ಸಸ್ಯಜಾತ್ರೆ 2.0 ಉದ್ಘಾಟನೆ-ಸಭಾ ಕಾರ್ಯಕ್ರಮ

0

ಪುತ್ತೂರು:ಸುದ್ದಿ ಮಾಹಿತಿ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಅರಿವು ಕೃಷಿ ಕೇಂದ್ರದ ಸಾರಥ್ಯದಲ್ಲಿ ನಗರಸಭೆ, ತಾ.ಪಂ.,ಜಿ.ಪಂ.,ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪುತ್ತೂರು ಕಿಲ್ಲೆಮೈದಾನದಲ್ಲಿ ಜ.10ರಿಂದ 12ರವರೆಗೆ ನಡೆಯಲಿರುವ ಸಸ್ಯಜಾತ್ರೆ ಪ್ರದರ್ಶನ, ಮಾರಾಟದ ಉದ್ಘಾಟನಾ ಸಮಾರಂಭ ಪುರಭವನದಲ್ಲಿ ಜ.10ರಂದು ಬೆಳಿಗ್ಗೆ ನಡೆಯಿತು.ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ ಮತ್ತು ಅತಿಥಿಗಳು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.ಬಳಿಕ ಕಲ್ಪವೃಕ್ಷಕ್ಕೆ ನೀರೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.


ಕೃಷಿ ಪ್ರಾಥಮಿಕ ಉದ್ಯೋಗ-ಡಾ.ಆನಂದ್:
ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಽಕಾರಿ ಡಾ.ಆನಂದ್ ಮಾತನಾಡಿ ಕೃಷಿ ಪ್ರಾಥಮಿಕ ಉದ್ಯೋಗ.ಕೃಷಿ ಎಲ್ಲರಿಗೂ ಬೇಕು. ರೈತರು ಕೃಷಿಯನ್ನು ಲಾಭದಾಯಕವಾಗಿ ಮಾಡಬೇಕು.ಮಕ್ಕಳನ್ನು ಹೆಚ್ಚಾಗಿ ಕೃಷಿಯಲ್ಲಿ ತೊಡಗಿಸುವಂತೆ ಮಾಡಬೇಕು.ಇವತ್ತು ಕಾರ್ಪೋರೇಟ್ ವಲಯದ ಆಕರ್ಷಣೆ ಹೆಚ್ಚಾಗಿದೆ.ಐಟಿ,ಬಿಟಿ ಉದ್ಯೋಗಕ್ಕಿಂತ ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆ ಕೊಡಬೇಕು.ಕೃಷಿಗೆ ಎಲ್ಲರೂ ಬರಬೇಕು.ಕೃಷಿಗೆ ಪೂರಕವಾಗಿ ಮಣ್ಣಿನ ಪರೀಕ್ಷೆ ಮಾಡುವ ಮೂಲಕ ಕೃಷಿ ಮಾಡಬೇಕು ಎಂದರು.ಇಂದು ಆಯೋಜನೆ ಮಾಡಿದ ಕಾರ್ಯಕ್ರಮ ವಿನೂತನವಾಗಿದೆ.ಇದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ ಅವರು,ಸಸ್ಯಜಾತ್ರೆ ಕಾರ್ಯಕ್ರಮ ತಾಲೂಕಿಗೆ ಸೀಮಿತವಾಗದೆ ರಾಷ್ಟ್ರಮಟ್ಟದವರೆಗೂ ಬೆಳೆಯಲಿ ಎಂದು ಆಶಿಸಿ ಶುಭಹಾರೈಸಿದರು.


ಭಾರತದಂತಹ ದೇಶದಲ್ಲಿ ಕೃಷಿಗೆ ಆದ್ಯತೆ ಬೇಕು-ಕಿಶೋರ್ ಕುಮಾರ್ ಕೊಡ್ಗಿ:
ಕ್ಯಾಂಪ್ರೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮಾತನಾಡಿ, ಭಾರತದಂತಹ ದೇಶದಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆ ಬೇಕು.ಸುದ್ದಿ ಸಂಸ್ಥೆಯ ಅರಿವು ಕೃಷಿ ಸೇವಾ ಕೇಂದ್ರದ ಮೂಲಕ ಕೃಷಿ ಮಾಹಿತಿ ನೀಡುತ್ತಿದ್ದಾರೆ.ಆಹಾರ ತಯಾರಿಕೆಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.ಇದು ಒಳ್ಳೆಯ ಚಿಂತನೆಯಾಗಿದೆ ಎಂದರು. ಇವತ್ತು ತಾಂತ್ರಿಕತೆ ಬದಲಾವಣೆ ಆಗುತ್ತಿದೆ. ಕೃಷಿಯಲ್ಲಿ ಕೂಡ ತಾಂತ್ರಿಕತೆ ಅಳವಡಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ಅಡಿಕೆ ಹಾನಿಕಾರಕ ಎಂದು ನಮಗೆ ಬುದ್ಧಿ ಹೇಳಲು ಬಂದಿದೆ.ಆದರೆ, ಅಡಿಕೆಯನ್ನು ನಮ್ಮ ಹಿಂದಿನ ಕಾಲದಲ್ಲಿಯೇ ತಿನ್ನಲು ಬಳಸುತ್ತಿದ್ದರು.ಹಾನಿಕಾರಕವಾದ ಹೊಗೆಸೊಪ್ಪು ಬಗ್ಗೆ ಯಾರೂ ಮಾತನಾಡುವುದಿಲ್ಲ.ಈಗಾಗಲೇ ಅಡಿಕೆಯನ್ನು ಸಂಶೋಧನೆ ಮಾಡಲಾಗಿದ್ದು ಅಡಿಕೆ ಹಾನಿಕಾರಕ ಅಲ್ಲ ಎಂದು ವರದಿ ಕೂಡ ಬಂದಿದೆ ಎಂದ ಅವರು, ಈ ವರ್ಷ ಅಡಿಕೆ ಬೆಳೆ ಕಡಿಮೆಯಾಗಿದೆ.ಹೀಗೆ ಬೆಳೆ ಕಡಿಮೆಯಾದರೆ ಅಡಿಕೆಯನ್ನೂ ಆಮದು ಮಾಡಬೇಕಾದ ಪರಿಸ್ಥಿತಿ ಬರಬಹುದು.ಇಂದಿನ ಮಕ್ಕಳು ಯುವಜನಾಂಗ ಮುಂದೆ ಕೃಷಿಯಲ್ಲಿ ತೊಡಗಬೇಕು ಎಂದು ಸಲಹೆ ನೀಡಿ ಶುಭಹಾರೈಸಿದರು.


ಪುತ್ತೂರಿಗೆ ಮಾದರಿ ಕಾರ್ಯಕ್ರಮವಾಗಿದೆ-ಚಿದಾನಂದ ಬೈಲಾಡಿ:
ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಚಿದಾನಂದ ಬೈಲಾಡಿ ಮಾತನಾಡಿ ನಾವು ಆಧುನಿಕತೆಯ ಪರಮಾವಽಯಲ್ಲಿದ್ದೇವೆ.ಆಧುನಿಕತೆಯ ಭರಾಟೆಯಲ್ಲಿ ಕೃಷಿಕಾರ್ಯಗಳು ಕಡಿಮೆಯಾಗುತ್ತಿದೆ.ಇದಕ್ಕೆ ಪೂರಕವಾಗಿ ಸಸ್ಯ ಜಾತ್ರೆ ಹಮ್ಮಿಕೊಂಡದ್ದು ಉತ್ತಮವಾಗಿದೆ.ಪುತ್ತೂರು ಶ್ರೀ ಮಹಾಲಿಂಗೇಶ್ವರನ ಜಾತ್ರೆಯ ಹಾಗೆ ಸಸ್ಯಜಾತ್ರೆ ಕೂಡ ಸೇರಿದೆ ಎಂದರು.ಹಲವು ಆಂದೋಲನ, ಹೋರಾಟ ಮಾಡಿದ ಡಾ.ಯು.ಪಿ.ಶಿವಾನಂದರು 73 ವರ್ಷವಾದರೂ 37ರ ಚಿರಯುವಕನ ಹಾಗೆ ಕಾರ್ಯನಿರ್ವಹಿಸುತ್ತಿದ್ದಾರೆ.ಇವರು ಛಲವಾದಿ, ಹಠವಾದಿಯಾಗಿದ್ದಾರೆ.ಇದೊಂದು ಪುತ್ತೂರಿಗೆ ಮಾದರಿ ಕಾರ್ಯಕ್ರಮವಾಗಿದೆ ಎಂದವರು ಮೆಚ್ಚುಗೆ ವ್ಯಕ್ತಪಡಿಸಿದರು.


ಪ್ರಕೃತಿಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ-ವಂ|ಲಾರೆನ್ಸ್ ಮಸ್ಕರೇನ್ಹಸ್:
ಪುತ್ತೂರು ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್ ಅವರು ಮಾತನಾಡಿ, ಆಧುನಿಕತೆಯಲ್ಲಿ ಮಕ್ಕಳಿಗೆ, ಯುವಜನರಿಗೆ ಪ್ರಕೃತಿಯ ಅರಿವನ್ನು ನೀಡುವ ಕಾರ್ಯಕ್ರಮ ಇದಾಗಿದೆ.ಇಂದು ಜೀವನ ಎಂದರೆ ಹಣ ಗಳಿಸುವುದು, ಹೆಸರು ಮಾಡುವುದು ಮಾತ್ರ ಎಂಬಂತೆ ಆಗಿದೆ.ಜೀವನದ ರೀತಿ ತಪ್ಪಿದೆ.ಮಾನವನಿಗೆ ಪ್ರಕೃತಿಯ ಬಗ್ಗೆ ಅರಿವು ಬೇಕು. ನಾವು ಪ್ರಕೃತಿಯಿಂದ ದೂರ ಹೋದರೆ ನಮಗೆ ನೆಮ್ಮದಿ ಕಡಿಮೆ.ಪ್ರಕೃತಿಗೆ ಹತ್ತಿರವಾದರೆ ನೆಮ್ಮದಿ ಕೂಡ ದೊರೆಯುತ್ತದೆ.ಮನುಷ್ಯನು ಪ್ರಕೃತಿಯನ್ನು ಹಾಳು ಮಾಡಿ ಅಸಮತೋಲನ ಮಾಡುತ್ತಾನೆ.ಆದರೆ ದೇವರು ಪ್ರಕೃತಿಯನ್ನು ಸಮತೋಲನದಲ್ಲಿಡುತ್ತಾನೆ.ದೊಡ್ಡ ಪಟ್ಟಣಗಳಲ್ಲಿ ಉಸಿರಾಡಲು ಶುದ್ಧ ಗಾಳಿಯಿಲ್ಲದೆ ಉಸಿರಾಡಲು ಕಷ್ಟಪಡುತ್ತಾರೆ.ಹಸಿರನ್ನು ಉಸಿರಾಗಿ ಮಾಡಲು ನಮ್ಮೆಲ್ಲರಲ್ಲಿ ಅರಿವು ಮೂಡಬೇಕು ಎಂದು ಹೇಳಿ ಶುಭಹಾರೈಸಿದರು.


ಕೃಷಿಯಲ್ಲಿ ಮನುಷ್ಯನಿಗೆ ನೆಮ್ಮದಿ ಬರುತ್ತದೆ-ವಾಮನ ಪೈ:
ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪಿ.ವಾಮನ ಪೈ ಮಾತನಾಡಿ ಕೃಷಿಯಲ್ಲಿ ನೆಮ್ಮದಿ ಇದೆ.ಕೃಷಿಯಿಂದ ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆ ಇದೆ.ದೇಶದ ಆರ್ಥಿಕತೆಯ ಶೇ.40 ಭಾಗ ಕೃಷಿಯ ಕೊಡುಗೆಯಾಗಿದೆ.ಕೃಷಿ ಭೂಮಿ ಯೋಗ ಇದ್ದರೆ ನಮಗೆ ಕೃಷಿ ಭೂಮಿ ಸಿಗುತ್ತದೆ.ಇಂದು ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಲಾಗಿದೆ.ಕೃಷಿಯಲ್ಲಿ ಎಲ್ಲರೂ ತೊಡಗಿಸಿಕೊಳ್ಳಿ ಎಂದರು.


ಮಕ್ಕಳು, ಯುವಕರು ಕೃಷಿಯಲ್ಲಿ ಆಸಕ್ತಿ ಬೆಳೆಸುವಂತೆ ಮಾಡಬೇಕು-ಡಾ.ಯು.ಪಿ.ಶಿವಾನಂದ:
ಅಧ್ಯಕ್ಷತೆ ವಹಿಸಿದ್ದ ಸುದ್ದಿ ಮಾಹಿತಿ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಅವರು ಮಾತನಾಡಿ ಸಣ್ಣ ಕೃಷಿಯನ್ನು ಮಾಡುವವರನ್ನು ಪ್ರೋತ್ಸಾಹಿಸುವುದೇ ನಮ್ಮ ಉದ್ಧೇಶವಾಗಿದೆ.ತಮ್ಮ ಮನೆಯ ಸುತ್ತ ಒಂದು ಹೂವಿನ ಗಿಡ, ಹಣ್ಣಿನ ಗಿಡಗಳನ್ನು ನೆಡಿ.ಇದರಿಂದ ನಿಮಗೆ ಶುದ್ಧ ಗಾಳಿ ಬರುತ್ತದೆ.ಜೇನು ಕೃಷಿ ಕೂಡ ಮಾಡಿ ಜೇನು ಕೃಷಿಯಿಂದ ಪರಾಗಸ್ಪರ್ಶ ಹೆಚ್ಚಾಗಿ ಕೃಷಿಗೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡುತ್ತದೆ ಎಂದರು.ಇಂದು ಹೆಚ್ಚಿನ ಮನೆಗಳಲ್ಲಿ ಮಕ್ಕಳು, ಯುವಕರು ಬೇರೆ ಕಡೆ ಉದ್ಯೋಗದಲ್ಲಿದ್ದು ಮನೆಯಲ್ಲಿ ಹಿರಿಯರು ಮಾತ್ರ ನೆಲೆಸುವಂತಾಗಿದೆ.ಮಕ್ಕಳಲ್ಲಿ, ಯುವಕರಿಗೆ ಕೃಷಿಯಲ್ಲಿ ಆಸಕ್ತಿ ಬೆಳೆಸುವಂತೆ ಮಾಡಬೇಕು ಎಂದ ಅವರು ಶುದ್ಧ ಗಾಳಿ, ನೀರು ಇಲ್ಲದಿದ್ದರೆ ಅದು ಬದುಕಲ್ಲ.ಸಸ್ಯ ನೆಟ್ಟಾಗ ಆಕ್ಸಿಜನ್ ಸಿಗುತ್ತದೆ.ಆರೋಗ್ಯ ಕೂಡ ಸುಧಾರಿಸುತ್ತದೆ.ಇವತ್ತಿನ ಕಾರ್ಯಕ್ರಮ ಯಶಸ್ಸಾಗಲು ಇಲ್ಲಿ ಸೇರಿರುವ ಮಕ್ಕಳೇ ಕಾರಣ.ಪುತ್ತೂರು ನಮ್ಮ ಹೆಮ್ಮೆಯಾಗಲಿ ಎಂದರು.


ಸಾಧಕ ಎಸ್.ಕೆ.ಆನಂದರಿಗೆ ಸನ್ಮಾನ, ಉತ್ತಮ ಸ್ವಸಹಾಯ ಸಂಘಗಳ ಗುರುತಿಸುವಿಕೆ:
ಉದ್ಘಾಟನಾ ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನ, ಗೌರವಾರ್ಪಣೆ ಹಾಗೂ ಪುತ್ತೂರು ಮತ್ತು ಕಡಬ ತಾಲೂಕಿನ ಉತ್ತಮ ಸ್ವಸಹಾಯ ಸಂಘಗಳ ಗುರುತಿಸುವಿಕೆ ಕಾರ್ಯಕ್ರಮ ನಡೆಯಿತು.


ಸನ್ಮಾನ;
‘ಉದ್ಯೋಗರತ್ನ’, ಪುತ್ತೂರು ನೆಹರುನಗರ ಮಾಸ್ಟರ್ ಪ್ಲಾನರಿಯ ಆಡಳಿತ ನಿರ್ದೇಶಕ ಎಸ್.ಕೆ.ಆನಂದ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.ಎಸ್.ಕೆ.ಆನಂದ ಅವರ ಸಾಧನೆ ಕುರಿತ ಕಿರುಚಿತ್ರವನ್ನು ಈ ವೇಳೆ ಎಲ್‌ಇಡಿ ಪರದೆಯಲ್ಲಿ ಪ್ರದರ್ಶಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್.ಕೆ.ಆನಂದರವರು ಕೆಲಸ ಮಾಡಬೇಕು,ಬದುಕಿನಲ್ಲಿ ಗೆಲ್ಲಬೇಕು ಎಂಬ ಇಚ್ಚೆ ಬೇಕು.ಆ ಇಚ್ಚೆಗೆ ಸರಿಯಾಗಿ ಕಾರ್ಯನಿರ್ವಹಿಸಬೇಕು.ನಾವು ಗೆಲ್ಲಲೆಂದೇ ಹುಟ್ಟಿದ್ದು ಎಂದು ಎಲ್ಲರೂ ತಿಳಿಯಬೇಕು.ಗೆಲ್ಲಲು ಹಲವು ಅವಕಾಶಗಳನ್ನು ದೇವರು ಕೊಟ್ಟಿದ್ದಾನೆ ಎಂದರು. ಸರಕಾರ ನೀಡುವ ರೂ.2 ಸಾವಿರದಲ್ಲಿ ಹತ್ತು ಮಂದಿ ಸೇರಿ ಇಂಡಸ್ಟ್ರೀ ಮಾಡಬಹುದು.ಹಣ ಹೆಸರಿನ ಹಿಂದೆ ಹೋಗಬಾರದು.ನಮ್ಮ ಹಿಂದೆ ಅದು ಬರಬೇಕು.ನಿಷ್ಠೆಯಿಂದ ಕೆಲಸ ಮಾಡಿದರೆ ಹಣ ಮತ್ತು ಹೆಸರು ಬರುತ್ತದೆ.ಬಡವನಾಗಿ ಹುಟ್ಟಿದ್ದು ತಪ್ಪಲ್ಲ.ಆದರೆ ಬಡವನಾಗಿ ಸಾಯುವುದು ತಪ್ಪು ಎಂದು ಹೇಳಿ, ನಾವೆಲ್ಲರೂ ಗೆಲ್ಲಬೇಕು ಎಂದರು.


‘ಸಹಕಾರ ರತ್ನ’ಗಳಿಗೆ ಗೌರವಾರ್ಪಣೆ:
‘ಸಹಕಾರ ರತ್ನ’ ಪ್ರಶಸ್ತಿ ಪುರಸ್ಕೃತರಾಗಿರುವ ನಿತ್ಯಾನಂದ ಮುಂಡೋಡಿ, ದಂಬೆಕ್ಕಾನ ಸದಾಶಿವ ರೈ ಹಾಗೂ ಅಗರಿ ನವೀನ್ ಭಂಡಾರಿಯವರಿಗೆ ಇದೇ ಸಂದರ್ಭ ಗೌರವಾರ್ಪಣೆ ಮಾಡಲಾಯಿತು.ಸುದ್ದಿ ನ್ಯೂಸ್ ಚಾನೆಲ್‌ನ ಹರಿಪ್ರಸಾದ್ ನೆಲ್ಯಾಡಿ ಸನ್ಮಾನಿತರನ್ನು ಪರಿಚಯಿಸಿದರು.ಸನ್ಮಾನ ಸ್ವೀಕರಿಸಿದ ದಂಬೆಕ್ಕಾನ ಸದಾಶಿವ ರೈ ಅವರು ಮಾತನಾಡಿ, ನಾವು ಸದಾ ಸುದ್ದಿಯ ಜೊತೆಗೆ ಇದ್ದೇವೆ.ಡಾ.ಯು.ಪಿ.ಶಿವಾನಂದ ಅವರ ಯೋಜನೆ, ಯೋಚನೆಗಳಿಗೆ ಶ್ರೀ ಮಹಾಲಿಂಗೇಶ್ವರ ದೇವರ ಆಶೀರ್ವಾದ ಇರಲಿ ಎಂದರು.ಇನ್ನೋರ್ವ ಸನ್ಮಾನಿತರಾದ ನಿತ್ಯಾನಂದ ಮುಂಡೋಡಿ ಅವರು ಮಾತನಾಡಿ, ಹೊಸ ಕಲ್ಪನೆಯೊಂದಿಗೆ ಮೂಡಿಬಂದಿರುವ ಸಸ್ಯಜಾತ್ರೆಯಿಂದ ಯುವ ಜನಾಂಗಕ್ಕೆ, ಮುಂದಿನ ಪೀಳಿಗೆಗೆ ಪ್ರಯೋಜನಕಾರಿಯಾಗಲಿ ಎಂದರು.ಅಗರಿ ನವೀನ್ ಭಂಡಾರಿ ಅವರು ಮಾತನಾಡಿ, ಹುಟ್ಟುಹಬ್ಬದ ನೆನಪಿಗಾಗಿ ಪ್ರತಿ ಮನೆಯಲ್ಲೂ ಗಿಡ ನೆಡಬೇಕೆಂಬ ಕಲ್ಪನೆ ಡಾ.ಯು.ಪಿ.ಶಿವಾನಂದ ಅವರದ್ದು.ಇದನ್ನು ನಾವೆಲ್ಲರೂ ಸಾಕಾರಗೊಳಿಸುವ ಮೂಲಕ ಸಸ್ಯ ಜಾತ್ರೆ ಯಶಸ್ವಿಗೊಳಿಸಬೇಕೆಂದು ಹೇಳಿದರು.


ಎಫ್ ಪಿಒಗಳಿಗೆ ಗೌರವಾರ್ಪಣೆ:
ಎಫ್ ಪಿಒಗಳಾದ ಪುತ್ತೂರಿನ ಗ್ರಾಮಜನ್ಯ ರೈತ ಉತ್ಪಾದಕ ಕಂಪೆನಿಯ ಮೂಲಚಂದ್ರ, ಕಾಣಿಯೂರು-ಸವಣೂರು ರೈತ ಉತ್ಪಾದಕರ ಕಂಪೆನಿಯ ಗಿರಿಶಂಕರ ಸುಲಾಯ, ದಕ್ಷಿಣ ಕನ್ನಡ ತೆಂಗು ಬೆಳೆಗಾರರ ಕಂಪೆನಿಯ ಕುಸುಮಾಧರ, ಪಂಜ ಪರಿವಾರ ರೈತ ಉತ್ಪಾದಕ ಕಂಪನಿಯ ತೀರ್ಥಾನಂದ, ವಿಟ್ಲ ನೆಲ್ಲಿಗುಡ್ಡೆ ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿಯ ರಾಮ್‌ಕಿಶೋರ್, ಕಡಬ ರೈತ ಉತ್ಪಾದಕರ ಕಂಪೆನಿಯ ವೆಂಕಟ್ರಾಜ್, ಸುಳ್ಯ ರೈತ ಉತ್ಪಾದಕ ಸಂಸ್ಥೆಯ ವೀರಪ್ಪ ಗೌಡ ಹಾಗೂ ಬಿ.ಸಿ.ರೋಡ್‌ನ ಬೊಳ್ಪು ರೈತ ಉತ್ಪಾದಕರ ಕಂಪೆನಿಯ ರಾಜ ಬಂಟ್ವಾಳ ಇವರಿಗೆ ಗೌರವಾರ್ಪಣೆ ಮಾಡಲಾಯಿತು.ಬೆಳ್ತಂಗಡಿ ಸುದ್ದಿ ನ್ಯೂಸ್ ಚಾನೆಲ್ ಮುಖ್ಯಸ್ಥ ದಾಮೋದರ ದುಂಡೋಲೆ ಸನ್ಮಾನಿತರನ್ನು ಪರಿಚಯಿಸಿದರು.‌


ಉತ್ತಮ ಸ್ವಸಹಾಯ ಸಂಘಗಳ ಗುರುತಿಸುವಿಕೆ:
ಸಮಾರಂಭದಲ್ಲಿ ಪುತ್ತೂರು ಹಾಗೂ ಕಡಬ ತಾಲೂಕಿನ ಉತ್ತಮ ಸ್ವಸಹಾಯ ಸಂಘಗಳನ್ನು ಗುರುತಿಸಲಾಯಿತು.ಜ್ಯೋತಿಶ್ರೀ ಸೀಶಕ್ತಿ ಸ್ವಸಹಾಯ ಸಂಘ ಬಲ್ನಾಡು(ಟೈಲರಿಂಗ್, ಕೋಳಿ ಸಾಕಾಣಿಕೆ, ಹೋಟೆಲ್, ಹೈನುಗಾರಿಕೆ, ಕೃಷಿ,ಮಲ್ಲಿಗೆ ಕೃಷಿ, ತರಕಾರಿ),ಶ್ರೀದುರ್ಗಾ ಸಿಶಕ್ತಿ ಸ್ವಸಹಾಯ ಸಂಘ ಕಟ್ಟತ್ತಾರು ಕೆಯ್ಯೂರು(ಕೋಳಿಫಾರಂ,ಕೃಷಿ, ತರಕಾರಿ, ಬೇಕರಿ ಉತ್ಪನ್ನ), ಶಾಂತಿ ಸ್ವಸಹಾಯ ಸಂಘ ಬನ್ನೂರು(ಆಡು ಸಾಕಾಣಿಕೆ, ಟೈಲರಿಂಗ್, ಕೋಳಿ ಸಾಕಾಣಿಕೆ, ಹೋಟೆಲ್, ಹೈನುಗಾರಿಕೆ, ಕೃಷಿ),ಅವನಿ ಸಂಜೀವಿನಿ ಸ್ವಸಹಾಯ ಸಂಘ ಆರ್ಯಾಪು(ಮಲ್ಲಿಗೆ ಕೃಷಿ, ಹೈನುಗಾರಿಕೆ, ಗೃಹ ಉತ್ಪನ್ನಗಳು, ಫಾಸ್ಟ್ ಪುಡ್, ಬಾಳೆಕೃಷಿ, ಗೂಡುದೀಪ, ಅಲಂಕಾರಿಕ ವಸ್ತುಗಳು),ವಿಜಯಶ್ರೀ ಸೀ ಶಕ್ತಿ ಸ್ವಸಹಾಯ ಸಂಘ ಕೋಡಿಂಬಾಡಿ(ಆಡು ಸಾಕಾಣಿಕೆ, ಟೈಲರಿಂಗ್, ಕೋಳಿ ಸಾಕಾಣಿಕೆ, ಬೇಕರಿ ಉತ್ಪನ್ನ, ಐಸ್‌ಕ್ರೀಂ, ಕೇಕ್, ತರಕಾರಿ, ಊರಿನ ದನದ ಹಾಲು, ಮಜ್ಜಿಗೆ ಪ್ಯಾಕೆಟ್ ಮಾಡುವುದು, ವಿವಿಧ ಬಗೆಯ ಜ್ಯೂಸ್, ಹೈನುಗಾರಿಕೆ, ಕೃಷಿ, ಫಿನಾಯಿಲ್, ಸೋಪ್), ಕಡಬ ತಾಲೂಕಿನ ಉತ್ತಮ ಸ್ವಸಹಾಯ ಸಂಘಗಳಾದ ಜ್ಯೋತಿ ಸ್ವಸಹಾಯ ಸಂಘ ಕೌಕ್ರಾಡಿ(ಹೈನುಗಾರಿಕೆ, ಕೋಳಿ ಸಾಕಾಣಿಕೆ, ವ್ಯಾಪಾರ, ಕ್ಯಾಂಟೀನ್, ಆಟೋರಿಕ್ಷಾ, ದನದ ತುಪ್ಪ, ಫಿನಾಯಿಲ್, ಸೋಪ್ ವಾಟರ್, ಬೇಕರಿ ಉತ್ಪನ್ನ, ಟೈಲರಿಂಗ್, ಸಿಎಸ್‌ಸಿ ಸೆಂಟರ್), ಕ್ಷೇಮ ಸಿಶಕ್ತಿ ಸ್ವಸಹಾಯ ಸಂಘ ಕೊಯಿಲ(ಹೈನುಗಾರಿಕೆ, ನಾಟಿಕೋಳಿ ಸಾಕಾಣಿಕೆ, ವ್ಯಾಪಾರ, ಆಡು ಸಾಕಾಣಿಕೆ, ಟೈಲರಿಂಗ್, ಕೃಷಿ, ತರಕಾರಿ),ಧನಲಕ್ಷ್ಮೀ ಸಂಜೀವಿನಿ ಸ್ವಸಹಾಯ ಸಂಘ ಸವಣೂರು(ನ್ಯೂಟ್ರಿಷನ್ ಆಹಾರ, ವ್ಯಾಪಾರ, ಕೋಳಿ ಸಾಕಾಣಿಕೆ, ಹೈನುಗಾರಿಕೆ, ಕೃಷಿ, ಡ್ರೈವಿಂಗ್ ತರಬೇತಿ ಕೇಂದ್ರ, ಆಡು ಸಾಕಾಣಿಕೆ), ಧನಲಕ್ಷ್ಮೀ ಸಂಜೀವಿನಿ ಸ್ವಸಹಾಯ ಸಂಘ ಕಾಣಿಯೂರು (ದೀಪದ ಬತ್ತಿ, ಕೃಷಿ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಟೈಲರಿಂಗ್ ಶಾಪ್, ತರಕಾರಿ ಕೃಷಿ), ದಿವ್ಯಜ್ಯೋತಿ ಸೀಶಕ್ತಿ ಸ್ವಸಹಾಯ ಸಂಘ ಬಿಳಿನೆಲೆ (ಕೃಷಿ, ಹೈನುಗಾರಿಕೆ, ಹೋಟೆಲ್, ಬೇಕರಿ ಉತ್ಪನ್ನ, ದಿನಸಿ ಅಂಗಡಿ), ಶ್ರೀಲಕ್ಷ್ಮೀ ಸಿಶಕ್ತಿ ಸ್ವಸಹಾಯ ಸಂಘ ಕುಲ್ಕುಂದ ಸುಬ್ರಹ್ಮಣ್ಯ( ವ್ಯಾಪಾರ, ವೈನ್ ತಯಾರಿಕೆ) ಇವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.


ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಮೆರವಣಿಗೆಗೆ ಸಾಥ್ ನೀಡಿದ ಸಂತ ವಿಕ್ಟರ‍್ಸ್ ಬಾಲಿಕಾ ಪ್ರೌಢಶಾಲೆ, ದರ್ಬೆ ಲಿಟ್ಲ್ ಫ್ಲವರ್ ಹಿ.ಪ್ರಾ.ಶಾಲೆ, ಅಂಬಿಕಾ ಪದವಿ ಪೂರ್ವ ಕಾಲೇಜು, ಸಂಪ್ಯ ಅಕ್ಷಯ ಕಾಲೇಜು, ಕೊಂಬೆಟ್ಟು ಶ್ರೀ ರಾಮಕೃಷ್ಣ ಪ್ರೌಢಶಾಲೆ ಹಾಗೂ ಪ್ರಗತಿ ಸ್ಟಡಿ ಸೆಂಟರ್‌ನ ಮುಖ್ಯಸ್ಥರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರ ಹರಿಪ್ರಸಾದ್ ನೆಲ್ಯಾಡಿ ಸನ್ಮಾನಿತರ ಪತ್ರ ವಾಚಿಸಿದರು.ದರ್ಬೆ ಲಿಟ್ಲ್ ಫ್ಲವರ್ ಶಾಲಾ ವಿದ್ಯಾರ್ಥಿಗಳು ಆಶಯ ಗೀತೆ ಹಾಡಿದರು.ಬೆಳ್ತಂಗಡಿ ಸುದ್ದಿ ಬಿಡುಗಡೆ ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ ಸ್ವಾಗತಿಸಿ, ಪುತ್ತೂರು ಸುದ್ದಿ ಚಾನೆಲ್ ಲೈವ್ ನಿರೂಪಕರುಗಳಾದ ಉಮೇಶ್ ಮಿತ್ತಡ್ಕ ಹಾಗೂ ದಾಮೋದರ್ ದೊಂಡೋಲೆ ಕಾರ್ಯಕ್ರಮ ನಿರೂಪಿಸಿದರು.

ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಭೋಜನ
ಆಗಮಿಸಿದ ಎಲ್ಲರಿಗೂ ಬೆಳಿಗ್ಗೆ, ಸಂಜೆ ಉಪಾಹಾರ, ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.ಬೆಳಿಗ್ಗಿನ ಉಪಾಹಾರದಲ್ಲಿ ಸಜ್ಜಿಗೆ, ಅವಲಕ್ಕಿ, ಕಷಾಯ, ಮಧ್ಯಾಹ್ನ ಭೋಜನದಲ್ಲಿ ಗಂಜಿ, ಗುಜ್ಜೆ ಕಡ್ಲೆ ಪಲ್ಯ, ಚಟ್ನಿ, ಪಲ್ಯ ಸಂಜೆ ಚಹಾ,………. ನೀಡಲಾಯಿತು.ನೂರಾರು ಮಂದಿ ಉಪಹಾರ, ಭೋಜನ ಸೇವಿಸಿದರು.

LEAVE A REPLY

Please enter your comment!
Please enter your name here