ಎಸ್.ಕೆ. ಮಾಸ್ಟ್ರು ಅಂದು ಈ ಸಂಸ್ಥೆಗೆ ’ಪ್ಲ್ಯಾನ್’ ಹಾಕಿದ್ರು..
ಆನಂದ್ ಎಸ್.ಕೆ. ಇದನ್ನು ನಿರ್ಮಾಣ ಕ್ಷೇತ್ರದ ’ಮಾಸ್ಟರ್’ ಮಾಡಿದ್ರು!
ಒಂದು ಸಣ್ಣ ಕಥೆ ಹೇಳ್ತೇವೆ ಕೇಳಿ.. ಇದು ಸ್ಪೂರ್ತಿಯ ಕಥೆ.. ಆತ್ಮವಿಶ್ವಾಸವನ್ನು ಜಾಗೃತಗೊಳಿಸುವ ಕಥೆ.. ಮಾತ್ರವಲ್ಲ ಹತ್ತೂರ ಒಡೆಯನ ನಾಡಿನಲ್ಲಿ ಒಂದು ಮೈಲುಗಲ್ಲನ್ನು ಸ್ಥಾಪಿಸಿ ಅಭಿವೃದ್ಧಿ ಪಥದಲ್ಲಿ ದಾಪುಗಾಲು ಇಡುತ್ತಿರುವ ಸಂಸ್ಥೆಯೊಂದರ ಪ್ರಾರಂಭಕ್ಕೆ ಮುನ್ನುಡಿ ಬರೆದ ಕಥೆ. ಅದು 1950ರ ಸಮಯ, ಬೊಳುವಾರು ಸರಕಾರಿ ಶಾಲೆಯಲ್ಲಿ ಎಸ್.ಕೆ. ಈಶ್ವರ ಭಟ್ ಎಂಬ ಶಿಕ್ಷಕರಿದ್ರು. ಅವರು ತಮ್ಮ ಬಿಡುವಿನ ವೇಳೆಯಲ್ಲಿ ಪ್ರವೃತ್ತಿಯಾಗಿ ಮನೆ, ಕಟ್ಟಡಗಳ ವಿನ್ಯಾಸ (ಪ್ಲ್ಯಾನ್)ಗಳನ್ನು ಮಾಡಿಕೊಡುತ್ತಿದ್ದರು. ಆ ಕಾಲದಲ್ಲಿ ತೀರಾ ಗ್ರಾಮೀಣ ಪ್ರದೇಶವಾಗಿದ್ದ ಪುತ್ತೂರಿನಲ್ಲಿ ವೃತ್ತಿಪರ ಸಿವಿಲ್ ಇಂಜಿನಿಯರ್‌ಗಳು ಮತ್ತು ಕಟ್ಟಡ ವಿನ್ಯಾಸಗಾರರು ಇರಲಿಲ್ಲ. ಆ ಕೊರತೆಯನ್ನು ತಕ್ಕಮಟ್ಟಿಗೆ ಈಶ್ವರ ಭಟ್ ನೀಗಿಸಿದ್ದರು. ಬಳಿಕ ಅವರು ಸಣ್ಣಮಟ್ಟದಲ್ಲಿ ಇದಕ್ಕೊಂದು ಸಂಸ್ಥೆಯ ರೂಪವನ್ನು ಕೊಟ್ಟರು. ಮಾಸ್ಟ್ರು ಪ್ಲ್ಯಾನಿಂಗ್ ಮಾಡಿ ಕೊಡ್ತಿದ್ದ ಕಾರಣ ಇವರನ್ನು ಎಸ್.ಕೆ. ಮಾಸ್ಟ್ರು ಎಂದೇ ಎಲ್ರೂ ಕರೆಯುತ್ತಿದ್ರು ಹಾಗೂ ಇವರು ತಮ್ಮ ಸಂಸ್ಥೆಗೆ ಮಾಸ್ಟರ್ ಪ್ಲಾನರಿ ಎಂದೇ ಹೆಸರಿಟ್ಟರು.
ಬಳಿಕ ಅವರ ಪುತ್ರ ಆನಂದ್ ಕುಮಾರ್ ಎಸ್.ಕೆ. ಅವರು ತಮ್ಮ ತಂದೆ ಪ್ರಾರಂಭಿಸಿದ್ದ ಸಂಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಂಡು ಅದೇ ಹೆಸರಿನಲ್ಲಿ ಅದರ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದರು. ಈ ರೀತಿಯಾಗಿ ತರಗತಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಕ್ಷಕರೊಬ್ಬರು, ಸಂಸ್ಥೆಯೊಂದರ ಉಗಮಕ್ಕೆ ಕಾರಣಕರ್ತರಾಗಿ, ಬಳಿಕ ಇಂದು ಮಾಸ್ಟರ್ ಪ್ಲ್ಯಾನರಿ ಎಂಬ ಹೆಸರಿನಲ್ಲಿ ಪುತ್ತೂರು ಮಾತ್ರವಲ್ಲದೇ ರಾಜ್ಯಾದ್ಯಂತ ಹೆಸರುವಾಸಿಯಾಗಿರುವ ಮಾಸ್ಟರ್ ಪ್ಲಾನರಿ ಸಂಸ್ಥೆ, ಕನ್ ಸ್ಟ್ರಕ್ಷನ್, ಪ್ಲ್ಯಾನಿಂಗ್, ಡಿಸೈನಿಂಗ್, ಕನ್ಸ್‌ಲ್ಟೇಶನ್ ಸೇರಿದಂತೆ ಹತ್ತು ಹಲವು ವಿಭಾಗಗಳಲ್ಲಿ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಇವತ್ತು 75ನೇ ವಸಂತಕ್ಕೆ ಕಾಲಿಡುತ್ತಿದೆ. ಇದು ನಿಜವಾಗಿಯೂ ಶಿಕ್ಷಕರೊಬ್ಬರ ಕೈಯಲ್ಲರಳಿದ ಸಂಸ್ಥೆಯ ’ಅಮೃತ’ ಸಾಧನೆಯೇ ಸರಿ!
ಮಾಸ್ಟರ್ ಪ್ಲಾನರಿಗೆ ಮೂರನೇ ತಲೆಮಾರಿನ ಸಾರಥ್ಯ!:
1950ರಲ್ಲಿ ಎಸ್. ಕೆ. ಈಶ್ವರ ಭಟ್ ಪ್ರಾರಂಭಿಸಿದ ಈ ಸಂಸ್ಥೆಯ ಜವಾಬ್ದಾರಿಯನ್ನು 1976ರಲ್ಲಿ ಅವರ ಪುತ್ರ ಆನಂದ್ ಕುಮಾರ್ ಎಸ್. ಕೆ. (ಎಂ.ಟೆಕ್., ಸಿವಿಲ್ ಇಂಜಿನಿಯರ್) ವಹಿಸಿಕೊಳ್ಳುತ್ತಾರೆ. ಆಗಿನ ಕೆ.ಆರ್.ಇ.ಸಿ (ಈಗಿನ ಎನ್.ಐ.ಟಿ.ಕೆ. ಸುರತ್ಕಲ್)ಯಲ್ಲಿ ಇಂಜಿನಿಯರಿಂಗ್ ಹಾಗೂ ಎಂ.ಟೆಕ್. ಪದವಿಯನ್ನು ಪಡೆದು ’ಮಾಸ್ಟರ್ ಪ್ಲಾನರಿಯ’ ವ್ಯವಹಾರಕ್ಕೊಂದು ಹೊಸ ರೂಪು-ರೇಷೆಯನ್ನು ಕೊಡುತ್ತಾರೆ. ಅವರು 1996ರಲ್ಲೇ ಮಾರುಕಟ್ಟೆಗೆ ಪರಿಚಯಿಸಿದ್ದ ಕಾಂಕೂಡ್ ಉತ್ಪನ್ನಗಳು ಇಂದಿಗೂ ಗ್ರಾಹಕರ ಬಹುಬೇಡಿಕೆಯ ಉತ್ಪನ್ನಗಳಲ್ಲಿ ಒಂದಾಗಿದೆ. ’ರೋಟರಿ ಉದ್ಯೋಗ ರತ್ನ’ ಬಿರುದಿಗೆ ಪಾತ್ರರಾಗಿರುವ ಆನಂದ್ ಎಸ್.ಕೆ. ಅವರು ಧಾರ್ಮಿಕ, ಶೈಕ್ಷಣಿಕ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ಜನಾನುರಾಗಿಯಾಗಿದ್ದಾರೆ. ಇವರು ಎಂ.ಟೆಕ್ ಪರೀಕ್ಷಾ ಮಂಡಳಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇದೀಗ ವಯೋಸಹಜ ಕಾರಣಗಳಿಂದ ಸಂಸ್ಥೆಯ ಜವಾಬ್ದಾರಿಯನ್ನು ತನ್ನ ಮಕ್ಕಳಿಗೆ ವಹಿಸಿಕೊಟ್ಟಿರುವ ಇವರು ಸಂಸ್ಥೆಯ 75 ವರ್ಷಗಳ ಸಾಧನೆಯ ಹಿಂದಿನ ಪ್ರಮುಖ ಶಕ್ತಿಯಾಗಿದ್ದಾರೆ.
ಇದೀಗ ಮೂರನೇ ತಲೆಮಾರಿನ ಯುವ ಮನಸ್ಸುಗಳ ಕೈಯಲ್ಲಿ ಮಾಸ್ಟರ್ ಪ್ಲಾನರಿ ಸಂಸ್ಥೆ ಕನ್ ಸ್ಟ್ರಕ್ಷನ್ ಹಾಗೂ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಗಳಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿಕೊಂಡು ಮುನ್ನಡೆಯುತ್ತಿದೆ. ಅಕ್ಷಯ್ ಎಸ್.ಕೆ. (ಎಂ.ಟೆಕ್, ಸಿಟಿಎಂ), ಅರ್ಜುನ್ ಎಸ್.ಕೆ. (ಎಂ.ಎಸ್ಸಿ. ಕಾಂಕ್ರೀಟ್ ಟೆಕ್ನಾಲಜಿ), ಆಕಾಶ್ ಎಸ್.ಕೆ. (ಎಂ.ಎಸ್., ಕನ್‌ಸ್ಟ್ರಕ್ಷನ್ ಮ್ಯಾನೇಜ್ಮೆಂಟ್) ಮತ್ತು ಆರ್ತಿ ಎಸ್.ಕೆ., (ಎಂ.ಟೆಕ್., ಅರ್ಬನ್ ಇನ್-ಸ್ಟ್ರಕ್ಚರ್) ನೇತೃತ್ವದಲ್ಲಿ ಸಂಸ್ಥೆ 75ರ ಹೆಜ್ಜೆಯನ್ನು ದಾಟಿ ಮುನ್ನಡೆಯುತ್ತಿದೆ.
ಈ ವಿಭಾಗಗಳಲ್ಲೆಲ್ಲಾ ಇವರೇ ’ಮಾಸ್ಟರ್’:
ಮಾಸ್ಟರ್ ಪ್ಲಾನರಿ ಅಂದ್ರೆ ಕೇವಲ ಕನ್‌ಸ್ಟ್ರಕ್ಷನ್ ಕೆಲಸಗಳನ್ನು ಮಾತ್ರ ಮಾಡುವ ಸಂಸ್ಥೆ ಎಂಬ ಭಾವನೆ ಕೆಲವರಲ್ಲಿದೆ. ಆದರೆ ಈ ಸಂಸ್ಥೆಯ ಕಾರ್ಯವ್ಯಾಪ್ತಿ ನಿರ್ಮಾಣ ಕ್ಷೇತ್ರ ಮತ್ತು ಮ್ಯಾನುಫ್ಯಾಕ್ಚರ್ ಕ್ಚೇತ್ರಗಳನ್ನೂ ಒಳಗೊಂಡಿರುವಂತೆ, ಇದಕ್ಕೆ ಸಂಬಂಧಿಸಿದ ಇನ್ನೂ ಹಲವಾರು ವಿಭಾಗಗಳಲ್ಲಿ ವ್ಯಾಪಿಸಿದೆ. ಇವುಗಳ ಸಂಕ್ಷಿಪ್ತ ಪರಿಚಯವನ್ನು ಮಾಡಿಕೊಳ್ಳುವುದಾದರೆ..
ಕನ್‌ಸ್ಟ್ರಕ್ಷನ್, ಪ್ಲ್ಯಾನಿಂಗ್, ಕಸ್ಟಮೈಸೇಷನ್, ಎಸ್ಟಿಮೇಶನ್, ಡಿಸೈನಿಂಗ್ ಮತ್ತು ಎಕ್ಸಿಕ್ಯೂಶನ್, ಕನ್‌ಸಲ್ಟೇಶನ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಸೇರಿದಂತೆ – ಹೀಗೆ ಹತ್ತು ಹಲವು ವಿಭಾಗಗಳಲ್ಲಿ ಮಾಸ್ಟರ್ ಪ್ಲಾನರಿ ಸಂಸ್ಥೆ ಇದೀಗ ’ಮಾಸ್ಟರ್’ ಆಗಿದೆ. 300 ಕ್ಕೂ ಹೆಚ್ಚು ಉತ್ಪನ್ನಗಳ ಮೂಲಕ ಉತ್ತಮ ಗುಣಮಟ್ಟ ಹಾಗೂ ಪರಿಸರ ಸ್ನೇಹಿ ಮತ್ತು ಗ್ರಾಹಕ ಸ್ನೇಹಿ ಉತ್ಪನ್ನಗಳನ್ನು ಈ ಸಂಸ್ಥೆ ತಯಾರಿಸುತ್ತಿದೆ.
ಇನ್ನು, ಪುತ್ತೂರಿನ ನಗರದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಸಂಸ್ಥೆಯು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹಲವು ಕಡೆಗಳಲ್ಲಿ ತನ್ನ ರೂರಲ್ ಡೆವಲಪ್‌ಮೆಂಟ್ ಸೆಂಟರ್ ಗಳ ಮೂಲಕ ಆ ಭಾಗದ ಅರ್ಹರಿಗೆ ಉದ್ಯೋಗವಕಾಶಗಳನ್ನು ನೀಡಿ ಅಲ್ಲೇ ತನ್ನ ಉತ್ಪನ್ನಗಳನ್ನು ತಯಾರಿಸಿ ಆ ಭಾಗದಲ್ಲಿ ಮಾರುಕಟ್ಟೆ ವಿಸ್ತರಿಸುವ ಮೂಲಕ ’ಡಿವಿಷನ್ ಆಪ್ ಲೇಬರ್’ ಮತ್ತು ’ವಿಕೇಂದ್ರೀಕರಣ’ ತತ್ವದ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಆರು ಉತ್ಪನ್ನಗಳು ’ಮಾಸ್ಟರ್ ಪ್ಲಾನರಿ’ಯ ಮಾರುಕಟ್ಟೆ ಶಕ್ತಿಗಳು:
1) ಕಾಂಕ್ರೀಟ್ ಉತ್ಪನ್ನಗಳು: ಮನೆ, ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಕಾಂಕ್ರೀಟ್ ಉತ್ಪನ್ನಗಳ ತಯಾರಿ ಮತ್ತು ಮಾರಾಟ.
2) ಕಾಂಕೂಡ್ ಉತ್ಪನ್ನಗಳು: ಈ ಸಂಸ್ಥೆಯ ಟ್ರೇಡ್ ಮಾರ್ಕ್ ಉತ್ಪನ್ನಗಳಲ್ಲಿ ಇದೂ ಒಂದು. ಗೆದ್ದಲು ನಿರೋಧಕ, ವಾಟರ್ ಮತ್ತು ಫೈರ್ ಪ್ರೂಫ್, ದೀರ್ಘ ಬಾಳಿಕೆ ಮತ್ತು ಪರಿಸರ ಸ್ನೇಹಿ ಉತ್ಪನ್ನವಾಗಿ ಈಗಾಗಲೇ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಇದರಲ್ಲಿ ತಯಾರಾಗುವ ವಾರ್ಡ್ ರೋಬ್, ಕಿಚನ್ ಕೌಂಟರ್, ಮೆಟ್ಟಿಲುಗಳು, ಸ್ಕೂಲ್ ಡೆಸ್ಕ್ ಹಾಗೂ ಬೆಂಚುಗಳು ಈಗಾಗಲೇ ಉತ್ತಮ ಬೇಡಿಕೆಯನ್ನು ಹೊಂದಿದೆ.
3) ಯು.ಪಿ.ವಿ.ಸಿ ಉತ್ಪನ್ನಗಳು: ದೀರ್ಘ ಬಾಳಿಕೆ ಮತ್ತು ಪರಿಸರ ಸ್ನೇಹಿಯಾಗಿರುವ ಈ ಉತ್ಪನ್ನಗಳಿಂದ ತಯಾರಿಸುವ ಕಿಟಕಿಗಳು, ಬಾಗಿಲು ಸೇರಿದಂತೆ ಇನ್ನಿತರ ಉತ್ಪನ್ನಗಳು ಮನೆ, ಕಟ್ಟಡಗಳಿಗೆ ’ರಾಯಲ್ ಲುಕ್’ ನೀಡುತ್ತವೆ.
4) ವುಡನ್ ಐಟಂಗಳು: ವಿವಿಧ ರೀತಿಯ ಆಕರ್ಷಕ ಮತ್ತು ಗುಣಮಟ್ಟಭರಿತ ಕಾರ್ಪೆಂಟರಿ ಐಟಂಗಳು ಈ ವಿಭಾಗದಲ್ಲಿ ಲಭ್ಯವಿದೆ.
5) ಸ್ಟೀಲ್ ಫಾಬ್ರಿಕೇಶನ್: ಕಾಂಕ್ರೀಟ್, ಕಾಂಕೂಡ್ ಮತ್ತು ಮರದ ಉತ್ಪನ್ನಗಳನ್ನು ಹೊರತಾಗಿಸಿ ಬೇರೆ ಉತ್ಪನ್ನಗಳನ್ನು ಬಯಸುವವರ ಉತ್ತಮ ಆಯ್ಕೆ ಇದಾಗಿದೆ.
6) ಫೈಬರ್ ಐಟಂಗಳು: ಡೋರ್, ಶಟರ್, ವಿಂಡೋ ಉತ್ಪನ್ನಗಳು ಈ ವಿಭಾಗದಲ್ಲಿ ಲಭ್ಯವಿದ್ದು. ವಾಟರ್ ಪ್ರೂಫ್ ಗುಣದಿಂದಾಗಿ ಗ್ರಾಹಕರ ನೆಚ್ಚಿನ ಆಯ್ಕೆಗಳಲ್ಲಿ ಇದು ಒಂದಾಗಿದೆ.
ಮಾಸ್ಟರ್ ಪ್ಲ್ಯಾನರಿಯ ವೈವಿಧ್ಯಮಯ ಉತ್ಪನ್ನಗಳು ಬೆಂಗಳೂರು, ಉಡುಪಿ, ಮಂಗಳೂರು, ಪುತ್ತೂರುಗಳಲ್ಲಿರುವ ’ಸೇಲ್ಸ್ ಸೆಂಟರ್’ಗಳಲ್ಲಿ ಲಭ್ಯವಿದೆ.
ಮಾಸ್ಟರ್ ಪ್ಲಾನರಿಯ ’ಮಾಸ್ಟರ್’ ಕಾಮಗಾರಿಗಳಿವು:
*’ನಮ್ಮ ಮೆಟ್ರೋ’ ಬೆಂಗಳೂರು ಇವರಿಗೆ ಕೇಬಲ್ ಡಕ್ಟ್ ಗಳ ಪೂರೈಕೆ.
*ಬೆಂಗಳೂರು ಬಿಬಿಎಂಪಿಗೆ ಸ್ಟಾರ್ಮ್ ವಾಟರ್ ಡ್ರೈನೇಜ್ ಸ್ಲ್ಯಾಬ್ ಗಳ ಪೂರೈಕೆ.
*ಪುತ್ತೂರಿನ ಬಾಲವನ ಆರ್ಟ್ ಗ್ಯಾಲರಿ ನಿರ್ಮಾಣ.
*ಪುತ್ತೂರು ನ್ಯಾಯಾಲಯಗಳ ಸಂಕೀರ್ಣ ಕಾಮಗಾರಿ.
*ಉತ್ತರ ಕನ್ನಡದ ಯಾಣ ಮತ್ತು ವಿಭೂತಿ ಫಲ್ಸ್ ಗಳಲ್ಲಿ ಅರಣ್ಯ ಇಲಾಖೆಗೆ ಪ್ರಿ-ಕಾಸ್ಟ್ ಸಾಮಾಗ್ರಿಗಳ ಪೂರೈಕೆ.
*ಆಳ್ವಾಸ್ ಕಾಲೇಜು, ನಿಟ್ಟೆ ಇಂಜಿನಿಯರಿಂಗ್ ಕಾಲೇಜು, ಕೆನರಾ ಇಂಜಿನಿಯರಿಂಗ್ ಕಾಲೇಜು, ಎನ್.ಐ.ಟಿ.ಕೆ. ಸುರತ್ಕಲ್, ಎಕ್ಸ್ ಪರ್ಟ್ ಕಾಲೇಜು ಮಂಗಳೂರು ಹಾಗೂ ಹಾಸ್ಟೆಲ್ ಗಳಿಗೆ ಕಾಂಕೂಡ್ ಉತ್ಪನ್ನಗಳ ಪೂರೈಕೆ.
*ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಛಾವಣಿ, ಬಾಯ್ಲರ್ ಕೋಣೆ ಇತ್ಯಾದಿಗಳ ನಿರ್ಮಾಣ ಮತ್ತು ದ.ಕ ಜಿಲ್ಲೆಯ ಹಲವು ದೇವಸ್ಥಾನಗಳಲ್ಲಿ ನಮ್ಮ ತಂತ್ರಜ್ಞಾನದ ಬಳಕೆ.
*ಸಂಸ್ಥೆಯ ಕಾರ್ಯ ವೈಖರಿ ಮತ್ತು ಗುಣಮಟ್ಟಭರಿತ ಕಾಮಗಾರಿಗಳನ್ನು ಮೆಚ್ಚಿ, ಕುದುರೆಮುಖ ವನ್ಯಜೀವಿ ವಿಭಾಗ, ಕರ್ನಾಟಕ ರಾಜ್ಯ ನಿರ್ಮಾಣ ಕೇಂದ್ರ (ಕಾರ್ನಿಕ್), ಎನ್.ಐ.ಟಿ.ಕೆ. ಸುರತ್ಕಲ್, ದಕ್ಷಿಣ ಕನ್ನಡ ನಿರ್ಮಿತಿ ಕೇಂದ್ರ ಸೇರಿದಂತೆ ಹಲವು ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳು ’ಮಾಸ್ಟರ್ ಪ್ಲಾನರಿಗೆ’ ಪ್ರಶಂಸಾ ಪತ್ರವನ್ನು ನೀಡಿವೆ.
ಉಪ-ಗುತ್ತಿಗೆ ರಹಿತ ನೇರ ವ್ಯವಹಾರಕ್ಕೆ (ಕಾಮಗಾರಿಗೆ) ಇವರೇ ’ಮಾಸ್ಟರ್…’!:
ನಿರ್ಮಾಣ ಕ್ಷೇತ್ರದಲ್ಲಿ ಉಪ-ಗುತ್ತಿಗೆ ಮಾದರಿ ಬಹಳ ಕಡೆಗಳಲ್ಲಿ ನಡೆಯುತ್ತದೆ. ಆದರೆ ಮಾಸ್ಟರ್ ಪ್ಲಾನರಿ ಸಂಸ್ಥೆ ಯಾವುದೇ ಕೆಲಸವನ್ನು ವಹಿಸಿಕೊಂಡಲ್ಲಿ, ಆ ಕಾಮಗಾರಿಯ ಪ್ರಾರಂಭದಿಂದ ಅಂತ್ಯದವರೆಗಿನ ಎಲ್ಲಾ ಕೆಲಸ-ಕಾರ್ಯಗಳನ್ನು ತನ್ನ ಸಂಸ್ಥೆಯ ಮೂಲಕ, ತನ್ನದೇ ಸಿಬ್ಬಂದಿಗಳು ಹಾಗೂ ಕಾರ್ಮಿಕರನ್ನು ಬಳಸಿಕೊಂಡು ಗುಣಮಟ್ಟಭರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸುವುದು ಇವರ ಹೆಗ್ಗಳಿಕೆಯಾಗಿದೆ.
ಪರಿಸರ ಸ್ನೇಹಿ ಉತ್ಪನ್ನಗಳು, ಕಡಿಮೆ ವೆಚ್ಚದ ಪರಿಣಾಮಕಾರಿ ತಂತ್ರಜ್ಞಾನ, ಮೊದಲೇ ಅಚ್ಚು ಹಾಕಿದ ಸಲಕರಣೆಗಳು, ನವೀನ ತಂತ್ರಜ್ಞಾನದ ಅಳವಡಿಕೆ, ತಂತ್ರಜ್ಞಾನದ ಅರಿವು.. ಹೀಗೆ ನಿರ್ಮಾಣ ಕ್ಷೇತ್ರ ಹಾಗೂ ಇದಕ್ಕೆ ಸಂಬಂಧಪಟ್ಟ ಎಲ್ಲಾ ವಿಭಾಗಳಲ್ಲೂ ’ಮಾಸ್ಟರ್’ ಆಗಿ ಮೆರೆಯುತ್ತಿರುವ ಮೆ| ಮಾಸ್ಟರ್ ಪ್ಲಾನರಿ ಸಂಸ್ಥೆಗೆ ಇದೀಗ 75 ವರ್ಷ ತುಂಬುತ್ತಿದ್ದು, ಈ ’ಅಮೃತ ಘಳಿಗೆ’ಯ ಸವಿ ನೆನಪಿನಲ್ಲಿ ಸಂಸ್ಥೆ ಮತ್ತು ಗ್ರಾಹಕರ ಸಂಬಂಧವನ್ನು ಇನ್ನಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಡಿ.31ರಂದು ಪುತ್ತೂರಿನ ಕೇಂದ್ರ ಕಚೇರಿಯ ನವೀಕೃತ ಕಟ್ಟಡ ಉದ್ಘಾಟನೆ ಮತ್ತು ’ನಂದಾ ದೀಪ’ ಕೃತಿ ಬಿಡುಗಡೆ ಸಮಾರಂಭ ನಡೆಯಲಿದ್ದು, ಶಾಸಕ ಅಶೋಕ್ ಕುಮಾರ್ ರೈ ಅವರು ದೀಪ ಬೆಳಗಿಸುವ ಮೂಲಕ ಈ ನವೀಕೃತ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ಬ್ಯಾಂಕಿನ ನಿವೃತ್ತ ಎಂ.ಡಿ. ಮಹಾಬಲೇಶ್ವರ ಎಂ.ಎಸ್. ಕೃತಿ ಬಿಡುಗಡೆ ಮಾಡಲಿದ್ದಾರೆ.
ಹೀಗೆ, ಮಾಸ್ಟರ್ ಪ್ಲಾನರಿ ಸಂಸ್ಥೆ ಕಳೆದ 75 ವರ್ಷಗಳಲ್ಲಿ ವಿವಿಧ ಕ್ಷೆತ್ರಗಳಲ್ಲಿ ತನ್ನ ವ್ಯವಹಾರದ ಬಾಹುಗಳನ್ನು ಚಾಚುತ್ತಾ, ಸಹ-ಸಂಸ್ಥೆಗಳಾಗಿರುವ ಮಂಗಲ್ ಸ್ಟೋರ್ಸ್, ಸ್ನೇಹ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಹಾಗೂ ರೂರಲ್ ಡೆವಲಪ್‌ಮೆಂಟ್ ಸೆಂಟರ್‌ಗಳು, ಸಿಮೆಂಟ್ ಮಾರಾಟ ಮಳಿಗೆಗಳ ಮೂಲಕ ವೈವಿಧ್ಯಮಯ ಕಾರ್ಯವ್ಯಾಪ್ತಿಯ ಮೂಲಕ ಹತ್ತೂರ ಒಡೆಯನ ನಾಡಿನಲ್ಲಿ ಪ್ರಾರಂಭಗೊಂಡ ಯಶಸ್ವಿ ಉದ್ಯಮಗಳ ಸಾಲಿನಲ್ಲಿ ತಾನೂ ಒಂದಾಗಿ ನಿಂತಿದೆ.
ಸಂಸ್ಥೆಯ ಉದ್ಯೋಗಿಗಳೇ ’ಮಾಸ್ಟರ್’ನ ಬಲ. ಅವರಿಗಾಗಿ ಇಲ್ಲಿದೆ ಹತ್ತು ಹಲವು ಸವಲತ್ತುಗಳು
ಮಾಸ್ಟರ್ ಪ್ಲಾನರಿ ಸಂಸ್ಥೆ ತನ್ನ ಉದ್ಯೋಗಿಗಳನ್ನು ನೋಡಿಕೊಳ್ಳುವ ವಿಚಾರದಲ್ಲೂ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದೆ. ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೊಗಿಗಳಿಗಾಗಿ ಹಲವಾರು ಸೌಲಭ್ಯಗಳನ್ನು ಒದಗಿಸಿಕೊಡುವ ಮೂಲಕ ಮಾದರಿ ಸಂಸ್ಥೆಯಾಗಿ ಮೂಡಿಬಂದಿದೆ. ಉದ್ಯೋಗಿಗಳ ಮಕ್ಕಳಿಗಾಗಿ ಸಂಸ್ಥೆಯ ಕ್ಯಾಂಪಸ್ಸಿನಲ್ಲೇ ಪ್ಲೇ ಸ್ಕೂಲ್ ವ್ಯವಸ್ಥೆ, ಸಿಬ್ಬಂದಿಗಳ ಆರ್ಥಿಕ ಸಬಲತೆಗಾಗಿ ಸ್ನೇಹ ವಿವಿಧೋದ್ದೇಶ ಸೌಹಾರ್ದ ಸಹಕಾರಿ, ಸಂಸ್ಥೆಯ ಸಿಬ್ಬಂದಿಗಳಿಗೆ ಮಧ್ಯಾಹ್ನದ ಉಚಿತ ಊಟ ಮತ್ತು ಸಬ್ಸಿಡಿ ದರದಲ್ಲಿ ಬೆಳಗಿನ ಹಾಗೂ ಸಾಯಂಕಾಲದ ಉಪಹಾರ ಸೌಲಭ್ಯ. ಸಂಸ್ಥೆಯ ಉದ್ಯೋಗಿಗಳ ಕುಟುಂಬಗಳಿಗೆ ತಿಂಗಳ ಗ್ರೋಸರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ 2001ರಲ್ಲಿ ಪ್ರಾರಂಭಗೊಂಡ ’ಮಂಗಲ್ ಸ್ಟೋರ್ಸ್’ ಇಂದು ಪುತ್ತೂರಿನ ಪ್ರತಿಷ್ಠಿತ ಗ್ರೋಸರಿ ಮಳಿಗೆಗಳಲ್ಲಿ ಒಂದಾಗಿದೆ.