ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ‘ಸಂಭ್ರಮ-24-25’

0

ಪರಿಪೂರ್ಣ ಮನುಷ್ಯನಾದಾಗ ಭಾರತ ವಿಶ್ವಗುರು: ಅಶೋಕ್ ಕುಮಾರ್ ರೈ

ಉಪ್ಪಿನಂಗಡಿ: ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗವಿದ್ದರೆ ಮಾತ್ರ ವ್ಯಕ್ತಿಯೋರ್ವ ಪರಿಪೂರ್ಣ ಮನುಷ್ಯವಾಗಲು ಸಾಧ್ಯ. ಆಗ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ರಾಜಕೀಯ ಪಕ್ಷಗಳ ದಾಳಗಳಾಗದೇ, ಮಾದಕ ಚಟಗಳಿಗೆ ಬಲಿಯಾಗದೇ ತಮ್ಮ ಭವಿಷ್ಯತ್ತಿನ ಚಿಂತನೆಯನ್ನಿಟ್ಟುಕೊಂಡು ಮುಂದೆ ಸಾಗಬೇಕು. ಪರಿಪೂರ್ಣ ಮನುಷ್ಯನಾಗಿ ಸಮೃದ್ಧ ದೇಶ ಕಟ್ಟುವ ಕಾರ್ಯ ಮಾಡಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜ.4ರಂದು ನಡೆದ ‘ಸಂಭ್ರಮ-24-25’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜೀವನದಲ್ಲಿ ಅಡಿಪಾಯ ಸರಿಯಿದ್ದಾಗ ಮಾತ್ರ ನಮ್ಮಿಂದ ಉತ್ತಮ ಸಾಧನೆ ಮಾಡಲು ಸಾಧ್ಯ. ಆದ್ದರಿಂದ ಗುಣಮಟ್ಟದ ಶಿಕ್ಷಣ ನಾವು ಪಡೆದುಕೊಳ್ಳಬೇಕು. ಎಲ್ಲಾ ಭಾಷೆಯ ಬಗ್ಗೆ ಜ್ಞಾನವಿದ್ದರೆ ಅದು ಮುಂದಕ್ಕೆ ನಮ್ಮ ನೆರವಿಗೆ ಬರುತ್ತದೆ. ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ಇಂಗ್ಲೀಷ್ ಜ್ಞಾನದ ಕೊರತೆ ಇದೆ. ಸರಕಾರಿ ಕೆಲಸಗಳ ಬಗ್ಗೆ ಮಾಹಿತಿಗಳ ಕೊರತೆ ಇದೆ. ಆದ್ದರಿಂದಲೇ ನಮ್ಮಲ್ಲಿಂದ ಐಎಎಸ್, ಐಪಿಎಸ್ ಅಧಿಕಾರಿಗಳಾಗುವವರ ಸಂಖ್ಯೆ ಕಡಿಮೆ ಇದೆ. ಪಿಯುಸಿ ಮುಗಿಸಿ ಪದವಿ ಶಿಕ್ಷಣ ಮಾಡುವ ಹಂತದಲ್ಲೇ ನಾವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಬಗ್ಗೆ ಯೋಚನೆ ಮಾಡಬೇಕು. ಅದಕ್ಕೆ ಬೇಕಾದ ಪೂರ್ವ ತಯಾರಿಯನ್ನು ಮಾಡಬೇಕು. ನಮ್ಮ ರೈ ಎಸ್ಟೇಟ್ ಎಜ್ಯುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ವತಿಯಿಂದ ಈಗಾಗಲೇ ಹಲವು ಕಾರ್ಯಕ್ರಮಗಳೊಂದಿಗೆ ಉದ್ಯೋಗ ಮೇಳವನ್ನು ಹಮ್ಮಿಕೊಂಡಿದ್ದು, ಮುಂದಕ್ಕೆ ಐಎಎಸ್, ಐಪಿಎಸ್ ನಂತಹ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಸಿಇಟಿ ಮತ್ತು ನೀಟ್ ಬರೆಯುವ ವಿದ್ಯಾರ್ಥಿಗಳಿಗೆ ತರಬೇತಿ ಕೊಡುವ ಕಾರ್ಯಕ್ರಮವನ್ನು ಕೂಡಾ ಟ್ರಸ್ಟ್ ವತಿಯಿಂದ ಆಯೋಜನೆ ಮಾಡುವ ಯೋಜನೆಯಿದೆ ಎಂದ ಅವರು, ಶಿಕ್ಷಿತ ಯುವಕರು ರಾಜಕೀಯಕ್ಕೆ ಬರಬೇಕಾಗಿದೆ. ಆದರೆ ರಾಜಕೀಯದ ದಾಳಗಳಾಗಿ ತಮ್ಮ ಭವಿಷ್ಯವನ್ನು ಕಳೆದುಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.


ಮುಖ್ಯ ಅತಿಥಿಯಾಗಿದ್ದ ತುಳು ಚಲನಚಿತ್ರ ನಟ, ಹಾಸ್ಯ ಕಲಾವಿದ ಅರವಿಂದ ಬೋಳಾರ್ ಅವರು ಸನ್ಮಾನ ಸ್ವೀಕರಿಸಿ ಹಾಗೂ ತನ್ನ ಹುಟ್ಟುಹಬ್ಬವನ್ನು ಕೇಕ್ ತುಂಡು ಮಾಡುವ ಮೂಲಕ ಆಚರಿಸಿ ಮಾತನಾಡಿ, ಬಡತನದಿಂದಾಗಿ ವಿದ್ಯೆಯಿಂದ ಮಾಡಲಾಗದ ಸಾಧನೆಯನ್ನು ನಾನಿಂದು ಹಾಸ್ಯ ಕಲಾವಿದನಾಗಿ ಮಾಡಿದ್ದೇನೆ. ಛದ್ಮವೇಷ ಸ್ಪರ್ಧೆಯೊಂದರಲ್ಲಿ ಹುಚ್ಚ ಭಿಕ್ಷುಕನ ವೇಷ ಹಾಕಿಕೊಂಡು ಮೊದಲಾಗಿ ವೇದಿಕೆ ಹತ್ತಿದ ನಾನು ಇಂದು ನಿಮ್ಮೆಲ್ಲರ ಆಶೀರ್ವಾದದಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ. ಆದ್ದರಿಂದ ನೀವು ಕೂಡಾ ಸಾಧನೆ ಮಾಡಬೇಕು. ಅದುವೇ ಮುಂದಕ್ಕೆ ನಿಮ್ಮ ಕೈ ಹಿಡಿಯುತ್ತದೆ. ಜೀವನದಲ್ಲಿ ಶಿಸ್ತು ಮುಖ್ಯವಾಗಿದ್ದು, ಕಲಿತ ಶಾಲೆಯನ್ನು ಎಂದಿಗೂ ಮರೆಯಲು ಹೋಗಬಾರದು ಎಂದರು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಳುಗು ತಜ್ಞ, ಸಾಮಾಜಿಕ ಕಾರ್ಯಕರ್ತ ಈಶ್ವರ ಮಲ್ಪೆ, ಮಾನವೀಯತೆಯ ಮೌಲ್ಯ, ಇನ್ನೊಬ್ಬರಿಗೆ ಸಹಾಯ ಮಾಡುವ ಗುಣ ನಮ್ಮದಾಗಿರಲಿ. ಪ್ರತಿಯೊಂದು ಸಾಧನೆಗೂ ದೈವದ ಪ್ರೇರಣೆ ಅಗತ್ಯ. ಗುರು- ಹಿರಿಯರೆದುರು ಬಾಗುವಿಕೆಯ ಗುಣ ನಮ್ಮದಾಗಬೇಕು ಎಂದರು.


ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ರಾಜಾರಾಮ ಕೆ.ಬಿ. ಅವರನ್ನು ಸನ್ಮಾನಿಸಲಾಯಿತು. ಸಾಧಕ ವಿದ್ಯಾರ್ಥಿಗಳಿಗೆ ದತ್ತಿ ನಿಧಿ ವಿತರಿಸಲಾಯಿತು. ಕಾಲೇಜಿನಲ್ಲಿ ನಡೆದ ಅಂತರ್ ತರಗತಿ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಲಲಿತಾ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ಯು.ಟಿ. ತೌಸೀಫ್, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ನಾಗೇಶ್ ಪ್ರಭು, ಅನಿ ಮಿನೇಜಸ್, ಅಬ್ದುರ್ರಹ್ಮಾನ್ ಮಠ, ವೆಂಕಪ್ಪ ಪೂಜಾರಿ ಮರುವೇಲು, ಇಬ್ರಾಹೀಂ ಯು.ಕೆ., ನಜೀರ್ ಮಠ, ಆದಂ ಕೊಪ್ಪಳ, ಅಬ್ದುರ್ರಹ್ಮಾನ್ ಯುನಿಕ್, ಜಾನ್ ಕೆನ್ಯೂಟ್ ಮಸ್ಕರೇನಸ್, ಡಾ. ನಿರಂಜನ ರೈ, ಅಬ್ದುಲ್ ಮಜೀದ್ ಮಠ, ಸಣ್ಣಣ್ಣ ಸಂಜೀವ ಮಡಿವಾಳ ಉಪಸ್ಥಿತರಿದ್ದರು.


ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಅಜೀಜ್ ಬಸ್ತಿಕ್ಕಾರ್ ಸ್ವಾಗತಿಸಿದರು. ಪ್ರಾಂಶುಪಾಲ ಇಬ್ರಾಹೀಂ ಎಂ. ವರದಿ ವಾಚಿಸಿದರು. ಉಪನ್ಯಾಸಕರು ರಮೇಶ್ ವಂದಿಸಿದರು. ಉಪನ್ಯಾಸಕಿಯರಾದ ಸುಲಕ್ಷಣ ಮತ್ತು ನವ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here