ಪುತ್ತೂರು: ಬದಲಾದ ವ್ಯವಸ್ಥೆಯಲ್ಲಿ ದೇಶ ದೇಶಗಳನ್ನು ಆರ್ಥಿಕತೆಯಲ್ಲಿ ಅಳೆಯಲಾಗುತ್ತದೆ. ಅದೇ ರೀತಿ ಆಧ್ಯಾತ್ಮಿಕತೆಗೂ ಪ್ರಾಮುಖ್ಯ ಕೊಡಬೇಕು. ಸಾಮಾಜಿಕ, ಭೌತಿಕ ಪ್ರಗತಿಗೆ ಹಣ ಬೇಕಾದಂತೆ, ಆಧ್ಯಾತ್ಮಿಕತೆಗೆ ಅಂತರಂಗದ ವಿಕಾಸವೂ ಮುಖ್ಯ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ಒಕ್ಕಲಿಗ ಗೌಡ ಸೇವಾ ಸಂಘ ಇದರ ವತಿಯಿಂದ ಸಹ ಸಂಸ್ಥೆಗಳ ಸಹಯೋಗದೊಂದಿಗೆ ಜ.4ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆದ ವಾರ್ಷಿಕ ಸಮಾವೇಶ, ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಮತ್ತು ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಇದರ ದಶಮಾನೋತ್ಸವ ಸಂಭ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ನಿಮ್ಮ ಪ್ರೀತಿಗಾಗಿ ನಾನು ಬಂದಿದ್ದೇನೆ. ಯಾಕೆಂದರೆ ಪುತ್ತೂರಿನ ಪ್ರಾರಂಭದ ದಿನಗಳಲ್ಲಿ ಇಲ್ಲಿ ಪ್ರವಾಸ ಮಾಡಿರುವುದು ಎಷ್ಟು ಸಂತೋಷ ಆಗಿದೆ ಎಂದರೆ ಇಲ್ಲಿನ ಗ್ರಾಮ ವಾಸ್ತವ್ಯ ಭೇಟಿ ಕಾರ್ಯಕ್ರಮ ನಮ್ಮ ರಾಜ್ಯದ ಬೇರೆ ಬೇರೆ ಶಾಖಾ ಮಠಗಳಿಗೆ ಆದರ್ಶಪ್ರಾಯವಾಗಿದೆ. ಇಲ್ಲಿ ಆರೋಗ್ಯಕ್ಕೆ ಉತ್ತಮ ವಾತಾವರಣವಿದೆ. ಇನ್ನೊಮ್ಮೆ ಗ್ರಾಮ ಪ್ರವಾಸ ಮಾಡುವ ಚಿಂತನೆ ಇದೆ ಎಂದರು. ಒಂದು ಸಮುದಾಯ ಎಲ್ಲಾ ವ್ಯವಸ್ಥೆಯಲ್ಲಿ ಮುಂದೆ ಬಂದು ಆರ್ಥಿಕವಾಗಿ ಆಧುನಿಕ ಕಾಲಕ್ಕೆ ತಕ್ಕಂತೆ ಅಭಿವೃದ್ಧಿ ಹೊಂದದೆ ಹೋದರೆ ಅಂತಹ ಸಮಾಜದಿಂದ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಕಷ್ಟ ಸಾಧ್ಯ. ಇದನ್ನು ಮನಗಂಡು 10 ವರ್ಷಗಳ ಹಿಂದೆ ನಮ್ಮವರು ದುಡಿದ ಹಣ ಪೋಲಾಗಬಾರದು ಎಂಬ ಚಿಂತನೆಯಲ್ಲಿ ಸ್ವಸಹಾಯ ಟ್ರಸ್ಟ್ ಆರಂಭಗೊಂಡಿತ್ತು. ಇವತ್ತು ಸ್ವಸಹಾಯ ಸಂಘದಲ್ಲಿ ಸುಮಾರು 15 ಸಾವಿರದಷ್ಟು ಸದಸ್ಯರಿದ್ದಾರೆ. ಇಷ್ಟೊಂದು ಶಕ್ತಿಯುತವಾಗಿ ಬೆಳೆಯುತ್ತಿರುವ ಸಮುದಾಯದ ಸಂಘಟನೆ ನಾವೆಲ್ಲ ಭಾರತೀಯ ಮಕ್ಕಳಂತೆ ಇದ್ದು ದೇಶಕ್ಕೆ ಕೊಡುಗೆ ನೀಡುವ ಕೆಲಸವಾಗಿದೆ. ಸಂಸ್ಥೆ ಕೇವಲ ಹಣಕ್ಕಾಗಿ ಮಾತ್ರವಲ್ಲ. ನಮಗೆ ಧರ್ಮ ಬೇಕೆಂಬ ಕಾರಣಕ್ಕಾಗಿ ಇಲ್ಲಿ ಸತ್ಯನಾರಾಯಣ ಪೂಜೆಯೂ ನಡೆಯುತ್ತಿದೆ. ಒಂದು ಕಡೆ ಅಂತರಂಗದಲ್ಲಿ ವಿಕಾಸ ಆಗುತ್ತಿರಬೇಕು. ಇನ್ನೊಂದು ಕಡೆ ಬಾಹ್ಯದಲ್ಲಿ ಸಮೃದ್ಧಿ ಇರಬೇಕು. ಈ ಎರಡು ಕೂಡ ಎಲ್ಲಿ ಕೂಡುತ್ತದೆಯೋ ಅದೆಲ್ಲ ಧರ್ಮವಾಗುತ್ತದೆ. ಇವತ್ತು ಸ್ವಸಹಾಯ ಟ್ರಸ್ಟ್ ಮೂಲಕ ಆರ್ಥಿಕತೆ ಅಭಿವೃದ್ದಿ, ಸಾಮಾಜಿಕ ಅಭಿವೃದ್ಧಿಯನ್ನು ಹೊಂದಿ ಆಂತರಿಕ ಸುಸಂಸ್ಕೃತರೂ ಎಂಬ ಭಾವನೆ ಬಂದದ್ದೆ ಆದರೆ ನಮ್ಮಲ್ಲಿ ಇರುವ ಹಣಕ್ಕೆ ಗೌರವ ಬರುತ್ತದೆ ಎಂದು ಶ್ರೀಗಳು ಹೇಳಿದರು. ಒಬ್ಬ ವ್ಯಕ್ತಿ ಉದ್ಧಾರ ಆಗಬೇಕಾದರೆ ಅವನಲ್ಲಿ ಕಲೆ, ವಿಜ್ಞಾನ ಸಾಹಿತ್ಯದ ಗುಣಗಳು ಇರಬೇಕು. ಒಂದು ಕಾಲದಲ್ಲಿ ಕೇವಲ ವ್ಯವಸಾಯ ಮಾಡುವ ಸಮುದಾಯ ನಮ್ಮದಾಗಿತ್ತು. 10ನೇ ಶತಮಾನದಲ್ಲಿ ರಾಷ್ಟ್ರವನ್ನು ಆಳುವ ಕಾಯಕವನ್ನು ನಿಲ್ಲಿಸಿದ ಮೇಲೆ ಕೆಂಪೇಗೌಡರು ಬಿಟ್ಟರೆ ನಂತರದ ದಿನಗಳಲ್ಲಿ ಯಾರೂ ಇರಲಿಲ್ಲ. ಈ ನಿಟ್ಟಿನಲ್ಲಿ ನಮ್ಮ ಸಮುದಾಯದಲ್ಲಿ ಶ್ರೇಷ್ಟ ವೈದ್ಯರು, ಕವಿಗಳು, ಆರ್ಥಿಕ ತಜ್ಞರು ಸೇರಿದಂತೆ ಎಲ್ಲಾ ವಲಯಗಳಲ್ಲೂ ಶ್ರೇಷ್ಟವಾದ ಸಾಧಕರು ಬೆಳೆದರೆ ನಮ್ಮ ರಾಷ್ಟ್ರದ ಶ್ರೇಷ್ಠತೆಯು ಬೆಳೆಯುತ್ತದೆ ಎಂದು ಹೇಳಿದರು.
ಸಮಾಜಮುಖಿ ಚಿಂತನೆಯಿಂದ ಸಮಾಜ ಬೆಳೆಯಲು, ಬೆಳೆಸಲು ಸಾಧ್ಯ-ಡಾ.ಶ್ರೀಧರ್ಮಪಾಲನಾಥ ಸ್ವಾಮೀಜಿ:
ಶ್ರೀಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಮಾತನಾಡಿ ಸಾಮಾಜಿಕ ಸಂಘಟನೆಯಲ್ಲಿ ತನ್ನದೆ ಆದ ಅಸ್ತಿತ್ವ ಉಳಿಸಿಕೊಂಡ ಸ್ವಾಭಿಮಾನಿ ಸಂಘಟನೆ ಒಕ್ಕಲಿಗರದ್ದು. ನೂರಾರು ಸಮಾಜ ಸಂಘಟನೆಗಳಿಗೆ ಮಾದರಿಯಾದ ಸಂಘ ಪುತ್ತೂರು ಸಂಘ. ಇದಕ್ಕೆ ಸ್ವಸಹಾಯ ಸಂಘ, ಸಹಕಾರ ಸಂಘಗಳು ಹುಟ್ಟಿರುವ ಹಲವಾರು ಕಾರಣಗಳೂ ಇವೆ. ಅದರಲ್ಲೂ ಹಿರಿಯ ಆದರ್ಶ ದಂಪತಿಗಳಿಗೆ ಸನ್ಮಾನ ಮಾಡುವ ಮೂಲಕ ಸಮಾಜದ ಹೃದಯವನ್ನು ತಟ್ಟುವ ಕೆಲಸ ಸಂಘಟನೆ ಮಾಡಿದೆ. ಆಧುನಿಕ ಅವಿಷ್ಕಾರದ ನಡುವೆ ಮನುಷ್ಯನ ಭಾವನೆ ಕಲುಷಿತಗೊಂಡಾಗ ಹಿರಿಯರ ಮಾರ್ಗದರ್ಶನದ ಅವಶ್ಯಕತೆ ಇದೆ. ಯಾಕೆಂದರೆ ಹಿಂದೆ ಹಿರಿಯರು ತೋರಿಸಿದವರನ್ನು ವಿವಾಹವಾಗುವ ಕಾಲವಿತ್ತು. ಇವತ್ತು ಮಕ್ಕಳು ಒಪ್ಪಿದವರನ್ನು ತಂದೆ ತಾಯಿಯರು ಒಪ್ಪುವ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ಹಿರಿಯರ ಮಾರ್ಗದರ್ಶನವನ್ನು ಗುರುತಿಸುವ ಕೆಲಸ ಸಮಾಜ, ಸಂಘಟನೆ ಮಾಡಿದಾಗ ತನ್ನ ಅಸ್ಮಿತೆಯನ್ನು ಉಳಿಸಲು ಸಾಧ್ಯ ಎಂದ ಶ್ರೀಗಳು ಸಮಾಜಮುಖಿ ಚಿಂತನೆ ಇದ್ದಾಗ ಸಮಾಜ ಬೆಳೆಯಲು ಮತ್ತು ಬೆಳೆಸಲು ಸಾಧ್ಯ ಎಂದರು.
ಟ್ರಸ್ಟ್‌ನಿಂದ ಮುಂದೆ ಬೆಳ್ಳಿ ಹಬ್ಬವೂ ನಡೆಯಲಿ-ಶಾಸಕ ಸಂಜೀವ ಮಠಂದೂರು:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ ಆರ್ಥಿಕ ಸ್ಥಿತಿಗೆ ಹೆಸರುವಾಸಿಯಾದ ಜನರು ದಕ್ಷಿಣ ಕನ್ನಡ ಜಿಲ್ಲೆಯವರು. ಆದ್ದರಿಂದ ಆರ್ಥಿಕ ಶಿಸ್ತು ಆರ್ಥಿಕ ವ್ಯವಸ್ಥೆಯನ್ನು ಮೈಗೂಡಿಸಿಕೊಂಡ ಈ ಟ್ರಸ್ಟ್ ಇವತ್ತು ದೊಡ್ಡ ಒಕ್ಕೂಟವಾಗಿ ಮೂಡಿ ಬಂದಿದೆ. ಟ್ರಸ್ಟ್‌ನ 10ನೇ ವರ್ಷದ ದಶಮಾನೋತ್ಸವದ ಸಂಭ್ರಮದೊಂದಿಗೆ ಮುಂದೆ 25ನೇ ವರ್ಷದ ಬೆಳ್ಳಿ ಹಬ್ಬದವರೆಗೂ ಹೋಗಲಿ. 1908ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾಸಂಘ ಆರಂಭವಾಯಿತು. ಆಗ ಬಹಳಷ್ಟು ಹಿರಿಯರು ಅದರ ನೇತೃತ್ವ ವಹಿಸಿದ್ದರು. ಸುಮಾರು 100 ವರ್ಷದ ಹಿಂದೆಯೇ ನಮ್ಮ ಜನಾಂಗ ವಿದ್ಯಾವಂತ ಜನಾಂಗ ಆಗಬೇಕೆಂದು ಹಿರಿಯರು ಕನಸು ಕಂಡಿದ್ದರು. ಅದರ ಪರಿಣಾಮ ಇವತ್ತು ಗೌಡ ಸಮಾಜ ವಿದ್ಯಾವಂತ ಸಮಜವಾಗಿ ಹೊರಬಂದಿದೆ. ಇಂತಹ ಹತ್ತಾರು ಉದಾಹರಣೆ ಕೊಡಬಲ್ಲ ಽಮಂತ ನಾಯಕರು ಈ ಸಮಾಜದಲ್ಲಿ ಹುಟ್ಟಿ ನ್ಯಾಯಕೊಡುವ ಕೆಲಸ ಮಡಿದ್ದಾರೆ. ಆ ನಿಟ್ಟಿನಲ್ಲಿ ಹಿರಿಯ ಮಾರ್ಗದರ್ಶದನಲ್ಲಿ ನಾವು ಕೂಡಾ ಸಾಧಕರಾಗಬೇಕೆಂದು ಹೇಳಿದರು. ಇವತ್ತು ಸರಕಾರ ಮಾಡದ ಕಾರ್ಯಕ್ರಮವನ್ನು ಸ್ವಸಹಾಯ ಟ್ರಸ್ಟ್ ಮೂಲಕ ಆರ್ಥಿಕ ಚೈತನ್ಯ ನೀಡುವ ಕೆಲಸ ಮಾಡಲಾಗುತ್ತಿದೆ. ಸಮಾಜಕ್ಕೂ ದೇಶಕ್ಕೂ ಒಂದು ಕೊಡುಗೆ ಕೊಡಬಹುದು ಎಂದು ಕಾರ್ಯಕ್ರಮದ ಮೂಲಕ ತೋರಿಸಿಕೊಟ್ಟಿದ್ದೇವೆ. ಮಠವನ್ನು ಗ್ರಾಮಕ್ಕೆ ಹೇಗೆ ಕೊಂಡು ಹೋಗಬಹುದೆಂದು ಶ್ರೀಗಳು ತೋರಿಸಿ ಸಂದೇಶ ಕೊಡುವ ಕೆಲಸ ಮಾಡಿದ್ದಾರೆ ಎಂದರು.
ಸ್ವಸಹಾಯ ಗುಂಪುಗಳು ಹೆಚ್ಚು ಬೆಳೆಯಬೇಕು-ಡಾ.ಶಾಂತ ಸುರೇಂದ್ರ ಗೌಡ:
ಅಖಿಲ ಕರ್ನಾಟಕ ಮಹಿಳಾ ಒಕ್ಕಲಿಗರ ಘಟಕದ ರಾಜ್ಯಾಧ್ಯಕ್ಷೆ ಡಾ.ಶಾಂತ ಸುರೇಂದ್ರ ಗೌಡ ಮಾತನಾಡಿ ಪ್ರಸ್ತುತ ಕಾಲದಲ್ಲಿ ಮಠ, ಮಂದಿರಗಳು ಬೆಳೆಯುತ್ತಿದೆ. ಹಾಗೆಯೇ ಜನಾಂಗವೂ ಬೆಳೆಯಬೇಕು. ಸ್ವಸಹಾಯ ಗುಂಪು ಎನ್ನುವುದು ಹತ್ತು ಜನರನ್ನು ಪ್ರೀತಿ ವಿಶ್ವಾಸದಿಂದ ನಡೆಸಿಕೊಳ್ಳುವುದು. ನಮ್ಮ ಜನಾಂಗ ದೇಶದಲ್ಲಿ, ರಾಜ್ಯದಲ್ಲಿ ಸಾಕಷ್ಟಿದೆ. ಈ ಮೂಲಕ ಸಾವಿರಾರು ಸಂಘ ಸಂಸ್ಥೆಗಳು ಹೊರಗೆ ಬರಬೇಕು ಎಂದರು.
ಸಮಾಜ ಕಟ್ಟಲು ಜೊತೆಯಾಗೋಣ-ಮೋಹನ ಗೌಡ ಇಡ್ಯಡ್ಕ:
ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಮುಖ್ಯ ಪ್ರವರ್ತಕ, ನ್ಯಾಯವಾದಿ ಮೋಹನ ಗೌಡ ಇಡ್ಯಡ್ಕ ಮಾತನಾಡಿ, ದ.ಕ.ಜಿಲ್ಲೆಯಲ್ಲಿ ಸಂಘ ಮಾಡುವಾಗ ನಮ್ಮಲ್ಲಿ ಎರಡು ಸಂಘಕ್ಕೆ ಹೋಗುತ್ತಿರುವುದು ಬೇಸರದ ವಿಚಾರ. ಇಡೀ ಸಮಾಜವನ್ನು ಕಟ್ಟುವಲ್ಲಿ ಒಬ್ಬೊಬ್ಬರು ಸದನ್ನು ಸ್ವಂತ ರೀತಿಯಲ್ಲಿ ತಿಳಿದುಕೊಂಡು ಹೋದರೆ ಅದು ತಪ್ಪು. ಇವತ್ತು ಯುವಕರು ಸದಸ್ಯತನ ಆಗುವುದರಲ್ಲಿ ಯಾವುದೇ ಪ್ರೋಗ್ರೆಸ್ ಇಲ್ಲ. ಹಾಗಾಗಿ ಯುವಕರನ್ನು ಸದಸ್ಯರನ್ನಾಗಿ ಮಾಡುವಂತೆ ಹಿರಿಯರಲ್ಲಿ ವಿನಂತಿಸುತ್ತೇನೆ. ಅವರಿಗೆ ಸ್ವಲ್ಪ ಕೆಲಸ ಮಾಡುವ ಅವಕಾಶ ಮಾಡಿಕೊಡಿ ಎಂದ ಅವರು ಪುತ್ತೂರಿನಲ್ಲಿ ಗಟ್ಟಿ ಸಮಾಜ ಕಟ್ಟಲು ಸಹಕಾರ ಮಾಡಿ. ಸಮಾಜ ಕಟ್ಟಲು ಜೊತೆಯಾಗೋಣ ಎಂದರು.
ಗೌಡ ಎಂದರೆ ನಾಯಕ, ಬುದ್ದಿವಂತ, ಯಜಮಾನ-ಗೋಪಾಲಕೃಷ್ಣ ಗೌಡ ಚಾರ್ವಾಕ:
ದಶಮಾನೋತ್ಸವ ಸಮಿತಿ ಅಧ್ಯಕ್ಷ ಪಟೇಲ್ ಗೋಪಾಲಕೃಷ್ಣ ಗೌಡ ಚಾರ್ವಾಕ ಮಾತನಾಡಿ ನನಗೆ ಇವತ್ತು ಧನ್ಯತಾ ಭಾವನೆ ಇದೆ. ದಾಂಪತ್ಯ ಸುವರ್ಣ ಮಹೋತ್ಸವದಲ್ಲಿರುವ ಹಿರಿಯರ ಸನ್ಮಾನಕ್ಕೆ ಎಲಾ ಗ್ರಾಮ ಸಂಚರಿಸಿರುವುದು ಸಂತೋಷ ಕೊಟ್ಟಿದೆ. ಯಾಕೆಂದರೆ ವಿಧಿ ವಿಧಾನಗಳಿಂದ ನಡೆದ ದಾಂಪತ್ಯ ಜೀವನ ಮುರಿದು ಬೀಳುವುದಿಲ್ಲ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ. ದಶಮಾನೋತ್ಸವದ ಸಂಭ್ರಮಕ್ಕೆ ಆನ್‌ಲೈನ್ ಸ್ಪರ್ಧೆ ಪ್ರತಿ ತಿಂಗಳು ನಡೆಸಿರುವುದು ಸಂತೋಷ ಆಗಿದೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ನನಗೆ ಕೆಯ್ಯೂರು ವೆಂಕಪ್ಪ ಗೌಡರವರು ಬೆನ್ನೆಲುಬಾಗಿ ನಿಂತರು. ಇಂತಹ ಸಂದರ್ಭದಲ್ಲಿ ಇವತ್ತು ಗೌಡ ಎಂಬ ಪದಕ್ಕೆ ಉತ್ತಮ ಉಲ್ಲೇಖವಿದೆ. ಗೌಡ ಎಂದರೆ ನಾಯಕ, ಬುದ್ದಿವಂತ, ಯಜಮಾನ ಎಂದರ್ಥ. ಇವತ್ತು ನಮ್ಮ ಸಂಘಟನೆಯೂ ಸಂಘರ್ಷಕ್ಕೆ ಅಲ್ಲ ಸಾಮಾರಸ್ಯಕ್ಕೆ ಇರುವುದು. ನಾವು ಮನಸ್ಸು ಮಾಡಿ ಸಂಘಟನೆಯಲ್ಲಿ ತೊಡಗಿಸೋಣ. ಎಲ್ಲಾ ಸಮಾಜ ಬೆಳೆಯಬೇಕು ಎಂಬುದು ನಮ್ಮ ಉದ್ದೇಶ. ಮುಖ್ಯವಾಗಿ ಯುವ ಸಮಾಜ ಮುಂದೆ ಬರಬೇಕಿದೆ ಎಂದರು.
ಸಮಾಜ ಬೆಳೆಸುವಲ್ಲಿ ಪುತ್ತೂರು ಉತ್ತಮ ಕೆಲಸ ಮಾಡಿದೆ-ಸುರೇಶ್ ಬೈಲು:
ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಮಾತನಾಡಿ ಸಮಾಜವನ್ನು ಬೆಳೆಸುವ ನಿಟ್ಟಿನಲ್ಲಿ ಪುತ್ತೂರು ಉತ್ತಮ ಕೆಲಸ ಮಾಡಿದೆ. ಯುವ ಜನತೆಯನ್ನು ಒಟ್ಟು ಗೂಡಿಸುವ ವ್ಯವಸ್ಥೆ ಆಗಬೇಕು. ಜಿಲ್ಲೆಯ 6 ಸಂಘಗಳು ಅನ್ಯೋನ್ಯತೆಯಿಂದ ಬೆಳೆಯುವ ಕೆಲಸ ಆಗಬೇಕೆಂದರು.
ಸಮಾಜಕ್ಕೆ ಹಿರಿಯರೇ ನಿಜವಾದ ಹೀರೋಗಳು- ಎ.ವಿ.ನಾರಾಯಣ:
ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಎ.ವಿ.ನಾರಾಯಣ ಮಾತನಾಡಿ ದಶಮಾನೋತ್ಸವದ ಸಂಭ್ರಮದಲ್ಲಿ ತಿಂಗಳಿಗೆ ಒಂದರಂತೆ 12 ಕಾರ್ಯಕ್ರಮಗಳನ್ನು ಆನ್‌ಲೈನ್ ಮೂಲಕ ಮಾಡಿರುವುದು ವಿಶೇಷ. ಕೊನೆಯಲ್ಲಿ ಒಂದು ತಿಂಗಳ ಮೊದಲು ಆಫ್ಲೈನ್ ಕಾರ್ಯಕ್ರಮವಾಗಿ 50 ವರ್ಷ ಪೂರೈಸಿದ ಮಾದರಿ ದಂಪತಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ಯಶಸ್ವಿಯಾಗಿ ಮಾಡಿದ್ದೇವೆ. 68 ಗ್ರಾಮಗಳಲ್ಲಿ ಒಂದೂವರೆ ತಿಂಗಳಲ್ಲಿ 328 ದಂಪತಿಗೆ ಸನ್ಮಾನ ಮಾಡಿದ್ದೇವೆ. ಅಂತಹ ಹಿರಿಯರನ್ನು ಸನ್ಮಾನಿಸಿದಾಗ ನಮಗೆ ಅವರೇ ನಿಜವಾದ ಹೀರೊಗಳಾಗಿ ಕಂಡಿದ್ದಾರೆ ಎಂದ ಅವರು ಆದರ್ಶ ದಂಪತಿಯ ಸನ್ಮಾನ ಕಾರ್ಯಕ್ರಮ ಸುದ್ದಿ ಪತ್ರಿಕೆಯಲ್ಲಿ ನಿರಂತರ ಪ್ರಕಟಗೊಂಡಿತ್ತು ಎಂದರು.
ಟ್ರಸ್ಟ್ ಮೂಲಕ ಹಲವು ಉತ್ತಮ ಕಾರ್ಯಕ್ರಮ-ಮನೋಹರ್ ಡಿ.ವಿ:
ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ಅಧ್ಯಕ್ಷ ಮನೋಹರ್ ಡಿ.ವಿ ಮಾತನಾಡಿ ಒಕ್ಕಲಿಗ ಸ್ವಸಹಾಯ ಟ್ರಸ್ಟ್, ಇದೀಗ ಪುತ್ತೂರು ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಹಾಗೂ ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕಿನ ಆಯ್ದ ಗ್ರಾಮಗಳಲ್ಲಿ ಸ್ವಸಹಾಯ ಗುಂಪುಗಳನ್ನು ರಚನೆ ಮಾಡಿಕೊಂಡಿದೆ. ಈವರೆಗೆ ಒಟ್ಟು 64 ಗ್ರಾಮಗಳಲ್ಲಿ 66 ಒಕ್ಕೂಟ ಮತ್ತು 1050 ಗುಂಪುಗಳ ರಚನೆಯಾಗಿದ್ದು ಆ ಮೂಲಕ 15,000ಕ್ಕೂ ಮಿಕ್ಕಿ ಸದಸ್ಯರಿರುತ್ತಾರೆ. ಟ್ರಸ್ಟ್ ಮೂಲಕ ಸುಮಾರು 2.27ಲಕ್ಷ ಸಹಾಯಧನ ನೀಡಿದ್ದೇವೆ. ಟ್ರಸ್ಟ್‌ನ ಮೂಲಕ ನಡೆಯುವ ವಿವಾಹ ವೇದಿಕೆಯಲ್ಲಿ ಸುರೇಶ್ ಗೌಡ ಸಂಚಾಲಕರಾಗಿ ಸುಮಾರು 600 ಮಂದಿಗೂ ಹೆಚ್ಚು ಯುವಕ ಯುವತಿಯರು ನೋಂದಾಯಿಸಿದ್ದಾರೆ. 160ಕ್ಕೂ ಮಿಕ್ಕಿ ವಿವಾಹ ವೇದಿಕೆಯ ಮೂಲಕ ಅಗಿದೆ. ಸ್ವಸಹಾಯ ಸಂಘದ ಸದಸ್ಯರಿಗೆ ಅಧ್ಯಯನ ಪ್ರವಾಸ, ಕ್ಷೇತ್ರ ದರ್ಶನ, ಆಟಿದ ಕೂಟ, ರಕ್ತದಾನ ಶಿಬಿರ, ಜೇನು ಸಾಕಾಣಿಕೆ ಕಾರ್ಯಕ್ರಮ ನಡೆಸುತ್ತಿದ್ದು, ಧಾರ್ಮಿಕ ಮನೋಭಾವನೆ ಬೆಳೆಸಲು ಭಜನಾ ತಂಡ ನಿರ್ಮಿಸಲಾಗಿದೆ ಎಂದರು.
ಸ್ಮರಣ ಸಂಚಿಕೆಯ ಸಾಂಕೇತಿಕ ಬಿಡುಗಡೆ:
ಒಕ್ಕಲಿಗ ಸ್ವಸಹಾಯ ಸಂಘದ ದಶಮಾನೋತ್ಸವದ ಅಂಗವಾಗಿ ಸ್ಮರಣಸಂಚಿಕೆಯನ್ನು ಸಿದ್ದಪಡಿಸಿದ್ದು ಅದನ್ನು ಸಾಂಕೇತಿಕವಾಗಿ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ರಿಮೋಟ್ ಒತ್ತುವ ಮೂಲಕ ವಿಶೇಷ ರೀತಿಯಲ್ಲಿ ಬಿಡುಗಡೆಗೊಳಿಸಿದರು.
ಒಕ್ಕಲಿಗರ ಪ್ರಾರ್ಥನಾ ಗೀತೆ ವಿಡಿಯೋ ಧ್ವನಿಸುರುಳಿ ಬಿಡುಗಡೆ:
ಪದ್ಮಯ್ಯ ಗೌಡ ಅವರು ರಚಿಸಿದ ಒಕ್ಕಲಿಗರ ಪ್ರಾರ್ಥನಾ ಗೀತೆಯ ವಿಡಿಯೋ ಧ್ವನಿಸುರಳಿಯನ್ನು ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಬಿಡುಗಡೆ ಮಾಡಿದರು. ಗೀತೆಗೆ ಸಂಗೀತ ನೀಡಿದ ಪದ್ಮರಾಜ್ ಬಿ.ಸಿ ಅವರನ್ನು ಶ್ರೀಗಳು ಗೌರವಿಸಿದರು.
ಸನ್ಮಾನ:
ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನಲ್ಲಿ ಆರಂಭದಿಂದಲೂ ಉತ್ತಮ ಸೇವಾ ಕಾರ್ಯ ನಿರ್ವಹಿಸಿದ ವೆಂಕಪ್ಪ ಗೌಡ ಕೆಯ್ಯೂರು ದಂಪತಿ, ಒಕ್ಕಲಿಗರ ಗೀತೆ ರಚಿಸಿದ ಪದ್ಮಯ್ಯ ಗೌಡ ಮತ್ತು ವಾರಣಾಸಿ ದಂಪತಿಯನ್ನು ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನಿಂದ ಸನ್ಮಾನಿಸಲಾಯಿತು.
ಮೂವರು ಸಾಧಕರಿಗೆ ಸನ್ಮಾನ:
ಕಳೆದ ಎರಡು ವರ್ಷಗಳಿಂದ ವಿವಿಧ ಹಂತದಲ್ಲಿರುವ ಮೂರು ವ್ಯಕ್ತಿಗಳಿಗೆ ಸಾಧನಾ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯಕ್ರಮ ಈ ಬಾರಿಯೂ ನಡೆಯಿತು. ಸಾಧಕರಾದ ಅಂಕಲ್ ಸ್ವೀಟ್ಸ್‌ನ ಕುಶಾಲಪ್ಪ ಗೌಡ ಮತ್ತು ಪ್ರೇಮಾ ದಂಪತಿ, ಪ್ರೊ.ವಸಂತಿ, ವಿವೇಕಾನಂದ ಶಾಲೆಯ ಯುವ ಪ್ರತಿಭೆ, ಹೈಜಂಪ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಕೀರ್ತಿ ಅವರಿಗೆ ಒಕ್ಕಲಿಗ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರು ಸತೀಶ್ ರೈ ಉಪಸ್ಥಿತರಿದ್ದರು. ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಚಿದಾನಂದ ಬೈಲಾಡಿ ಸಾಧಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಿರ್ವಹಿಸಿದರು.
ಪೂರ್ವಾಧ್ಯಕ್ಷರುಗಳಿಗೆ ಶುಭ ಆಶೀರ್ವಾದ:
ದ.ಕ ಜಿಲ್ಲಾ ಮಂಗಳೂರು ತಾಲೂಕು ಅಧ್ಯಕ್ಷ ಡಿ.ಬಿ ಬಾಲಕೃಷ್ಣ, ಪುತ್ತೂರು ತಾಲೂಕು ಮಾಜಿ ಅಧ್ಯಕ್ಷ ಕೆಮ್ಮಾರ ಗಂಗಾಧರ ಗೌಡ, ನಾಗಪ್ಪ ಗೌಡ ಬೊಮ್ಮೆಟ್ಟಿ, ಹೆಚ್.ಡಿ ಶಿವರಾಮ್, ಆಶಾ ತಿಮ್ಮಪ್ಪ ಗೌಡ, ಚಿದಾನಂದ ಬೈಲಾಡಿ, ಮೋಹನ್ ಗೌಡ ಇಡ್ಯಡ್ಕ, ವಿಶ್ವನಾಥ ಗೌಡ ಕೆಯ್ಯೂರು, ಹಾಲಿ ಅಧ್ಯಕ್ಷ ರವಿ ಮುಂಗ್ಲಿಮನೆ, ಮಹಿಳಾ ಸಂಘದ ಮಾಜಿ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ, ಗೌರಿ ಬನ್ನೂರು, ಯಶೋದಾ ಕೆ. ಗೌಡ, ಹಾಲಿ ಅಧ್ಯಕ್ಷೆ ವಾರಿಜ ಕೆ., ಯುವ ಗೌಡ ಸೇವಾ ಸಂಘದ ಪೂರ್ವಾಧ್ಯಕ್ಷ ಕಿಶೋರ್ ನೆಲ್ಲಿಕಟ್ಟೆ, ಪ್ರವೀಣ್ ಕುಂಟ್ಯಾನ, ಎ.ವಿ.ನಾರಾಯಣ, ಪುರುಷೋತ್ತಮ ಮುಂಗ್ಲಿಮನೆ, ರಾಧಾಕೃಷ್ಣ ನಂದಿಲ, ನಾಗೇಶ್ ಕೆಡೆಂಜಿ, ಹಾಲಿ ಅಧ್ಯಕ್ಷ ಅಮರನಾಥ ಗೌಡ ಅವರನ್ನು ಶ್ರೀಗಳು ಗೌರವಿಸಿದರು.
ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ನ ನೂತನ ಸಭಾಭವನ ಉದ್ಘಾಟನೆ
ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿಯ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ನ ಕಚೇರಿಯ ಮೇಲಂತಸ್ತಿನಲ್ಲಿ ದಶಮಾನೋತ್ಸವದ ಅಂಗವಾಗಿ ನಿರ್ಮಾಣಗೊಂಡ ನೂತನ ಸಭಾಭವನವನ್ನು ಶ್ರೀಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿಯವರು ಉದ್ಘಾಟಿಸಿದರು. ಟ್ರಸ್ಟ್‌ನ ಕಚೇರಿಯಲ್ಲಿ ಶ್ರೀದೇವರಿಗೆ ದೀಪ ಪ್ರಜ್ವಲಿಸಿದ ಅವರು ಮೇಲಂತಸ್ತಿನಲ್ಲಿರುವ ನೂತನ ಸಭಾಭವನವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಆರಂಭದಲ್ಲಿ ಶ್ರೀಗಳು ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭ ದಶಮಾನೋತ್ಸವ ಸಮಿತಿ ಕಾರ್ಯದರ್ಶಿ ಹೂವಪ್ಪ ಗೌಡ ದಂಪತಿ ಶ್ರೀಗಳ ಪಾದಕ್ಕೆ ನೀರು ಹಾಕಿ ಶುಭ್ರಗೊಳಿಸಿದರು. ಟ್ರಸ್ಟ್‌ನ ಅಧ್ಯಕ್ಷ ಡಿ.ವಿ.ಮನೋಹರ್ ಗೌಡ ಮತ್ತು ದಶಮಾನೋತ್ಸವ ಸಮಿತಿ ಅಧ್ಯಕ್ಷ ಪಟೇಲ್ ಗೋಪಾಲಕೃಷ್ಣ ಗೌಡ ಚಾರ್ವಾಕರವರು ಶ್ರೀಗಳಿಗೆ ತುಳಸಿ ಮಾಲೆ ಸಮರ್ಪಣೆ ಮಾಡಿದರು.
ಆರ್ಥಿಕ ನೆರವು ಹಸ್ತಾಂತರ:
ಕಾಲು ನೋವಿಗೆ ತುತ್ತಾಗಿ ಅಸಾಹಯಕರಾಗಿರುವ ಶೀಲಾ ಮತ್ತು ಶ್ರೀಧರ್ ಎಂಬವರಿಗೆ ಸಿಲ್ವಿಯ ಪಾರ್ಮ್ಸ್ ನ ಸಿಲ್ವಿಯ ಪಾಯಸ್ ನೀಡಿರುವ ಆರ್ಥಿಕ ನೆರವಿನ ಮೊತ್ತವನ್ನು ಶ್ರೀಗಳು ಹಸ್ತಾಂತರ ಮಾಡಿದರು.
ಉತ್ತಮ ಒಕ್ಕೂಟಕ್ಕೆ ಪ್ರಶಸ್ತಿ ಪ್ರದಾನ:
8 ಒಕ್ಕೂಟಗಳಿಗೆ ಪ್ರಶಸ್ತಿ ಪ್ರದಾನ ನಡೆಯಿತು. ಪುತ್ತೂರು ವಲಯದಲ್ಲಿ ಉತ್ತಮ ಒಕ್ಕೂಟವಾಗಿ ಬಲ್ನಾಡು ಒಕ್ಕೂಟ, ಕುಂಬ್ರ ವಲಯದಲ್ಲಿ ಉತ್ತಮ ಒಕ್ಕೂಟವಾಗಿ ನೆಟ್ಟಣಿಗೆ ಒಕ್ಕೂಟ, ಉಪ್ಪಿನಂಗಡಿ ವಲಯದಲ್ಲಿ ಹಿರೇಬಂಡಾಡಿ ಒಕ್ಕೂಟ, ನೆಲ್ಯಾಡಿ ವಲಯದಲ್ಲಿ ಸಿರಿಬಾಗಿಲು ಒಕ್ಕೂಟ, ಆಲಂಕಾರು ಒಕ್ಕೂಟದಲ್ಲಿ ಸಬಳೂರು, ಪುಣಚ ಒಕ್ಕೂಟ, ಸವಣೂರು ವಲಯದಲ್ಲಿ ವೀರಮಂಗಲ ಒಕ್ಕೂಟ, ಕಾಣಿಯೂರು ವಲಯದಲ್ಲಿ ಚಾರ್ವಾಕ ಒಕ್ಕೂಟಕ್ಕೆ ಪ್ರಶಸ್ತಿಯನ್ನು ಶ್ರೀಗಳು ಪ್ರದಾನ ಮಾಡಿದರು. ಮೇಲ್ವಿಚಾರಕಿ ಸುಮಲತಾ ಅವರು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಿರ್ವಹಿಸಿದರು.
ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ದಯಾನಂದ ಕೆ.ಎಸ್, ಗೌಡ ಮಹಿಳಾ ಸಂಘದ ಅಧ್ಯಕ್ಷ ವಾರಿಜ ಕೆ., ಯುವ ಗೌಡ ಸೇವಾ ಸಂಘದ ಅಧ್ಯಕ್ಷ ಅಮರನಾಥ ಗೌಡ ಬಪ್ಪಳಿಗೆ, ಟ್ರಸ್ಟ್‌ನ ಕಾರ್ಯದರ್ಶಿ ದಿವ್ಯಪ್ರಸಾದ್, ಒಕ್ಕಲಿಗ ಗೌಡ ಸೇವಾ ಸಂಘದ ಮಾಜಿ ಅಧ್ಯಕ್ಷ ವಿಶ್ವನಾಥ ಗೌಡ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷರೂ, ಮಾಜಿ ಶಾಸಕರೂ ಆಗಿರುವ ಸಂಜೀವ ಮಠಂದೂರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಒಕ್ಕಲಿಗ ಗೌಡ ಸೇವಾ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ರವಿ ಮುಂಗ್ಲಿಮನೆ ವಂದಿಸಿದರು. ದಶಮಾನೋತ್ಸವ ಕಾರ್ಯಕ್ರಮಕ್ಕೆ ದೇಣಿಗೆ ನೀಡಿದವರನ್ನು ಗೌರವಿಸಲಾಯಿತು. ಇಚ್ಲಂಪಾಡಿ ಸ್ವಸಹಾಯ ಸಂಘದ ಸದಸ್ಯರು ಪ್ರಾರ್ಥಿಸಿದರು. ವಸಂತ ವೀರಮಂಗಲ ಮತ್ತು ಸೀತಾರಾಮ ಕೇವಳ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಆರಂಭದಲ್ಲಿ ಮತ್ತು ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಜಯಪ್ರಕಾಶ್ ಮೋಂಟಡ್ಕ ಮತ್ತು ವಿದುಷಿ ದೀಪ್ತಿ ರವಿಚಂದ್ರ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.
ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ನ ನೂತನ ಸಭಾಭವನ ಉದ್ಘಾಟನೆ
ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿಯ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ನ ಕಚೇರಿಯ ಮೇಲಂತಸ್ತಿನಲ್ಲಿ ದಶಮಾನೋತ್ಸವದ ಅಂಗವಾಗಿ ನಿರ್ಮಾಣಗೊಂಡ ನೂತನ ಸಭಾಭವನವನ್ನು ಶ್ರೀಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿಯವರು ಉದ್ಘಾಟಿಸಿದರು. ಟ್ರಸ್ಟ್‌ನ ಕಚೇರಿಯಲ್ಲಿ ಶ್ರೀದೇವರಿಗೆ ದೀಪ ಪ್ರಜ್ವಲಿಸಿದ ಅವರು ಮೇಲಂತಸ್ತಿನಲ್ಲಿರುವ ನೂತನ ಸಭಾಭವನವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಆರಂಭದಲ್ಲಿ ಶ್ರೀಗಳು ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭ ದಶಮಾನೋತ್ಸವ ಸಮಿತಿ ಕಾರ್ಯದರ್ಶಿ ಹೂವಪ್ಪ ಗೌಡ ದಂಪತಿ ಶ್ರೀಗಳ ಪಾದಕ್ಕೆ ನೀರು ಹಾಕಿ ಶುಭ್ರಗೊಳಿಸಿದರು. ಟ್ರಸ್ಟ್‌ನ ಅಧ್ಯಕ್ಷ ಡಿ.ವಿ.ಮನೋಹರ್ ಗೌಡ ಮತ್ತು ದಶಮಾನೋತ್ಸವ ಸಮಿತಿ ಅಧ್ಯಕ್ಷ ಪಟೇಲ್ ಗೋಪಾಲಕೃಷ್ಣ ಗೌಡ ಚಾರ್ವಾಕರವರು ಶ್ರೀಗಳಿಗೆ ತುಳಸಿ ಮಾಲೆ ಸಮರ್ಪಣೆ ಮಾಡಿದರು.
ದಾಖಲೆಯಿಟ್ಟೇ ಕರಾವಳಿ ಒಕ್ಕಲಿಗರು ಪುಸ್ತಕ ಬರೆದೆ
ಕಳೆದ 35 ವರ್ಷದ ಹಿಂದಿನಿಂದಲೂ ಸಮಾಜವನ್ನು ಕಂಡಿದ್ದೇನೆ. ಆ ಕಾಲಘಟ್ಟದಲ್ಲಿ ಸಮಾಜ ಸಂಘಟನೆ ಹೇಗಿತ್ತು. ಈ ಭಾಗಕ್ಕೆ ಮಠ ಬಂದು 25 ವರ್ಷ ಸಂದಿದೆ. ಇಲ್ಲಿನ ಅನೇಕ ವಿಚಾರಧಾರೆ ಭಿನ್ನವಾಗಿದೆ. ಅನೇಕ ಪಂಗಡ ಇದ್ದರೂ ಒಕ್ಕಲಿಗರು ಎಂದಾಗ ಎಲ್ಲರೂ ಒಂದೆ. ಇದಕ್ಕೆ ಸರಿಯಾದ ನೆಲೆಗಟ್ಟು ವಿಚಾರ ಮಾಡಿ ಮನೋಭಾವನೆ ಅರ್ಥೈಸಿ ಕರಾವಳಿ ಒಕ್ಕಲಿಗರು ಎಂಬ ಪುಸ್ತಕ ಬರೆದೆ. ಇದು ಶಾಶ್ವತ ವಿಚಾರ. ಅನೇಕ ದಾಖಲೆ ಇಟ್ಟುಕೊಂಡು ಪುಸ್ತಕ ಬರೆದಿದ್ದೇನೆ. ಈ ಸಮಾಜದ ನಡಾವಳಿ, ಕಟ್ಟುಪಾಡು ಎನು, ಆಚಾರ, ವಿಚಾರ ಎಲ್ಲ ವಿಚಾರಧಾರೆ ಒಳಗೊಂಡ ಪುಸ್ತಕ ಕರಾವಳಿ ಒಕ್ಕಲಿಗರು. ಇದನ್ನು ಎಲ್ಲರು ಒಮ್ಮೆ ಓದಬೇಕೆಂದು ಧರ್ಮಪಾಲನಾಥ ಸ್ವಾಮೀಜಿ ಮನವಿ ಮಾಡಿದರು.
ಶಾಸಕ ಅಶೋಕ್ ಕುಮಾರ್ ರೈ, ಸಹಿತ ಹಲವು ಗಣ್ಯರ ಆಗಮನ
ಕಾರ್ಯಕ್ರಮಕ್ಕೆ ಶಾಸಕ ಅಶೋಕ್ ಕುಮಾರ್ ರೈ ಅವರು ಆಗಮಿಸಿದ್ದರು. ಅವರನ್ನು ಡಾ.ಶ್ರೀಧರ್ಮಪಾಲನಾಥ ಸ್ವಾಮೀಜಿಯವರು ಶಲ್ಯ ತೊಡಿಸಿ ಗೌರವಿಸಿದರು. ಸ್ವರ್ಣೋದ್ಯಮಿ ಬಲರಾಮ ಅಚಾರ್ಯ, ಸ್ನೇಹ ಟೆಕ್ಸ್ ಟೈಲ್ಸ್‌ನ ಮಾಲಕ ಸತೀಶ್, ಎಸ್.ಆರ್.ಕೆ.ಲ್ಯಾಡರ‍್ಸ್‌ನ ಮಾಲಕ ಕೇಶವ ಅಮೈ, ವಿಶ್ವಕರ್ಮ ಸಮಾಜದ ಶ್ರೀಧರ್ ಆಚಾರ್ಯ, ಬಿಲ್ಲವ ಸಮಾಜದ ಜಯಂತ ನಡುಬೈಲು. ಆರ್.ಸಿ.ನಾರಾಯಣ, ಸುಬ್ರಹ್ಮಣ್ಯ ನಟ್ಟೋಜ, ಬಾಲಕೃಷ್ಣ ಬೋರ್ಕರ್, ಸ್ವಾಮಿ ಮಾಧವ, ವಿವೇಕಾನಂದ ಶಾಲೆಯ ಮುಖ್ಯಗುರು ಸತೀಶ್ ರೈ, ಮಹಾಲಿಂಗೇಶ್ವರ ಐಟಿಐ ಪ್ರಾಂಶುಪಾಲ, ಮರಾಟಿ ಸಂಘದ ಕೋಶಾಧಿಕಾರಿ ಮೋಹನ್ ನಾಯ್ಕ ಎಂ, ಸದಸ್ಯ ಅಶೋಕ್ ಬಲ್ನಾಡು ಸೇರಿದಂತೆ ಹಲವು ಸಮುದಾಯದವರು ಆಗಮಿಸಿದ್ದರು. ಶ್ರೀಗಳು ಗಣ್ಯರಿಗೆ ಆಶೀರ್ವಾದ ಶಲ್ಯ ತೊಡಿಸಿದರು. ಸಂಘದ ಪದಾಧಿಕಾರಿ ಲಿಂಗಪ್ಪ ಗೌಡ ತೆಂಕಿಲ ಗಣ್ಯರನ್ನು ಸ್ವಾಗತಿಸಿದರು.
ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಕಾರ್ಯಕ್ರಮದ ಅಂಗವಾಗಿ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆಯ ಮೊದಲು ಬೆಳಿಗ್ಗೆ ಗಣಪತಿ ಹೋಮ ನಡೆಯಿತು. ಬಳಿಕ ಶ್ರೀಸತ್ಯನಾರಾಯಣ ಪೂಜೆ ನಡೆಯಿತು. ಅರ್ಚಕ ರವಿ ನೆಲ್ಲಿತ್ತಾಯರವರು ಪೂಜಾ ಕಾರ್ಯಕ್ರಮ ನೆರವೇರಿಸಿದರು. ಕಾರ್ಯಕ್ರಮದ ಪ್ರಚಾರ ಸಮಿತಿ ಸಂಚಾಲಕ ಪುರುಷೋತ್ತಮ ಮುಂಗ್ಲಿಮನೆ ದಂಪತಿ ಪೂಜೆಯಲ್ಲಿ ಕುಳಿತಿದ್ದರು. ಈ ಸಂದರ್ಭ ಸಂಘದ ಮಹಿಳಾ ಪದಾಧಿಕಾರಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿಯವರು ಬಂದ ಬಳಿಕ ಪೂಜೆಯ ಪೂರ್ಣಾಹುತಿ ನಡೆಯಿತು.
ಆದಿಚುಂಚನಗಿರಿ ಶ್ರೀಗಳ ಪುತ್ತೂರು ಮತ್ತು ಮಂಗಳೂರಿನ ಕಾರ್ಯಕ್ರಮಗಳ ನೇರ ಪ್ರಸಾರ ವೀಕ್ಷಣೆ
ಬೆಳಗ್ಗಿನಿಂದ ಸಂಜೆಯವರೆಗೆ ನಡೆದ ಕಾರ್ಯಕ್ರಮಗಳು ಸುದ್ದಿ ಲೈವ್ ಚಾನೆಲ್‌ನಲ್ಲಿ ನೇರ ಪ್ರಸಾರಗೊಂಡು ಏಳು ಸಾವಿರಕ್ಕೂ ಮಿಕ್ಕಿ ಮಂದಿ ವೀಕ್ಷಣೆ ಮಾಡಿದರು. ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಬೆಳಿಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ಹಾಗೂ ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ ಸಭಾಂಗಣ ಉದ್ಘಾಟನೆಯ ದೃಶ್ಯಗಳನ್ನು ನೇರ ಪ್ರಸಾರ ಮತ್ತು ಎಲ್‌ಇಡಿ ಸ್ಕ್ರೀನ್ ಮುಖಾಂತರ ವೀಕ್ಷಣೆಗೆ ಲಭಿಸುವಂತೆ ಮಾಡಿರುವುದು ವಿಶೇಷವಾಗಿತ್ತು. ಅಲ್ಲದೇ ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್‌ನ ವಾರ್ಷಿಕ ಚಟುವಟಿಕೆಗಳು, ದಶಮಾನೋತ್ಸವ ವಿವಿಧ ಕಾರ್ಯಕ್ರಮಗಳು, ಮಾದರಿ ದಂಪತಿಗಳ ಸನ್ಮಾನ ಇತ್ಯಾದಿಗಳ -ಟೋ ವಿಡಿಯೋ ದೃಶ್ಯಗಳನ್ನು ಎಲ್‌ಇಡಿ ಪರದೆ ಮುಖಾಂತರ ನೀಡಲಾಯಿತು.
ಜನವರಿ 1 ಮತ್ತು 2 ರಂದು ಆದಿಚುಂಚನಗಿರಿ ಶ್ರೀ ನಿರ್ಮಲಾನಂದ ಮಹಾಸ್ವಾಮೀಜಿಯವರು ಭಾಗವಹಿಸಿದ್ದ ಮಂಗಳೂರು ಶಾಖಾ ಮಠದ ರಜತಮಹೋತ್ಸವ ಹಾಗೂ ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ ಕಾರ್ಯಕ್ರಮಗಳನ್ನು ಸುದ್ದಿ ಲೈವ್ ನೇರ ಪ್ರಸಾರ ಮಾಡಿತ್ತು. ಕಾವೂರು ಕುದುರೆಮುಖ ಕಾಲೋನಿಯಿಂದ ನಡೆದ ಪೂಜ್ಯ ನಿರ್ಮಲಾನಂದ ಶೀಗಳ ಮೆರವಣಿಗೆಯ ನೇರ ಪ್ರಸಾರ ಸಹಿತ ಒಟ್ಟು ಕಾರ್ಯಕ್ರಮಗಳನ್ನು 20 ಸಾವಿರಕ್ಕೂ ಮಿಕ್ಕಿ ಮಂದಿ ನೇರ ಪ್ರಸಾರದಲ್ಲಿ ವೀಕ್ಷಿಸಿದರು.