ನೆಲ್ಯಾಡಿ: ಕೊಣಾಲು ಗ್ರಾಮದ ಪಾಂಡಿಬೆಟ್ಟು ಶ್ರೀ ಶಿವಗಿರಿ ಅಯ್ಯಪ್ಪ ಭಜನಾ ಸೇವಾ ಸಂಘದ ವತಿಯಿಂದ 42ನೇ ವರ್ಷದ ಮಕರ ಸಂಕ್ರಾಂತಿ ಉತ್ಸವ, 25ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆ ಜ.14ರಂದು ಭಜನಾ ಮಂದಿರದಲ್ಲಿ ನಡೆಯಿತು.
ಬೆಳಿಗ್ಗೆ ದೇವತಾ ಪ್ರಾರ್ಥನೆ, ಗಣಹೋಮ, ಶ್ರೀ ಅಶ್ವತ್ಥ ಪೂಜೆ ನಡೆಯಿತು. ಬಳಿಕ ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದ ಅರ್ಚಕ ಶ್ರೀನಿವಾಸ ಬಡೆಕ್ಕಿಲ್ಲಾಯರ ನೇತೃತ್ವದಲ್ಲಿ ಸೌಪರ್ಣಿಕಾ ಕಲಾಕೇಂದ್ರ ಶರವೂರು ಇವರ ಚೆಂಡೆ ವಾದ್ಯದೊಂದಿಗೆ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.
ಧಾರ್ಮಿಕ ಸಭೆ:
ಮಧ್ಯಾಹ್ನ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ಉಪ್ಪಿನಂಗಡಿ ಶ್ರೀ ಮಾಧವ ಶಿಶು ಮಂದಿರದ ಪ್ರಧಾನ ಕಾರ್ಯದರ್ಶಿ, ಪತ್ರಕರ್ತ ಯು.ಎಲ್.ಉದಯಕುಮಾರ್ ಅವರು, ಪವಿತ್ರವಾದ ಹಿಂದೂ ಧರ್ಮವೂ ಸನಾತನೀಯ ಧರ್ಮವಾಗಿದೆ. ಇಡೀ ವಿಶ್ವಕ್ಕೆ ಗುರುವಿನ ಸ್ಥಾನದಲ್ಲಿದೆ. ನಮ್ಮ ಧರ್ಮದ ಸಂಸ್ಕಾರ, ಗೌರವವನ್ನು ಅರಿತು ನಾವೆಲ್ಲರೂ ಸನ್ನಡತೆಯಿಂದ ಸುಸಂಸ್ಕೃತ ಸಮಾಜವನ್ನು ನಿರ್ಮಿಸಬೇಕಾಗಿದೆ ಎಂದರು.
ಅತಿಥಿಯಾಗಿದ್ದ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಗಂಗಾಧರ ಶೆಟ್ಟಿ ಹೊಸಮನೆಯವರು ಮಾತನಾಡಿ, ಪವಿತ್ರ ಗ್ರಂಥಗಳಾದ ಮಹಾಭಾರತ ಮತ್ತು ರಾಮಾಯಣ ಮಹಾಕಾವ್ಯಗಳು ಹಿಂದೂ ಧರ್ಮದ ಎರಡು ಕಣ್ಣುಗಳಿದ್ದಂತೆ. ಈ ಗ್ರಂಥಗಳಲ್ಲಿನ ಸಾರವನ್ನು ಅರಿತು ಯುವ ಪೀಳಿಗೆಗೆ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕಾಗಿದೆ. ಧರ್ಮವು ನಾವು ಮಾಡುವ ಕರ್ಮದಲ್ಲಿ ಇರುತ್ತದೆ. ನಿಸ್ವಾರ್ಥ ಸೇವಾ ಮನೋಭಾವದಿಂದ ಮಾಡುವ ಕಾರ್ಯ ಭಗವಂತನಿಗೆ ಅರ್ಪಿತವಾಗುತ್ತದೆ ಎಂದರು.
ಭರವಸೆಯ ಕವಯಿತ್ರಿ ಪ್ರಣಮ್ಯ ಜಿ.ಚಾಮೆತ್ತಮೂಲೆ ಅವರು ತಮ್ಮ ಸಾಧನೆಗೆ ಪ್ರೇರಣೆ ನೀಡಿದ ಅಂಶಗಳ ಬಗ್ಗೆ ಮಾತನಾಡಿದರು. ಶ್ರೀ ಶಿವಗಿರಿ ಅಯ್ಯಪ್ಪ ಭಜನಾ ಸೇವಾ ಸಂಘದ ಅಧ್ಯಕ್ಷ ಕೆ.ಕುಮಾರನ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕ ಕೆ.ತಿಮ್ಮಪ್ಪ ಗೌಡ ಕಾಯರ್ತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುಷ್ಪಾಜಯಂತ್ ಪಾಂಡಿಬೆಟ್ಟು ವರದಿ ವಾಚಿಸಿದರು. ಕಾರ್ಯದರ್ಶಿ ಲೋಕೇಶ್ ಗಾಣದಕೊಟ್ಟಿಗೆ ಸ್ವಾಗತಿಸಿದರು. ಪ್ರವೀಣ ಎಸ್.ಎಂ.ಮಣ್ಣಮಜಲು ವಂದಿಸಿದರು. ಲಿಂಗಪ್ಪ ಗೌಡ ದರ್ಖಾಸು ನಿರೂಪಿಸಿದರು. ಸತೀಶ್ ರೈ ಕೊಣಾಲುಗುತ್ತು, ವೈ.ಡೊಂಬಯ್ಯ ಗೌಡ ಎಣ್ಣೆತ್ತೋಡಿ, ಸುಂದರ ಗೌಡ ಎನ್. ಸುರಕ್ಷಾ ನಿಲಯ, ನೋಣಯ್ಯ ಗೌಡ ಡೆಬ್ಬೇಲಿ, ಬಾಬು ಪಿ.ಪಾಂಡಿಬೆಟ್ಟು, ವಿನಯ ಆರ್ಲ, ಪುರುಷೋತ್ತಮ ಬರೆಮೇಲು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ಭಜನೆ, ರಾತ್ರಿ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ ನಡೆಯಿತು. ಬಳಿಕ ಮಹಾಮಂಗಳಾರತಿ, ಅನ್ನಸಂತರ್ಪಣೆ ನಡೆಯಿತು.