ಧರ್ಮ ಜಾಗೃತಿಯಿದ್ದಾಗ ಸನಾತನ ಧರ್ಮದ ಪರಿಕಲ್ಪನೆಗೆ ಅರ್ಥ-ಅರುಣ್ ಪುತ್ತಿಲ
ಪುತ್ತೂರು: ರಾಷ್ಟ್ರೀಯ ಸ್ವಯಂಸೇವಕ ಸಂಘವು ನಮಗೆ ಸಮಾಜದಲ್ಲಿ ಹೇಗೆ ಬದುಕಬೇಕು ಎನ್ನುವುದನ್ನು ಕಲಿಸಿಕೊಡುತ್ತದೆ. ನಮ್ಮಲ್ಲಿ ಧರ್ಮ ಜಾಗೃತಿಯಿದ್ದಾಗ ಸನಾತನ ಧರ್ಮದ ಪರಿಕಲ್ಪನೆಗೆ ಅರ್ಥ ಬರುತ್ತದೆ ಮಾತ್ರವಲ್ಲ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಕಲ್ಪ ಈಡೇರಬಲ್ಲುದು ಎಂದು ಹಿಂದೂ ಮುಖಂಡ, ಪುತ್ತಿಲ ಪರಿವಾರ ಟ್ರಸ್ಟ್ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲರವರು ಹೇಳಿದರು.
ಡಿ.31 ರಂದು ಸಂಜೆ ಮರೀಲು ಸ್ನೇಹನಗರದ ಸಾರ್ವಜನಿಕ ಶ್ರೀ ಮಹಾಲಿಂಗೇಶ್ವರ ಕಟ್ಟೆಯಲ್ಲಿ ಮರೀಲು ಸ್ನೇಹನಗರ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಆಶ್ರಯದಲ್ಲಿ ಜರಗಿದ 23ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಭಾರತವನ್ನು ಇಡೀ ವಿಶ್ವವು ಗೌರವದಿಂದ ನೋಡುತ್ತಿದೆ. ಹಿಂದೂ ಸಮಾಜವು ಧಾರ್ಮಿಕ ಶ್ರದ್ಧೆಯೊಂದಿಗೆ ಸಮಾಜದಲ್ಲಿ ಜೊತೆಯಾಗಿ ಹೆಜ್ಜೆಯಿಡಬೇಕು, ಹಿಂದೂ ವಿರೋಧಿ ಚಟುವಟಿಕೆಗಳನ್ನು ಹತ್ತಿಕ್ಕುವ ಕಾರ್ಯವಾಗಬೇಕಿದೆ ಎಂದರು.
ಪುತ್ತೂರು ಶಾರದಾ ಭಜನಾ ಮಂದಿರದ ಗೌರವಾಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ಮಾತನಾಡಿ, ದೇವರಲ್ಲಿ ಶ್ರದ್ಧೆಯಿಂದ ತಮ್ಮ ಬೇಡಿಕೆಗಳನ್ನು ಸಲ್ಲಿಸಿದಾಗ ತಮ್ಮ ಇಷ್ಟಾರ್ಥ ಸಿದ್ಧಿಯಾಗುವುದು. ಹಿಂದುತ್ವ ಅಂತ ಬಂದಾಗ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಾಗಿದೆ ಎಂದರು.
ಪುತ್ತೂರು ನಗರಸಭಾ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ಮಾತನಾಡಿ, ಭಾರತೀಯ ಧರ್ಮ, ಸಂಸ್ಕಾರ, ಪರಂಪರೆ ಉಳಿಯಬೇಕಾದರೆ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಅತ್ಯಗತ್ಯ. ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ, ಮೊದಲ ಗುರು ತಂದೆ-ತಾಯಿಯಾಗಿದ್ದು ಹೆತ್ತವರು ತಮ್ಮ ಮಕ್ಕಳನ್ನು ಸಣ್ಣ ಪ್ರಾಯದಲ್ಲೇ ಧಾರ್ಮಿಕ ಕಾರ್ಯಕ್ರಮಗಳಿಗೆ ಕರೆದುಕೊಂಡು ಬಂದಾಗ ನಮ್ಮ ಸಂಸ್ಕೃತಿ, ಸಂಸ್ಕಾರ, ಪರಂಪರೆ ಉಳಿಯಬಲ್ಲುದು. ಶ್ರೀನಿವಾಸ ಕಲ್ಯಾಣೋತ್ಸವದಂತಹ ಕಾರ್ಯಕ್ರಮಗಳನ್ನು ಮಾಡಿದಾಗ ನಮ್ಮ ಧರ್ಮ ಉಳಿಯಬಹುದು ಎಂದರು.
ಕೆಮ್ಮಿಂಜೆ ಶ್ರೀ ಷಣ್ಮುಖ-ಮಹಾವಿಷ್ಣು ದೇವಸ್ಥಾನದ ಅರ್ಚಕರಾದ ವೆಂಕಟಕೃಷ್ಣ ಕಲ್ಲೂರಾಯರವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ಪ್ರಶಾಂತ್ ಕೆ, ಗೌರವಾಧ್ಯಕ್ಷ ರಾಜೇಂದ್ರ ಕೆ.ಮೆಸ್ಕಾಂ, ಕಾರ್ಯದರ್ಶಿ ಅರುಣ್ ಕ್ಯಾಂಪ್ಕೋ, ಕೋಶಾಧಿಕಾರಿ ಹರೀಶ್ ರೈರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವೇಕಾನಂದ ವಿದ್ಯಾಸಂಸ್ಥೆಯ 8ನೇ ತರಗತಿ ವಿದ್ಯಾರ್ಥಿನಿ ಪ್ರಾರ್ಥಿಸಿದರು. ಉದ್ಯಮಿ ಸುರೇಶ್ ಕೆಮ್ಮಿಂಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಾರಾಯಣ ಕುಕ್ಕುಪುಣಿ ಕಾರ್ಯಕ್ರಮ ನಿರೂಪಿಸಿದರು. ಏಣ್ಮೂರು ಶಾಲೆಯ ಸಹ ಶಿಕ್ಷಕಿ ಕವಿತ ವಂದಿಸಿದರು.
ಸನ್ಮಾನ/ಗೌರವಾರ್ಪಣೆ
ಪುತ್ತೂರು ನಗರಸಭೆಯ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಾಲಚಂದ್ರ ಕೆ ಇವರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪುತ್ತೂರು ಶಾರದಾ ಭಜನಾ ಮಂದಿರದ ಗೌರವಾಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತುರವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ರಸಮಂಜರಿ
ಈ ಸಂದರ್ಭದಲ್ಲಿ ಸ್ಥಳೀಯ ಮಕ್ಕಳಿಂದ ನೃತ್ಯ, ಬಳಿಕ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾದಗಾನ ಕೌಸ್ತುಭ ಗಾಯಕ ಪುತ್ತೂರು ಚಂದ್ರಶೇಖರ್ ಹೆಗ್ಡೆ ನಿರ್ದೇಶನದ ಪುನೀತ್ ಆರ್ಕೇಸ್ಟ್ರಾ ಪುತ್ತೂರು ಇವರಿಂದ ಸಂಗೀತ ರಸಮಂಜರಿ ನಡೆಯಿತು.
ಉದ್ಘಾಟನೆ/ಭಜನೆ
ಸಂಜೆ ಸ್ನೇಹನಗರ ಶ್ರೀ ಮಹಾಲಿಂಗೇಶ್ವರ ಕಟ್ಟೆ ಸಮಿತಿ ಗೌರವ ಸಲಹೆಗಾರರಾದ ಭಾಸ್ಕರ ಎಂ.ರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಚಾಲನೆ ನೀಡಿದರು. ಬಳಿಕ ಕೆಮ್ಮಿಂಜೆ ಶ್ರೀರಾಮ ಮಹಿಳಾ ಭಜನಾ ಮಂಡಳಿಯಿಂದ ಭಜನೆ, ಮಹಾಪೂಜೆ, ಅನ್ನಸಂತರ್ಪಣೆ ಜರಗಿತು.