ತಾ.ಪಂನಲ್ಲಿ ವಿಶೇಷ ಚೇತನರಿಗೆ ಸೋಲಾರ್ ಆಧಾರಿತ ಸ್ವ-ಉದ್ಯೋಗ ತರಬೇತಿ ಕಾರ್ಯಾಗಾರ

0

ಪುತ್ತೂರು: ವಿಶೇಷ ಚೇತನರಲ್ಲಿಯೂ ವಿವಿಧ ಪ್ರತಿಭೆಗಳಿರುವವರು ಸಾಕಷ್ಟು ಜನರು ಇದ್ದಾರೆ. ಅವರಿಗೆ ಅವಕಾಶ ದೊರೆಯುತ್ತಿಲ್ಲ. ಸೆಲ್ಕೋ ಸೋಲಾರ್ ಸಂಸ್ಥೆ ವಿಶೇಷ ಚೇತನರಿಗೆ ಸ್ವ ಉದ್ಯೋಗಕ್ಕೆ ತರಬೇತಿ ನೀಡುತ್ತಿದ್ದು ಗ್ರಾಮೀಣ ಭಾಗದಲ್ಲಿರುವ ಪುನರ್ವಸತಿ ಕಾರ್ಯಕರ್ತರು ತಮ್ಮ ವ್ಯಾಪ್ತಿಯಲ್ಲಿರುವ ವಿಶೇಷ ಚೇತನರ ಪಟ್ಟಿ ಮಾಡಿ, ಅವರನ್ನು ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಾಡಬೇಕು ಎಂದು ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಹೇಳಿದರು.


ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘ, ಸೆಲ್ಕೀ ಸೋಲಾರ್ ಬೆಂಗಳೂರು ಇದರ ಪುತ್ತೂರು ಶಾಖೆ ಹಾಗೂ ಪುತ್ತೂರು ಹಾಗೂ ಕಡಬ ತಾಲೂಕುಗಳ ಗ್ರಾಮೀಣ/ನಗರ ಪುನರ್ವಸತಿ ಕಾರ್ಯಕರ್ತರ ಸಹಯೋಗದೊಂದಿಗೆ ಜ.3ರಂದು ತಾ.ಪಂ ಸಭಾಂಗಣದಲ್ಲಿ ನಡೆದ ವಿಶೇಷಚೇತನರಿಗೆ ಸೋಲಾರ್ ಆಧಾರಿತ ಸ್ವ ಉದ್ಯೋಗ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಜೀವಿನಿ ಒಕ್ಕೂಟದ ಮೂಲಕ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಸಹಕಾರ ನೀಡುತ್ತಿದೆ. ಅದರಂತೆ ಪುನರ್ವಸತಿ ಕಾರ್ಯಕರ್ತರು ತಮ್ಮ ಸೇವೆಯ ಜೊತೆಗೆ ಗ್ರಾಮೀಣ ಭಾಗದಲ್ಲಿರುವ ವಿಶೇಷ ಚೇತನರನ್ನು ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಾಡಬೇಕು. ಇದಕ್ಕಾಗಿ ಬಂಡವಾಳದ ಆವಶ್ಯಕತೆಯಿದ್ದು ಪಂಚಾಯತ್‌ನಲ್ಲಿರುವ ಶೇ.5ರ ಅನುದಾನವನ್ನು ಸದುಪಯೋಗಪಡಿಸಿಕೊಳ್ಳಬೇಕು. ಕೋಟ್ಯಾದಿಪತಿಗಳು ಸಾಕಷ್ಟು ಇರಬಹುದು. ಆದರೆ ಸಮಾಜ ಸೇವೆ ಮಾಡುವವರು ಕೆಲವೇ ಮಂದಿಯಿದ್ದು ಸೆಲ್ಕೋ ಸೋಲಾರ್ ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೊಡುಗೆ ನೀಡುತ್ತಿದ್ದು ಇವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.


ಮುಖ್ಯ ಅತಿಥಿ ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷ ನಿವೃತ್ತ ಬ್ಯಾಂಕ್ ಉದ್ಯೋಗಿ ಸುಬ್ಬಪ್ಪ ಪಾಟಾಳಿ ಪಟ್ಟೆ ಮಾತನಾಡಿ, ವಿಶೇಷ ಚೇತನರಲ್ಲಿಯೂ ವಿಶೇಷ ಶಕ್ತಿ ಇದೆ. ಉತ್ತಮ ಕಾರ್ಯಕ್ಕೆ ಬಳಸಿಕೊಳ್ಳಲು ಸೆಲ್ಕೀ ಸೋಲಾರ್ ಮುಂದೆ ಬಂದಿದೆ. ಇದಕ್ಕೆ ವಾಣಿಯನ್ ಕೈಜೊಡಿಸುತ್ತಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು.
ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಆರ್ಥಿಕ ಸಾಕ್ಷರತಾ ಸಲಹೆಗಾರೆ ಗೀತಾ ವಿಜಯ್ ಮಾತನಾಡಿ, ಸ್ವ-ಉದ್ಯೋಗ ಪೂರಕವಾಗಿ ಬ್ಯಾಂಕ್ ಗಳಿಂದ ದೊರೆಯುವ ವಿವಿಧ ಅರ್ಥಿಕ ಸೌಲಭ್ಯ ಗಳ ಮಾಹಿತಿ ನೀಡಿದರು.


ಸೆಲ್ಕೋ ಸೋಲಾರ್ ಸಂಸ್ಥೆಯ ಸ್ವ-ಉದ್ಯೋಗ ವಿಭಾಗದ ವಲಯ ವ್ಯವಸ್ಥಾಪಕ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶೇಷ ಚೇತನರ ಬೇಡಿಕೆಗಳನ್ನು ವಿವಿಧ ಇಲಾಖೆಗಳ ಮುಖಾಂತರ ಪೂರೈಸಲಾಗುತ್ತಿದ್ದು ಸೆಲ್ಕೋ ಸೋಲಾರ್ ಸಂಸ್ಥೆಯು ವಿಶೇಷ ಚೇತನರು ಹಾಗೂ ಇಲಾಖೆಗಳ ಮಧ್ಯೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಸ್ವ-ಉದ್ಯೋಗಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಕಳೆದ ಸಾಲಿನಲ್ಲಿ 60 ಮಂದಿ ವಿಶೇಷ ಚೇತನರಿಗೆ ಸಿಎಸ್‌ಆರ್ ಅನುದಾನ ಹಾಗೂ ದಾನಿಗಳ ನೆರವಿನಿಂದ ಸುಮಾರು ರೂ.60ಲಕ್ಷ ವೆಚ್ಚದಲ್ಲಿ ಶೌರ ಶಕ್ತಿ ಆಧಾರಿತ ಸ್ವ-ಉದ್ಯೋಗ ಸಾಧನಗಳನ್ನು ಒದಗಿಸಲಾಗಿದೆ. ಇದು ಅವರ ಆದಾಯ ವೃದ್ಧಿಯಲ್ಲಿ ಸಹಕಾರಿಯಾಗಿದೆ. ಈ ವರ್ಷ ಇನ್ನಷ್ಟು ಮಂದಿಗೆ ಪ್ರೇರಣೆ ನೀಡುವ ನಿಟ್ಟಿನಲ್ಲಿ 200ರ ಗುರಿಯನ್ನು ಹಾಕಿಕೊಳ್ಳಲಾಗಿದೆ. ಇದಕ್ಕೆ ತಾ.ಪಂ., ಗ್ರಾ.ಪಂಗಳ ಸಹಕಾರ ಅಗತ್ಯ ಎಂದರು.


ವಿಕಲಚೇತನರ ಇಲಾಖೆಯ ನೋಡೆಲ್ ಅಧಿಕಾರಿ ವಾಣಿಶ್ರೀ, ಜಿಲ್ಲಾ ಸಂಯೋಜಕಿ ಸುಪ್ರೀತ, ವಿಕಲಚೇತನರ ಸೇವಾ ಕೇಂದ್ರ ತಾಲೂಕು ಸಂಯೋಜಕ ನವೀನ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸೆಲ್ಕೋ ಸೋಲಾರ್ ಸಂಸ್ಥೆಯ ಪುತ್ತೂರು ಶಾಖಾ ವ್ಯವಸ್ಥಾಪಕ ಸುಧಾಕರ ಆಳ್ವ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಲಯ ವ್ಯವಸ್ಥಾಪಕ ಸಂಜಿತ್ ರೈ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ತರಬೇತಿ ಕಾರ್ಯಾಗಾರ ನಡೆಯಿತು. ೨೦೦ಕ್ಕೂ ಅಧಿಕ ಮಂದಿ ಪುನರ್ವಸತಿ ಕಾರ್ಯಕರ್ತರು ಹಾಗೂ ವಿಶೇಷ ಚೇತನರು ಕಾರ್ಯಾಗಾರದಲ್ಲಿ ಭಾಗವಹಿಸಿ, ಪ್ರಯೋಜನ ಪಡೆದುಕೊಂಡರು.

LEAVE A REPLY

Please enter your comment!
Please enter your name here