ಪುತ್ತೂರು:ಆರ್ಯಾಪು ಗ್ರಾಮದ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ, ಜಾತ್ರೋತ್ಸವ ಹಾಗೂ ಕ್ಷೇತ್ರದ ದೈವಗಳ ನೇಮೋತ್ಸವವು ಜ.26ರಂದು ವಿವಿಧ ವೈದಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು.
ವೇ.ಮೂ ಸುರೇಶ ನಕ್ಷತ್ರಿತ್ತಾಯರವರ ಉಪಸ್ಥಿತಿಯಲ್ಲಿ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯರವರ ನೇತೃತ್ವದಲ್ಲಿ ಜ.25ರಂದು ಸಂಜೆ ಗ್ರಾಮದ ವಿವಿಧ ಭಾಗಗಳಿಂದ ಸಂಗ್ರಹಗೊಂಡ ಹಸಿರು ಹೊರೆಕಾಣಿಕೆ ಹಾಗೂ ದೇವರಿಗೆ ನೂತನವಾಗಿ ಸಮರ್ಪಣೆಯಾಲಿರುವ ಪಲ್ಲಕಿಯು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಆಗಮಿಸಿತು.
ನಂತರ ಕ್ಷೇತ್ರದಲ್ಲಿ ಉಗ್ರಾಣ ಪೂಜೆ, ದುರ್ಗಾಪೂಜೆ, ಶ್ರೀ ದೇವರಿಗೆ ವಿಶೇಷ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು.
ಜ.26ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಗಣಪತಿಹೋಮ, ನಾಗತಂಬಿಲ, ಆಶ್ಲೇಷ ಬಲಿ, ದೈವ ತಂಬಿಲ, ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ದೇವರಿಗೆ ಕಲಶ ಪೂಜೆ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು. ಈ ವರ್ಷದ ಜಾತ್ರೋತ್ಸವದಲ್ಲಿ ವಿಶೇಷವಾಗಿ ಗಿರಿಜಾ, ರವೀಂದ್ರ ಗೌಡ ಎಸ್ ಮತ್ತು ಮನೆಯವರು ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿದಪಲ್ಲಕ್ಕಿ ಸಮರ್ಪಣೆಗೊಂಡಿತು.
ಸಂಜೆ ಕ್ಷೇತ್ರದ ದೈವಗಳಾದ ಧೂಮಾವತಿ ಹಾಗೂ ಗುಳಿಗ ದೈವಗಳ ಭಂಡಾರ ತೆಗೆದ ಬಳಿಕ ಶ್ರೀ ದೇವರ ಉತ್ಸವ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದ ಬಳಿಕ ಧೂಮಾವತಿ ಹಾಗೂ ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ.