*ನೀರಿನ ದರ ನೆಕ್ಕಿಲಾಡಿ ಗ್ರಾ.ಪಂ.ಗೆ ಹೊರೆ
*ದರ ಪರಿಷ್ಕರಣೆಗೆ ನಗರ ಸಭೆಗೆ ಮನವಿ ನೀಡಲು ನಿರ್ಣಯ
ಉಪ್ಪಿನಂಗಡಿ: ಪುತ್ತೂರು ನಗರಸಭೆಗೆ ಪೂರೈಕೆಯಾಗುವ ಶುದ್ಧ ಕುಡಿಯುವ ನೀರನ್ನು 34 ನೆಕ್ಕಿಲಾಡಿ ಗ್ರಾ.ಪಂ.ಗೆ ನೀಡಲು ನಗರಸಭೆಯು ಸಾವಿರ ಲೀಟರ್‌ಗೆ 21 ರೂ. ದರ ವಿಧಿಸಿದ್ದು, ಇಲ್ಲಿಗೆ 3 ಲಕ್ಷ ಲೀ. ನೀರಿನ ಬೇಡಿಕೆಯಿದೆ. ಈ ದರವು ಗ್ರಾ.ಪಂ.ಗೆ ಹೊರೆಯಾಗಲಿದ್ದು, ಆದ್ದರಿಂದ ದರ ಪರಿಷ್ಕರಣೆಗೆ ನಗರ ಸಭೆಗೆ ಮನವಿ ಮಾಡಲು 34 ನೆಕ್ಕಿಲಾಡಿ ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್. ರೈಯವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ದೇವಪ್ಪ ನಾಯ್ಕ ಅವರು, ನಗರಸಭೆಯಿಂದ ಶುದ್ಧ ಕುಡಿಯುವ ನೀರಿಗಾಗಿ ನಾವು ತಿಂಗಳಿಗೆ ಸುಮಾರು 1.89 ಲಕ್ಷ ರೂ. ಪಾವತಿ ಮಾಡಬೇಕಾಗುತ್ತದೆ. ನೀರು ಪಡೆಯುವ ಮೊದಲು ಮೂರು ತಿಂಗಳ ಹಣವನ್ನು ನಗರಸಭೆಗೆ ಠೇವಣಿಯನ್ನಾಗಿ ಇಡಬೇಕಾಗುತ್ತದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಪ್ರಶಾಂತ್ ಎನ್., ನಮ್ಮ ಗ್ರಾ.ಪಂ. ಬಡ ಪಂಚಾಯತ್ ಆಗಿದ್ದು, ಈ ಮೊತ್ತ ಗ್ರಾ.ಪಂ.ಗೆ ಹೊರೆಯಾಗಲಿದೆ. ನಮ್ಮ ಗ್ರಾಮದಿಂದಲೇ ಅವರು ನೀರು ಕೊಂಡೊಯ್ಯುವುದರಿಂದ ನೀರನ್ನು ಉಚಿತವಾಗಿ ನೀಡುವ ಬೇಡಿಕೆ ನಮ್ಮದಾಗಿತ್ತು. ಆದರೆ ಅವರು ದರ ವಿಧಿಸಿದ್ದಾರೆ. ಅದು ಕೂಡಾ ಪಂಚಾಯತ್‌ಗೆ ಹೊರೆಯಾಗುವ ರೀತಿ ಎಂದರು. ಈ ಬಗ್ಗೆ ಚರ್ಚೆಯಾಗಿ ಕೊನೆಗೇ ಈ ದರವನ್ನು ಕಡಿಮೆ ಮಾಡಿ ಕನಿಷ್ಟ ದರ ವಿಧಿಸುವ ಬಗ್ಗೆ ನಗರಸಭೆಗೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು.
ಗ್ರಾ.ಪಂ. ವ್ಯಾಪ್ತಿಯಲ್ಲಿ ಕೆಲವರು ಪಂಚಾಯತ್‌ನ ಪರವಾನಿಗೆ ಪಡೆಯದೇ ಜಾಹೀರಾತು ಫಲಕಗಳನ್ನು ಅಳವಡಿಸಿದ್ದು, ಇದನ್ನು ತೆರವು ಮಾಡಬೇಕೆಂದು ಸದಸ್ಯ ಪ್ರಶಾಂತ್ ಎನ್. ತಿಳಿಸಿದರು. ಈ ಬಗ್ಗೆ ಚರ್ಚೆಯಾಗಿ ಅವರನ್ನು ಮೊದಲು ಸಂಪರ್ಕಿಸಿ ಶುಲ್ಕ ಪಾವತಿಗೆ ತಿಳಿಸುವುದು. ಬಳಿಕವೂ ಶುಲ್ಕ ಪಾವತಿಸದ ಜಾಹೀರಾತು ಫಲಕಗಳನ್ನು ಅಲ್ಲಿಂದ ತೆರವುಗೊಳಿಸುವ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.
ಇಲ್ಲಿನ ಯುನಿಕ್ ಕಾಂಪೌಂಡ್ ಬಳಿ ಹಾಗೂ ಬೊಳಂತಿಲದಲ್ಲಿರುವ ಎರಡು ಕೊಳವೆ ಬಾವಿಯ ನೀರು ಕುಡಿಯಲು ಯೋಗ್ಯವಿಲ್ಲದ್ದರಿಂದ ಅದನ್ನು ಶುದ್ಧೀಕರಿಸುವ ಕೆಲಸ ಮಾಡಲಾಗಿತ್ತು. ಇಲ್ಲಿ ಒಂದು ಕೊಳವೆ ಬಾವಿಗೆ ಸುಮಾರು 75 ಸಾವಿರದಷ್ಟು ಹಣ ವ್ಯಯಿಸಲಾಗಿತ್ತು. ಇದು ನಮ್ಮ ಗಮನಕ್ಕೆ ತಾರದೇ ಅಧಿಕಾರಿಗಳೇ ಮುತುವರ್ಜಿ ವಹಿಸಿ ತರಾತುರಿಯಲ್ಲಿ ನಡೆಸಿದ ಕಾಮಗಾರಿಯಾಗಿದ್ದು, ಶುದ್ಧೀಕರಿಸಿದ ಬಳಿಕವೂ ಪ್ರಯೋಗಾಲಯದ ವರದಿಯಲ್ಲಿ ಮತ್ತೆ ಈ ನೀರು ಕುಡಿಯಲು ಯೋಗ್ಯವಿಲ್ಲವೆಂದು ಬಂದಿದೆ. ಹಾಗಾದರೆ ಈ ಕಾಮಗಾರಿ ನಡೆಸಿ ಪ್ರಯೋಜನವೇನು. ಕಾಮಗಾರಿ ನಡೆಸುವ ಮೊದಲು ಅಧಿಕಾರಿಗಳಿಗೆ ಮಾಹಿತಿ ಇರಲಿಲ್ಲವೇ ಎಂದು ಪ್ರಶ್ನಿಸಿದ ಸದಸ್ಯ ಪ್ರಶಾಂತ್ ಎನ್., ಈ ಕಾಮಗಾರಿಯ ಬಿಲ್ ಅನ್ನು ಈಗ ಗ್ರಾ.ಪಂ.ಗೆ ಅನುಮೋದನೆಗೆ ಕಳುಹಿಸಿಲಾಗಿದೆ. ಇಲ್ಲಿ ನಷ್ಟವಾಗಿರೋದು ಗ್ರಾಮಸ್ಥರ ತೆರಿಗೆ ಹಣ. ಆದ್ದರಿಂದ ಇದಕ್ಕೆ ನಾವ್ಯಾಕೆ ಅನುಮೋದನೆ ನೀಡಬೇಕು. ಇದಕ್ಕೆ ನನ್ನ ವಿರೋಧವಿದೆ ಎಂದರಲ್ಲದೆ, ಈ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದರು.
ಗ್ರಾ.ಪಂ.ನ ತ್ಯಾಜ್ಯ ಸಂಗ್ರಹ ದರ್ಬೆ, ತಾಳೆಹಿತ್ಲು ಸೇರಿದಂತೆ ಎಲ್ಲಾ ಕಡೆ ಹೋಗುತ್ತಿಲ್ಲ. ನಾವಿಲ್ಲಿ ತ್ಯಾಜ್ಯದ ಶುಲ್ಕ ವಿಧಿಸುವಾಗ ಜನರು ನಮ್ಮಲ್ಲಿ ಗಲಾಟೆ ಮಾಡುತ್ತಾರೆ. ಆದ್ದರಿಂದ ಎಲ್ಲಾ ಕಡೆಯೂ ತ್ಯಾಜ್ಯ ಸಂಗ್ರಹದ ವಾಹನ ಹೋಗಬೇಕೆಂದು ಸ್ವಚ್ಛ ವಾಹಿನಿಯವರಿಗೆ ಸೂಚನೆ ನೀಡಲು ಸಭೆಯಲ್ಲಿ ಅಭಿಪ್ರಾಯಿಸಲಾಯಿತು. ಜೆಜೆಎಂನ ಕಾಮಗಾರಿ ಎರಡು ವರ್ಷದೊಳಗೆ ಮೀಟರ್ ಬಳಿ ಇರುವ ಗೇಟ್‌ವಾಲ್‌ಗಳು ತುಕ್ಕು ಹಿಡಿದು ನೀರು ಪೋಲಾಗುತ್ತಿವೆ. ಟ್ಯಾಂಕ್‌ನ ಬಳಿ ಇರುವ ಗೇಟ್‌ವಾಲ್ ಬಾಕ್ಸ್ ಕೂಡಾ ಡ್ಯಾಮೇಜ್ ಆಗಿದೆ. ಇಲ್ಲಿ ಕಾಮಗಾರಿಯ ಲೋಪ ಕಂಡು ಬರುತ್ತಿದ್ದು, ಈ ಬಗ್ಗೆ ಜಿ.ಪಂ.ಗೆ ಪತ್ರ ಬರೆಯಲು ನಿರ್ಧರಿಸಲಾಯಿತು. ನೀರಿನ ಬಿಲ್ ಸಂಗ್ರಹ ಮಾಡುವ ಸಿಬ್ಬಂದಿಗೆ ಎಲ್ಲೆಲ್ಲಾ ನೀರಿನ ಮೀಟರ್ ಹೋಗಿದೆ. ಎಲ್ಲೆಲ್ಲಾ ಮೀಟರ್, ಗೇಟ್‌ವಾಲ್‌ಗಳು ಡ್ಯಾಮೇಜ್ ಇವೆ ಎಂದು ಪಟ್ಟಿ ನೀಡಲು ಈ ಹಿಂದೆಯೇ ಸೂಚಿಸಲಾಗಿತ್ತು. ಆದರೆ ಅವರು ಈ ಬಗ್ಗೆ ನಿರ್ಲಕ್ಷ್ಯ ತೋರಿದ್ದು, ಅವರಿಗೆ ಕಾರಣ ಕೇಳಿ ನೊಟೀಸ್ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಯಿಂದ ಚರಂಡಿಗಳು ಮಣ್ಣು ತುಂಬಿ ಬ್ಲಾಕ್ ಆಗಿದ್ದು, ಮಲೀನ ನೀರು ಸಂಗ್ರಹವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಈ ಬಗ್ಗೆ ನೊಟೀಸ್ ನೀಡಲು ಹಾಗೂ ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆಯುತ್ತಿರುವ ನೆಕ್ಕಿಲಾಡಿ- ಬೊಳುವಾರು ರಾಜ್ಯ ಹೆದ್ದಾರಿ ಕಾಮಗಾರಿಯು ಅವಧಿ ಮುಗಿದರೂ ಇನ್ನೂ ಮುಗಿದಿಲ್ಲ. ಆದ್ದರಿಂದ ಆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಪಿಡಬ್ಲ್ಯೂಡಿ ಇಲಾಖೆಗೆ ಪತ್ರ ಬರೆಯಲು ನಿರ್ಣಯಿಸಲಾಯಿತು. ಗ್ರಾ.ಪಂ. ವ್ಯಾಪ್ತಿಯಲ್ಲಿ ಕೆಲವರು ವ್ಯಾಪಾರ ಪರವಾನಿಗೆ ಪಡೆಯದೇ ವ್ಯಾಪಾರ ನಡೆಸುತ್ತಿದ್ದು, ಅಂತವರಿಗೆ ನೊಟೀಸ್ ನೀಡಲು ಹಾಗೂ ಸಂತೆಕಟ್ಟೆಯಲ್ಲಿ ರಾತ್ರಿ ಹೊತ್ತು ಕೆಲ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು, ಅದರೊಳಗೆ ವಾಹನಗಳು ಹೋಗದಂತೆ ಗೇಟ್ ಅಳವಡಿಸಲು ಮತ್ತು ಸಂತೆ ದಿನವಾದ ಗುರುವಾರ ಮಾತ್ರ ಈ ಗೇಟ್ ಅನ್ನು ತೆಗೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ಡಿ., ಸದಸ್ಯರಾದ ವಿಜಯಕುಮಾರ್, ಹರೀಶ, ಗೀತಾ, ತುಳಸಿ, ರತ್ನಾವತಿ ಉಪಸ್ಥಿತರಿದ್ದು, ಸಲಹೆ ಸೂಚನೆ ನೀಡಿದರು.