ಅಧ್ಯಕ್ಷ: ಪಿ.ಕೆ ಮಹಮ್ಮದ್, ಕಾರ್ಯದರ್ಶಿ: ಭವ್ಯ ರೈ, ಉಪಾಧ್ಯಕ್ಷ: ಸದಾಶಿವ , ಕೋಶಾಧಿಕಾರಿ: ರಮೇಶ್ ಆಳ್ವ
ಪುತ್ತೂರು: ಪ್ರತಿಷ್ಠಿತ ಕುಂಬ್ರ ವರ್ತಕರ ಸಂಘದ ಮಹಾಸಭೆಯು ಜ.21 ರಂದು ಕುಂಬ್ರ ನ್ಯೂ ಫ್ಯಾಮಿಲಿ ಕಾಂಪ್ಲೆಕ್ಸ್ನಲ್ಲಿರುವ ವರ್ತಕರ ಸಂಘದ ಕಛೇರಿಯಲ್ಲಿ ಸಂಘದ ಅಧ್ಯಕ್ಷ ರಫೀಕ್ ಅಲ್ರಾಯರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಭವ್ಯ ರೈಯವರು ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಸಂಶುದ್ದೀನ್ ಎ.ಆರ್.ರವರು ಲೆಕ್ಕಪತ್ರ ಮಂಡಿಸಿದರು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಂಘದ ಗೌರವ ಸಲಹೆಗಾರರಾದ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಮತ್ತು ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕರವರು ಚುನಾವಣಾ ಅಧಿಕಾರಿಗಳಾಗಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಅಧ್ಯಕ್ಷಗಾದಿಗೆ ರಾಜೇಶ್ ರೈ ಪರ್ಪುಂಜ, ರಮೇಶ್ ಅಳ್ವ ಕಲ್ಲಡ್ಕ, ಪಿ.ಕೆ ಮಹಮ್ಮದ್, ಸಂಶುದ್ದೀನ್ ಎ.ಆರ್, ಶರತ್ ರೈ ದೇರ್ಲರವರ ಹೆಸರುಗಳು ಸಭೆಯಿಂದ ಕೇಳಿಬಂತು. ಬಳಿಕ ನಡೆದ ಮಾತುಕತೆಯಲ್ಲಿ ಪಿಶ್ ಮರ್ಚೆಂಟ್ ಮಾಲಕ ಪಿ.ಕೆ ಮಹಮ್ಮದ್ರವರನ್ನು ಸರ್ವ ಸದಸ್ಯರ ಒಪ್ಪಿಗೆಯ ಮೇರೆಗೆ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಉಳಿದಂತೆ ಉಪಾಧ್ಯಕ್ಷರಾಗಿ ಸದಾಶಿವ ಶೇಖಮಲೆ, ಪ್ರಧಾನ ಕಾರ್ಯದರ್ಶಿಯಾಗಿ ಭವ್ಯ ರೈ, ಕೋಶಾಧಿಕಾರಿಯಾಗಿ ರಮೇಶ್ ಆಳ್ವ ಕಲ್ಲಡ್ಕ ಹಾಗೂ ಜತೆ ಕಾರ್ಯದರ್ಶಿಯಾಗಿ ರೇಷ್ಮಾ ಮೆಲ್ವಿನ್ರವರುಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಮೋಹನದಾಸ ರೈ ಕುಂಬ್ರ, ರಾಜೇಶ್ ರೈ ಪರ್ಪುಂಜ, ಸಂಶುದ್ದೀನ್ ಎ.ಆರ್, ಶರತ್ ಕುಮಾರ್ ರೈ, ಪ್ರದೀಪ್ ಶಾಂತಿವನ, ಉದಯ ಆಚಾರ್ಯ ಕೃಷ್ಣನಗರ, ಲಕ್ಷ್ಮಣ ಕೆ, ಅಝರ್ ಷಾ ಕುಂಬ್ರ, ಶುತಿಚಂದ್ರ, ಬಾಲಕೃಷ್ಣ ಪಾಟಾಳಿ, ಹನೀಫ್ ತರಕಾರಿರವರುಗಳನ್ನು ಆಯ್ಕೆ ಮಾಡಲಾಯಿತು. ಸ್ಥಾಪಕ ಅಧ್ಯಕ್ಷರಾಗಿ ಶ್ಯಾಮ್ಸುಂದರ ರೈ ಕೊಪ್ಪಳ ಹಾಗು ಗೌರವ ಸಲಹೆಗಾರರಾಗಿ ಈ ಹಿಂದಿನ ಸದಸ್ಯರುಗಳಾದ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕ, ಚಂದ್ರಕಾಂತ ಶಾಂತಿವನರವರುಗಳನ್ನು ಮುಂದುವರಿಸುವುದು ಎಂದು ತೀರ್ಮಾನಿಸಲಾಯಿತು.
ಗೌರವ ಸಲಹೆಗಾರ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈಯವರು ಮಾತನಾಡಿ, ಕುಂಬ್ರ ವರ್ತಕರ ಸಂಘಕ್ಕೆ ಒಂದು ಒಳ್ಳೆಯ ಹೆಸರು, ಘನತೆ, ಗೌರವ ಇದೆ. ಇನ್ನು ಮುಂದಿನ ಆಡಳಿತ ಮಂಡಳಿ ಕೂಡ ಈ ಘನತೆ ಗೌರವವನ್ನು ಉಳಿಸಿಕೊಂಡು ಸಂಘದ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದು ಹೇಳಿದರು. ಗೌರವ ಸಲಹೆಗಾರ ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕರವರು ಮಾತನಾಡಿ, ಕುಂಬ್ರ ವರ್ತಕರ ಸಂಘದ ಬಗ್ಗೆ ಪ್ರತಿಯೊಬ್ಬರು ಒಳ್ಳೆಯ ಮಾತುಗಳನ್ನಾಡುತ್ತಿದ್ದಾರೆ. ಸಂಘದಿಂದ ಒಳ್ಳೆಯ ಕೆಲಸಗಳು ಕೂಡ ನಡೆಯುತ್ತಿದೆ. ಮುಂದೆಯೂ ಇದೇ ರೀತಿ ಮುಂದುವರಿಯಲಿ ಎಂದು ಹೇಳಿ ಶುಭ ಹಾರೈಸಿದರು. ಸ್ಥಾಪಕ ಅಧ್ಯಕ್ಷ ಶ್ಯಾಮ್ಸುಂದರ ರೈ ಕೊಪ್ಪಳ ಮಾತನಾಡಿ, ಕುಂಬ್ರ ವರ್ತಕರ ಸಂಘದ ಹತ್ತೂರಿನಲ್ಲೂ ಪ್ರಸಿದ್ಧಿ ಪಡೆದಿದೆ. ನಾವು ಎಲ್ಲಿ ಹೋದರು ನಮ್ಮನ್ನು ನೀವು ಕುಂಬ್ರ ವರ್ತಕರ ಸಂಘದವರು ಅಲ್ವಾ ಎಂದು ಗುರುತಿಸುವ ಮಟ್ಟಕ್ಕೆ ಬೆಳೆದಿದೆ ಇದು ನಮ್ಮ ಸಂಘದ ಹೆಮ್ಮೆಯಾಗಿದೆ ಎಂದು ಹೇಳಿ ಶುಭ ಹಾರೈಸಿದರು.
ನೂತನ ಅಧ್ಯಕ್ಷ ಪಿ.ಕೆ ಮಹಮ್ಮದ್ ಕೂಡುರಸ್ತೆರವರು ಮಾತನಾಡಿ, ಕುಂಬ್ರ ವರ್ತಕರ ಸಂಘವು ಜನಪರ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದೆ. ಇನ್ನು ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಪಡೆದುಕೊಂಡು ಉತ್ತಮ ಕೆಲಸಗಳನ್ನು ಮಾಡಿಕೊಂಡು ಬರುತ್ತೇನೆ ಎಂದು ಹೇಳಿ ಎಲ್ಲರ ಸಹಕಾರ ಕೋರಿದರು. ಮಾಜಿ ಅಧ್ಯಕ್ಷ ದಿವಾಕರ ಶೆಟ್ಟಿ ಪ್ರಾರ್ಥಿಸಿದರು. ಮಾಜಿ ಕೋಶಾಧಿಕಾರಿ ಸಂಶುದ್ದೀನ್ ಎ.ಆರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಭವ್ಯ ರೈ ವಂದಿಸಿದರು. ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.
3 ನೇ ಬಾರಿಗೆ ಪ್ರಧಾನ ಕಾರ್ಯದರ್ಶಿಯಾಗಿ ಭವ್ಯ ರೈ
ಕುಂಬ್ರ ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಭವ್ಯ ರೈಯವರು ಸತತ ಮೂರನೇ ಬಾರಿಗೆ ಆಯ್ಕೆಯಾಗುತ್ತಿದ್ದಾರೆ. ಬಬ್ಲಿ ಬ್ಯೂಟಿ ಪಾರ್ಲರ್ ಮಾಲಕಿಯಾಗಿರುವ ಇವರು ಕಳೆದೆರಡು ವರ್ಷಗಳಲ್ಲೂ ಪ್ರಧಾನ ಕಾರ್ಯದರ್ಶಿಯಾಗಿ ಸಂಘವನ್ನು ಮುನ್ನಡೆಸಿದ್ದಾರೆ.
‘ ಎರಡು ವರ್ಷಗಳ ಕಾಲ ಅಧ್ಯಕ್ಷನಾಗಿ ಎಲ್ಲರ ಸಹಕಾರದೊಂದಿಗೆ ಸಂಘವನ್ನು ಮುನ್ನೆಡೆಸಿದ್ದೇನೆ. 30 ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಮಾಡಿದ್ದು ಅಲ್ಲದೆ ಪೊರ್ಲುದ ಕುಂಬ್ರ ಸೆಲ್ಫಿ ಪಾಯಿಂಟ್ನಂತಹ ಕಾರ್ಯಕ್ರಮಗಳನ್ನು ಕೂಡ ಮಾಡಿದ್ದೇವೆ. ಸಹಕಾರ ನೀಡಿದ ಸರ್ವರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ.’
ರಫೀಕ್ ಅಲ್ರಾಯ, ನಿಕಟಪೂರ್ವ ಅಧ್ಯಕ್ಷರು ವರ್ತಕರ ಸಂಘ ಕುಂಬ್ರ