ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಪತ್ರಕರ್ತ ಪುತ್ತೂರು ಕುರಿಯ ಎಂ.ವಾಸುದೇವ ಹೊಳ್ಳ ಆಯ್ಕೆ

0

ಪುತ್ತೂರು : ಪತ್ರಿಕಾ ರಂಗಕ್ಕೆ ಸಲ್ಲಿಸಿದ ಸೇವೆ ಮತ್ತು ಸಾಧನೆಯನ್ನು ಪರಿಗಣಿಸಿ ಪುತ್ತೂರು ಮೂಲದ ಪತ್ರಕರ್ತರಾದ ಕುರಿಯ ಎಂ.ವಾಸುದೇವ ಹೊಳ್ಳರವರು ಕರ್ನಾಟಕ ಮಾಧ್ಯಮ ಅಕಾಡೆಮಿಯ 2023 ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕುರಿಯ ಗ್ರಾಮದ ಮಾಪಾಲ ಮನೆಯಲ್ಲಿ 1957 ಜುಲೈ 22 ರಂದು ಜನಿಸಿದ ವಾಸುದೇವ ಹೊಳ್ಳರವರು ಕುರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿವರೆಗೆ ವ್ಯಾಸಂಗ ಮಾಡಿ, ಬಳಿಕ ಪುತ್ತೂರಿನ ಸೇಂಟ್ ಫಿಲೋಮಿನಾ ಹೈಸ್ಕೂಲ್ ನಲ್ಲಿ ಹತ್ತನೇ ತರಗತಿ ಪೂರ್ಣಗೊಳಿಸಿದರು.


ಎಳವೆಯಿಂದಲೇ ನಾಟಕದ ನಂಟು ಬೆಳೆಸಿಕೊಂಡಿದ್ದ ವಾಸುದೇವ ಹೊಳ್ಳ ಅವರು ಆ ಸಂದರ್ಭದಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದರು. ಎರಡು ತುಳು ಭಾಷೆ (ಬಯಕಿನ ಜೀವ- ಸಾಂಸಾರಿಕ, ಅಪ್ಪೆಮ್ಮಗಾದ್- ಪತ್ತೆದಾರಿ) ಮತ್ತು ಎರಡು ಕನ್ನಡ ಭಾಷೆಯ (ಅಬಲೆಯ ರೋಧನ- ಸಾಂಸಾರಿಕ, ಗೌರವಾನ್ವಿತರು- ವಿಡಂಬನೆ) ನಾಟಕಗಳನ್ನೂ ಬರೆದಿದ್ದರು. ತುಳು ನಾಟಕಗಳು ದಕ್ಷಿಣ ಕನ್ನ ಜಿಲ್ಲೆಯಲ್ಲಿ ಮತ್ತು ಕನ್ನಡ ನಾಟಕಗಳು ಬೆಂಗಳೂರಿನಲ್ಲಿ ಪ್ರದರ್ಶನಗೊಂಡಿದ್ದವು. 1979 ರಲ್ಲಿ ಉದ್ಯೊಗ ಅರಸುತ್ತಾ ಬೆಂಗಳೂರಿಗೆ ಬಂದ ಅವರು ಅಲ್ಲಿ ಖಾಸಗಿ ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಸೇರಿದರು. ಹೊಟೇಲ್ ಯಜಮಾನರ ವಿಶ್ವಾಸ ಗಳಿಸಿದ ಪರಿಣಾಮ ಬ್ಯಾಂಕ್ ವ್ಯವಹಾರ ಕರಗತ ಮಾಡಿಕೊಂಡರು. ಜತೆಗೆ ಪದವಿಯನ್ನೂ ಪೂರ್ಣಗೊಳಿಸಿದರು. ಮುಂದೆ ಸ್ವಂತ ವ್ಯಾಪಾರ ಮಾಡುವ ನಿಮಿತ್ತ 1984ರಲ್ಲಿ ಕೋಲಾರ ಜಿಲ್ಲೆಗೆ ಹೋಗಿ ಫಲಾಮೃತ ಪ್ಯಾರಡೈಸ್ ಎಂಬ ಐಸ್ ಕ್ರೀಮ್ ಉದ್ಯಮ ಪ್ರಾರಂಭಿಸಿದರು. ಆ ಸಮಯದಲ್ಲಿ ಅವರಿಗ ಹಣಕಾಸಿನ ನೆರವು ಒದಗಿಸಿದವರು ಅವರ ಬಾವ ಹಾಗೂ ಕೆನರಾ ಬ್ಯಾಂಕಿನ ಮ್ಯಾನೇಜರ್ ಆಗಿದ್ದ ನಾರಾಯಣ ಅಂಗಿಂತಾಯ ಮತ್ತು ಅವರ ಪತ್ನಿ ಕರ್ನಾಟಕ ಬ್ಯಾಂಕ್ ಉದ್ಯೊಗಿಯಾಗಿದ್ದ ಮಾಹಲಕ್ಷ್ಮಿ ಅವರು. ಕೋಲಾರದಲ್ಲಿ ಫಲಾಮೃತ ಪ್ಯಾರೆಡೈಸ್ ಮೂಲಕ ಐಸ್ ಕ್ರೀಮ್ ಅನ್ನು ತಾವೇ ತಯಾರಿಸಿ ಮಾರಾಟ ಮಾಡುತ್ತಾ ಯಶಸ್ವಿ ಉದ್ಯಮಿ ಎಂಬ ಹೆಸರು ಪಡೆದರು.

ಈ ಮಧ್ಯೆ ಬಾಡಿ ಬಿಲ್ಡರ್ ಎ.ವಿ. ರವಿ (ಪ್ರಸ್ತುತ ಅವರು ಇನ್ ಕಮ್ ಟ್ಯಾಕ್ಸ್ ಇನ್ಸ್ ಪೆಕ್ಟರ್ ಆಗಿದ್ದಾರೆ. ಅಲ್ಲೆ,ಬೆಂಗಳೂರಿನ ಎರಡು ಬಾಗಗಳಲ್ಲಿ ರವೀಸ್ ಜಿಮ್ ಎನ್ನುವ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಜತೆಗೆ ಚಲನಚಿತ್ರ ನಟ-ನಿರ್ಮಾಪಕರೂ ಹೌದು).

ಎ.ವಿ.ರವಿ ಅವರ ಗೆಳೆತನದಿಂದಾಗಿ ಬಾಡಿ ಬಿಲ್ಡಿಂಗ್ ಕ್ಷೇತ್ರದವರ ಪರಿಚಯವೂ ಆಯಿತು. ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾರತ ಕಿಶೋರ, ಮಿಸ್ಟರ್ ವರ್ಲ್ಡ್ ಪ್ರಶಸ್ತಿಗಳನ್ನು ಗಳಿಸಿದ ಎ.ವಿ.ರವಿ ಅವರು ಬಳಿಕ ಭಾರತ ದೇಹದಾರ್ಢ್ಯ ತಂಡದ ನಾಯಕರಾದಾಗ ವಾಸುದೇವ ಹೊಳ್ಳ ಅವರನ್ನು ಟೀಮ್ ಇಂಡಿಯಾದ ಕೋಚ್ ಆಗಿ ನೇಮಿಸುತ್ತಾರೆ.

1991ರಲ್ಲಿ ಸ್ವಿಟ್ಜರ್ ಲ್ಯಾಂಡ್ ನಲ್ಲಿ ಅಮೇಚೂರ್ ಬಾಡಿ ಬಿಲ್ಡಿಗ್ ಸ್ಪರ್ಧೆಗೆ ಭಾರತದಿಂದ ಹೋಗಿದ್ದ ಎಂಟು ಸ್ಪರ್ಧಾಳುಗಳೊಂದಿಗೆ ವಾಸುದೇವ ಹೊಳ್ಳ ಅವರು ಸ್ವಿಟ್ಜರ್ ಲ್ಯಾಂಡ್ ಗೆ ತೆರಳಿದ್ದರು. ಬಳಿಕ ಪ್ಯಾರಿಸ್, ಲಂಡನ್, ಕರಾಚಿ ಹೀಗೆ ವಿವಿಧೆಡೆ 42 ದಿವಸಗಳ ವಿದೇಶ ಪ್ರಯಾಣ ಮುಗಿಸಿ ಕೋಲಾರಕ್ಕೆ ಹಿಂದಿರುಗುತ್ತಾರೆ.

ಪತ್ರಿಕಾರಂಗಕ್ಕೆ ಪಾದಾರ್ಪಣೆ

ಅದೇ ಸಮಯದಲ್ಲಿ ಮಣಿಪಾಲದ ಉದಯವಾಣಿ ಪತ್ರಿಕೆಯ ಬೆಂಗಳೂರು ಆವೃತ್ತಿ ಪ್ರಾರಂಭವಾಗಿತ್ತು. ವಾಸುದೇವ ಹೊಳ್ಳ ಅವರು ತಮ್ಮ ವಿದೇಶ ಪ್ರಯಾಣದ ಅನುಭವದ ಕುರಿತು ಲೇಖನವನ್ನು ಬರೆದು ಆ ಪತ್ರಿಕೆಗೆ ನೀಡಿದ್ದರು. ಇದನ್ನು ಗಮನಿಸಿದ ಆಗ ಪತ್ರಿಕೆಯ ಸಂಪಾದಕರಾಗಿದ್ದ ಈಶ್ವರ ದೈತೋಟ ಅವರು ವಾಸುದೇವ ಹೊಳ್ಳ ಅವರನ್ನು ಕೋಲಾರ ಜಿಲ್ಲಾ ವರದಿಗಾರ ಹುದ್ದೆಗೆ ಆಹ್ವಾನಿಸಿದ್ದರು. ಅದರಂತೆ ಪತ್ರಿಕಾ ಕ್ಷೇತ್ರದ ನಂಟು ಆರಂಭಿಸಿದ ವಾಸುದೇವ ಹೊಳ್ಳ ಅವರು ಕೋಲಾರ ಜಿಲ್ಲೆಯಲ್ಲಿ ಉದಯವಾಣಿ ವರದಿಗಾರನಾಗಿ ಕೆಲಸ ಆರಂಭಿಸಿದು.

ಕಾಲಕ್ರಮೇಣ ವಿಜಯ ಕರ್ನಾಟಕ ಪತ್ರಿಕೆ ಆರಂಭವಾಗಿ ಈಶ್ವರ ದೈತೋಟ ಅವರು ಅದರ ಸಂಪಾದಕರಾದಾಗ ಅವರೊಂದಿಗೆ ವಿಜಯ ಕರ್ನಾಟಕ ಪತ್ರಿಕೆ ಸೇರಿ ಕೋಲಾರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ್ದರು. ಕೆಲ ಸಮಯ ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಕೋಲಾರ ಪತ್ರಕರ್ತರ ಭವನ ನಿರ್ಮಾಣ
ವರದಿಗಾರನಾಗಿ ಸಮಾಜದ ಆಗುಹೋಗುಗಳನ್ನು ಹತ್ತಿರದಿಂದ ಗಮನಿಸುತ್ತಾ ಜನಪರ ಮತ್ತು ಅಭಿವೃದ್ಧಿಯ ವರದಿಗಾರಿಕೆಗೆ ಹೆಸರುವಾಸಿಯಾದ ಅವರು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕೋಲಾರದಲ್ಲಿ ಭವ್ಯವಾದ ಪತ್ರಿಕಾ ಭವನ ನಿರ್ಮಾಣಗೊಂಡಿತ್ತು. ನಂತರ ಅದು ಇನ್ನಷ್ಟು ಅಭಿವೃದ್ದಿ ಹೊಂದಿದ್ದಲ್ಲದೆ, ಕಳೆದ ಬಾರಿ ದಾಣಗೆರೆಯಲ್ಲಿ ನಡೆದ ಪತ್ರಕರ್ತರ 38 ನೇ ರಾಜ್ಯ ಸಮ್ಮೇಳನದಲ್ಲಿ ರಾಜ್ಯದಲ್ಲೇ ಅತ್ಯುತ್ತಮ ಪತ್ರಕರ್ತರ ಭವನ ಎಂಬ ಪ್ರಶಸ್ತಿ ಪಡೆದಿರುವುದು ಹೊಳ್ಳ ಅವರ ಸಾಧನೆಗೆ ಹಿಡಿದ ಕನ್ನಡಿಯಾಗಿದೆ.

ಪ್ರಸ್ತುತ ಇವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ)ದ ರಾಜ್ಯ ಖಜಾಂಚಿಯಾಗಿಸೇವೆ ಸಲ್ಲಿಸುತ್ತಿದ್ದಾರೆ. ಜತೆಗೆ ಕೋಲಾರ ವಾಣಿ ಪ್ರಾದೇಶಿಕ ಪತ್ರಿಕೆಯಲ್ಲಿ ಹಿರಿಯ ವಿಶೇಷ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

2018ರಲ್ಲಿ ವ್ಯಕ್ತಿ ವಿಕಸನ ಸಂಸ್ಥೆ ಬೆಂಗಳೂರು ಇವರಿಂದ ಜೀವಮಾನ ಸಾಧಕರು ಪ್ರಶಸ್ತಿ ಪಡೆದ ವಾಸುದೇವ ಹೊಳ್ಳ ಅವರು ಪತ್ರಿಕಾ ರಂಗಕ್ಕೆ ಸಲ್ಲಿಸಿದ ಸೇವೆ ಮತ್ತು ಅವರ ಸಾಧನೆ ಪರಿಗಣಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿ 2023ನೇ ಸಾಲಿನ ವಾರ್ಷಿಕ ಪ್ರಶಸ್ತಿ ಘೋಷಿಸಿದೆ.

ಲೇಖನ: ಉಮಾಪ್ರಸಾದ್ ರೈ ನಡುಬೈಲು

LEAVE A REPLY

Please enter your comment!
Please enter your name here