ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾ.ಪಂ.ನ ಕುಡಿಯುವ ನೀರು ಸ್ಥಾವರದ ಎರಡು ಕೊಳವೆಬಾವಿಗಳ ನೀರು ಕುಡಿಯಲು ಯೋಗ್ಯವಲ್ಲವೆಂದು ಪ್ರಯೋಗಾಲಯದ ವರದಿ ಬಂದಿದೆ. ಈ ಮೊದಲು ಹಲವು ವರ್ಷಗಳಿಂದ ಈ ಭಾಗದ ಜನತೆ ಅದೇ ನೀರನ್ನು ಕುಡಿಯುತ್ತಿದ್ದಾರೆ. ಆದ್ದರಿಂದ ಗ್ರಾ.ಪಂ. ಈ ನೀರನ್ನು ಕುಡಿದವರ ಆರೋಗ್ಯ ತಪಾಸಣೆ ನಡೆಸಲು ಕ್ರಮ ವಹಿಸಬೇಕೆಂದು ಶುದ್ಧ ಕುಡಿಯುವ ನೀರು ಹೋರಾಟಗಾರರ ನಿಯೋಗವೊಂದು 34 ನೆಕ್ಕಿಲಾಡಿ ಗ್ರಾ.ಪಂ. ಮೂಲಕ ದ.ಕ. ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಯವರಿಗೆ ಮನವಿ ಸಲ್ಲಿಸಿದೆ.
ಪ್ರಯೋಗಾಲಯದ ವರದಿಯ ಪ್ರಕಾರ ಈ ಕೊಳವೆಬಾವಿಗಳ ನೀರಿನಲ್ಲಿ ಕಬ್ಬಿನಾಂಶ 6.86 ಮತ್ತು ಟರ್ಬಿಡಿಟಿ (ಕೆಸರು) ಮತ್ತು ಎನ್‌ಟಿಒ 76.3 ಇದೆ. ನಾವು ಕುಡಿಯುವ ನೀರಿನಲ್ಲಿ ಕಬ್ಬಿನಾಂಶ 1ರಿಂದ ಕೆಳಗೆ ಹಾಗೂ ಕೆಸರಿನಾಂಶ 5ರ ಕೆಳಗಿರಬೇಕೆಂದು ಪ್ರಯೋಗಾಲಯ ತಿಳಿಸಿದೆ. ಈ ನೀರು ಕುಡಿಯುವವ ಹೆಚ್ಚಿನವರಲ್ಲಿ ಈಗಾಗಲೇ ಕೈಕಾಲು ಗಂಟು ನೋವು, ಕೂದಲು ಉದುರುವಿಕೆ, ಕೂದಲು ಬಿಳಿಯಾಗುವುದು, ಜ್ವರ, ಸುಸ್ತು ಮುಂತಾದ ಕಾಯಿಲೆಗಳು ಕಂಡು ಬರುತ್ತಿವೆ. ಇದು ಈ ನೀರು ಕುಡಿರುವುದರಿಂದ ಆಗಿರುವ ಪರಿಣಾಮವಾಗಿರಬಹುದು. ಈ ಕೊಳವೆಬಾವಿಗಳ ನೀರು ಕುಡಿಯಲು ಯೋಗ್ಯವಲ್ಲವೆಂದು ಈಗಾಗಲೇ ಜಿಲ್ಲಾ ಸಾರ್ವಜನಿಕ ಆರೋಗ್ಯ ಇಲಾಖೆ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ತಮ್ಮ ವರದಿಯಲ್ಲಿ ದೃಢಪಡಿಸಿವೆ. ಆದ್ದರಿಂದ ಗ್ರಾಮ ನಿವಾಸಿಗಳ ಆರೋಗ್ಯದ ಹಿತದೃಷ್ಟಿಯ ದೃಷ್ಟಿಯಿಂದ ಜನರ ಆರೋಗ್ಯ ತಪಾಸಣೆಗೊಳಪಡಿಸಲು ಕ್ರಮ ವಹಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದೆ.
34 ನೆಕ್ಕಿಲಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ದೇವಪ್ಪ ನಾಯ್ಕ ಅವರಿಗೆ ಮನವಿ ಸಲ್ಲಿಸಿದ ನಿಯೋಗದಲ್ಲಿ ಶುದ್ಧ ಕುಡಿಯುವ ನೀರಿನ ಹೋರಾಟಗಾರರಾದ ಯು. ಶಬೀರ್ ಅಹಮ್ಮದ್, ಅಸ್ಕರ್ ಅಲಿ, ಮುಹಮ್ಮದ್ ರಫೀಕ್, 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್, ಗ್ರಾಮಸ್ಥರಾದ ಹಮೀದ್ ಪಿ.ಟಿ., ಶರೀಫ್ ಉಪಸ್ಥಿತರಿದ್ದರು.