ಸಂಪ್ಯ ದೇವಸ್ಥಾನದಲ್ಲಿ ನಿರಂತರವಾಗಿ ನಡೆಯುವ ವೈದ್ಯಕೀಯ ಶಿಬಿರ ರಾಜ್ಯದಲ್ಲೇ ಪ್ರಥಮ-ಸಂಪ್ಯದ 34ನೇ ಉಚಿತ ವೈದ್ಯಕೀಯ ಶಿಬಿರ ಉದ್ಘಾಟಿಸಿ ಪಂಜಿಗುಡ್ಡೆ ಈಶ್ವರ ಭಟ್

0

ಪುತ್ತೂರು: ರಾಜ್ಯದ ಯಾವ ದೇವಸ್ಥಾನಗಳಲ್ಲಿಯೂ ವೈದ್ಯಕೀಯ ಶಿಬಿರಗಳು ನಡೆಯುತ್ತಿಲ್ಲ. ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಿತಂತರವಾಗಿ ನಡೆಯುವ ವೈದ್ಯಕೀಯ ಶಿಬಿರ ರಾಜ್ಯದಲ್ಲಿಯೇ ಪ್ರಥಮವಾಗಿದೆ. ಉಚಿತ ಶಿಬಿರ ಆಯೋಜಿಸುತ್ತಿರುವುದು ಬಡವರ ಭಾಗ್ಯ ಎಂದು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಹೇಳಿದರು.


ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿದಲ್ಲಿ ಆರೋಗ್ಯ ರಕ್ಷಾ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಜ.4ರಂದು ನಡೆದ 34ನೇ ಉಚಿತ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವೈದ್ಯರಿಗೂ ದೇವರಷ್ಟೇ ಮಹತ್ವವಿದೆ. ದೇವರು ಗುಡಿಯಲ್ಲಿದ್ದರೆ ವೈದ್ಯರು ಹೊರಗಡೆಯಿರುತ್ತಾರೆ. ಯಾವ ಸಂದರ್ಭದಲ್ಲಿ ವೈದ್ಯರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳಬಾರದು. ಇದರಿಂದ ನಾವು ವೈದ್ಯರನ್ನು ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ವೈದ್ಯರೊಂದಿಗೆ ವಿನಯದಿಂದ ನಡೆದುಕೊಳ್ಳಬೇಕು. ಅವರೊಂದಿಗೆ ಸರಿಯಾಗಿ ಸ್ಪಂಧಿಸಬೇಕು ಎಂದ ಅವರು ರೋಗಿಗಳ ಸಮಸ್ಯೆಗಳಿಗೆ ತಕ್ಷಣ ಸ್ಪಂಧಿಸುವ ಡಾ.ಸುರೇಶ್ ಪುತ್ತೂರಾಯರವರು ದೊರೆತಿರುವುದು ನಮ್ಮ ಸೌಭಾಗ್ಯ. ಇವರ ಮುಖಾಂತರ ಮುಂದಿನ ದಿನಗಳಲ್ಲಿ ಜನರಿಗಾಗಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿಯೂ ವೈದ್ಯಕೀಯ ಶಿಬಿರಗಳನ್ನು ನಡೆಸುವ ಬಗ್ಗೆ ಚರ್ಚಿಸಲಾಗಿದೆ ಎಂದರು.


ಸಾರ್ವಜನಿಕ ಕ್ಷೇತ್ರಗಳಲ್ಲಿ ಉತ್ತಮ ಕೆಲಸಗಳಿಗೆ ಟೀಕೆಗಳು ಸಾಮಾನ್ಯ. ಅಭಿವೃದ್ಧಿ ಒಂದೇ ನಮ್ಮ ಗುರಿಯದಾಗ ಇದಕ್ಕೆ ಜನರ ಹಾಗೂ ದೇವರ ಸಹಕಾರವಿರುತ್ತದೆ. ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಹೋಗದಂತೆ ನನಗೆ ಒತ್ತಡಗಳು ಬಂದಿತ್ತು. ಸಹಕಾರಿ ಸಂಘದ ಅಧ್ಯಕ್ಷನಾಗಿ ನಾನು ಯಾವುದೇ ಧರ್ಮ, ಜಾತಿ, ಪಕ್ಷ ನೀಡದೇ ರೈತರಾಗಿ ಸ್ಪಂಧನೆ ನೀಡಿದ್ದೇನೆ. ಅರುಣ್ ಕುಮಾರ್ ಪುತ್ತಿಲ ಭಕ್ತರಾಗಿ ಬಂದಿದ್ದು ಭಕ್ಕನಾಗಿ ನಾನೂ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಶ್ರೀನಿವಾಸ ಕಲ್ಯಾಣೋತ್ಸವದಿಂದ ದೇವಸ್ಥಾನಕ್ಕೆ ಬಾಡಿಗೆ ಬಂದಿದೆ. ಸಂತೆಗಳಿಗೂ ವ್ಯಾಪಾರವಾಗಿದೆ. ಅಲ್ಲಿಗೆ ಬಂದ ಭಕ್ತರು ದೇವಸ್ಥಾನಕ್ಕೆ ಬಂದು ಕಾಣಿಕೆಯೂ ಹಾಕಿದ್ದು ಅಂತಹ ಕಾರ್ಯಕ್ರಮಗಳು ನಡೆದಾಗ ಮಾತ್ರ ದೇವಸ್ಥಾನಗಳ ಅಭಿವೃದ್ಧಿ, ದೇವರ ಆಶೀರ್ವಾದ ನಮಗೆ ದೊರೆಯಲಿದೆ ಎಂದು ಈಶ್ವರ ಭಟ್ ಹೇಳಿದರು.


ಅಧ್ಯಕ್ಷತೆ ವಹಿಸಿದ್ದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಸಾಮಾಜಿಕ, ಧಾರ್ಮಿಕ ಹಾಗೂ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಈಶ್ವರ ಭಟ್‌ರವರು ನಡೆ ಮತ್ತು ನುಡಿಯಲ್ಲಿ ವ್ಯತ್ಯಾಸ ಇಲ್ಲದ ವ್ಯಕ್ತಿಯಾಗಿದ್ದಾರೆ. ಬಡ ರೋಗಿಗಳಿಗೆ ತುರ್ತು ಚಿಕಿತ್ಸೆಗಾಗಿ ಲಕ್ಷಾಂತರ ಹಣವನ್ನು ಅವರೇ ಪಾವತಿಸಿದ ಉದಾಹರಣೆಗಳಿವೆ. ಬಡವರ ಸ್ನೇಹಿ, ರೈತರ ಸ್ನೇಹಿಯಾಗಿದ್ದಾರೆ. ಮಹಾಲಿಂಗೇಶ್ವರ ದೇವಸ್ಥಾನದಲ್ಲಿಯೂ ವೈದ್ಯಕೀಯ ಶಿಬಿರ ನಡೆಸುವ ಯೋಜನೆ ಹಾಕಿಕೊಂಡಿರುವು ಉತ್ತಮವಾಗಿದ್ದು ನಮ್ಮ ವ್ಯವಸ್ಥೆಗೆ ತೊಂದರೆ ಆಗದಂತೆ ಅದರಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದು ಹೇಳಿದರು.


ಹಿರಿಯ ಶುಶ್ರೂಷಕಿ ಪ್ರೇಮಾ, ನವಚೇತನ ಯುವಕ ಮಂಡಲದ ರವಿನಾಥ ಗೌಡ ಬೈಲಾಡಿ, ಆಯುರ್ವೇದ ತಜ್ಞ ಡಾ.ಸಾಯಿಪ್ರಕಾಶ್, ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಸದಸ್ಯರಾದ ಲಕ್ಷ್ಮಣ್ ಬೈಲಾಡಿ, ಪ್ರೇಮಾ, ಶಶಿಕಲಾ ನಿರಂಜನ ರೈ, ಅರ್ಚಕ ಮೋಹನ ರಾವ್, ಉದಯ ಕುಮಾರ್ ಬಳ್ಳಾಲ್, ಜಯರಾಮ ಸಿಂಹವನ ಉಪಸ್ಥಿತರಿದ್ದರು. ಹರಿಣಿ ಪುತ್ತೂರಾಯ ಕಾರ್ಯಕ್ರಮ ನಿರೂಪಿಸಿ, ಉದಯ ಕುಮಾರ್ ರೈ ಎಸ್ ವಂದಿಸಿದರು.


ಅನ್ನದಾನ ಸೇವೆ:
ದಿ.ಶಾಂತಕುಮಾರ್ ನೆಲಪ್ಪಾಲ ಇವರ ಸ್ಮರಣಾರ್ಥ ಅವರ ಸಹೋದರಿ, ಶಿಬಿರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಶುಶ್ರೂಷಕಿ ಪ್ರೇಮರವರು ವೈದ್ಯಕೀಯ ಶಿಬಿರದಲ್ಲಿ ಅನ್ನದಾನ ಸೇವೆ ಸಲ್ಲಿಸಿದರು.


ಶಿಬಿರದಲ್ಲಿ ತಜ್ಞರಿಂದ ಸಾಮಾನ್ಯ ವೈದ್ಯಕೀಯ ತಪಾಸಣೆ, ಆಯುರ್ವೇದ ವೈದ್ಯಕೀಯ ತಪಾಸಣೆ, ಇಸಿಜಿ, ಮಧುಮೇಹ ರಕ್ತಪರೀಕ್ಷೆ ಹಾಗೂ ಔಷಧಿಗಳನ್ನು ಉಚಿತವಾಗಿ ವಿತರಿಸಿದರು. ನೂರಾರು ಮಂದಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು. ನವಚೇತನ ಯುವಕ ಮಂಡಲ ಸಂಪ್ಯ, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮುಕ್ರಂಪಾಡಿ, ಐಕ್ಯ ಕಲಾ ಸೇವಾ ಟ್ರಸ್ಟ್ ಮೊಟ್ಟೆತ್ತಡ್ಕ, ಐಡಿಯಲ್ ಲ್ಯಾಬೊರೇಟರಿ, ಮಹಾವೀರ ಆಸ್ಪತ್ರೆ, ಭಾರತೀಯ ಜನೌಷಧಿ ಕೇಂದ್ರಗಳು, ಉಷಾ ಸ್ಕ್ಯಾನ್ ಸೆಂಟರ್ ದರ್ಬೆ, ಪುತ್ತೂರು ಡಯಾಗ್ನೋಸ್ಟಿಕ್ ಮತ್ತು ರಿಸರ್ಚ್ ಸೆಂಟರ್ ತೆಂಕಿಲ, ಹಲವು ಔಷಧಿ ಕಂಪೆನಿಗಳು ಹಾಗೂ ಭಕ್ತಾದಿಗಳು ಶಿಬಿರದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here