ಮಾಜಿ ನಿರ್ದೇಶಕ ಲೋಕನಾಥ್ ಡಿ.ಅವರು ನೀಡಿದ ದೂರಿನ ಮೇರೆಗೆ 28 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.ಪ್ರಥಮ ಆರೋಪಿಯಾಗಿ ಅಬೂಬಕ್ಕರ್ ಸಿದ್ದೀಕ್ ಈಶ್ವರಮಂಗಲ, ಎರಡನೇ ಆರೋಪಿಯಾಗಿ ಸಂಘದ ಚಿನ್ನ ಪರೀಕ್ಷಕ ವಿವೇಕ್ ಆಚಾರ್ಯ, 3ರಿಂದ 28ನೇ ಆರೋಪಿಗಳಾಗಿ ಸಂಘದ ಪಡೀಲ್ ಶಾಖೆಯ ಪ್ರಭಾರ ಮ್ಯಾನೇಜರ್ ಪ್ರಶಾಂತ್, ಸಂಘದ ಅಧ್ಯಕ್ಷ ಸುರೇಶ್ ಕುಲಾಲ್, ಸಂಘದ ನಿರ್ದೇಶಕರಾದ ಪದ್ಮನಾಭ ವಿ, ಜನಾರ್ದನ ಬೊಂಡಾಲ, ವಿಜಯ ಕುಮಾರ್ ವಿ.,ರಮೇಶ್ ಸಾಲ್ಯಾನ್ ಬಿ., ಸತೀಶ್, ವಿಶ್ವನಾಥ್ ಕೆ.ಬಿ.,ಅರುಣ್ ಕುಮಾರ್, ಸುರೇಶ್ ಎನ್, ರಮೇಶ್ ಸಾಲ್ಯಾನ್, ಶ್ರೀಮತಿ ಜಯಂತಿ, ಶ್ರೀಮತಿ ವಿದ್ಯಾ, ಶ್ರೀಮತಿ ವಿಜಯಲಕ್ಷ್ಮೀ, ಜಗನ್ನಿವಾಸ ಗೌಡ, ಗಣೇಶ್ ಸಮಗಾರ್ ಎಂ.ಕೆ.,ಸಂಘದ ಜನರಲ್ ಮ್ಯಾನೇಜರ್ ಬೋಜ ಮೂಲ್ಯ, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಮೋಹನ್ ಎಂ.ಕೆ., ಸೇಲ್ ಆಫೀಸರ್ ಉದಯ, ಬಂಟ್ವಾಳ ಟೌನ್ ಶಾಖೆಯ ಮ್ಯಾನೇಜರ್ ಶರತ್, ಪಡೀಲ್ ಶಾಖೆಯ ಮ್ಯಾನೇಜರ್ ವಿನೋದ್, ಮಂಗಳೂರು ನಗರ ಶಾಖೆಯ ಅಕೌಂಟೆಂಟ್ ಕಂ ಮ್ಯಾನೇಜರ್ ಶ್ರೀಮತಿ ನಳಿನಿ, ಪಡೀಲ್ ಶಾಖೆಯ ಜವಾನ ಯೋಗೀಶ್, ಮಂಗಳೂರು ನಗರ ಪ್ರಧಾನ ಕಚೇರಿಯ ಜವಾನ ವಸಂತ, ಇಂಟರ್ನಲ್ ಆಡಿಟರ್‌ಗಳಾದ ರೋಹಿತ್ ಮತ್ತು ಸಿಎ ತುಕಾರಾಮ ಮತ್ತು ಚಾರ್ಟರ್ಡ್ ಅಕೌಂಟೆಂಟ್‌ಗಳಾದ ಚಂದನ್ ಹೆಗ್ಡೆ ಆಂಡ್ ಅಸೋಸಿಯೇಟ್ಸ್ ಇವರನ್ನು ಆರೋಪಿಗಳಾಗಿ ದೂರು ನೀಡಲಾಗಿದೆ.


ದೂರಿನ ವಿವರ:
ಸಮಾಜ ಸೇವಾ ಸಹಕಾರಿ ಸಂಘದ ಪಡೀಲ್ ಶಾಖೆಯಲ್ಲಿ, ಒಂದನೇ ಆರೋಪಿ ಅಬೂಬಕ್ಕರ್ ಸಿದ್ಧೀಕ್ ದಿನಾಂಕ 13-11-2023ರಿಂದ 03-02-2024ರವರೆಗೆ ಬೇರೆ ಬೇರೆ ದಿನಾಂಕದಂದು ನಕಲಿ ಚಿನ್ನದ ಬಳೆಗಳನ್ನು, 3ನೇ ಆರೋಪಿ ಪ್ರಶಾಂತ್ ಪ್ರಭಾರ ವ್ಯವಸ್ಥಾಪಕರಾಗಿದ್ದ ಸಂಘದಲ್ಲಿ ಚಿನ್ನಾಭರಣ ಸಾಲಕ್ಕೆ ಅಡಮಾನ ಇರಿಸಿದಂತೆ 2ನೇ ಆರೋಪಿ ವಿವೇಕ್ ಆಚಾರ್ಯ ಚಿನ್ನವನ್ನು ಪರೀಕ್ಷಿಸಿ ನೈಜ ಚಿನ್ನವೆಂದು ದೃಢೀಕರಿಸಿದಂತೆ ಪ್ರಭಾರ ವ್ಯವಸ್ಥಾಪಕ ಪ್ರಶಾಂತ್‌ರವರು ಸಂಘದಲ್ಲಿ ಚಿನ್ನಾಭರಣ ಅಡಮಾನ ಸಾಲ ದಿನಕ್ಕೆ 20 ಲಕ್ಷ ನೀಡುವ ಮಿತಿ ಇದ್ದರೂ ಸಂಘದ ಕರಾರನ್ನು ಉಲ್ಲಂಸಿ ಆಡಳಿತ ಮಂಡಳಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರು, ಪ್ರಧಾನ ವ್ಯವಸ್ಥಾಪಕರ ಆದೇಶದಂತೆ ರೂ.2,11,89,800 ಸಾಲವನ್ನು 1ನೇ ಆರೋಪಿ ಅಬೂಬಕ್ಕರ್ ಸಿದ್ದೀಕ್‌ಗೆ ಮಂಜೂರು ಮಾಡಿ ಆರೋಪಿತನ ಖಾತೆಗೆ ಜಮೆ ಮಾಡಿದ್ದು ಬಳಿಕ ಆರೋಪಿಯು ಸಾಲವನ್ನು ಮರುಪಾವತಿಸದೇ ಇದ್ದಾಗ ಎಲ್ಲಾ ಆರೋಪಿತರು ನಕಲಿ ಚಿನ್ನಾಭರಣದ ಹರಾಜು ಪ್ರಕ್ರಿಯೆಯನ್ನು ಗುಪ್ತ ಸ್ಥಳದಲ್ಲಿ ನಡೆಸಿ ಪಡೀಲ್ ಶಾಖೆಯ ಸರಾಫರಾದ ಎರಡನೇ ಆರೋಪಿ ವಿವೇಕ್ ಆಚಾರ್ಯ ನಕಲಿ ಚಿನ್ನಾಭರಣದ ಹರಾಜು ಪ್ರಕ್ರಿಯೆಗೆ ಬಿಡ್‌ದಾರರಾಗಿ ಪಾಲ್ಗೊಂಡು ಆರೋಪಿತನಿಗೆ ಸಂಘದಿಂದಲೇ ಕಾನೂನು ಬಾಹಿರವಾಗಿ ರೂ.1 ಕೋಟಿ ಸಾಲ ನೀಡಿ ಒಂದನೇ ಆರೋಪಿ ಅಬೂಬಕ್ಕರ್ ಸಿದ್ದೀಕ್‌ನ ಸಾಲದ ಖಾತೆಯನ್ನು ಮುಕ್ತಾಯಗೊಳಿಸಿದ್ದು, ಸಾಲ ಮಂಜೂರು ಮಾಡಿದ ಮತ್ತು ಸಾಲ ಮರುಪಾವತಿಸಿದ ವಿಚಾರವನ್ನು ಆಂತರಿಕ ಲೆಕ್ಕಪರಿಶೋಧಕರು ಮತ್ತು ಲೆಕ್ಕ ಪರಿಶೋಧಕರು ತಮ್ಮ ವರದಿಯಲ್ಲಿಯೂ ನಮೂದಿಸದೆ ಬಳಿಕ ವಿಷಯವನ್ನು ಅಧ್ಯಕ್ಷರು,ನಿರ್ದೇಶಕರು, ಪ್ರಧಾನ ವ್ಯವಸ್ಥಾಪಕರು,ಮಾರಾಟ ಅಧಿಕಾರಿಗಳು ಮತ್ತು ಸಂಘದ ನೌಕರರು ವಿಷಯವನ್ನು ಗ್ರಾಹಕರಿಂದ ಮತ್ತು ಸದಸ್ಯರಿಂದ ಮುಚ್ಚಿಟ್ಟು ಸಂಘಕ್ಕೆ ವಂಚಿಸಿ ರೂ.2,11,89,800 ನಷ್ಟವನ್ನು ಉಂಟು ಮಾಡಿರುವುದಾಗಿದೆ ಎಂದು ಲೋಕನಾಥ್ ಡಿ.ಅವರು ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.ಅವರ ದೂರಿನ ಮೇರೆಗೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ 28 ಆರೋಪಿಗಳ ವಿರುದ್ಧ ಐಪಿಸಿ ಕಲಂ 406,409,420,465,467,468,471,506,34ರಡಿ ಪ್ರಕರಣ ದಾಖಲಾಗಿದೆ.ಎರಡನೇ ಆರೋಪಿಯಾಗಿರುವ ಸಂಘದ ಚಿನ್ನ ಪರೀಕ್ಷಕ ವಿವೇಕ್ ಆಚಾರ್ಯ ಅವರನ್ನು ಪೊಲೀಸರು ಬಂಧಿಸಿದ್ದಾರೆ.ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಅಬೂಬಕ್ಕರ್ ಸಿದ್ದಿಕ್‌ಗಾಗಿ ಹುಡುಕಾಟ ಮುಂದುವರೆದಿದೆ.


ಲೋಕನಾಥ್ ಪತ್ರಿಕಾಗೋಷ್ಠಿ:
ಪ್ರಕರಣದ ಕುರಿತು ದೂರುದಾರ ಲೋಕನಾಥ್ ಡಿ.ರವರು ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ್ದರು.ಅಬೂಬಕ್ಕರ್ ಸಿದ್ದಿಕ್ ಈಶ್ವರಮಂಗಲ ಮೊದಲಿನಿಂದಲೂ ಬ್ಯಾಂಕ್‌ನ ಗ್ರಾಹಕರಾಗಿದ್ದರು.2023ರ ನವೆಂಬರ್ ತಿಂಗಳಿನಿಂದ 2024ರ ಫೆಬ್ರವರಿ ತಿಂಗಳಿನವರೆಗೆ ನಕಲಿ ಚಿನ್ನದ ಒಂದೇ ರೀತಿಯ 500 ಬಳೆಗಳನ್ನು ಅಡವಿಟ್ಟು ಸಾಲ ಪಡೆದಿದ್ದಾರೆ.ಸಾಲವನ್ನು ಮೂರು ತಿಂಗಳಿನಲ್ಲಿ ತೀರಿಸಬೇಕಿತ್ತು.ಆದರೆ ಸಾಲ ತೀರಿಸದೆ ಇದ್ದಾಗ, ಬ್ಯಾಂಕ್‌ನ ಪ್ರಭಾರ ಮ್ಯಾನೇಜರ್ ಅನುಮಾನಗೊಂಡು ಬೇರೆಯವರಿಂದ ಮರು ತಪಾಸಣೆ ನಡೆಸಿದಾಗ ಚಿನ್ನ ನಕಲಿ ಎಂದು ಗೊತ್ತಾಗಿದೆ. ತಕ್ಷಣ ಜನರಲ್ ಮ್ಯಾನೇಜರ್ ಸರಾಫರವರಿಗೆ ಪತ್ರ ಬರೆದು,‘ಸರಿಯಾಗಿ ಚಿನ್ನವನ್ನು ಪರೀಕ್ಷೆ ಮಾಡದ ಕಾರಣ ಬ್ಯಾಂಕ್‌ಗೆ 2 ಕೋಟಿ ರೂಪಾಯಿಗೂ ಅಧಿಕ ನಷ್ಟ ಆಗಿದೆ.ನೀವು ಅದನ್ನು ತಕ್ಷಣ ಪಾವತಿಸುವಂತೆ ತಿಳಿಸಿದ್ದಾರೆ. ಅಬೂಬಕ್ಕರ್ ಸಿದ್ದೀಕ್ ಎಂಬಾತ ನಕಲಿ ಚಿನ್ನಾಭರಣ ಅಡಮಾನ ಇಟ್ಟು 20 ಆಭರಣ ಸಾಲಗಳ ಬಾಂಡ್‌ಗಳಲ್ಲಿ 510 ನಕಲಿ ಬಳೆಗಳನ್ನು ಅಡವಿಟ್ಡಿದ್ದ. ಅಬೂಬಕ್ಕರ್ ಸಿದ್ದೀಕ್ ಇರಿಸಿದ್ದ ಚಿನ್ನ ನಕಲಿ ಎಂದು ಗೊತ್ತಿದ್ದರೂ ಚಿನ್ನ ಪರೀಕ್ಷಕ ವಿವೇಕ್ ಆಚಾರ್ಯ ‘ಅಸಲಿ ಚಿನ್ನ’ ಎಂದು ಸರ್ಟಿಫಿಕೇಟ್ ನೀಡಿದ್ದರು.2023ರ ನವೆಂಬರ್‌ನಿಂದ 2024ರ ಫೆಬ್ರವರಿವರೆಗೆ ನಕಲಿ ಚಿನ್ನ ಅಡವಿಟ್ಟು ಕೋಟಿ ಕೋಟಿ ಲೂಟಿ ನಡೆದಿದೆ.ಮೂರು ತಿಂಗಳ ಅವಧಿಗೆ ಎಕ್ಸ್‌ಪ್ರೆಸ್ ಗೋಲ್ಡ್ ಲೋನ್‌ನಡಿ ನಕಲಿ ಚಿನ್ನವಿಟ್ಟು ವಂಚನೆ ನಡೆದಿದೆ ಎಂದರು.ಈ ವರ್ಷದ ಫೆಬ್ರವರಿ ಮೊದಲ ವಾರದಲ್ಲಿ ಈ ವಿಚಾರ ಬೆಳಕಿಗೆ ಬಂದಿದ್ದು, ಸಂಘದ ಹಿರಿಯ ಸದಸ್ಯರು ಮೈಸೂರಿನ ನಿಬಂಧಕರಿಗೆ ಏಪ್ರಿಲ್ 10ರಂದು ದೂರು ಅರ್ಜಿಯನ್ನು ಸಲ್ಲಿಸಿದ್ದರು.ಬಳಿಕ ಜುಲೈ 1ರಂದು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗೂ ದೂರು ಸಲ್ಲಿಸಲಾಗಿತ್ತು.ಮೈಸೂರು ನಿಬಂಧಕರು, ದ.ಕ.ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ದ.ಕ.ಜಿಲ್ಲಾಧಿಕಾರಿಯವರು ಮಂಗಳೂರು ಉಪ ನಿಬಂಧಕರಿಗೆ ನೋಟಿಸ್ ಜಾರಿ ಮಾಡಿ ತನಿಖೆಗೆ ಆದೇಶಿಸಿದ್ದರು.ಆದರೆ ಮಂಗಳೂರು ಉಪ ನಿಬಂಧಕರು ನಮಗೆ ಹೇಳಿಕೆ ದಾಖಲಿಸಲು ಅವಕಾಶ ನೀಡದೆ ಶಾಸನಬದ್ಧ ತನಿಖೆಗೆ ಶಿಫಾರಸು ಮಾಡಿ ತನಿಖೆ ಮುಕ್ತಾಯಗೊಳಿಸಿ ಹಿಂಬರಹ ನೀಡಿದ್ದರು.ಪೊಲೀಸ್ ವರಿಷ್ಠಾಧಿಕಾರಿಯವರು ಆರೋಪಿಗಳ ವಿಚಾರಣೆ ನಡೆಸಿದ ವೇಳೆ ಆರೋಪಿಗಳು ಆರೋಪ ನಿರಾಕರಿಸಿ ಸುಳ್ಳು ಹೇಳಿಕೆ ನೀಡಿದ್ದರು.ಬಳಿಕ ಪ್ರಕರಣ ಕಮಿಷನರೇಟ್ ವ್ಯಾಪ್ತಿಗೆ ಬರುವುದಾಗಿ ಹೇಳಿ, ನ್ಯಾಯಾಲಯದಲ್ಲಿ ಸಮಸ್ಯೆ ಬಗೆಹರಿಸುವಂತೆ ತಿಳಿಸಲಾಗಿತ್ತು.ಪ್ರಕರಣದ ಬಗ್ಗೆ ಕಮಿಷನರ್ ಅವರನ್ನು ಭೇಟಿಯಾಗಿ ವಿವರಿಸಿದ ಬಳಿಕ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಂಘದ ಹಿರಿಯ ಸದಸ್ಯರಾದ ಸೇಸಪ್ಪ ಟಿ. ಸೋಮಯ್ಯ ಎಚ್., ಸುಂದರ ಬಿ., ರಮೇಶ್ ಬಿ., ಮಾಜಿ ನಿರ್ದೇಶಕ ಹೇಮಂತ ಸಾಲ್ಯಾನ್ ಉಪಸ್ಥಿತರಿದ್ದರು.

ಆಡಳಿತ ಮಂಡಳಿಯ ಹೆಸರು ಕೆಡಿಸಲು ಈ ರೀತಿ ಆರೋಪ: ಅಧ್ಯಕ್ಷ ಸುರೇಶ್ ಕುಲಾಲ್ ಪ್ರತಿಕ್ರಿಯೆ
ಸಂಘಕ್ಕೆ ನಷ್ಟವಾಗಿದೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ.ಅಡವಿಟ್ಟ ಚಿನ್ನಾಭರಣ ನಕಲಿ ಎಂದು ಸಾಬೀತಾದರೆ, ಅದು ಶುದ್ಧ ಚಿನ್ನವೆಂದು ಶಿಫಾರಸು ಮಾಡಿದ ಸರಾಫರೇ ಅದನ್ನು ಹರಾಜಿನಲ್ಲಿ ತೆಗೆದುಕೊಳ್ಳಬೇಕೆಂಬ ಷರತ್ತು ವಿಧಿಸಲಾಗಿರುತ್ತದೆ.ಅವರು ತಪ್ಪೆಸಗಿದ್ದರೆ ಅವರ ವಿರುದ್ಧ ಕ್ರಮವಾಗುತ್ತದೆ.ಇದೇ ದೂರಿಗೆ ಸಂಬಂಧಿಸಿ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ತನಿಖೆ ನಡೆಸಿದ್ದು, ಆರೋಪದಲ್ಲಿ ಹುರುಳಿಲ್ಲ ಎಂದು ವರದಿ ನೀಡಿದ್ದರು.ಅದಕ್ಕೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ದೂರು ನೀಡಿದ್ದಾರೆ.ಜ.9ಕ್ಕೆ ಬ್ಯಾಂಕಿನ ಚುನಾವಣೆ ನಡೆಯಲಿದೆ.ಈ ಸಂದರ್ಭದಲ್ಲಿ ಈಗಿನ ಆಡಳಿತ ಮಂಡಳಿಯ ಹೆಸರು ಕೆಡಿಸಲು ಈ ರೀತಿ ಆರೋಪ ಮಾಡಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಸುರೆಶ್ ಕುಲಾಲ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು.

LEAVE A REPLY

Please enter your comment!
Please enter your name here