ಉಪ್ಪಿನಂಗಡಿ: ಗ್ರಾಮೀಣ ಪ್ರದೇಶವಾದ ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ರಾಜ್ಯದಲ್ಲೇ ಮಾದರಿಯಾಗಿ ಮಿಂಚುತ್ತಿದ್ದು, ಇದರ ವಾರ್ಷಿಕ ಸಂಭ್ರಮ ಜ.4ರಂದು ನಡೆಯಲಿದೆ ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಅಝೀಝ್ ಬಸ್ತಿಕ್ಕಾರ್ ತಿಳಿಸಿದರು.
ಕಾಲೇಜಿನ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಶಾಸಕರು, ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಅಶೋಕ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ಪೂರ್ವಹ್ನ 10ರಿಂದ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದ್ದು, ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಲಲಿತಾ, ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮೊಹಾಪತ್ರ, ತುಳು ಚಲನಚಿತ್ರ ನಟ ಅರವಿಂದ್ ಬೋಳಾರ್, ಮುಳುಗು ತಜ್ಞ ಈಶ್ವರ್ ಮಲ್ಪೆ, ಉಪ್ಪಿನಂಗಡಿ ರೋಟರಿ ಕ್ಲಬ್‌ನ ಪೂರ್ವಾಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಕಬಕ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಧೀರ್ ಕುಮಾರ್ ಎಂ. ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.
ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಇರುವ ಈ ಕಾಲೇಜಿಗೆ ಕಳೆದ 67 ವರ್ಷಗಳ ಚರಿತ್ರೆ ಇದೆ. 2022-23ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದ ರಹಿನಾಝ್ ಎಂಬ ವಿದ್ಯಾರ್ಥಿಯೋರ್ವಳು ರಾಜ್ಯ ಮಟ್ಟದಲ್ಲಿ ಏಳನೇ ರ‍್ಯಾಂಕ್ ಮತ್ತು ಸರಕಾರಿ ಕಾಲೇಜುಗಳ ವ್ಯಾಪ್ತಿಯಲ್ಲಿ ರಾಜ್ಯದಲ್ಲಿ ಪ್ರಥಮ ರ‍್ಯಾಂಕ್ ಅನ್ನು ಪಡೆದುಕೊಂಡಿದ್ದಾಳೆ. ಈ ಕಾಲೇಜಿಗೆ ಅದರದ್ದೇ ಆದ ಸಾಂಸ್ಕೃತಿಕ, ಭೌಗೋಳಕ, ಧಾರ್ಮಿಕ, ಭಾವೈಕ್ಯತಾ ಮತ್ತು ಶೈಕ್ಷಣಿಕ ಹಿರಿಮೆಯಿದ್ದು, ಪುತ್ತೂರು, ಬೆಳ್ತಂಗಡಿ, ಕಡಬ, ಬಂಟ್ವಾಳ ತಾಲ್ಲೂಕು ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಈ ಕಾಲೇಜು ಆಸರೆಯ ಕೇಂದ್ರ ಬಿಂದುವಾಗಿದೆ. ಅಲ್ಲದೇ, ಸಕಲೇಶಪುರ, ಚಿಕ್ಕಮಗಳೂರು, ಮಡಿಕೇರಿ ಮೊದಲಾದ ದೂರದ ಊರಿನ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಓದಬೇಕೆಂದು ಮಹದಾಸೆಯಿಂದ ಇಲ್ಲಿ ಸೇರ್ಪಡೆಗೊಂಡಿದ್ದು, ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಇಲ್ಲಿ ಈಗ 810 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈಯವರ ಮುತುವರ್ಜಿಯಿಂದ ವಿವೇಕ ಯೋಜನೆಯಡಿ 3 ಕೋಟಿ 60ಸಾವಿರ ರೂ. ಅನುದಾನದಲ್ಲಿ ನಾಲ್ಕಂತಸ್ತಿನ ಕಟ್ಟಡದ ಕಾಮಗಾರಿ ನಿರ್ಮಾಣ ಹಂತದಲ್ಲಿದ್ದು, ಇದರಲ್ಲಿ 13 ತರಗತಿ ಕೊಠಡಿಗಳು ಬರಲಿವೆ. ಈ ಕಟ್ಟಡ ಇನ್ನೆರಡು ತಿಂಗಳಲ್ಲಿ ಉದ್ಘಾಟನೆಗೆ ಸಿದ್ಧವಾಗಲಿದೆ ಎಂದು ತಿಳಿಸಿದರು.
ಇದರೊಂದಿಗೆ ಕ್ರೀಡೆಗೂ ಆದ್ಯತೆ ನೀಡಲಾಗುತ್ತಿದ್ದು, ನಿಶಾನ್ ಕುಪ್ಪೆಟ್ಟಿ, ನಾಸೀರ್ ಕಲ್ಲೇರಿ ಹಾಗೂ ಮಿಥುನ್ ಅವರನ್ನು ಪ್ರೋ ಕಬಡ್ಡಿ ಆಟಕ್ಕೆ ನೀಡಿದ ಹೆಮ್ಮೆ ನಮ್ಮ ಕಾಲೇಜಿಗಿದೆ. ಈ ಶೈಕ್ಷಣಿಕ ಸಾಲಿನಲ್ಲಿ ಎಲ್ಲಾ ಪದವಿ ಪೂರ್ವ ಕಾಲೇಜುಗಳಿಗೆ ಮಾದರಿಯಾಗಿ ನಮ್ಮ ಕಾಲೇಜಿನಲ್ಲಿ ಅಂತರ್ ತರಗತಿ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಿ ಇತಿಹಾಸ ಸೃಷ್ಟಿಸಿದೆ. ಇದರೊಂದಿಗೆ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವವನ್ನು ಪುಷ್ಠೀಕರಿಸಲು ರಾಷ್ಟ್ರೀಯ ಸೇವಾ ಯೋಜನೆ, ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯವನ್ನು ಕಾಯ್ದಿರಿಸಲು ಸ್ವಚ್ಛತೆ, ಪ್ರಥಮ ಚಿಕಿತ್ಸೆ, ಮಹಿಳಾ ಸುರಕ್ಷತೆ, ಆರೋಗ್ಯಕ್ಕೆ ಸಂಬಂಧಿಸಿ ಹಲವು ಕಾರ್ಯಕ್ರಮಗಳನ್ನು ಸರಣಿಯಲ್ಲಿ ನಡೆಯುತ್ತಿದೆ ಎಂದ ಅವರು, ಕಾಲೇಜಿನಲ್ಲಿ 1000 ಮಕ್ಕಳಿಗೆ ಬೇಕಾದ ಸುಸಜ್ಜಿತ ಅಡಿಟೋರಿಯಮ್ ಅಗತ್ಯವಿದ್ದು, ಆಡಿಯೋ/ವಿಡಿಯೋ(ಎವಿ) ಕೊಠಡಿ, ಸುಸಜ್ಜಿತ ಗ್ರಂಥಾಲಯ, ವಿದ್ಯಾರ್ಥಿಗಳ ವಿಶ್ರಾಂತಿ ಕೊಠಡಿ, ತಡೆಗೋಡೆ ನಿರ್ಮಾಣವಾಗಬೇಕಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಇಬ್ರಾಹೀಂ ಎಂ. ಮಾತನಾಡಿ, ಶೈಕ್ಷಣಿಕ, ಕ್ರೀಡಾ- ಸಾಹಿತ್ಯಿಕವಾಗಿ ಅತ್ಯುತ್ತಮ ಸಾಧನೆಯನ್ನು ನಮ್ಮ ಕಾಲೇಜು ಮಾಡುತ್ತಿದ್ದು, ಈ ಸರಕಾರಿ ಸಂಸ್ಥೆಯು ಖಾಸಗಿ ಕಾಲೇಜಿಗಿಂತಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ವಿಜ್ಞಾನ ವಿಭಾಗದಲ್ಲಿ ನೀಡುವಂತಹ ಸಿಇಟಿ, ನೀಟ್ ಪರೀಕ್ಷೆಗೆ ಆನ್‌ಲೈನ್ ಮತ್ತು ಆಫ್‌ಲೈನ್ ತರಗತಿಗಳನ್ನು ಕಾಲೇಜಿನಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಿಸಲಾಗಿದ್ದು, ಇದರಿಂದ ಗ್ರಾಮೀಣ ಪ್ರದೇಶದ ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳು ವೈದ್ಯಕೀಯ, ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಮಿಂಚುವಂತಾಗಿದೆ. ಇಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು, ಮುಂದಿನ ವರ್ಷ ಸಾವಿರಕ್ಕೂ ಅಧಿಕವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಅನಿ ಮಿನೇಜಸ್, ನಜೀರ್ ಮಠ, ನಾಗೇಶ್ ಪ್ರಭು, ಆದಂ ಕೊಪ್ಪಳ ಉಪಸ್ಥಿತರಿದ್ದರು.