ಸೌಲಭ್ಯ ದೊರೆಯಲು ಅಶೋಕ್ ರೈ ಕಾರಣ-ತನಿಯಪ್ಪ
ಪುತ್ತೂರು: ಪುತ್ತೂರು ತಾಲೂಕಿನ 13 ಕೊರಗ ಕುಟುಂಬಗಳಿಗೆ ಅಡುಗೆ ಅನಿಲ ಕಿಟ್ ವಿತರಣೆಯಾಗುವುದರೊಂದಿಗೆ ಪುತ್ತೂರು ತಾಲೂಕಿನ ಎಲ್ಲಾ 101 ಕುಟುಂಬಗಳೂ ಅಡುಗೆ ಅನಿಲ ಪಡೆದಂತಾಗಿದೆ. ಇನ್ನು ಯಾವುದೇ ಕುಟುಂಬಗಳೂ ಬಾಕಿ ಇಲ್ಲ ಇದು ಕರ್ನಾಟಕ ಸರಕಾರದ ಮಹತ್ತರ ಕಾರ್ಯವಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು. ಅವರು ಪುತ್ತೂರು ಶಾಸಕರ ಭವನದಲ್ಲಿ ಸರಕಾರದ ವತಿಯಿಂದ ಅಡುಗೆ ಅನಿಲ ಕಿಟ್ ವಿತರಣೆ ಮಾಡಿ ಮಾತನಾಡಿದರು.
ರಾಜ್ಯ ಸರಕಾರ ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ಸರಕಾರಿ ಸೌಲಭ್ಯ ದೊರೆಯುವಂತಾಗಬೇಕು ಎಂಬ ಉದ್ದೇಶದಿಂದ ಎಲ್ಲಾ ಶೋಷಿತ ವರ್ಗಕ್ಕೆ ನೆರವಾಗುವ ಯೋಜನೆಯನ್ನು ಜಾರಿಗೆ ತರುತ್ತಿದೆ. ಕಟ್ಟಿಗೆಯಲ್ಲಿ ಅಡುಗೆ ಮಾಡುತ್ತಿದ್ದ ಕೊರಗ ಕುಟುಂಬಗಳು ಸಮಾಜದಲ್ಲಿ ಮೇಲೆ ಬರಬೇಕು ಎಂಬ ಉದ್ದೇಶದಿಂದ ಕಿಟ್ ವಿತರಣೆಯನ್ನು ಮಾಡಿದೆ ಎಂದು ಶಾಸಕರು ಹೇಳಿದರು.
ಪಂಚ ಗ್ಯಾರಂಟಿಯೂ ನೆರವಾಗಲಿದೆ
ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಯೂ ಈ ಕುಟುಂಬಗಳಿಗೆ ನೆರವಾಗುತ್ತಿದೆ. ಗ್ಯಾಸ್ ಖರೀದಿಸಲು ಗೃಹಲಕ್ಷ್ಮಿ ಹಣವನ್ನು ಬಳಸಿಕೊಳ್ಳಬಹುದಾಗಿದೆ. ಉಚಿತ ಅಕ್ಕಿ, ಉಚಿತ ಬಸ್ ಮತ್ತು ಉಚಿತ ಕರೆಂಟ್ ಸೌಲಭ್ಯದಿಂದ ಅದೆಷ್ಟೋ ಕುಟುಂಬಗಳು ಇಂದು ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ. ಸಮಾಜದಲ್ಲಿ ಕಡೆಗಣಿಸಲ್ಪಟ್ಟ ಕೊರಗ ಕುಟುಂಬಗಳನ್ನು ಮೇಲಕ್ಕೆ ತರುವ ಕೆಲಸವನ್ನು ಕಾಂಗ್ರೆಸ್ ಸರಕಾರ ನಿರಂತರ ಮಾಡುತ್ತಿದೆ. ಪುತ್ತೂರು ತಾಲೂಕಿನಲ್ಲಿ ಕೊರಗರ ಸಂಖ್ಯೆ ಇರಬಹುದು ಆದರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ಸಮುದಾಯದ ಅನೇಕ ಮಂದಿ ಇದ್ದಾರೆ ಅವರಿಗೆಲ್ಲಾ ಇದರ ಪ್ರಯೋಜನ ದೊರೆತಂತಾಗಿದೆ ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಶಾಸಕರು ಹೇಳಿದರು.
ಸೌಲಭ್ಯ ದೊರೆಯಲು ಅಶೋಕ್ ರೈ ಕಾರಣ; ತನಿಯಪ್ಪ
ತಾಲೂಕು ಕೊರಗ ಸಂಘಟನೆಯ ಅಧ್ಯಕ್ಷರಾದ ತನಿಯಪ್ಪರವರು ಮಾತನಾಡಿ ಪುತ್ತೂರು ತಾಲೂಕಿನಲ್ಲಿರುವ ಸೌಲಭ್ಯ ವಂಚಿತ ಕೊರಗರನ್ನು ಹುಡುಕಿ ಕೊಡುವ ಕೆಲಸವನ್ನು ಶಾಸಕ ಅಶೋಕ್ ರೈ ಮಾಡುತ್ತಿದ್ದಾರೆ. ಶಾಸಕರಿಂದಾಗಿ ಕೊರಗ ಸಮುದಾಯಕ್ಕೆ ನೆರವಾಗುತ್ತಿರುವುದು ಅಭಿನಂದನಾರ್ಹವಾಗಿದೆ. ತಾಲೂಕಿನ ಎಲ್ಲಾ ಕೊರಗ ಕುಟುಂಬಗಳೂ ಶಾಸಕರಿಗೆ ಚಿರಋಣಿಗಳಾಗಿದ್ದೇವೆ. ಕರ್ನಾಟಕ ಸರಕಾರ ಶೋಷಿತರ ಅಭಿವೃದ್ದಿಗೆ ಪಣ ತೊಟ್ಟಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.
ಪುತ್ತೂರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿದರು. ವೇದಿಕೆಯಲ್ಲಿ ಮೂಕಾಂಬಿಕಾ ಗ್ಯಾಸ್ ಏಜೆನ್ಸಿಯ ಶರತ್ ರೈ ಉಪಸ್ಥಿತರಿದ್ದರು.