ನೆಲ್ಯಾಡಿ: ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ಪ್ರಸ್ತುತ ಪಡಿಸುವ 71ನೇ ವರ್ಷದ ಕಲಾಸೇವೆಯ ’ಕಾಂಚನೋತ್ಸವ-2025’ ಜ.25 ಮತ್ತು 26ರಂದು ಕಾಂಚನ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಕಲಾ ಶಾಲೆಯಲ್ಲಿ ನಡೆಯಿತು. 2 ದಿನಗಳ ಕಾಲ ನಡೆದ ಕಾಂಚನೋತ್ಸವವು ಸಂಗೀತಾಸಕ್ತರಿಗೆ ಸಂಗೀತ ರಸದೌತಣವನ್ನು ಉಣಬಡಿಸಿತು.
ಜ.25ರಂದು ಬೆಳಿಗ್ಗೆ ಗಣಹೋಮ ನಡೆಯಿತು. ಬಳಿಕ ಅಭಿಷೇಕ್ ಎನ್.ಎಸ್. ಮತ್ತು ದಿ ಕರ್ನಾಟಿಕ್ ಅಡ್ಡ ಇವರ ತಂಡದಿಂದ ನಾಮ ಸಂಕೀರ್ತನೆ, ಅತಿಥಿ ಕಲಾವಿದರು ಮತ್ತು ವಿದ್ಯಾರ್ಥಿಗಳಿಂದ ಸಂಗೀತ ಸೇವೆ ನಡೆಯಿತು. ಸಂಜೆ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರುಗಳಿಂದ ವಿಶೇಷ ಅಮೋಘ ಕರ್ನಾಟಕ ಸಂಗೀತ ಕಚೇರಿ ನಡೆಯಿತು. ಈ ಸಂಗೀತ ಕಚೇರಿಯಲ್ಲಿ ವಿ.ಕೆ.ಎಸ್.ವಿಷ್ಣುದೇವ್ ನಂಬೂತಿರಿ ಅವರ ಗಾಯನದೊಂದಿಗೆ ಸಂಗೀತ ಕಚೇರಿ ನಡೆಯಿತು. ಇವರಿಗೆ ಪಿಟೀಲಿನಲ್ಲಿ ವಿ.ಚಾರುಲತಾ ರಾಮಾನುಜಂ, ಮೃದಂಗದಲ್ಲಿ ವಿ.ಕೆ.ಯು.ಜಯಚಂದ್ರ ರಾವ್, ಖಂಜಿರದಲ್ಲಿ ವಿ.ಉಡುಪಿ ಶ್ರೀಕಾಂತ್ರವರು ಸಹಕರಿಸಿದರು.
ಜ.26 ರಂದು ಬೆಳಿಗ್ಗೆ ಕಾಂಚನ ಮನೆಯಿಂದ ಸಂಗೀತ ಶಾಲೆಯವರೆಗೆ ಸಂಗೀತ ಸಂತ ಶ್ರೀ ತ್ಯಾಗರಾಜರ ಉತ್ಸವ ಸಂಪ್ರದಾಯ ಕೃತಿಗಳು ಹಾಗೂ ದಿವ್ಯನಾಮ ಸಂಕೀರ್ತನ ಕೀರ್ತನೆಗಳ ಗಾಯನ-ವಾದನಗಳೊಂದಿಗೆ ಸಂಗೀತ ನಡಿಗೆ ಉಂಛವೃತ್ತಿ ನಡೆಯಿತು. ಬಳಿಕ ಪಿಳ್ಳಾರಿ ಗೀತೆಗಳು ಮತ್ತು ಪಂಚರತ್ನ ಕೃತಿಗಳ ಗೋಷ್ಠಿ ಗಾಯನ, ಅತಿಥಿ ಕಲಾವಿದರು ಮತ್ತು ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಸಂಜೆ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರುಗಳಿಂದ ವಿಶೇಷ ಅಮೋಘ ಕರ್ನಾಟಕ ಸಂಗೀತ ಕಚೇರಿ ನಡೆಯಿತು.
ಡಾ.ಜಿ.ಬೇಬಿ ಶ್ರೀರಾಮ್ ಅವರ ಗಾಯನದೊಂದಿಗೆ ಕೊಳಲಿನಲ್ಲಿ ವಿ.ವಾಲ್ಘಾಟ್ ಕೆ.ಎಲ್.ಶ್ರೀರಾಮ್ ಹಾಗೂ ಮೃದಂಗದಲ್ಲಿ ವಿ.ಅನಿರುದ್ಧ ಎಸ್.ಭಟ್, ವಿ.ದಾಶರಥಿ ಕಶ್ಯಪ್ ಅವರು ಸಹಕರಿಸಿದರು. ಎರಡು ದಿನಗಳ ಕಾಲ ನಡೆದ ಕಾಂಚನೋತ್ಸವವು ಸಂಗೀತ ಪ್ರೇಮಿಗಳ ಮನಸೂರೆಗೊಂಡಿತು. ಬೆಂಗಳೂರು ಸಹಿತ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ನೂರಾರು ಮಂದಿ ಕಾರ್ಯಕ್ರಮ ವೀಕ್ಷಿಸಿದರು. ಕಾಂಚನ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಅಕಾಡೆಮಿಯ ಕಾರ್ಯದರ್ಶಿ ರೋಹಿಣಿ ಸುಬ್ಬರತ್ನಂ ಹಾಗೂ ಕಾಂಚನ ಮನೆಯವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.