ಪೊಲೀಸ್ ಅಂದರೆ ಭಯ ಪಡಬೇಡಿ- ಭರವಸೆ ಇಡಿ- ಹೆಡ್ ಕಾನ್ಸ್‌ಟೇಬಲ್ ವೆಂಕಪ್ಪ
ನಿಡ್ಪಳ್ಳಿ: ಪೊಲೀಸ್ ಇಲಾಖೆ ಅಂದರೆ ಮಹಿಳೆಯರು ಯಾರೂ ಭಯ ಪಡಬೇಡಿ ಬದಲಾಗಿ ನಮ್ಮ ಮೇಲೆ ಭರವಸೆ ಇಡಿ ಎಂದು ಸಂಪ್ಯ ಗ್ರಾಮಾಂತರ ಠಾಣಾ ಹೆಡ್ ಕಾನ್ಸ್‌ಟೇಬಲ್ ವೆಂಕಪ್ಪ ಹೇಳಿದರು.
ಅವರು ನಿಡ್ಪಳ್ಳಿ ಗ್ರಾಮ ಪಂಚಾಯತ್ ನಲ್ಲಿ ಡಿ.31 ರಂದು ನಡೆದ ಮಹಿಳಾ ಗ್ರಾಮ ಸಭೆಯಲ್ಲಿ ಮಹಿಳೆಯರಿಗೆ ಧೈರ್ಯ ತುಂಬುವ ಭರವಸೆಯ ಮಾತುಗಳನ್ನಾಡಿದರು. ಹಿಂದೆ ಮಹಿಳೆಯರು ನಾಲ್ಕು ಗೋಡೆಗಳ ನಡುವೆ ಇರಬೇಕಾದ ಪರಿಸ್ಥಿತಿ ಇತ್ತು. ಆದರೆ ಈಗ ಮಹಿಳೆಯರು ಪುರುಷರಂತೆ ಸಮಾನರು ಎಂಬ ಕಾನೂನು ಇದೆ. ಸಮಾಜದಲ್ಲಿ ಮಹಿಳೆಯರಿಗೆ ಯಾವುದೇ ಅನ್ಯಾಯ ಹಿಂಸೆ ತೊಂದರೆ ಆದರೆ ಅದಕ್ಕೆ ಶಿಕ್ಷಿಸುವ ಫೋಕ್ಸೊ ಕಾಯ್ದೆಯನ್ನು ಭಾರತದಲ್ಲಿ ಜಾರಿಗೆ ತರಲಾಗಿದೆ. ಆದುದರಿಂದ ಮಹಿಳೆಯರ ರಕ್ಷಣೆಗಾಗಿ ಪೊಲೀಸ್ ಇಲಾಖೆ ಯಾವಾಗಲೂ ಕೆಲಸ ಮಾಡುತ್ತದೆ. ನಿಮಗೆ ಅನ್ಯಾಯ ಆದರೆ ಪೊಲೀಸ್ ಠಾಣೆಗೆ ಬರಲು ಹಿಂದೆ ಮುಂದೆ ನೋಡಬೇಡಿ. ಯಾವ ಸಮಯದಲ್ಲಿ ಆದರೂ ಬರಲು ನಿರ್ಬಂಧ ಇಲ್ಲ. ನಿಮಗೆ ಯಾವುದೇ ಅನ್ಯಾಯ ಹಿಂಸೆ ಆದರೂ ಬಂದು ಪ್ರಕರಣ ದಾಖಲಿಸಬಹುದು. ಆಗ ಕಾನೂನು ಪ್ರಕಾರ ಒಳ್ಳೆಯ ರೀತಿಯಲ್ಲಿ ಸ್ಪಂದಿಸುತ್ತೇವೆ.ಯಾವುದೇ ಮುಜುಗರ ಇಲ್ಲದೆ ನಿಮಗೆ ಇರುವ ಕಾನೂನಿನ ಸದುಪಯೋಗಪಡಿಸಿಕೊಳ್ಳಲು ಅವರು ಮುಕ್ತ ಅವಕಾಶ ಇದೆ ಎಂದು ಹೇಳಿ ಮಹಿಳೆಯರಲ್ಲಿ ಧೈರ್ಯ ತುಂಬಿಸಿದರು.
ಹಿರಿಯ ಆರೋಗ್ಯ ಕಾರ್ಯಕರ್ತೆ ಕುಸುಮಾವತಿ.ಎ.ವಿ ಮಾತನಾಡಿ, ಮಹಿಳೆಯರು ಉತ್ತಮ ಮಾಹಿತಿ ಇರುವ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿದಾಗ ಜ್ಞಾನ ಹೆಚ್ಚಿಸಲು ಸಹಕಾರಿಯಾಗುತ್ತದೆ. ಪೌಷ್ಟಿಕಾಂಶ ಇರುವ ಸಮತೋಲನ ಆಹಾರ ಸೇವಿಸಿದರೆ ಅರೋಗ್ಯ ಉತ್ತಮ ರೀತಿಯಲ್ಲಿ ಇರುತ್ತದೆ. ಒಂದು ಮನೆಯಲ್ಲಿ ಒಳ್ಳೆಯ ಆರೋಗ್ಯವಂತ ಮಹಿಳೆ ಇದ್ದರೆ ಆ ಮನೆಯು ಆರೋಗ್ಯಕರವಾಗಿರುತ್ತದೆ. ಆದುದರಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಮಹಿಳೆಯರು ಉತ್ತಮ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ನಂದನ ಮಾತನಾಡಿ, ಮಹಿಳೆಯರ ಅಭಿವೃದ್ಧಿಯಲ್ಲಿ ಉತ್ತಮ ಮಾಹಿತಿ ಮತ್ತು ಉತ್ತಮ ಶಿಕ್ಷಣ ಅಗತ್ಯ.ಉತ್ತಮ ಮಾಹಿತಿ ನೀಡುವ ಇಂತಹ ಗ್ರಾಮ ಸಭೆ ನಿಮ್ಮ ಗ್ರಾಮದಲ್ಲಿ ನಡೆಯುವಾಗ ಹೆಚ್ಚಿನ ಸಂಖ್ಯೆಯಲ್ಲಿ ಭಾಗ ವಹಿಸಬೇಕಿತ್ತು ಆದರೆ ಇಲ್ಲಿ ಸಂಖ್ಯೆ ಬಹಳ ಕಡಿಮೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ಸುರಕ್ಷತೆ ಬಗ್ಗೆ ಇರುವ ಕಾನೂನಿನ ಅರಿವು ಇರಬೇಕು ಎಂದು ಹೇಳಿದರು.
ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಸದಸ್ಯೆ ಗ್ರೆಟಾ ಡಿ’ ಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳೆಯರಿಗೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಪಿಡಿಒ ಸಂಧ್ಯಾಲಕ್ಷ್ಮೀ ಸ್ವಾಗತಿಸಿ, ಸಂಜೀವಿನಿ ಒಕ್ಕೂಟದ ಭಾರತಿ ವಂದಿಸಿದರು. ಸಂಜೀವಿನಿ ಒಕ್ಕೂಟದ ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸ್ವಚ್ಚತಾ ಸಿಬ್ಬಂದಿಗಳು ಹಾಗೂ ಗ್ರಾಮದ ಮಹಿಳೆಯರು ಪಾಲ್ಗೊಂಡರು. ಸಿಬ್ಬಂದಿಗಳಾದ ವಿನೀತ್ ಕುಮಾರ್, ಜಯಕುಮಾರಿ ಮತ್ತಿತರರು ಸಹಕರಿಸಿದರು.