ಉಪ್ಪಿನಂಗಡಿ: ಆಟೋ ರಿಕ್ಷಾವೊಂದರಲ್ಲಿ ಒಂದೂವರೆ ಕೆ.ಜಿ. ತೂಕದ ಮಾದಕ ವಸ್ತು ಗಾಂಜಾವನ್ನು ಮಾರಾಟದ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿ ಆರೋಪಿಯನ್ನು ಗಾಂಜಾ ಸಹಿತ ದಸ್ತಗಿರಿ ಮಾಡಿದ ಘಟನೆ ಗುರುವಾರ ನಡೆದಿದೆ.
ಎಂದಿನಂತೆ ಗಸ್ತು ನಿರತ ಉಪ್ಪಿನಂಗಡಿ ಎಸೈ ಅವಿನಾಶ್ ಹೆಚ್. ಮತ್ತವರ ತಂಡ 34 ನೇ ನೆಕ್ಕಿಲಾಡಿ ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಬಂಟ್ವಾಳದ ಕಡೆಯಿಂದ ಉಪ್ಪಿನಂಗಡಿಯತ್ತ ಸಂಚರಿಸುತ್ತಿದ್ದ ಆಟೋ ರಿಕ್ಷಾವನ್ನು ನಿಲ್ಲಿಸಲು ಸೂಚಿಸಲಾಗುತ್ತದೆ. ಆದರೆ ವಾಹನವನ್ನು ನಿಲ್ಲಿಸದೆ ಮುಂದಕ್ಕೆ ಚಲಾಯಿಸಿ ಆಟೋ ರಿಕ್ಷಾದಿಂದ ಇಳಿದು ತಪ್ಪಿಸಿಕೊಳ್ಳಲು ಯತ್ನಿಸಿದ ಆಟೋ ಚಾಲಕ ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಕಳೆಂಜಿಬೈಲ್ ಕ್ವಾಟ್ರಸ್ ನಿವಾಸಿ ಉಮ್ಮರಬ್ಬ ಬ್ಯಾರಿ ಎಂಬವರ ಮಗನಾದ ಅಬ್ದುಲ್ ಸಲೀಂ (35) ನನ್ನು ಹಿಡಿದು ವಿಚಾರಣೆಗೆ ಒಳಪಡಿಸಿದಾಗ ತಾನು ಒಂದೂವರೆ ಕೆ.ಜಿ. ಯಷ್ಟು ತೂಕದ ಗಾಂಜಾವನ್ನು ಸಾಗಿಸುತ್ತಿರುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಆತನಿಂದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಸಾಗಾಟ ಮಾಡುತ್ತಿದ್ದ ಗಾಂಜಾವನ್ನು ನೌಶಾದ್ ಎಂಬಾತ ತನಗೆ ಮಾರಾಟ ಮಾಡಲು ನೀಡಿರುವುದಾಗಿ ತಿಳಿದ್ದು, ಆರೋಪಿಯನ್ನು ಸಾಗಾಟಕ್ಕೆ ಬಳಸಿದ್ದ ಅಟೋ ರಿಕ್ಷಾ ಸಹಿತ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.
ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರ ಮಾರ್ಗದರ್ಶನದಂತೆ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ನಾಗರಾಜ, ಮಹದೇವ, ವಡಗೇರಿ ಕಿರಣ, ರಾಮನಗೌಡ, ಲಾಲು ಪ್ರಸಾದ್ ಭಾಗವಹಿಸಿದ್ದಾರೆ.