ಪುತ್ತೂರನ್ನು ಗ್ರೀನ್ ಸಿಟಿಯನ್ನಾಗಿಸಲು ಪ್ರತಿಯೊಬ್ಬರೂ ಸಹಕರಿಸಬೇಕು-ಅಶೋಕ್ ರೈ
ಪುತ್ತೂರು:ಕಳೆದ ಹಲವು ವರ್ಷಗಳಿಂದ ದರ್ಬೆಯ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಾಮಾಜಿಕ ಅರಣ್ಯ ಇಲಾಖೆಯ ಪುತ್ತೂರು ವಲಯಾರಣ್ಯಾಧಿಕಾರಿ ಕಚೇರಿ, ದರ್ಬೆ ವಾಣಿಜ್ಯ ತೆರಿಗೆ ಇಲಾಖೆ ಕಚೇರಿಯ ರಸ್ತೆಯಲ್ಲಿ ರೂ.34ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಸ್ವಂತ ಕಟ್ಟಡವು ಜ.18ರಂದು ಉದ್ಘಾಟನೆಗೊಂಡಿತು.
ನೂತನ ಕಟ್ಟಡವನ್ನು ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಸಾರ್ವಜನಿಕ ಸ್ಥಳ, ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ವಿವಿಧ ಜಾತೀಯ ಹಣ್ಣಿನ ಹಾಗೂ ಕಾಟು ಮಾವಿನ ಗಿಡಗಳನ್ನು ನೆಡಲು ಸಾಮಾಜಿಕ ಅರಣ್ಯ ಹಾಗೂ ಅರಣ್ಯ ಇಲಾಖೆಗೆ ಗುರಿ ನೀಡಲಾಗಿದ್ದು ಎರಡೂ ಇಲಾಖೆಗಳಿಂದ ಗಿಡ ನೆಡುವ ಕೆಲಸವಾಗಬೇಕು. ಪುತ್ತೂರು-ಉಪ್ಪಿನಂಗಡಿ ರಸ್ತೆಯ ಇಕ್ಕೆಲಗಳಲ್ಲಿ ಕಾಟು ಮಾವಿನ ಗಿಡ, ರಸ್ತೆ ವಿಭಾಜಕದಲ್ಲಿ ಸುಂದರ ಹೂವಿನ ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಮಾದರಿ ರಸ್ತೆಯನ್ನಾಗಿ ಮಾಡಬೇಕು. ನೆಟ್ಟ ಗಿಡಗಳಿಗೆ ನೀರು ಹಾಕಲು ರೂ.10 ಲಕ್ಷ ಅನುದಾನವನ್ನು ಆದ್ಯತೆ ಮೇಲೆ ನೀಡಲಾಗುವುದು. ನೆಟ್ಟ ಗಿಡಗಳನ್ನು ಯಾರೂ ಕದ್ದುಕೊಂಡು ಹೋಗಬಾರದು. ಗಿಡ ನೆಡುವ ಆಸಕ್ತಿಯುಳ್ಳ ಸಾರ್ವಜನಿಕರಿಗೂ ಗಿಡ ವಿತರಿಸಲಾಗುವುದು. ಗಿಡ ಬೆಳೆಸಲು ನೀರು, ಅನುದಾನ, ಮ್ಯಾನ್ ಪವರ್ ಸೇರಿದಂತೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಮುಂದಿನ ಮಳೆಗಾಲದಲ್ಲಿ ನೆಡಬೇಕು. ಜೊತೆಗೆ ಸಸಿ ನೆಡಲು ಹಾಗೂ ಮರ ಗಿಡಗಳನ್ನು ಕಡಿಯದಂತೆ ಜನರಿಗೆ ಅರಿವು ಮೂಡಿಸುವ ಮುಖಾಂತರ ಪುತ್ತೂರನ್ನು ಗ್ರೀನ್ ಸಿಟಿ ಮಾಡಲು ಎಲ್ಲರೂ ಸಹಕರಿಸುವಂತೆ ಅವರು ವಿನಂತಿಸಿದರು.
ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ಮಾತನಾಡಿ, ಗಿಡ ನೆಟ್ಟು ಪರಿಸರ ಬೆಳೆಸುವಲ್ಲಿ ಯಾವ ಶಾಸಕರು ಇಷ್ಟು ಕಾಳಜಿ ವಹಿಸಿಲ್ಲ. ಪರಿಸರ ಉಳಿಸುವ ಮುತುವರ್ಜಿಯಿಂದ ಶಾಸಕ ಅಶೋಕ್ ಕುಮಾರ್ ರೈಯವರು ವಿಧಾನ ಸೌಧದಲ್ಲಿಯೂ ಪ್ರಸ್ತಾಪಿಸಿದ್ದಾರೆ. ರಸ್ತೆಯ ಬದಿಯಲ್ಲಿ ನೆಟ್ಟ ಗಿಡಗಳಿಗೆ ಮುತುವರ್ಜಿಯಿಂದ ತಾವೇ ನೀರು ಹಾಕಿ ಪೋಷಿಸುವ ಮೂಲಕ ಶಾಸಕ ಅಶೋಕ್ ಕುಮಾರ್ ರೈಯವರು ಎಲ್ಲರಿಗೂ ಪ್ರೇರಣೆಯಾಗಿದ್ದಾರೆ ಎಂದ ಅವರು ಪುತ್ತೂರು-ಉಪ್ಪಿನಂಗಡಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡ ಕೂಡಲೇ ಉತ್ತಮ ಜಾತಿಯ ಗಿಡಗಳನ್ನೇ ಇಲಾಖೆಯಿಂದ ನೆಡಲಾಗುವುದು ಎಂದರು.
ನಗರ ಸಭಾ ಸದಸ್ಯ ಮನೋಹರ್, ತಹಶೀಲ್ದಾರ್ ಪುರಂದರ ಹೆಗ್ಡೆ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜೇಶ್ ರೈ, ಸಾಮಾಜಿಕ ಅರಣ್ಯ ಇಲಾಖೆಯ ವಲಯಾರಣ್ಯಾಧಿಕಾರಿ ವಿದ್ಯಾರಾಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಂಗಳೂರು ವಿಭಾಗ ಸಾಮಾಜಿಕ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಪೈ ವಂದಿಸಿದರು. ಉಪ ವಲಯಾರಣ್ಯಾಧಿಕಾರಿ ಯಶೋಧರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪ್ರಧಾನ ಕಾರ್ಯದರ್ಶಿ ಅರ್ಷದ್ ದರ್ಬೆ, ಅರಣ್ಯ ಇಲಾಖೆಯ ವಲಯಾರಣ್ಯಾಧಿಕಾರಿ ಕಿರಣ್ ಬಿ.ವಿ., ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಪ್ರನೋದ್ ಕುಮಾರ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.