ಪರ್ಪುಂಜ: ಇತಿಹಾಸ ಪ್ರಸಿದ್ಧ ರಾಮಜಾಲು ಶ್ರೀ ಬೈದೇರುಗಳ ವಿಜೃಂಭಣೆಯ ಜಾತ್ರೋತ್ಸವ-‘ರಾಮಜಾಲು ಗರಡಿ ಗೌರವ’ ಪ್ರಶಸ್ತಿ ಪ್ರದಾನ- ಮಹಾ ಅನ್ನಸಂತರ್ಪಣೆ

0

ಪುತ್ತೂರು: ಧರ್ಮದ ಅರಿವು ನಮ್ಮಲ್ಲಿ ಬರಬೇಕಾದರೆ ನಾವು ಧರ್ಮ ಗ್ರಂಥಗಳನ್ನು ಓದುವವರಾಗಬೇಕು, ಕೇವಲ ಭಾಷಣದಿಂದ ನಮ್ಮಲ್ಲಿ ಧರ್ಮದ ಅರಿವು ಮೂಡಲು ಅಸಾಧ್ಯ ಪುಸ್ತಕ ಭಂಡಾರದಿಂದ ಹಾಗೂ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ನಮ್ಮಲ್ಲಿ ಧರ್ಮದ ಅರಿವು ಹೆಚ್ಚಾಗಲು ಸಾಧ್ಯವಿದೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಸಾಧಕ ಅಶೋಕ್ ಕುಮಾರ್ ರೈ ಹೇಳಿದರು.


ಅವರು ಒಳಮೊಗ್ರು ಗ್ರಾಮದ ಪರ್ಪುಂಜದಲ್ಲಿರುವ ಇತಿಹಾಸ ಪ್ರಸಿದ್ದ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಯಲ್ಲಿ ಜ.18 ರಂದು ನಡೆದ ಶ್ರೀ ಬ್ರಹ್ಮಬೈದೇರುಗಳ ವಿಜೃಂಭಣೆಯ ಜಾತ್ರೋತ್ಸವದ ಅಂಗವಾಗಿ ಶ್ರೀ ಕೂರೇಲುಗುತ್ತು ಸುಬ್ಬಪ್ಪ ಪೂಜಾರಿ ಧರ್ಮಚಾವಡಿಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕಟ್ಟಕಡೆಯ ವ್ಯಕ್ತಿಯ ಕಣ್ಣೀರನ್ನು ಒರೆಸುವುದೇ ನಿಜವಾದ ಧರ್ಮವಾಗಿದೆ ಎಂದ ಅಶೋಕ್ ರೈಯವರು, ಹಿಂದೂ ಧರ್ಮ ಬಹಳಷ್ಟು ಹಿಂದೆ ಬಿದ್ದಿದೆ ಎಂಬ ವಿಷಯವನ್ನು ಹೇಳಿದರು. ಇತರ ಧರ್ಮದವರನ್ನು ಗಮನಿಸಿದರೆ ಮುಸ್ಲೀಂ ಭಾಂಧವರು ಪ್ರತಿ ಶುಕ್ರವಾರ ಮಸೀದಿಗೆ ಹೋಗುತ್ತಾರೆ, ಕ್ರೈಸ್ತ ಧರ್ಮದವರು ಪ್ರತಿ ಆದಿತ್ಯವಾರ ಚರ್ಚ್‌ಗೆ ಹೋಗುತ್ತಾರೆ ಆದರೆ ನಾವು ಹಿಂದುಗಳಿಗೆ ದೇವಸ್ಥಾನ, ದೈವಸ್ಥಾನ, ಇಂತಹ ಧರ್ಮ ನೇಮೋತ್ಸವಗಳಿಗೆ ಹೋಗಲು ಸಮಯವೇ ಇಲ್ಲದಾಗಿದೆ. ಇದು ಸರಿಯಲ್ಲ ಎಂಬ ವಿಚಾರವನ್ನು ಶಾಸಕರು ತಿಳಿಸಿದರು. ನಾವು ಕೂಡ ಧಾರ್ಮಿಕ ಕೇಂದ್ರಗಳಿಗೆ ವಾರದ ಒಂದು ದಿನವಾದರೂ ಹೋಗುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.


ಧರ್ಮಗ್ರಂಥಗಳನ್ನು ಓದುವವರಾಗಬೇಕು
ನಮಗೆ ದೇವಸ್ಥಾನಗಳಲ್ಲಿ ತೀರ್ಥ ಹೇಗೆ ತೆಗೆದುಕೊಳ್ಳುವುದು ಎಂದು ಗೊತ್ತಿಲ್ಲ, ಬ್ರಹ್ಮಾರ್ಪಣೆ ಬಿಡುವುದು ಗೊತ್ತಿಲ್ಲ ಇದನ್ನೆಲ್ಲಾ ನಾವು ಯಾಕೆ ಕಲಿಯಲಿಲ್ಲ? ಎಂದು ಪ್ರಶ್ನಿಸಿದ ಶಾಸಕ ಅಶೋಕ್ ಕುಮಾರ್ ರೈಯವರು ನಾವು ಧರ್ಮ ಗ್ರಂಥಗಳನ್ನು ಓದುವುದಿಲ್ಲ ಇಂದು ದೇಶದಲ್ಲಿ ಧರ್ಮ ಗ್ರಂಥಗಳು ಎಷ್ಟೆಷ್ಟು ಮಾರಾಟವಾಗುತ್ತದೆ ಎಂದು ನೋಡಿದರೆ, ಬೈಬಲ್ 500 ಕೋಟಿ, ಕುರಾನ್ 80 ಕೋಟಿ ಆದರೆ ಭಗವತ್‌ಗೀತೆ ಕೇವಲ 16 ಕೋಟಿ ಮಾರಾಟವಾಗುತ್ತಿದೆ. ಧರ್ಮದ ಅರಿವು ಮೂಡಬೇಕಾದರೆ ನಾವು ಧರ್ಮಗ್ರಂಥಗಳನ್ನು ಓದುವವರಾಗಬೇಕು ಇದನ್ನು ನಮ್ಮ ಮಕ್ಕಳಿಗೆ ನಾವು ಕಲಿಸಿಕೊಡಬೇಕಾಗಿದೆ ಎಂದು ಅಶೋಕ್ ರೈಗಳು ಅಭಿಪ್ರಾಯಪಟ್ಟರು.


ಹಿಂದೂ ಧರ್ಮಕ್ಕೆ ಶಕ್ತಿ ಕೊಡುವ ಕೆಲಸ ಆಗುತ್ತಿದೆ: ಸಂಜೀವ ಮಠಂದೂರು
ಮುಖ್ಯ ಅತಿಥಿಯಾಗಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರುರವರು ಮಾತನಾಡಿ, ಧರ್ಮ ಜಾಗೃತಿಗಾಗಿ ದೌರ್ಜನ್ಯದ ವಿರುದ್ಧ ಹೋರಾಡಿ ಧರ್ಮವನ್ನು ಎತ್ತಿ ಹಿಡಿಯುವ ಮೂಲಕ ದೈವಾಂಶ ಸಂಭೂತರಾಗಿ ಇಡೀ ತುಳುನಾಡಿಗೆ ಕೀರ್ತಿ ತಂದುಕೊಟ್ಟ ಅಮರವೀರರರಾದ ಕೋಟಿ ಚೆನ್ನಯರ ಇಡೀ ಮನುಕುಲಕ್ಕೆ ದೇವರಾಗಿದ್ದಾರೆ. ಹಿಂದೂ ಧರ್ಮವನ್ನು ಒಟ್ಟುಗೂಡಿಸುವ ಶಕ್ತಿ ಕೋಟಿ ಚೆನ್ನಯರಿಂದ ಬಂದಿದೆ. ಅವರನ್ನು ಆರಾಧಿಸುವ ಇಂತಹ ಶ್ರೀ ಬೈದೇರುಗಳ ಜಾತ್ರೋತ್ಸವದಿಂದ ಹಿಂದೂ ಧರ್ಮಕ್ಕೆ ಶಕ್ತಿ ಕೊಡುವ ಕೆಲಸ ಆಗುತ್ತಿದೆ ಎಂದು ಅವರು ಹೇಳಿದರು. ನಾವೆಲ್ಲರೂ ನಿಮಿತ್ತ ಮಾತ್ರ, ನಾನಲ್ಲ ಎಲ್ಲವೂ ದೈವ ದೇವರ ಲೀಲೆ ಎಂಬುದನ್ನು ನಾವು ಸಂಜೀವ ಪೂಜಾರಿಯವರಿಂದ ಕಲಿಯಬೇಕಾಗಿದೆ. ಎಲ್ಲರನ್ನು ಸೇರಿಸಿಕೊಂಡು ನೇಮೋತ್ಸವವನ್ನು ಜಾತ್ರೋತ್ಸವದ ಸಂಭ್ರಮಕ್ಕೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿ ಶುಭ ಹಾರೈಸಿದರು.


ರಾಮಜಾಲು ಗರಡಿ ಪ್ರಶಸ್ತಿ ನನಗೆ ಬೈದೇರುಗಳ ಪ್ರಸಾದವಾಗಿದೆ : ಚಿತ್ತರಂಜನ್ ಬೋಳಾರ್
ಪ್ರತಿಷ್ಠಿತ ‘ರಾಮಜಾಲು ಗರಡಿ ಗೌರವ’ ಪ್ರಶಸ್ತಿ ಸ್ವೀಕರಿಸಿದ ಮಂಗಳೂರ ಆತ್ಮಶಕ್ತಿ ವಿವಿದೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್‌ರವರು ಮಾತನಾಡಿ, ರಾಮಜಾಲುವಿನ ಗರಡಿ ಜಾತ್ರೋತ್ಸವವನ್ನು ಕಂಡು ನನಗೆ ಬಹಳಷ್ಟು ಸಂತೋಷವಾಗಿದೆ. ನನ್ನ ಬೆಳವಣಿಗೆಗೆ ಬೈದೇರುಗಳ ಆಶೀರ್ವಾದವೇ ಕಾರಣವಾಗಿದೆ. ಅವರ ಸೇವೆಯಿಂದಲೇ ನಾನು ಸಮಾಜದಲ್ಲಿ ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ. ಇಂದು ನನಗೆ ಪ್ರದಾನ ಮಾಡಿದ ಈ ‘ ರಾಮಜಾಲು ಗರಡಿ ಗೌರವ’ಪ್ರಶಸ್ತಿ ಇದು ನನಗೆ ಬೈದೇರುಗಳ ಪ್ರಸಾದವಾಗಿದೆ.ಸಮಾಜದಲ್ಲಿ ನನಗೆ ಇನ್ನಷ್ಟು ಸೇವೆ ಮಾಡಲು ಈ ಪ್ರಶಸ್ತಿ ಪ್ರೋತ್ಸಾಹ ನೀಡಿದೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು. ಸಂಜೀವ ಪೂಜಾರಿಯವರ ಕಾರ್ಯಕ್ರಮ ವ್ಯವಸ್ಥೆಯನ್ನು ಕಂಡ ಬಹಳಷ್ಟು ಖುಷಿ ಆಯಿತು. ಒಂದು ಕಾರ್ಯಕ್ರಮಕ್ಕೆ ಸಹಕರಿಸಿದ ಪ್ರತಿಯೊಬ್ಬರನ್ನು ಕೂಡ ಗೌರವಿಸುತ್ತಿರುವುದು ಅವರ ಬೆಳವಣಿಗೆಗೆ ಕಾರಣವಾಗಿದೆ ಎಂದು ಹೇಳಿ ಶುಭ ಹಾರೈಸಿದರು.


ಪ್ರತಿಭೆಗಳಿಗೆ ವೇದಿಕೆ, ಕರಸೇವಕರಿಗೆ ಗೌರವ, ಕಾರ್ಯಕ್ರಮ ಖುಷಿ ತಂದಿದೆ: ಶಯನಾ ಜಯಾನಂದ್
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪಂಚಾಯತ್‌ನ ಮಾಜಿ ಸದಸ್ಯೆ ಶಯನಾ ಜಯಾನಂದ್‌ರವರು ಮಾತನಾಡಿ, ರಾಮಜಾಲುವಿನ ಗರಡಿ ಜಾತ್ರೋತ್ಸವದ ಸಂಭ್ರಮ ಕಣ್ಮುಂಬಿ ಬಂತು. ಇಷ್ಟೊಂದು ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸುವುದು ಅಷ್ಟು ಸುಲಭದ ಮಾತಲ್ಲ. ಇಲ್ಲಿ ಸಂಜೀವ ಪೂಜಾರಿಯವರ ಶ್ರಮ ಎದ್ದು ಕಾಣುತ್ತಿದೆ. ನನ್ನೂರಿನ ಪ್ರತಿಭೆಗಳಿಗೆ ವೇದಿಕೆ ನೀಡಿದ್ದು ಅಲ್ಲದೆ ನೇಮೋತ್ಸವಕ್ಕೆ ಸಹಕರಿಸಿದ ಕರಸೇವಕರಿಗೆ ವೇದಿಕೆಯಲ್ಲೇ ಗೌರವ ನೀಡಿರುವುದು ಅತ್ಯಂತ ಹೆಮ್ಮೆ ವಿಷಯವಾಗಿದೆ. ಸಂಜೀವ ಪೂಜಾರಿಯವರಿಗೆ ಬ್ರಹ್ಮಬೈದೇರುಗಳು ಒಳ್ಳೆಯದನ್ನು ಮಾಡಲಿ ಎಂದು ಹೇಳಿ ಶುಭ ಹಾರೈಸಿದರು.


ಎಲ್ಲವೂ ದೈವ ದೇವರ ಕೃಪೆ ಹಾಗೂ ಊರಪರವೂರ ಭಕ್ತರ ಸಹಕಾರದಿಂದ ನಡೆಯುತ್ತಿದೆ: ಸಂಜೀವ ಪೂಜಾರಿ ಕೂರೇಲು
ಪ್ರಾಸ್ತಾವಿಕವಾಗಿ ಮಾತನಾಡಿದ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲುರವರು, ಇಲ್ಲಿ ನಾನು ಎಂಬುದು ಕೇವಲ ನಿಮಿತ್ತ ಮಾತ್ರ ಎಲ್ಲವೂ ದೈವ ದೇವರ ಕೃಪೆ ಹಾಗೂ ಊರಪರವೂರ ಭಕ್ತಾಧಿಗಳ ಸಹಕಾರದಿಂದ ನಡೆಯುತ್ತಿದೆ. ರಾಮಜಾಲು ಹಾಗೂ ಕೂರೇಲು ಒಂದು ಸತ್ಯಧರ್ಮದ ಮಣ್ಣಾಗಿದೆ. ಇಲ್ಲಿ ನೆಲೆಯಾಗಿರುವ ದೈವ ದೇವರು ನಮ್ಮೆನ್ನೆಲ್ಲಾ ಹರಸುತ್ತಿದ್ದಾರೆ. ದೈವ ದೇವರ ಆಶೀರ್ವಾದದಿಂದ ಹಾಗೂ ನಿಮ್ಮೆಲ್ಲರ ಸಹಕಾರದಿಂದ ಪ್ರತಿಯೊಂದು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇನೆ ಎಂದು ಸಂಜೀವ ಪೂಜಾರಿ ಹೇಳಿದರು.ಈ ಮೊದಲು ಕೂರೇಲುಗುತ್ತು ಶ್ರೀ ಸುಬ್ಬಪ್ಪ ಪೂಜಾರಿ ಪ್ರಶಸ್ತಿ ಕೊಡುತ್ತಿದ್ದೇವು ಆದರೆ ಈ ವರ್ಷದಿಂದ ಗರಡಿ ಹೆಸರಲ್ಲಿ ರಾಮಜಾಲು ಗರಡಿ ಗೌರವ ಪ್ರಶಸ್ತಿ ಕೊಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕೂರೇಲುಗುತ್ತು ಸುಬ್ಬಪ್ಪ ಪೂಜಾರಿ ಪ್ರಶಸ್ತಿ ಕೊಡಲಿದ್ದೇವೆ. ಆದರೆ ಇದೊಂದು ಗರಡಿ ಗೌರವ ಆಗಿದ್ದು ಕ್ಷೇತ್ರಕ್ಕೆ ಹೆಮ್ಮೆ ಆಗಿದೆ ಎಂಬ ವಿಚಾರವನ್ನು ತಿಳಿಸಿದರು. ರಾಮಜಾಲು ಶ್ರೀ ಬೈದೇರುಗಳ ಜಾತ್ರೋತ್ಸವವನ್ನು ಇಷ್ಟೊಂದು ಸಂಭ್ರಮದಿಂದ ಅಚರಿಸಲು ನನಗೆ ಊರಪರವೂರ ಭಕ್ತರು ಬಹಳಷ್ಟು ಸಹಕಾರ ನೀಡಿದ್ದಾರೆ. ಪರ್ಪುಂಜದ ಸ್ನೇಹ ಯುವಕ ಮಂಡಲ ಮತ್ತು ಯುವತಿ ಮಂಡಲ, ಕೂರೇಲು ಮಲರಾಯ ಸ್ವಯಂ ಸೇವಕ ಸಂಘ ಹಾಗೇ ಈ ಊರಿನ, ಗ್ರಾಮದ ಭಕ್ತಾಧಿಗಳು ಸೇರಿದಂತೆ ಹತ್ತೂರಿನ ಭಕ್ತರ ಸಹಕಾರದಿಂದ ಇದು ಸಾಧ್ಯವಾಗಿದೆ. ನಾನು ಇಲ್ಲಿ ಕೇವಲ ನಿಮಿತ್ತ ಮಾತ್ರ ಮುಂದೆಯೂ ನಿಮ್ಮೆಲ್ಲರ ಸಹಕಾರ ಇರಲಿ ಎಂದು ಹೇಳಿ ಎಲ್ಲರಿಗೂ ಶ್ರೀ ಬೈದೇರುಗಳು ಒಳ್ಳೆಯದನ್ನು ಕರುಣಿಸಲಿ ಎಂದು ಕೃತಜ್ಞತೆ ಸಲ್ಲಿಸಿದರು.


ಈ ಸಂದರ್ಭದಲ್ಲಿ ಜಾತ್ರೋತ್ಸವಕ್ಕೆ ಸಹಕಾರ ನೀಡಿದ ಸ್ನೇಹ ಯುವಕ ಮಂಡಲ ಮತ್ತು ಸ್ನೇಹ ಮಹಿಳಾ ಮಂಡಲದ ಪದಾಧಿಕಾರಿಗಳನ್ನು ಹಾಗೂ ಶ್ರೀ ಕೂರೇಲು ಮಲರಾಯ ಸ್ವಯಂ ಸೇವಕ ವೃಂದದ ಪದಾಧಿಕಾರಿಗಳನ್ನು ಶಾಲು ಹಾಕಿ ಗೌರವಿಸಲಾಯಿತು. ಇದಲ್ಲದೆ ಜನಾರ್ದನ ಪೂಜಾರಿ ಅಡ್ಯಾರ್, ರಾಜೇಶ್ ರೈ ಪರ್ಪುಂಜ, ಶಶಿಧರ ಪೂಜಾರಿ ಮಾಣಿಜಾಲು, ರಮೇಶ್ ಪೂಜಾರಿ ಮಣಿಜಾಲುರವರುಗಳನ್ನು ದಂಪತಿಗಳ ಸಹಿತ ಶಾಲು, ಪೇಟಾ,ಸ್ಮರಣಿಕೆ ನೀಡಿ ಗೌರವಿಸಲಾಯಿತು.


ವೇದಿಕೆಯಲ್ಲಿ ಪುತ್ತೂರು ಅಕ್ಷಯ ಕಾಲೇಜಿನ ಸಂಚಾಲಕ, ಉದ್ಯಮಿ ಜಯಂತ ನಡುಬೈಲ್, ಕೂರೇಲು ಸಂಜೀವ ಪೂಜಾರಿಯವರ ಪತ್ನಿ ಸರಸ್ವತಿ ಸಂಜೀವ ಪೂಜಾರಿ ಕೂರೇಲು ಉಪಸ್ಥಿತರಿದ್ದರು. ಅಭಿಜ್ಞಾ ಭಟ್ ಪ್ರಾರ್ಥಿಸಿದರು. ಹರ್ಷಿತ್ ಕುಮಾರ್ ಕೂರೇಲು ಸ್ವಾಗತಿಸಿದರು. ಸಂಜೀವ ಪೂಜಾರಿ ಕೂರೇಲು, ಸರಸ್ವತಿ ಸಂಜೀವ ಪೂಜಾರಿ, ಹರಿಣಾಕ್ಷಿ ಅಡ್ಯಾರ್ ಅತಿಥಿಗಳಿಗೆ ತಾಂಬೂಲ, ಶಾಲು ಹಾಕಿ ಸ್ವಾಗತಿಸಿದರು. ನೇಮಾಕ್ಷ ಸುವರ್ಣ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.


‘ ರಾಮಜಾಲ್ದ ಬ್ರಹ್ಮ ಬೈದೆರ್ಲು’ ಆಲ್ಬಂ ಸಾಂಗ್ ಬಿಡುಗಡೆ, ಮನರಂಜಿಸಿದ ‘ಏರ‍್ಲಾ ಗ್ಯಾರಂಟಿ ಅತ್ತ್..’ ತುಳು ನಾಟಕ
ರಾಮಜಾಲು ಗರಡಿಯ ಇತಿಹಾಸ ಸಾರುವ ‘ರಾಮಜಾಲ್ದ ಬ್ರಹ್ಮ ಬೈದೆರ್ಲು’ ಎನ್ನುವ ತುಳು ಆಲ್ಬಂ ಸಾಂಗ್ ಅನ್ನು ಶಾಸಕ ಅಶೋಕ್ ಕುಮಾರ್ ರೈ ಬಿಡುಗಡೆಗೊಳಿಸಿದರು. ಪದ್ಮರಾಜ್ ಬಿ.ಸಿ ಚಾರ್ವಕ ಸಾಹಿತ್ಯ, ನಿರ್ದೇಶನದೊಂದಿಗೆ ಅಭಿಜ್ಞಾ ಭಟ್ ಹಾಡುಗಾರಿಕೆ, ಮಿಥುನ್‌ರಾಜ್ ವಿದ್ಯಾಪುರ ಸಂಕಲನ ಮತ್ತು ರೇಕಾರ್ಡಿಂಗ್, ಸಚಿನ್ ಸುವರ್ಣ ಶೇಣಿ ನಿರ್ಮಾಣದಲ್ಲಿ ಈ ಆಲ್ಬಂ ಸಾಂಗ್ ಮೂಡಿಬಂದಿದೆ. ಚಾ ಪರ‍್ಕ ಕಲಾವಿದರು ಕುಡ್ಲ ಇವರ ಅಭಿನಯದಲ್ಲಿ ಮೂಡಿಬಂದ ವರ್ಷದ ಸೂಪರ್ ಹಿಟ್ ತುಳು ಹಾಸ್ಯಮಯ ನಾಟಕ ‘ಏರ‍್ಲಾ ಗ್ಯಾರಂಟಿ ಅತ್ತ್..’ ಮನರಂಜಿಸಿತು. ಮಧ್ಯರಾತ್ರಿ ವೇಳೆಯಲ್ಲಿ ಆರಂಭವಾದ ನಾಟಕವನ್ನು ವೀಕ್ಷಿಸಲು ಸಾವಿರಾರು ಮಂದಿ ಕಾತರದಿಂದ ಕಾದು ವೀಕ್ಷಿಸಿ ಖುಷಿಪಟ್ಟರು. ಸಭಾ ಕಾರ್ಯಕ್ರಮದ ಆರಂಭದಲ್ಲಿ ಸ್ಥಳೀಯ ಪ್ರತಿಭೆಗಳಿಂದ ಹಾಡು, ನೃತ್ಯ ಸೇರಿದಂತೆ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು.


ಸಹಸ್ರ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗಿ, ಮಹಾ ಅನ್ನಸಂತರ್ಪಣೆ
ರಾಮಜಾಲು ಗರಡಿ ಜಾತ್ರೋತ್ಸವಕ್ಕೆ ಪ್ರತಿವರ್ಷದಂತೆ ಈ ವರ್ಷವೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಸುಮಾರು 15 ಸಾವಿರಕ್ಕೂ ಅಧಿಕ ಮಂಧಿ ಭಕ್ತರು ಆಗಮಿಸಿ ಶ್ರೀ ಕೋಟಿ ಚೆನ್ನಯರು ಪ್ರಸಾದ ಸ್ವೀಕರಿಸಿದರು. ಮಧ್ಯಾಹ್ನ ಹಾಗೂ ರಾತ್ರಿ ಶುಚಿರುಚಿಯಾದ ಅನ್ನಸಂತರ್ಪಣೆ ನಡೆಯಿತು. ಈ ಮಹಾ ಅನ್ನಸಂತರ್ಪಣೆಯಲ್ಲಿ ಈ ವರ್ಷವೂ ಸುಮಾರು 6 ಸಾವಿರಕ್ಕಿಂತ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು.


ವಿಜೃಂಭಣೆಯ ಶ್ರೀ ಬೈದೇರುಗಳ ಜಾತ್ರೋತ್ಸವ
ಸಂಜೆ ಭಂಡಾರ ತೆಗೆಯುವ ಕಾರ್ಯಕ್ರಮ ನಡೆದು ರಾತ್ರಿ ಶ್ರೀ ಬೈದೇರುಗಳು ಗರಡಿ ಇಳಿಯುವ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಿತು. ಬಳಿಕ ಬೈದೇರುಗಳ ಮೀಸೆ ಧರಿಸುವುದು ನಡೆದು ಮಾಯಂದಾಲೆ(ಮಾಣಿ ಬಾಲೆ) ಗರಡಿ ಇಳಿಯುವ ಕಾರ್ಯಕ್ರಮ ನಡೆಯಿತು. ಬೆಳಿಗ್ಗಿನ ಜಾವ ಕೋಟಿ ಚೆನ್ನಯರ ದರ್ಶನ ಪಾತ್ರಿಗಳ ಸೇಟ್ (ಸುರ್ಯ ಹಾಕಿಕೊಳ್ಳುವುದು) ನಡೆಯಿತು ಬಳಿಕ ಬೈದೇರುಗಳ ಸೇಟ್ (ಸುರ್ಯ ಹಾಕಿಕೊಳ್ಳುವುದು) ನಡೆದು ಭಕ್ತಾಧಿಗಳಿಗೆ ಪ್ರಸಾದ ವಿತರಣೆ ನಡೆದು ಅರುಣೋಯದಕ್ಕೆ ನೇಮೋತ್ಸವದಿಂದ ದೈವ ಸಂತೃಪ್ತಿಗಾಗಿ ಕಂಚಿಕಲ್ಲಿಗೆ ಕಾಯಿ ಸೇಜನೆಯೊಂದಿಗೆ ನೇಮೋತ್ಸವ ಪರಿಸಮಾಪ್ತಿಯಾಯಿತು.

ಪ್ರತಿಷ್ಠಿತ ‘ರಾಮಜಾಲು ಗರಡಿ ಗೌರವ ಪ್ರಶಸ್ತಿ’ ಪ್ರದಾನ
ಸಂಜೀವ ಪೂಜಾರಿಯವರು ಸಮಾಜದ ಸಾಧಕರನ್ನು ಹಾಗೇ ಕಾರ್ಯಕ್ರಮಕ್ಕೆ ಸಹಕರಿಸಿದ ಪ್ರತಿಯೊಬ್ಬರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಕಳೆದ ಹಲವು ವರ್ಷಗಳಿಂದ ಮಾಡುತ್ತಲೇ ಬಂದಿದ್ದಾರೆ. ಈ ಹಿಂದೆ ಕೂರೇಲುಗುತ್ತು ಶ್ರೀ ಸುಬ್ಬಪ್ಪ ಪೂಜಾರಿ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದ್ದರು. ಆದರೆ ಈ ವರ್ಷದಿಂದ ರಾಮಜಾಲು ಗರಡಿಯ ಗೌರವವಾಗಿ ‘ರಾಮಜಾಲು ಗರಡಿ ಗೌರವ ಪ್ರಶಸ್ತಿ’ಯನ್ನು ಕೊಡಮಾಡುತ್ತಿದ್ದಾರೆ. ಪ್ರಥಮ ಪ್ರಶಸ್ತಿಯನ್ನು ಮಂಗಳೂರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ, ಸಹಕಾರ ರತ್ನ ಚಿತ್ತರಂಜನ್ ಬೋಳಾರ್‌ರವರಿಗೆ ಪ್ರದಾನ ಮಾಡಲಾಯಿತು. ಶಾಸಕ ಅಶೋಕ್ ಕುಮಾರ್ ರೈಯವರು ಪ್ರಶಸ್ತಿ ಪ್ರದಾನ ಮಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಚಿತ್ತರಂಜನ್‌ರವರ ಪತ್ನಿ ಉಷಾ ಚಿತ್ತರಂಜನ್ ಉಪಸ್ಥಿತರಿದ್ದರು. ಸಂಜೀವ ಪೂಜಾರಿಯವರು ಕೂರೇಲು ಶ್ರೀ ಮಲರಾಯ ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಸಮಾಜದ ವಿವಿಧ ಸ್ತರಗಳ ಸಾಧಕರು, ಕರಸೇವಕರು ಸೇರಿದಂತೆ ಸುಮಾರು 220 ಮಂದಿಯನ್ನು ವೇದಿಕೆಯಲ್ಲಿ ಗುರುತಿಸಿ ಗೌರವಿಸುವ ಮೂಲಕ ದಾಖಲೆ ಬರೆದಿದ್ದರು.

ಬ್ರಹ್ಮಕಲಶೋತ್ಸವ ಸಂಭ್ರಮ ಎದ್ದು ಕಾಣುತ್ತಿದೆ
ರಾಮಜಾಲು ಗರಡಿ ಜಾತ್ರೋತ್ಸವಕ್ಕೆ ನಾನು ೩ ನೇ ಬಾರಿಗೆ ಬರುತ್ತಿದ್ದೇನೆ. ಇಲ್ಲಿ ಬಂದಾಗ ನನಗೆ ಬಹಳಷ್ಟು ಖುಷಿ ಆಗುತ್ತಿದೆ. ಸಹಸ್ರ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಹೆಚ್ಚಾಗಿ ತಾಯಂದಿರೇ ಬರುತ್ತಿದ್ದಾರೆ. ಇದೊಂದು ಬ್ರಹ್ಮಕಲಶೋತ್ಸವದ ಸಂಭ್ರಮದಂತೆ ಕಾಣುತ್ತಿದೆ. ಸಮಾಜದ ಎಲ್ಲರನ್ನು ಸೇರಿಸಿಕೊಂಡು ಅದ್ಧೂರಿಯಾಗಿ ಜಾತ್ರೋತ್ಸವ ನಡೆಸುತ್ತಿರುವ ಸಂಜೀವ ಪೂಜಾರಿಯವರು ಧರ್ಮ ಕಾರ್ಯ ಇಡೀ ಸಮಾಜಕ್ಕೆ ಮಾದರಿಯಾಗಿದೆ ಎಂದು ವಿಚಾರವನ್ನು ಶಾಸಕ ಅಶೋಕ್ ಕುಮಾರ್ ರೈಯವರು ಹೇಳಿದರು.

ಸಂಸದ ಬ್ರಿಜೇಶ್ ಚೌಟ ಭಾಗಿ, ಗರಡಿ ವತಿಯಿಂದ ಗೌರವ ಅರ್ಪಣೆ, ಪ್ರಸಾದ ಸ್ವೀಕಾರ
ದೈವ ದೇವರ ಸೇವೆಯಿಂದ ಜೀವನ ಪಾವನ: ಬ್ರಿಜೇಶ್ ಚೌಟ
ರಾಮಜಾಲು ಗರಡಿ ಜಾತ್ರೋತ್ಸವಕ್ಕೆ ಮಂಗಳೂರು ಸಂಸದ ಬ್ರಿಜೇಶ್ ಚೌಟರವರು ರಾತ್ರಿ ಭೇಟಿ ನೀಡಿದರು. ರಾಮಜಾಲು ಗರಡಿ ಜಾತ್ರೋತ್ಸವವನ್ನು ಕಂಡು ಖುಷಿಗೊಂಡ ಸಂಸದರು ಬಹಳಷ್ಟು ಮೆಚ್ಚುಗೆಯ ಮಾತುಗಳನ್ನಾಡಿದರು. ಈ ಭೂಮಿಯಲ್ಲಿ ಯಾರೂ ಕೂಡ ಶಾಶ್ವತರಲ್ಲ, ಶಾಶ್ವತವೆಂದಿದ್ದರೆ ಅದು ದೈವ ದೇವರು ಮಾತ್ರ ಆದ್ದರಿಂದ ನಾವೆಲ್ಲರೂ ಇಂತಹ ಧರ್ಮ ನೇಮೋತ್ಸವ, ಜಾತ್ರೋತ್ಸವದಲ್ಲಿ ಭಾಗಿಗಳಾಗುವ ಮೂಲಕ ದೈವ ದೇವರ ಕೃಪೆಗೆ ಪಾತ್ರರಾಗಬೇಕು. ಕೂರೇಲು ಸಂಜೀವ ಪೂಜಾರಿಯವರು ಓರ್ವ ದೈವ ಭಕ್ತ ಎಂಬುದನ್ನು ತಿಳಿದುಕೊಂಡಿದ್ದೆ ಅದು ನಿಜವೆಂದು ಇಲ್ಲಿ ನಡೆಯುವ ಜಾತ್ರೋತ್ಸವವನ್ನು ಕಂಡಾಗ ನನಗಾಯಿತು. ಮುಂದಿನ ದಿನಗಳಲ್ಲಿ ಸಂಜೀವ ಪೂಜಾರಿಯವರಿಂದ ಇನ್ನಷ್ಟು ಧರ್ಮ ಕಾರ್ಯಗಳು ನಡೆಯಲಿ ಎಂದು ಹೇಳಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಂಸದರಿಗೆ ರಾಮಜಾಲು ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲುರವರು ಗೌರವ ಸನ್ಮಾನ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿ, ಶ್ರೀ ಬೈದೇರುಗಳ ಪ್ರಸಾದ ನೀಡಿ ಸತ್ಕರಿಸಿ ಶ್ರೀ ಬ್ರಹ್ಮಬೈದೇರುಗಳ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ನಿಮ್ಮಿಂದ ಈ ರಾಜ್ಯಕ್ಕೆ ಒಳ್ಳೆಯದು ಆಗಲಿ, ಸಂಸದರಾದ ಮೊದಲ ವರ್ಷವೇ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ ಸಂಸದರು ನೀವಾಗಿದ್ದೀರಿ, ಸನಾತನ ಹಿಂದೂ ಧರ್ಮದ ಆಚಾರ ವಿಚಾರವನ್ನು ತಿಳಿದುಕೊಂಡಿರುವ ಓರ್ವ ವೀರ ಯೋಧರಾದ ನಿಮ್ಮ ಆಗಮನ ನಮ್ಮ ಯುವಕರಲ್ಲಿ ಮತ್ತಷ್ಟು ಚೈತನ್ಯ ಮೂಡಿಸಿದೆ, ನಿಮ್ಮ ಆಗಮನ ನಮಗೆ ಬಹಳಷ್ಟು ಖುಷಿ ಮತ್ತು ಹೆಮ್ಮೆ ತಂದಿದೆ ಎಂದು ಹೇಳಿ ಶುಭ ಹಾರೈಸಿದರು. ರಾತ್ರಿ 11.45 ರ ಸುಮಾರಿಗೆ ಆಗಮಿಸಿದ ಸಂಸದ ಬ್ರಿಜೇಶ್ ಚೌಟರವರು ಮಧ್ಯರಾತ್ರಿ 1 ಗಂಟೆಯ ತನಕ ಗರಡಿಯಲ್ಲಿದ್ದು ಕೋಟಿ ಚೆನ್ನಯರ ನರ್ತನ, ಬೈದೇರುಗಳು ಮೀಸೆ ಧರಿಸುವುದು ಇತ್ಯಾದಿ ಕಾರ್ಯಕ್ರಮಗಳನ್ನು ನೋಡುವ ಮೂಲಕ ಕೋಟಿ ಚೆನ್ನಯರ ಕೃಪೆಗೆ ಪಾತ್ರರಾದರು. ಉಜಿರೆ ಎಕ್ಸೆಲ್ ಕಾಲೇಜಿನ ಉಪನ್ಯಾಸಕ ಡಾ. ನವೀನ್ ಮರಿಕೆ ಕಾರ್ಯಕ್ರಮ ನಿರೂಪಿಸಿದರು.

“ ನಾನು ಎಂಬುದು ಇಲ್ಲಿ ನಿಮಿತ್ತ ಮಾತ್ರ, ಎಲ್ಲವೂ ದೈವ ದೇವರು ಹಾಗೂ ಊರಪರವೂರ ಭಕ್ತರ ಸಹಕಾರದಿಂದ ಸಾಧ್ಯವಾಗಿದೆ. ಜಾತ್ರೋತ್ಸವಕ್ಕೆ ಆಗಮಿಸಿದ ಸಂಸದರಾದ ಬ್ರಿಜೇಶ್ ಚೌಟ, ಶಾಸಕ ಅಶೋಕ್ ರೈಯವರಿಗೆ ಹಾಗೇ ಸಂಜೀವ ಮಠಂದೂರುರವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ, ಭಾಗವಹಿಸಿದ ಎಲ್ಲಾ ಅತಿಥಿ, ಅಭ್ಯಾಗತರಿಗೆ, ಸೇರಿದ ಸಹಸ್ರ ಸಂಖ್ಯೆಯ ಭಕ್ತಾಧಿಗಳಿಗೆ ಶ್ರೀ ಬ್ರಹ್ಮಬೈದೇರುಗಳು ಒಳ್ಳೆಯದನ್ನು ಮಾಡಲಿ, ಮುಂದೆಯೂ ತಮ್ಮೆಲ್ಲರ ಸಹಕಾರ ಹೀಗೆ ಇರಲಿ…’
ಕೆ.ಸಂಜೀವ ಪೂಜಾರಿ ಕೂರೇಲು, ಆಡಳಿತ ಮೊಕ್ತೇಸರರು, ರಾಮಜಾಲು ಗರಡಿ

LEAVE A REPLY

Please enter your comment!
Please enter your name here