ಪುತ್ತೂರು: ಕೆದಂಬಾಡಿ ಗ್ರಾಮದ ಕೆದಂಬಾಡಿ ಗುತ್ತು ತರವಾಡಿನ ಮೂಲಸ್ಥಾನ ಧರ್ಮದೈವ ಪಿಲಿಭೂತ ದೈವಸ್ಥಾನ ಪುನರ್ ನಿರ್ಮಾಣಗೊಂಡು ಪ್ರತಿಷ್ಠೆ, ಬ್ರಹ್ಮಕಲಶ ನೇಮೋತ್ಸವವು ಜ.2 ರಿಂದ 5 ರವರೇಗೆ ವಿಜೃಂಭಣೆಯಿಂದ ಜರಗಿತು. ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ಹಾಗೂ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಜ.03 ರಂದು ಬೆಳಿಗ್ಗೆ 9.36 ರ ಕುಂಭ ಲಗ್ನದ ಸುಮುಹೂರ್ತದಲ್ಲಿ ಪ್ರತಿಷ್ಠೆ ನಡೆದು ಬ್ರಹ್ಮಕಲಶಾಭಿಷೇಕ, ಮಹಾಪೂಜೆ ನಡೆಯಿತು.
ಜ.4 ರಂದು ಬೆಳಿಗ್ಗೆ ನಾಗತಂಬಿಲ, ಹರಿಸೇವೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಭಂಡಾರ ತರುವ ಕಾರ್ಯಕ್ರಮ ನಡೆದು ಧರ್ಮದೈವ ಪಿಲಿಭೂತ ಮತ್ತು ರಕ್ತೇಶ್ವರಿ ದೈವದ ಕೋಲಕ್ಕೆ ಎಣ್ಣೆಬೂಳ್ಯ ಕೊಡುವ ಕ್ರಮ ನಡೆಯಿತು. ರಾತ್ರಿ ಗೋಂದೋಳು ಪೂಜೆ ಆರಂಭಗೊಂಡು ಇದೇ ಸಂದರ್ಭದಲ್ಲಿ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಗೋಂದೋಳು ಪೂಜೆಯ ಬಳಿಕ ಧರ್ಮದೈವ ಪಿಲಿಭೂತ ದೈವದ ಕೋಲ, ರಕ್ತೇಶ್ವರಿ ದೈವದ ಕೋಲ ನಡೆದು ಪ್ರಸಾದ ವಿತರಣೆ ನಡೆಯಿತು. ಜ.5 ರಂದು ಬೆಳಿಗ್ಗೆ ಪಂಜುರ್ಲಿ, ಕಲ್ಲುರ್ಟಿ, ಗುಳಿಗ, ಬೊಟ್ಟ ಭೂತದ ಭಂಡಾರ ತರುವ ಕಾರ್ಯಕ್ರಮ ನಡೆಯಿತು. ಪಂಜುರ್ಲಿ ದೈವದ ಕೋಲಕ್ಕೆ ಎಣ್ಣೆಬೂಳ್ಯ ಕೊಡುವ ಕಾರ್ಯಕ್ರಮ ಬಳಿಕ ಪಂಜುರ್ಲಿ ದೈವದ ಕೋಲ ಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ, ಗೋಂದೋಳು ಪೂಜೆಯ ಪ್ರಸಾದ ವಿತರಣೆ ನಡೆಯಿತು. ಸಂಜೆ ಗುಳಿಗ, ಕಲ್ಲುರ್ಟಿ ಹಾಗೂ ಬೊಟ್ಟ ಭೂತದ ಕೋಲಕ್ಕೆ ಎಣ್ಣೆ ಬೂಳ್ಯ ಕೊಡುವ ಕಾರ್ಯಕ್ರಮ ನಡೆಯಿತು ಬಳಿಕ ಗುಳಿಗನ ಕೋಲ ಮತ್ತು ಬೊಟ್ಟ ಭೂತದ ಕೋಲ ನಡೆಯಿತು ಬಳಿಕ ಅನ್ನಸಂತರ್ಪಣೆ ನಡೆದು ಕಲ್ಲುರ್ಟಿ ದೈವದ ಕೋಲ ನಡೆಯಿತು. ಊರಪರವೂರ ನೂರಾರು ಮಂದಿ ಆಗಮಿಸಿ ಶ್ರೀ ದೈವಗಳ ಗಂಧ ಪ್ರಸಾದ, ಅನ್ನಪ್ರಸಾದ ಸ್ವೀಕರಿಸಿದರು. ಕೆದಂಬಾಡಿಗುತ್ತು ಯಜಮಾನ ಶ್ರೀಧರ ರೈ ಹಾಗೂ ಕೆದಂಬಾಡಿಗುತ್ತು ಕುಟುಂಬಸ್ಥರು ಭಕ್ತಾಧಿಗಳನ್ನು ಸ್ವಾಗತಿಸಿ, ಪ್ರಸಾದ ನೀಡಿ ಸತ್ಕರಿಸಿದರು.
3 ಸಾವಿರಕ್ಕೂ ಅಧಿಕ ಮಂದಿಗೆ ಅನ್ನಸಂತರ್ಪಣೆ
ಮೂರು ದಿನಗಳ ಕಾಲ ನಡೆದ ವೈಧಿಕ ಕಾರ್ಯಕ್ರಮ ಹಾಗೂ ದೈವಗಳ ನೇಮೋತ್ಸವವಕ್ಕೆ ಕೆದಂಬಾಡಿಗುತ್ತು ಕುಟುಂಬಸ್ಥರು ಸೇರಿದಂತೆ ಊರ ಪರವೂರ ಸಾವಿರಾರು ಮಂದಿ ಆಗಮಿಸಿ ಶ್ರೀ ದೈವಗಳ ಪ್ರಸಾದ, ಅನ್ನಪ್ರಸಾದ ಸ್ವೀಕರಿಸಿದರು. ಪ್ರತಿದಿನ ಬೆಳಿಗ್ಗೆ, ರಾತ್ರಿ ಉಪಹಾರದ ವ್ಯವಸ್ಥೆ ಹಾಗೇ ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ನಡೆಯಿತು. ಮೂರು ದಿನಗಳಲ್ಲಿ 3 ಸಾವಿರಕ್ಕೂ ಅಧಿಕ ಮಂದಿಗೆ ಅನ್ನಪ್ರಸಾದ ಸ್ವೀಕರಿಸಿದರು.
ಹಲವು ಗಣ್ಯರು ಭಾಗಿ
ವಿಶೇಷವಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ, ಮಾಜಿ ಶಾಸಕರಾದ ಸಂಜೀವ ಮಠಂದೂರು ಸೇರಿದಂತೆ ರಾಜಕೀಯ ಕ್ಷೇತ್ರದ ಹಲವು ಮುಖಂಡರು, ಗಣ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ನೂರಾರು ಮಂದಿ ಗಣ್ಯರು ಬ್ರಹ್ಮಕಲಶೋತ್ಸವ ಹಾಗೆ ನೇಮೋತ್ಸವದಲ್ಲಿ ಪಾಲ್ಗೊಂಡರು.ಕೆದಂಬಾಡಿಗುತ್ತು ತರವಾಡು ಮನೆಯ ಯಜಮಾನ ಹಾಗೂ ಕುಟುಂಬಸ್ಥರು ಗಣ್ಯರನ್ನು ಸ್ವಾಗತಿಸಿ, ಉಪಚರಿಸಿದರು.