ಡೊನ್ ಬೊಸ್ಕೊ ಕ್ಲಬ್‌ನಿಂದ ಪುತ್ತೂರು/ಮರೀಲು/ಬನ್ನೂರು ಚರ್ಚ್ ವ್ಯಾಪ್ತಿಯ ‘ಸಿಪಿಎಲ್ ಸೀಸನ್-4’ ಸಂಭ್ರಮದ ತೆರೆ

0

ಫ್ಲೈಝೋನ್ ಅಟ್ಯಾಕರ‍್ಸ್ ಚಾಂಪಿಯನ್, ಕ್ರಿಶಲ್ ವಾರಿಯರ‍್ಸ್ ರನ್ನರ‍್ಸ್

ಪುತ್ತೂರು: ಮಾಯಿದೆ ದೇವುಸ್ ಚರ್ಚ್‌ನ ಡೊನ್ ಬೊಸ್ಕೊ ಕ್ಲಬ್ ಸಂಘಟನೆಯ ವತಿಯಿಂದ ಪುತ್ತೂರು ಮಾಯಿದೆ ದೇವುಸ್ ಚರ್ಚ್, ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್ ಹಾಗೂ ಬನ್ನೂರು ಸಂತ ಅಂತೋನಿ ಚರ್ಚ್ ವ್ಯಾಪ್ತಿಯ ಕ್ರಿಶ್ಚಿಯನ್ ಸಮುದಾಯದ ಕ್ರಿಕೆಟ್ ಆಟಗಾರರನ್ನೊಳಗೊಂಡ ‘ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್) 2025-ಸೀಸನ್ 4’ ಜ.12 ರಂದು ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ಜರಗಿದ್ದು, ಕ್ರಿಕೆಟ್ ಪಂದ್ಯಾಟವು ಇದೀಗ ಸಂಭ್ರಮದ ತೆರೆ ಕಂಡಿತು.


ಪ್ರದೀಪ್ ವೇಗಸ್(ಬಾಬಾ) ಮಾಲಕತ್ವದ ಫ್ಲೈಝೋನ್ ಅಟ್ಯಾಕರ‍್ಸ್ ತಂಡವು ಸಿಪಿಎಲ್ 2025, ಸೀಸನ್ 4ರ ಚಾಂಪಿಯನ್ ಆಗಿ ಹೊರ ಹೊಮ್ಮಿದೆ ಮಾತ್ರವಲ್ಲ ಫ್ಲೈಝೋನ್ ಅಟ್ಯಾಕರ‍್ಸ್ ತಂಡವು ಸಿಪಿಎಲ್ ಸೀಸನ್‌ನಲ್ಲಿ ಪ್ರಥಮ ಬಾರಿಗೆ ಕಪ್ ಜಯಿಸಿರುವುದಾಗಿದೆ. ಕಿರಣ್ ಡಿ’ಸೋಜ ಬನ್ನೂರು ಹಾಗೂ ಮೆಲ್ವಿನ್ ಪಾಸ್ ನೂಜಿ ಮಾಲಕತ್ವದ ಕ್ರಿಶಲ್ ವಾರಿಯರ‍್ಸ್ ತಂಡವು ರನ್ನರ್ಸ್ ಪ್ರಶಸ್ತಿಯನ್ನು ಪಡೆಯಿತು. ಇದೇ ಕ್ರಿಶಲ್ ವಾರಿಯರ‍್ಸ್ ತಂಡವು ಕಳೆದ ಬಾರಿಯೂ ರನ್ನರ್ಸ್ ಪ್ರಶಸ್ತಿಯನ್ನು ಪಡೆದಿತ್ತು. ಸಿಪಿಲ್ ಪ್ರಥಮ ಆವೃತ್ತಿಯಲ್ಲಿ ಸಿಝ್ಲರ್ ಸ್ಟ್ರೈಕರ‍್ಸ್, ದ್ವಿತೀಯ ಹಾಗೂ ತೃತೀಯ ಆವೃತ್ತಿಯಲ್ಲಿ ಲೂವಿಸ್ ಕ್ರಿಕೆಟರ‍್ಸ್ ತಂಡಗಳು ಚಾಂಪಿಯನ್ ಆಗಿ ಹೊರ ಹೊಮ್ಮಿದ್ದವು. ಪ್ರಸ್ತುತ ಸೀಸನ್‌ನ ವಿಜೇತ ಫ್ಲೈಝೋನ್ ಅಟ್ಯಾಕರ‍್ಸ್ ತಂಡವು ಸಿಪಿಎಲ್ ಟ್ರೋಫಿ ಹಾಗೂ ನಗದು ಬಹುಮಾನ ರೂ.25 ಸಾವಿರ ಮತ್ತು ರನ್ನರ್ಸ್ ಪ್ರಶಸ್ತಿ ವಿಜೇತ ಕ್ರಿಶಲ್ ವಾರಿಯರ‍್ಸ್ ತಂಡವು ಸಿಪಿಎಲ್ ಟ್ರೋಫಿ ಹಾಗೂ ರೂ.20 ಸಾವಿರ ಬಹುಮಾನವನ್ನು ಗಳಿಸಿಕೊಂಡರು.


ಫೀನಿಕ್ಸ್‌ನಂತೆ ಎದ್ದು ಗೆದ್ದ ಫ್ಲೈಝೋನ್ ತಂಡ:
ಸಂಜೆ ಬಲಿಷ್ಟ ಎರಡು ತಂಡಗಳಾದ ಕ್ರಿಶಲ್ ವಾರಿಯರ‍್ಸ್ ಹಾಗೂ ಫ್ಲೈಝೋನ್ ಅಟ್ಯಾಕರ‍್ಸ್ ತಂಡಗಳ ನಡುವಣ ನಡೆದ ಫೈನಲ್ ಹಣಾಹಣಿಯು ಬಹಳ ರೋಚಕತೆಯನ್ನು ಕಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಕ್ರಿಶಲ್ ವಾರಿಯರ‍್ಸ್ ತಂಡವು ತಂಡದ ಆರಂಭಿಕ ಆಟಗಾರರಾದ ನಾಯಕ ಜೋನ್ಸನ್ ಫಿಕ್ಸ್ 8 ಎಸೆತದಲ್ಲಿ 8 ರನ್, ಮೇಗಸ್ ಮಸ್ಕರೇನ್ಹಸ್ 14 ಎಸೆತದಲ್ಲಿ 29 ರನ್(62,43), ಗ್ಲ್ಯಾನಿ 2 ಎಸೆತದಿಂದ 6ರನ್(61) ನೆರವಿನಿಂದ ನಾಲ್ಕು ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 51 ರನ್‌ಗಳನ್ನು ಗಳಿಸಿತ್ತು. ಈ ಮಧ್ಯೆ ರನ್ ಹೆಚ್ಚಿಸುವ ಭರದಲ್ಲಿ ಮನು, ಮ್ಯಾಕ್ಲೀನ್, ರೋಹಿತ್‌ರವರು ಶೂನ್ಯ ಗಳಿಕೆಯೊಂದಿಗೆ ವಾಪಸ್ಸಾದರು. ಫ್ಲೈಝೋನ್ ಅಟ್ಯಾಕರ‍್ಸ್ ಪರ ಪ್ರಣೀಲ್ ಮಸ್ಕರೇನ್ಹಸ್(1-7-4)ರವರು ವಿಕೆಟ್ ಪಡೆದು ಮಿಂಚಿದರು. ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಫ್ಲೈಝೋನ್ ಅಟ್ಯಾಕರ‍್ಸ್ ತಂಡವು ಸೆಮಿಫೈನಲ್‌ನಲ್ಲಿ ಅರ್ಧಶತಕದೊಂದಿಗೆ ಅಬ್ಬರಿಸಿದ್ದ ಆರಂಭಿಕ ರಾಯನ್ ಡಾಯಸ್ 3 ಎಸೆತದಲ್ಲಿ 5 ರನ್, ಯುವ ದಾಂಡಿಗ ಶರನ್ ಡಿ’ಸಿಲ್ವರವರು 11 ಎಸೆತದಲ್ಲಿ 28 ರನ್(4 ಸಿಕ್ಸ್), ಲ್ಯಾರನ್ ಲೂವಿಸ್ 4 ಎಸೆತದಲ್ಲಿ 12 ರನ್(ತಲಾ ಒಂದು ಸಿಕ್ಸ್, ಬೌಂಡರಿ), ಪ್ರೀತಮ್ ಮಸ್ಕರೇನ್ಹಸ್ 2 ಎಸೆತದಲ್ಲಿ ಒಂದು ಸಿಕ್ಸರ್ ಹೊಡೆದು, ಹೀಗೆ ಫೀನಿಕ್ಸ್‌ನಂತೆ ಎದ್ದು ನಿಂತು ವಿಜಯಿ ರನ್‌ಗಳನ್ನು ಬಾರಿಸಿ ವಿಜಯದ ಕೇಕೆ ಬೀರಿತ್ತು. ಸೆಮಿ-ರಾಯನ್ ಅರ್ಧಶತಕ ಭಾರಿಸಿದರು.

ಅಂಕಪಟ್ಟಿಯಲ್ಲಿ ಸಮಾನ ಅಂಕಗಳನ್ನು ಗಳಿಸಿದ್ದ ಫ್ಲೈಝೋನ್ ಅಟ್ಯಾಕರ‍್ಸ್ ಹಾಗೂ ಸೋಜಾ ಸೂಪರ್ ಕಿಂಗ್ಸ್ ನಡುವಣ ನಡೆದ ಸೆಮಿಫೈನಲ್ ಹೋರಾಟದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಫ್ಲೈಝೋನ್ ಅಟ್ಯಾಕರ‍್ಸ್ ತಂಡವು ತಂಡದ ಆರಂಭಿಕ ರಾಯನ್ ಡಾಯಸ್‌ರವರ ಅರ್ಧಶತಕ(58 ರನ್, 7 ಸಿಕ್ಸರ್)ರವರ ಹೊಡಿಬಡಿ ಬ್ಯಾಟಿಂಗ್‌ನಿಂದ ಐದು ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 76 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತ್ತು. ಎದುರಾಳಿ ಸೋಜಾ ಸೂಪರ್ ಕಿಂಗ್ಸ್ ಪರ ಡ್ಯಾನಿಯಲ್ ಸುವಾರಿಸ್ 2 ವಿಕೆಟ್, ನಿತೀಶ್ 1 ವಿಕೆಟ್ ಪಡೆದಿದ್ದರು. ಬಳಿಕ ಬ್ಯಾಟಿಂಗ್ ಆರಂಭಿಸಿದ ಸೋಜಾ ಸೂಪರ್ ಕಿಂಗ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಕ್ಲೇವನ್ ಡಿ’ಸಿಲ್ವರವರ 15 ಎಸೆತಗಳಲ್ಲಿ 27 ರನ್(62, 4*2) ಹೋರಾಟವನ್ನು ಜಾರಿಯಲ್ಲಿರಿಸಿದ್ದರೂ ಉಳಿದ ಆಟಗಾರರಿಂದ ಸಮಯೋಚಿತ ಆಟ ಬಾರದಿದ್ದುದರಿಂದ ತಂಡವು ಎಂಟು ವಿಕೆಟ್ ನಷ್ಟಕ್ಕೆ ಕೇವಲ 49 ರನ್‌ಗಳನ್ನು ಗಳಿಸಿ ಸೋಲೊಪ್ಪಿ ಸೆಮಿಫೈನಲ್ ಹೋರಾಟದಿಂದ ನಿರ್ಗಮಿಸಿತು. ಫ್ಲೈಝೋನ್ ಅಟ್ಯಾಕರ‍್ಸ್‌ನ ಬೌಲರ್ ಪ್ರಣೀಲ್ ಮಸ್ಕರೇನ್ಹಸ್‌ರವರಿಗೆ ಹ್ಯಾಟ್ರಿಕ್ ವಿಕೆಟ್(1-3-3), ಮೆಲ್ವಿನ್ ಡಿ’ಸೋಜ 2 ವಿಕೆಟ್, ಶರನ್ ಡಿ’ಸಿಲ್ವ 3 ವಿಕೆಟ್ ಪಡೆದು ಮಿಂಚಿದರು.


ಸಮಾರೋಪ:
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾದ ಪುತ್ತೂರು ಪಿಡಬ್ಲ್ಯೂಡಿ ಉಪ ವಿಭಾಗದ ಕಿರಿಯ ಇಂಜಿನಿಯರ್ ಲಿಂಡ್ಸೆ ಕೊಲಿನ್ ಸಿಕ್ವೇರಾ, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟರವರು ವಿಜೇತರಿಗೆ ಬಹುಮಾನ ನೀಡಿ ಶುಭ ಹಾರೈಸಿದರು. ಡೊನ್ ಬೊಸ್ಕೊ ಕ್ಲಬ್ ಅಧ್ಯಕ್ಷ ಆಂಟನಿ ಒಲಿವೆರಾ ಸ್ವಾಗತಿಸಿ, ಕ್ರೀಡಾಕೂಟದ ಸಂಯೋಜಕ ವಿಜಯ್ ಡಿ’ಸೋಜ ವಂದಿಸಿದರು. ಕ್ಲಬ್ ಕಾರ್ಯದರ್ಶಿ ಅನಿಲ್ ಪಾಸ್ ಕಾರ್ಯಕ್ರಮ ನಿರೂಪಿಸಿದರು.


ಅಂಪೈರ‍್ಸ್‌ಗಳಾಗಿ ದೀಕ್ಷಿತ್, ಯಜ್ಞೇಶ್, ಆಕಾಶ್ ಸಾಲಿಯಾನ್, ಆಶ್ಲೇಶ್, ಸ್ಕೋರರ್‌ಗಳಾಗಿ ಲತಿನ್ ಭಂಡಾರಿ, ಕಾರ್ತಿಕ್, ನಿಖಿಲ್, ವೀಕ್ಷಕ ವಿವರಣೆಗಾರರಾಗಿ ಪ್ರೀತಂ ಪಿಂಟೊ, ಸೀತಾರಾಮ ಮುಕ್ರಂಪಾಡಿ, ವಿಲಿಯಂ ಪಿಂಟೊ ನೆಲ್ಲಿಕಟ್ಟೆ ಸಹಕರಿಸಿದರು. ಕ್ರೀಡಾಕೂಟದ ಸಂಯೋಜಕರಾದ ರಾಕೇಶ್ ಮಸ್ಕರೇನ್ಹಸ್, ಆಲನ್ ಮಿನೇಜಸ್, ಕ್ರಿಶಲ್ ವಾರಿಯರ‍್ಸ್ ತಂಡದ ಮಾಲಕರಾದ ಕಿರಣ್ ಡಿ’ಸೋಜ ಹಾಗೂ ಮೆಲ್ವಿನ್ ಪಾಸ್ ನೂಜಿ, ಫ್ಲೈಝೋನ್ ಅಟ್ಯಾಕರ‍್ಸ್ ತಂಡದ ಮಾಲಕ ಪ್ರದೀಪ್ ವೇಗಸ್(ಬಾಬಾ), ಸೋಜಾ ಸೂಪರ್ ಕಿಂಗ್ಸ್ ಮಾಲಕ ದೀಪಕ್ ಮಿನೇಜಸ್, ಲೂವಿಸ್ ಕ್ರಿಕೆಟರ‍್ಸ್ ಮಾಲಕ ಲೆಸ್ಟರ್ ಲೂವಿಸ್, ಸಿಝ್ಲರ್ ಸ್ಟ್ರೈಕರ‍್ಸ್ ತಂಡದ ಮಾಲಕ ರೋಶನ್ ರೆಬೆಲ್ಲೋ, ಎಸ್.ಎಲ್ ಗ್ಲ್ಯಾಡಿಯೇಟರ‍್ಸ್ ತಂಡದ ಮಾಲಕ ಸಿಲ್ವೆಸ್ತರ್ ಡಿ’ಸೋಜರವರು ಉಪಸ್ಥಿತರಿದ್ದರು.

ಕ್ರಿಶಲ್ ವಾರಿಯರ‍್ಸ್ ನೇರ ಫೈನಲಿಗೆ..
ಸಿಪಿಎಲ್ ಕಾದಾಟದಲ್ಲಿ ಆರು ತಂಡಗಳು ಲೀಗ್ ಮಾದರಿಯಲ್ಲಿ ಕಣಕ್ಕಿಳಿದಿದ್ದು, ಇದರಲ್ಲಿ ಮೊದಲನೇ ತಂಡವಾಗಿ ಕ್ರಿಶಲ್ ವಾರಿಯರ‍್ಸ್(8 ಅಂಕ) ತಂಡವು ನೇರವಾಗಿ ಫೈನಲ್ ಹಂತಕ್ಕೆ ನೆಗೆದೇರಿತ್ತು. ಯಾರು ಅಂಕಪಟ್ಟಿ(ಟೇಬಲ್ ಟಾಪ್)ಯಲ್ಲಿ ಅಗ್ರಸ್ಥಾನ ಗಳಿಸುತ್ತಾರೋ ಅವರು ನೇರವಾಗಿ ಫೈನಲ್ ಹಂತಕ್ಕೆ ತೇರ್ಗಡೆಗೊಳ್ಳುತ್ತಾರೆ ಎಂಬುದು ಸಂಘಟಕರ ನಿರ್ಣಯವಾಗಿತ್ತು. ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನ ಗಳಿಸಿದ ಫ್ಲೈಝೋನ್ ಅಟ್ಯಾಕರ‍್ಸ್(6 ಅಂಕ), ತೃತೀಯ ಸ್ಥಾನ ಗಳಿಸಿದ ಸೋಜಾ ಸೂಪರ್ ಕಿಂಗ್ಸ್(6 ಅಂಕ) ನಡುವೆ ಸೆಮಿಫೈನಲ್ ಪಂದ್ಯ ಏರ್ಪಟ್ಟಿದ್ದು ಇದರಲ್ಲಿ ಫ್ಲೈಝೋನ್ ಅಟ್ಯಾಕರ‍್ಸ್ ಸೋಜಾ ಸೂಪರ್ ಕಿಂಗ್ಸ್ ತಂಡವನ್ನು ಸದೆ ಬಡಿದು ಫೈನಲ್‌ಗೆ ಅರ್ಹತೆ ಪಡೆಯಿತು. ಮೂರನೇ ಸ್ಥಾನಿಯಾಗಿ ಸೋಜಾ ಸೂಪರ್ ಕಿಂಗ್ಸ್, ಚತುರ್ಥ ಸ್ಥಾನಿಯಾಗಿ ಲೂವಿಸ್ ಕ್ರಿಕೆಟರ‍್ಸ್, ಪಂಚಮ ಸ್ಥಾನಿಯಾಗಿ ಸಿಝ್ಲರ್ ಸ್ಟ್ರೈಕರ‍್ಸ್, ಆರನೇ ಸ್ಥಾನಿಯಾಗಿ ಎಸ್.ಎಲ್ ಗ್ಲ್ಯಾಡಿಯೇಟರ‍್ಸ್ ಸ್ಥಾನ ಪಡೆದಿದ್ದವು.

ರೋಚಕ ಫೈನಲ್..
ಫ್ಲೈಜೋನ್ ಅಟ್ಯಾಕರ‍್ಸ್ ಹಾಗೂ ಕ್ರಿಶಲ್ ವಾರಿಯರ‍್ಸ್ ತಂಡಗಳ ಫೈನಲ್ ಹೋರಾಟವು ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸುವಂತೆ ಮಾಡಿತ್ತು. ಕ್ರಿಶಲ್ ವಾರಿಯರ‍್ಸ್ ತಂಡದ 52 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟುವ ಸಂದರ್ಭದಲ್ಲಿ ಫ್ಲೈಝೋನ್ ತಂಡವು ಇನ್ನಿಂಗ್ಸ್‌ನ ಮೊದಲ ಹಾಫ್(2 ಓವರ್‌ನಲ್ಲಿ 12 ರನ್)ನಲ್ಲಿ ಎಡವಿ ಸೋಲಿನ ಕಡೆ ಮುಖ ಮಾಡಿತ್ತು. ಆದರೆ ಕ್ರಿಕೆಟ್ ಫಲಿತಾಂಶವನ್ನು ಎಂದಿಗೂ ಊಹಿಸಲಾಗದು ಎಂಬಂತೆ ಸೆಕೆಂಡ್ ಹಾಫ್‌ನಲ್ಲಿ ಫ್ಲೈಝೋನ್ ಅಟ್ಯಾಕರ‍್ಸ್ ತಂಡವು ಮೂರನೇ ಓವರ್‌ನಲ್ಲಿ 23 ರನ್, ಕೊನೆ ಓವರ್‌ನಲ್ಲಿ 19 ರನ್‌ಗಳನ್ನು ಚಚ್ಚಿ ಸೋಲಿನತ್ತ ಮುಖ ಮಾಡಿದ್ದ ಫ್ಲೈಝೋನ್ ಅಟ್ಯಾಕರ‍್ಸ್ ತಂಡವು ಗೆಲುವಿನತ್ತ ಮುಖ ಮಾಡಿ ಚಾಂಪಿಯನ್ ಎನಿಸಿಕೊಂಡಿತು.

ವೈಯಕ್ತಿಕ ಪ್ರಶಸ್ತಿಗಳು..
*ಪಂದ್ಯಶ್ರೇಷ್ಟ, ಸರಣಿಶ್ರೇಷ್ಟ-ಶರನ್ ಡಿ’ಸಿಲ್ವ(ಫ್ಲೈಝೋನ್ ಅಟ್ಯಾಕರ‍್ಸ್)
*ಎಮರ್ಜಿಂಗ್ ಪ್ಲೇಯರ್-ಆಲ್ವಿನ್ ನೊರೋನ್ಹಾ(ಕ್ರಿಶಲ್ ವಾರಿಯರ‍್ಸ್)
*ಬೆಸ್ಟ್ ಕೀಪರ್-ವಿಲ್ಸನ್(ಸೋಜಾ ಸೂಪರ್ ಕಿಂಗ್ಸ್)
*ಬೆಸ್ಟ್ ವ್ಯಾಲ್ಯುವೇಬಲ್ ಪ್ಲೇಯರ್-ಜೇಮ್ಸ್ ಡಿ’ಸೋಜ(ಸಿಝ್ಲರ್ ಸ್ಟ್ರೈಕರ‍್ಸ್)
*ಬೆಸ್ಟ್ ಸ್ಟ್ಯಾಂಡಿಂಗ್ ಪ್ಲೇಯರ್-ಗ್ಲ್ಯಾನಿ(ಕ್ರಿಶಲ್ ವಾರಿಯರ‍್ಸ್)
*ಬೆಸ್ಟ್ ಫಿಲ್ಡರ್-ಸುಶಾನ್(ಲೂವಿಸ್ ಕ್ರಿಕೆಟರ‍್ಸ್)
*ಬೆಸ್ಟ್ ಬೌಲರ್-ಪ್ರಣೀಲ್ ಮಸ್ಕರೇನ್ಹಸ್(ಫ್ಲೈಝೋನ್ ಅಟ್ಯಾಕರ‍್ಸ್)
*ಬೆಸ್ಟ್ ಬ್ಯಾಟರ್-ರಾಯನ್ ಡಿ’ಸಿಲ್ವ(ಫ್ಲೈಝೋನ್ ಅಟ್ಯಾಕರ‍್ಸ್)
*ಬೆಸ್ಟ್ ಪಿಂಚ್ ಹಿಟ್ಟರ್-ಜೋನ್ಸನ್(ಕ್ರಿಶಲ್ ವಾರಿಯರ‍್ಸ್)
*ಗೇಮ್ ಚೇಂಜರ್-ಡ್ಯಾನಿಯಲ್ ಸುವಾರಿಸ್(ಸೋಜಾ ಸೂಪರ್ ಕಿಂಗ್ಸ್)

LEAVE A REPLY

Please enter your comment!
Please enter your name here