ಸಂಜಯನಗರ ಸರಕಾರಿ ಹಿ.ಪ್ರಾ ಶಾಲೆಯಲ್ಲಿ ಕಾನೂನು ಮಾಹಿತಿ ಕಾರ್ಯಾಗಾರ

0

ಪುತ್ತೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಜಯನಗರ ಇಲ್ಲಿ ಪೋಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಾನೂನು ಮಾಹಿತಿ ಕಾರ್ಯಗಾರ ನಡೆಯಿತು.

ಪುತ್ತೂರು ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ ಆಂಜನೇಯ ರೆಡ್ಡಿರವರು ಉದ್ಘಾಟಿಸಿ ಮಾತನಾಡಿ, ಪ್ರಾಥಮಿಕ ಶಿಕ್ಷಣವು ಈ ದೇಶದ ಭದ್ರ ಬುನಾದಿಗೆ ಕಾರಣ. ಬಾಲ್ಯದಿಂದ ಮಕ್ಕಳು ತಮ್ಮ ತಮ್ಮ ಕುಟುಂಬಗಳಲ್ಲಿ ಸಂಸ್ಕಾರವನ್ನು, ಸಂಸ್ಕೃತಿಯನ್ನು ಕಲಿತು ಮುಂದಕ್ಕೆ ಶಿಕ್ಷಣ ಪಡೆಯುವ ಸಂಸ್ಥೆಗಳಲ್ಲಿಯೂ ಸಹಬಾಳ್ವೆ ,ಸಹಕಾರದಿಂದ ಬದುಕಲು ಕಲಿಯಬೇಕಾಗಿದೆ. ಮಕ್ಕಳು ತಮ್ಮ ಹೆತ್ತವರನ್ನು, ಹಿರಿಯರನ್ನು ಗೌರವಿಸುವುದು ಹಾಗೂ  ವಿದ್ಯಾಭ್ಯಾಸವನ್ನು ಬೋಧಿಸುವ ಶಿಕ್ಷಕರಿಗೆ ವಿಧೇಯರಾಗಿ ಬದುಕಲು ಕಲಿಯಬೇಕು ಮತ್ತು ಇಂದಿನ ಮಕ್ಕಳು ಮುಂದಿನ ಜನಾಂಗ ಎಂಬ ನಾಣ್ಣುಡಿಯಂತೆ, ಸತ್ಪ್ರಜೆ ಯಾಗಿ ಬಾಳಲು ವಿದ್ಯೆಯ ಜೊತೆಗೆ ಜೀವನದ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆಯ ಮೂಲಕ ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಮೂಡಿಸಿ ಬಹುಮಾನವನ್ನು ನೀಡಿದರು. 

ಮುಂದುವರೆದು ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಅತಿಯಾದ ಮೊಬೈಲ್ ಬಳಕೆಯಿಂದ ಕಲಿಕೆಯ ಕಡೆಗೆ ಗಮನಕೊಡದೆ  ಬೇರೆ ಬೇರೆ ರೀತಿಯ ತಪ್ಪು ದಾರಿಗಳಲ್ಲಿ, ಸಮಾಜಘಾತುಕ ಶಕ್ತಿಗಳ ಪ್ರೇರಣೆಯಿಂದ ದಾರಿ ತಪ್ಪಿ ಹೋಗುತ್ತಿರುವ ಯುವ ಸಮುದಾಯವನ್ನು ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡಲು ಅನುಕೂಲವಾಗುವ ನೀತಿ ನಿಯಮಗಳಿದ್ದರೂ ಅದನ್ನು ಗಾಳಿಗೆ ತೂರಿ ಅಪರಾಧ ಪ್ರಕ್ರಿಯೆಗಳಲ್ಲಿ ತೊಡಗಿಕೊಳ್ಳುವುದು ವಿಷಾದನೀಯ ಜೊತೆಗೆ  ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾನಿ ಮಾಡಿ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡು ಜೀವನ ಹಾಳು ಮಾಡುತ್ತಿರುವ ವಿದ್ಯಾರ್ಥಿಗಳು ಯುವ ಸಮುದಾಯಕ್ಕೆ ಮಾರಕವಾಗಿ ಪರಿಣಮಿಸಿದೆ ಎಂದು ಅವರು ಹೇಳಿದರು.

ನಗರ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಲಕ್ಷ್ಮಿಯವರು ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದರು. ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು,  ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಭಾರ ಮುಖ್ಯ ಗುರು ಶ್ರೀಮತಿ ಸ್ಮಿತಾ ಶ್ರೀ ಬಿ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ವಂದಿಸಿದರು. ಗೌರವ ಶಿಕ್ಷಕಿ ಸೌಮ್ಯ ಮತ್ತು ಪ್ರೀತಿ ಸಹಕರಿಸಿದರು.

LEAVE A REPLY

Please enter your comment!
Please enter your name here