ಶಿರಾಡಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಯು-ಟರ್ನ್ ಬೇಡಿಕೆ : ಸಹಾಯಕ ಆಯುಕ್ತರಿಂದ ಪರಿಶೀಲನೆ

0

ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಪೇಟೆಯಿಂದ ಉದನೆ ಕಡೆಗೆ 1 ಕಿ.ಮೀ.ಮುಂದೆ ಇಡತ್ತಡ್ಕ ಕೆ.ವಿ.ಪತ್ರೋಸ್ ಕುನ್ನತ್‌ರವರ ಮನೆಯ ಮುಂಭಾಗದಲ್ಲಿ ಯು-ಟರ್ನ್ ಬೇಡಿಕೆ ಹಿನ್ನೆಲೆಯಲ್ಲಿ ಪುತ್ತೂರು ಸಹಾಯಕ ಆಯುಕ್ತರು ಜ.22ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು ಶಿರಾಡಿ ಪೇಟೆಯಿಂದ ಉದನೆ ಕಡೆಗೆ ಸುಮಾರು 1 ಕಿ.ಮೀ.ಮುಂದೆ ಇಡತ್ತಡ್ಕ ಕೆ.ವಿ.ಪತ್ರೋಸ್ ಕುನ್ನತ್‌ರವರ ಮನೆಯ ಮುಂಭಾಗದಲ್ಲಿ ಯು-ಟರ್ನ್ ಅಗತ್ಯವಿದೆ. ಇಲ್ಲಿ ಗ್ರಾಮ ಪಂಚಾಯತ್ ರಸ್ತೆ ಸಂಪರ್ಕವಿದ್ದು ಸುಮಾರು 25 ಕುಟುಂಬಸ್ಥರು ಬಳಕೆ ಮಾಡುತ್ತಿದ್ದಾರೆ. ಇಲ್ಲಿ ಯು-ಟರ್ನ್ ಇಲ್ಲದೇ ಇದ್ದಲ್ಲಿ ಈ ಪ್ರದೇಶದ ನಿವಾಸಿಗಳು 6 ಕಿ.ಮೀ.ಮುಂದೆ ಬಂದು ಉದನೆ ಪೇಟೆಯಲ್ಲಿರುವ ಯು-ಟರ್ನ್ ಬಳಸಬೇಕಾಗುತ್ತದೆ. ಆದ್ದರಿಂದ ಇಡತ್ತಡ್ಕ ಕೆ.ವಿ.ಪತ್ರೋಸ್ ಕುನ್ನತ್ ಅವರ ಮನೆಯ ಮುಂಭಾಗ ಯು-ಟರ್ನ್ ನೀಡಲು ಕ್ರಮ ಕೈಗೊಳ್ಳಬೇಕೆಂದು ಶಿರಾಡಿ ಗ್ರಾ.ಪಂ.ನಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಮನವಿ ಮಾಡಲಾಗಿತ್ತು. ಅವೈಜ್ಞಾನಿಕ ಯು-ಟರ್ನ್‌ಗಳ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಶಿರಾಡಿ ಗಡಿನಾಡ ರಕ್ಷಣಾ ಸೇನೆ ವತಿಯಿಂದಲೂ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಯವರು ಪುತ್ತೂರು ಉಪವಿಭಾಗಧಿಕಾರಿಯವರಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜ.22ರಂದು ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮೊಹಪಾತ್ರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಸ್ಥರ ಅಹವಾಲು ಪಡೆದುಕೊಂಡರು.

ಯು-ಟರ್ನ್ ಸ್ಥಾನ ಪಲ್ಲಟ ಮಾಡದಂತೆ ಮನವಿ:
ಶಿರಾಡಿ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಬಳಿ ಯು-ಟರ್ನ್ ಇದ್ದು ಇದನ್ನು ಸ್ಥಾನ ಪಲ್ಲಟ ಮಾಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಇಲ್ಲಿ ಯು-ಟರ್ನ್ ಅತೀ ಅಗತ್ಯವಾಗಿದ್ದು ಇದರ ಸ್ಥಾನ ಪಲ್ಲಟ ಮಾಡದಂತೆಯೂ ಗ್ರಾಮಸ್ಥರು ಸಹಾಯಕ ಆಯುಕ್ತರಿಗೆ ಮನವಿ ಮಾಡಿದರು. ಅಡ್ಡಹೊಳೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಮೀಪ ಯು-ಟರ್ನ್‌ಗೆ ಗ್ರಾಮಸ್ಥರು ಬೇಡಿಕೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಕಿ.ಮೀ.259+ 415 ಮತ್ತು ಕಿ.ಮೀ.260+ 090ರ ಮಧ್ಯೆ ಅಂದಾಜು 500 ಮೀಟರ್‌ಗಿಂತಲೂ ಹೆಚ್ಚಿನ ಅಂತರವಿರುವುದರಿಂದ ಇಲ್ಲಿ ಹೆಚ್ಚುವರಿಯಾಗಿ ಒಂದು ಯು-ಟರ್ನ್ ರಚನೆ ಮಾಡುವುದರಿಂದ ಸುಮಾರು 20ರಷ್ಟು ಕುಟುಂಬಸ್ಥರಿಗೆ ಶಿರಾಡಿ ಪೇಟೆಗೆ ಬರಲು ಸುಮಾರು 8 ಕಿ.ಮೀ.ಹೆಚ್ಚುವರಿ ಪ್ರಯಾಣ ಮಾಡಿ ಉದನೆಯನ್ನು ಸುತ್ತಿ ಬಳಸುವ ಅವಶ್ಯಕತೆ ಇರುವುದಿಲ್ಲ ಎಂಬ ವಿಚಾರವನ್ನು ಗ್ರಾಮಸ್ಥರು ಸಹಾಯಕ ಆಯುಕ್ತರಿಗೆ ಮನವರಿಕೆ ಮಾಡಿದರು.

ಸರ್ವೀಸ್ ರಸ್ತೆ ಇಲ್ಲದೆ ಸಮಸ್ಯೆ:
ಶಿರಾಡಿ ಗ್ರಾಮದ ಶಿರಾಡಿ ಪೇಟೆ ಗ್ರಾಮದ ಕೇಂದ್ರ ಸ್ಥಾನವಾಗಿದ್ದು ಇಲ್ಲಿ 5 ಉಪಕೇಂದ್ರಗಳನ್ನು ಹೊಂದಿರುವ ಪ್ರಾಥಮಿಕ ಆರೋಗ್ಯ ಕೇಂದ್ರ, ಸರಕಾರಿ ಪಶು ಆಸ್ಪತ್ರೆ, ಸಾರ್ವಜನಿಕ ಗ್ರಂಥಾಲಯ, ಒಂದು ಪ್ರಾಥಮಿಕ ಶಾಲೆ, ಎರಡು ಅಂಗನವಾಡಿಗಳು, ಒಂದು ರಾಷ್ಟ್ರೀಕೃತ ಬ್ಯಾಂಕ್, ಒಂದು ಸಹಕಾರಿ ಬ್ಯಾಂಕ್, ಕ್ಯಾಂಪ್ಕೋ ಖರೀದಿ ಕೇಂದ್ರ, ಎರಡು ಪೆಟ್ರೋಲ್ ಬಂಕ್, ಒಂದು ಗ್ಯಾಸ್ ವಿತರಣಾ ಕೇಂದ್ರ, 1200ಕ್ಕಿಂತಲೂ ಹೆಚ್ಚಿನ ಮತದಾರರಿರುವ ಮತಗಟ್ಟೆ, ಯುವಕ ಮಂಡಲ, ನಾಲ್ಕು ಚರ್ಚ್‌ಗಳು, ಒಂದು ದೇವಸ್ಥಾನ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿ, ಹಲವು ಹೋಟೆಲ್, ಅಂಗಡಿ ಮುಂಗಟ್ಟುಗಳು ಕಾರ್ಯಾಚರಿಸುತ್ತಿವೆ. ಅಲ್ಲದೇ ಇಲ್ಲಿ ನೂತನ ಪಂಚಾಯತ್ ಕಟ್ಟಡಕ್ಕೆ ಸ್ಥಳ ಕಾದಿರಿಸಿದ್ದು ಕಾಮಗಾರಿ ಆರಂಭವಾಗಬೇಕಿದೆ. ಆದರೂ ರಾಷ್ಟ್ರೀಯ ಹೆದ್ದಾರಿಯವರು ಈ ಪೇಟೆಗೆ ಸರ್ವೀಸ್ ರಸ್ತೆಯನ್ನು ನಿರ್ಮಿಸದೆ ಇರುವುದರಿಂದ ಈಗ ಸಮಸ್ಯೆ ಎದುರಾಗಿದೆ. ನಾಲ್ಕು ಪಥಗಳ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಪೇಟೆಗಳಲ್ಲಿ ಸರ್ವೀಸ್ ರಸ್ತೆ ನಿರ್ಮಿಸದೇ ಇದ್ದಲ್ಲಿ ಜನರ ಸುಗಮ ಸಂಚಾರಕ್ಕೆ ಹೆಚ್ಚುವರಿ ಯು-ಟರ್ನ್ ಒದಗಿಸಲು ಅವಕಾಶವಿರುವುದರಿಂದ ಈ ಬಗ್ಗೆ ಗಮನ ಹರಿಸಿ ಗೊಂದಲ ಪರಿಹರಿಸುವಂತೆ ಗ್ರಾ.ಪಂ.ಸದಸ್ಯ ಸಣ್ಣಿ ಜೋನ್ ಮನವಿ ಮಾಡಿದ್ದಾರೆ.

ಪುತ್ತೂರು ಡಿವೈಎಸ್‌ಪಿ ಅರುಣ್ ನಾಗೇಗೌಡ, ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ, ತಾ.ಪಂ.ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ, ಶಿರಾಡಿ ಗ್ರಾ.ಪಂ.ಪಿಡಿಒ ಯಶವಂತ, ಗ್ರಾಮ ಆಡಳಿತಾಧಿಕಾರಿ ಸಂತೋಷ್, ಶಿರಾಡಿ ಗ್ರಾ.ಪಂ.ಅಧ್ಯಕ್ಷ ಕಾರ್ತಿಕೇಯನ್, ಸದಸ್ಯ ಸಣ್ಣಿ ಜೋನ್. ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಗ್ರಾಮಸ್ಥರು, ವರ್ತಕರು ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದರು.

LEAVE A REPLY

Please enter your comment!
Please enter your name here