





ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ತಾಲೂಕಿನ ಪೆರ್ನೆ ವಲಯದ ಕಡೇಶಿವಾಲಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಜನೆಯ ವತಿಯಿಂದ ಜ್ಞಾನದೀಪ ಡೆಸ್ಕ್ ಬೆಂಚ್ ವಿತರಣೆ ಕಾರ್ಯಕ್ರಮ ಡಿ.26ರಂದು ನಡೆಯಿತು. ದಕ್ಷಿಣ ಕನ್ನಡ-2 ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ರವರು ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಶಾಲಾ ಮಕ್ಕಳಿಗೆ ಡೆಸ್ಕ್ ಬೆಂಚುಗಳನ್ನು ಹಸ್ತಾಂತರಿಸಿ “ಮಹಾತ್ಮ ಗಾಂಧೀಜಿಯವರ ರಾಮ ರಾಜ್ಯದ ಕನಸು ನನಸಾಗಬೇಕಾದರೆ ಹಳ್ಳಿಗಳ ಉದ್ಧಾರವಾಗಬೇಕು, ಅದೇ ರೀತಿ ಪೂಜ್ಯರು ಕಂಡ ಕನಸಿನಂತೆ ಸಮಾಜ ಸಬಲೀಕರಣವಾಗಬೇಕಾದರೆ ಗ್ರಾಮೀಣ ಪ್ರದೇಶದ ವೈಯಕ್ತಿಕ ಕುಟುಂಬ ಮಾತ್ರ ಸಬಲೀಕರಣವಾದರೆ ಸಾಲದು ಸಮುದಾಯ ಸಬಲೀಕರಣವಾಗಬೇಕು. ಮುಖ್ಯವಾಗಿ ಶಿಕ್ಷಣ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಅನೇಕ ವರ್ಷಗಳಿಂದ ಗ್ರಾಮೀಣ ಪ್ರದೇಶದ ಅಳಿವಿನಂಚಿನಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸುವ ಉದ್ದೇಶ ಹಾಗೂ ಬಡವರ ಮಕ್ಕಳಿಗೆ ಉಚಿತವಾಗಿ ಅತ್ಯುತ್ತಮ ಶಿಕ್ಷಣ ಪಡೆಯುವಲ್ಲಿ ನೆರವಾಗುವ ಉದ್ದೇಶದಿಂದ ಅವಕಾಶವಿರುವ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಈ ವರ್ಷವೂ ತಾಲೂಕಿನಲ್ಲಿ 33 ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರ ಒದಗಣೆ, ಹಲವಾರು ಶಾಲೆಗಳಿಗೆ 80% ರಿಯಾಯಿತಿ ದರದಲ್ಲಿ ಡೆಸ್ಕ್ ಬೆಂಚುಗಳ ಒದಗಣೆ ಮಾಡಲಾಗಿದೆ. ಈ ಸೌಲಭ್ಯವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣವನ್ನು ಪಡೆದು ಅವರ ಭವಿಷ್ಯವು ಜ್ಞಾನದ ದೀವಿಗೆಯಾಗಬೇಕು” ಎಂದು ತಿಳಿಸಿದರು.



ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಹರೀಶ್ಚಂದ್ರ ಎಂ ವಹಿಸಿದ್ದರು. ಆಂಗ್ಲ ಮಾಧ್ಯಮ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮಾಧವ ರೈ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಬಾಬು ಪೂಜಾರಿಯವರು ಮಾತನಾಡಿ ಯೋಜನೆಗೆ ಕೃತಜ್ಞತೆಯನ್ನು ಸಲ್ಲಿಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭಾರತಿ ಎಸ್ ರಾವ್, ತಾಲೂಕು ಯೋಜನಾಧಿಕಾರಿ ರಮೇಶ್, ಗ್ರಾಮದ ಯೋಜನೆಯ ಸ್ಥಾಪಕಾಧ್ಯಕ್ಷರಾದ ಕೃಷ್ಣ ರೈ, ಗ್ರಾಮ ಪಂಚಾಯಿತಿ ಸದಸ್ಯರಾದ ಹರೀಶ್ಚಂದ್ರ ಕಾಡಬೆಟ್ಟು, ನಳಿನಾಕ್ಷಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕಿ ಶಾರದಾ, ಪೆರ್ಲಾಪು ಎ, ಪೆರ್ಲಾಪು ಬಿ, ಕೆಮ್ಮನ್ ಪಲ್ಕೆ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿಗಳು, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.














