ಅಧ್ಯಕ್ಷ ವಿಜಯ ಕುಮಾರ್ ರೈ, ಜಿಲ್ಲಾ ಪ್ರತಿನಿಧಿ ಸಂಜೀವ ಮಠಂದೂರು
ಪುತ್ತೂರು:ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ವಿಜಯ ಕುಮಾರ್ ರೈ ಕೋರಂಗ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಜಿಲ್ಲಾ ಪ್ರತಿನಿಧಿಯಾಗಿ ಮಾಜಿ ಶಾಸಕ ಸಂಜೀವ ಮಠಂದೂರು, ಉಪಾಧ್ಯಕ್ಷರಾಗಿ ಪ್ರಗತಿ ಪರ ಕೃಷಿಕ ಎ.ಪಿ ಸದಾಶಿವ ಮರಿಕೆ, ಪ್ರಧಾನ ಕಾರ್ಯದರ್ಶಿಯಾಗಿ ಸಂಪ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮೂಲಚಂದ್ರ, ಖಜಾಂಚಿಯಾಗಿ ಸಾವಯವ ಕೃಷಿ ಪರಿವಾರದ ಖಜಾಂಚಿ ಬಿ ಗೋವಿಂದ ಬೋರ್ಕರ್ ಕುಕ್ಕಾಡಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಗಳು ಡಿ.31ರಂದು ದರ್ಬೆ ಕೃಷಿ ಇಲಾಖೆಯ ಸಭಾಂಗಣದಲ್ಲಿ ನಡೆಯಿತು. ಚುನಾವಣಾಧಿಕಾರಿಯಾಗಿದ್ದ ಕೃಷಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಯಶಸ್ ಮಂಜುನಾಥ್ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಸಮಾಜದ 5 ಸ್ಥಾನಗಳಿಗೂ ತಲಾ 1 ನಾಮಪತ್ರ ಮಾತ್ರ ಸಲ್ಲಿಕೆಯಾಗಿದ್ದು ಎಲ್ಲಾ ಸ್ಥಾನಗಳಿಗೂ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾದ ವಿನೋದ್ ಕುಮಾರ್ ರೈ, ಎಂ.ರಾಮಪ್ರಸಾದ್, ಬಾಲಕೃಷ್ಣ ಕೆ., ಜಯಾನಂದ ಕೆ., ಎಂ. ದೇವಣ್ಣ ರೈ, ಡಿ.ವಿಜಯಕೃಷ್ಣ ಭಟ್, ಬಿ.ಕೆ ಸುಬ್ರಾಯ ಶೆಟ್ಟಿ ಉಪಸ್ಥಿತರಿದ್ದರು.
ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ವಿಜಯ ಕುಮಾರ್ ರೈ ಕೋರಂಗ ಮಾತನಾಡಿ, ತಳಮಟ್ಟದ ಕೃಷಿಕರಿಗೆ ಸರಕಾರದ ಸವಲತ್ತುಗಳನ್ನು ತಲುಪಿಸುವುದು, ಕೃಷಿಕರ ಸಮಸ್ಯೆಗಳಿಗೆ ಸರಕಾರದ ಗಮನಕ್ಕೆ ತರುವ ಮೂಲಕ ಸ್ಪಂದನೆ ನೀಡುತ್ತಿರುವ ಕೃಷಿಕ ಸಮಾಜವು ರೈತರು ಹಾಗೂ ಇಲಾಖೆಯ ಮಧ್ಯೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತಿದೆ. ಅಡಿಕೆ ಕೃಷಿಗಳಿಗೆ ಬಾಧಿಸುವ ಎಲೆಚುಕ್ಕಿ ಹಾಗೂ ಹಳದಿ ರೋಗಗಳಿಗೆ ಔಷಧಿಯ ನೆಪದಲ್ಲಿ ಕೆಲವೊಂದು ಕಂಪನಿಗಳು ರೈತರನ್ನು ಯಾಮಾರಿಸುತ್ತಿದ್ದು ಕೃಷಿಕ ಸಮಾಜದಿಂದ ಕೃಷಿ ಇಲಾಖೆಯ ವಿಜ್ಞಾನಿಗಳ ಮುಖಾಂತರ ಅಧ್ಯಯನ ನಡೆಸಿ ಅದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಆನೆ ಸೇರಿದಂತೆ ಕಾಡುಪ್ರಾಣಿಗಳ ಹಾವಳಿಯ ನಿಯಂತ್ರಣಕ್ಕೂ ಅರಣ್ಯ ಇಲಾಖೆಯನ್ನು ಆಗ್ರಹಿಸಲಾಗುವುದು. ಸಂಘಕ್ಕೆ ನೂತನ ಕಟ್ಟಡ ನಿರ್ಮಾಣಕ್ಕೂ ಪ್ರಯತ್ನಿಸಲಾಗವುದು ಎಂದರು.
ಜಿಲ್ಲಾ ಪ್ರತಿನಿಧಿಯಾಗಿ ಆಯ್ಕೆಯಾದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಕೃಷಿಕರ ಸಮಸ್ಯೆಗಳಿಗೆ ಸ್ಪಂಧನೆ ನೀಡುವ ನಿಟ್ಟಿನಲ್ಲಿ ಸರಕಾರ ಪ್ರತಿ ತಾಲೂಕಿನಲ್ಲಿ ಕೃಷಿಕ ಸಮಾಜವನ್ನು ಸ್ಥಾಪಿಸಿದೆ. ಕೃಷಿಕ ಸಮಾಜದ ಮುಖಾಂತರ ಯುವ ಪೀಳಿಗೆಗೆಯನ್ನು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು, ಯುವಕರನ್ನು ಕೃಷಿಕ ಸಮಾಜದ ಸದಸ್ಯರಾಗಿ ಸೇರ್ಪಡೆಗೊಳಿಸಲು ಆಂದೋಲನ ಮಾಡಬೇಕಾದ ಆವಶ್ಯಕತೆಯಿದೆ. ಕಾಡು ಪ್ರಾಣಿಗಳಿಂದ ಕೃಷಿ ಹಾನಿ, ಹೊಸ ಹೊಸ ರೋಗಗಳು, ಪ್ರಾಕೃತಿಕವಾಗಿ ಬಾಧಿಸುವ ರೋಗಗಳ ಬಗ್ಗೆ ವಿಮರ್ಶೆ ಮಾಡಿ ಸರಕಾರಕ್ಕೆ ಸಲಹೆ ನೀಡಬೇಕು. ಅಡಿಕೆಗೆ ಪರ್ಯಾಯ ಬೆಳೆ ಬೆಳೆಸುವುದು, ಆಹಾರ ಧಾನ್ಯ ಬೆಳೆಸುವ ಬಗ್ಗೆಯೂ ಚಿಂತಿಸಬೇಕು. ಆಹಾರದಲ್ಲಿ ಸ್ವಾವಲಂಬಿಗಳಾಗುವ ನಿಟ್ಟಿನಲ್ಲಿ ಆಹಾರ ಬೆಳೆಗಳನ್ನು ಬೆಳೆಸಲು ಯುವ ಪೀಳಿಗೆಗೆ ಮಾರ್ಗದರ್ಶನ ನೀಡುವ ಹೊಣೆ ಕೃಷಿಕ ಸಮಾಜದ ಮೇಲಿದೆ ಎಂದರು.
ಉಪಾಧ್ಯಕ್ಷ ಎ.ಪಿ ಸದಾಶಿವ, ಕೃಷಿಯಲ್ಲಿರುವ ಸಮಸ್ಯೆಗಳನ್ನು ಹಿಂದಿನ ಮೂಲ ಹುಡುಕಿ ಅದಕ್ಕೆ ಪರಿಹಾರ ನೀಡಬೇಕಾದ ಆವಶ್ಯಕತೆಯಿದ ಎಂದರು.ತಾಲೂಕು ಕಿಸಾನ್ ಸಂಘದ ಅಧ್ಯಕ್ಷ ಜನಾರ್ದನ ರೈ ಪಡ್ಯಂಬೆಟ್ಟು, ಕಾರ್ಯದರ್ಶಿ ಮಹಾಬಲ ರೈ ಕುಕ್ಕುಂಜೋಡು ಉಪಸ್ಥಿತರಿದ್ದರು. ಸಹಾಯಕ ನಿರ್ದೇಶಕ ಯಶಸ್ ಮಂಜುನಾಥ್ ಸ್ವಾಗತಿಸಿ, ವಂದಿಸಿದರು.