ಪುಣಚ: ಪುಣಚ ದೇವಿನಗರ ಶ್ರೀದೇವಿ ವಿದ್ಯಾಕೇಂದ್ರದಲ್ಲಿ ಶಿಶುಮಂದಿರದ ನೂತನ ಕಟ್ಟಡ ಉದ್ಘಾಟನೆ ಹಾಗೂ 2024-25ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಜ.3ರಂದು ಅಹಲ್ಯಾ ಬಾಯಿ ಹೋಳ್ಕರ್ ವೇದಿಕೆಯಲ್ಲಿ ನಡೆಯಿತು.
ಸಭಾ ಕಾರ್ಯಕ್ರಮ: ಶ್ರೀದೇವಿ ಶಿಶುಮಂದಿರದ ನೂತನ ಕಟ್ಟಡ ಉದ್ಘಾಟನೆಯನ್ನು ನೆರವೇರಿಸಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾI ಕೆ.ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡಿ ಬಾಲ್ಯದಿಂದಲೇ ಮಗು ಸಂಸ್ಕಾರಯುತ ಶಿಕ್ಷಣವನ್ನು ಪಡೆಯಬೇಕು. ಬಾಲ್ಯದ ಸಹಜ ಚಟುವಟಿಕೆಗಳ ಜೊತೆ ನಮ್ಮ ಧರ್ಮ ಸಂಸ್ಕೃತಿಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಬೇಕು. ಜೀವನದಲ್ಲಿ ಹಿಂದುತ್ವವನ್ನು ಸಾಧಿಸಿ ಬಾಲ್ಯದಿಂದಲೇ ಉತ್ತಮ ಶಿಕ್ಷಣ ಪಡೆದು ರಾಷ್ಟ್ರೀಯ ಚಿಂತನೆಯನ್ನು ಕಾಣಬೇಕು ಎಂದರು.
ಸಭಾಧ್ಯಕ್ಷತೆ ವಹಿಸಿದ ಮಂಗಳೂರು ನರನ್ಸ್ ಸಮೂಹ ಸಂಸ್ಥೆಗಳ ಮಾಲಕ ರಾಮ್ ಭಟ್ ನಿಡ್ಲೆ ಮಾತನಾಡಿ ಜೀವನದಲ್ಲಿ ಮೌಲ್ಯಗಳನ್ನು ವೃದ್ಧಿ ಮಾಡಬೇಕು ಯಾವುದಾದರೂ ಒಂದು ರೀತಿಯಲ್ಲಿ ಸಹಕಾರಿಯಾಗಿ ಮುಂದುವರಿಸಿಕೊಂಡು ಸಣ್ಣಪುಟ್ಟ ವಿಷಯಗಳಲ್ಲಿ ಕೂಡಾ ನಾವು ಯಶಸ್ಸನ್ನು ಕಾಣಬಹುದು. ಪ್ರಾಮಾಣಿಕೆಯಿಂದ ಜೀವನ ಸಾಧಿಸಿಕೊಂಡು ಹಿರಿಯರಿಗೆ ಗೌರವವನ್ನು ತಂದು ಕೊಡಬೇಕು ಎಂದು ಕಿವಿಮಾತು ನೀಡಿದರು.
ಮುಖ್ಯ ಅತಿಥಿಯಾಗಿ ವಿಟ್ಲ ಗ್ರಾಮೀಣ ಬ್ಯಾಂಕ್’ನ ಅಧ್ಯಕ್ಷ ಜಗನ್ನಾಥ ಸಾಲಿಯಾನ್, ಪುತ್ತೂರು ಮಾಸ್ಟರ್ ಪ್ಲಾನರಿಯ ಅಕ್ಷಯ ಎಸ್.ಕೆ, ಪುತ್ತೂರು ನಗರಸಭಾ ಮಾಜಿ ಉಪಾಧ್ಯಕ್ಷೆ, ವಿವೇಕಾನಂದ ತಾಂತ್ರಿಕ ವಿದ್ಯಾಲಯದ ನಿರ್ದೇಶಕಿ ವಿದ್ಯಾಗೌರಿ ಸಂದೋರ್ಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಗೋಪಾಲ್ ಕೃಷ್ಣ ನಾಯಕ್ ನಟ್ಟಿ, ಆಡಳಿತ ಸಮಿತಿ ಸಂಚಾಲಕ ರವೀಶ್ ಪೊಸವಳಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರತಿಭಾ ಪುರಸ್ಕಾರ:
2023-24 ನೇ ಸಾಲಿನ ಕಲಿಕೆಯಲ್ಲಿ ಹಾಗೂ ಸಾಂಸ್ಕೃತಿಕ ವಿಭಾಗದಲ್ಲಿ ಅತ್ಯುನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕ್ರೀಡಾ ವಿಭಾಗದಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ವರ್ಷಾ ಜೆ.ಶೆಟ್ಟಿ, ಜೀವೇಶ್ ವಿ ಪೂಜಾರಿ, ಪಿ.ಯಶಸ್ವಿ ನಾಯಕ್, ಲಿಖಿತ್ ಎನ್.ರವರನ್ನು ಶಾಲು, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಶಿಕ್ಷಕಿ ಶ್ರೀಲಶ್ರೀ, ಶಿಕ್ಷಕ ರೋಹಿತ್, ದೈಹಿಕ ಶಿಕ್ಷಣ ಶಿಕ್ಷಕ ದಿನೇಶ್ ಸಾಧಕರ ಪಟ್ಟಿ ವಾಚಿಸಿದರು. ಶಾಲಾ ಆವರಣದಲ್ಲಿ ಖೋಖೋ ಅಂಕಣ ನಿರ್ಮಾಣದಲ್ಲಿ ಸಹಕರಿಸಿದ ಹಳೆ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ರಜನಿ ವಾರ್ಷಿಕ ವರದಿ ವಾಚಿಸಿದರು.
ಶಾಲಾ ಆಡಳಿತ ಸಮಿತಿ ಸದಸ್ಯರು ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು. ಅತಿಥಿಗಳಿಗೆ ಸ್ಮರಣಿಕೆ ನೀಡಿ ನೀಡಿ ಗೌರವಿಸಲಾಯಿತು. ಪ್ರೌಢ ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಆಡಳಿತ ಸಮಿತಿ ಅಧ್ಯಕ್ಷ ಜಯಶ್ಯಾಂ ನೀರ್ಕಜೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಲೋಕೇಶ್ ವಂದಿಸಿದರು. ಶಿಕ್ಷಕ ವಿನೋದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ: ಸಾಯಂಕಾಲ ದೀಪ ಪ್ರಜ್ವಲನೆ, ಪ್ರಾರ್ಥನೆ, ಪೂಜಾ ನೃತ್ಯ ನಡೆದು ಶ್ರೀದೇವಿ ಅಂಗನವಾಡಿ, ಶಿಶುಮಂದಿರ ಪುಟಾಣಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಭೋಜನ, ಶ್ರೀ ಮಹಿಷಮರ್ದಿನಿ ಸಿಂಗಾರಿ ಮೇಳದವರಿಂದ ಚೆಂಡೆ ಪ್ರದರ್ಶನ, ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಸಂಭ್ರಮದಿಂದ ನಡೆಯಿತು. ಶಾಲಾ ಆಡಳಿತ ಸಮಿತಿ, ಶಿಕ್ಷಕ ವೃಂದ, ಶಿಕ್ಷಕೇತರ ವೃಂದ, ಹಿರಿಯ ವಿದ್ಯಾರ್ಥಿಗಳು, ಪೋಷಕರು ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.