ಕಾಂಗ್ರೆಸ್ ಪಕ್ಷಕ್ಕೆ ಕಾಂಗ್ರೆಸ್ ಪಕ್ಷದವರನ್ನೇ ಸೇರಿಸಿಕೊಳ್ಳುವ ದುರ್ಗತಿ
ಪುತ್ತೂರು: ಕೆದಂಬಾಡಿಯಲ್ಲಿ ಒಬ್ಬನೇ ಒಬ್ಬ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿಲ್ಲ. ಸೇರ್ಪಡೆಗೊಂಡವರು ಯಾರೂ ಕೂಡ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡವರಲ್ಲ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಹಾಗೂ ಪುತ್ತೂರಿನಲ್ಲಿ ಶಾಸಕರಿರುವ ಪಕ್ಷಕ್ಕೆ ಕಾಂಗ್ರೆಸ್ ಪಕ್ಷದವರನ್ನೇ ಸೇರಿಸಿಕೊಳ್ಳುವ ದುರ್ಗತಿ ಬರಬಾರದಿತ್ತು ಎಂದು ಬಿಜೆಪಿ ಗ್ರಾಮಾಂತರ ಮಂಡಲದ ಕಾರ್ಯದರ್ಶಿ ರತನ್ ರೈ ಕುಂಬ್ರ ಹೇಳಿದರು.
ಜ.30ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇರ್ಪಡೆಗೊಂಡವರ ಪೈಕಿ ರಂಜಿತ್ ಕಳೆದ ಗ್ರಾ.ಪಂ ಚುನಾವಣೆಯಲ್ಲಿ ನಾನು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಸಂದರ್ಭದಲ್ಲಿ ಅದೇ ವಾರ್ಡ್ನಲ್ಲಿ ಅವರು ಕಾಂಗ್ರೆಸ್ ಪಕ್ಷ ಬೆಂಬಲಿತ ಅಭ್ಯರ್ಥಿಯಾಗಿ ನನ್ನ ವಿರುದ್ಧ ಸ್ಪರ್ಧಿಸಿದ್ದರು. ರಂಜಿತ್ ಕಳೆದ 16 ವರ್ಷಗಳಿಂದ ಕಾಂಗ್ರೆಸ್ ಮುಖಂಡ ಬೋಳೋಡಿ ಚಂದ್ರಹಾಸ ರೈಯವರ ಜೊತೆಗೆ ನಿರಂತರವಾಗಿ ಕಾಂಗ್ರೆಸ್ ಪಕ್ಷದ ಎಲ್ಲಾ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದು ಎಲ್ಲರಿಗೂ ತಿಳಿದಿದೆ. ಇವರೇ ಪುನಃ ಕಾಂಗ್ರೆಸ್ಗೆ ಸೇರ್ಪಡೆ ಆಗಿದ್ದಾರೆ ಹೊರತು ಸೇರ್ಪಡೆಗೊಂಡವರು ಯಾರೂ ಕೂಡ ಬಿಜೆಪಿಯ ಪ್ರಾಥಮಿಕ ಸದಸ್ಯವನ್ನು ಪಡೆದಕೊಂಡಿರುವ ಕಾರ್ಯಕರ್ತರಲ್ಲ. ಸೇರ್ಪಡೆಗೊಂಡವರಲ್ಲಿ ರಾಕೇಶ್ ರೈಯವರು ಈ ಹಿಂದೆ ಬಿಜೆಪಿಯಲ್ಲಿದ್ದು ಕಳೆದ ಸದಸ್ಯತ್ವ ಅಭಿಯಾನದಲ್ಲಿ ಅವರು ಸದಸ್ಯ ಅಭಿಯಾನದಲ್ಲಿ ಅವರು ಸದಸ್ಯತ್ವ ಪಡೆದುಕೊಂಡಿಲ್ಲ. ಸಂದೀಪ್, ಶರತ್ ಬಿಜೆಪಿ ಪಕ್ಷದ ಯಾವುದೇ ಕಾರ್ಯಗಳಲ್ಲಿ ಗುರುತಿಸಿಕೊಂಡವರಲ್ಲ ಎಂದು ತಿಳಿಸಿದರು.
ಅಭಿವೃದ್ಧಿ ಮೆಚ್ಚಿ ಬಂದಿರುವುದಾಗಿ ಶಾಸಕರು ಹೇಳಿಕೆ ನೀಡಿದ್ದಾರೆ. ಆದರೆ ಅವರು ಯಾವುದೋ ಕಾರಣಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರಬಹುದು. ಪ್ರಚಾರದ ಉದ್ದೇಶದಿಂದ ಸೇರ್ಪಡೆಗೊಂಡಿರಬಹುದು. ಕಳೆದ ಅವಧಿಯ ಶಾಸಕರಿಂದ ಕೆದಂಬಾಡಿ ಗ್ರಾಮದಲ್ಲಿ ಸುಮಾರು ರೂ.16ಕೋಟಿಯ ಕಾಮಗಾರಿಗಳು ನಡೆದಿದ್ದು ಕಾಂಗ್ರೆಸ್ಗೆ ಸೇರ್ಪಡೆಗೊಂಡಿರುವವರ ಮನೆಯ ಗೇಟಿನ ತನಕ ರಸ್ತೆ ಕಾಂಕ್ರೀಟೀಕರಣವಾಗಿದ್ದು ಅವರು ಅಭಿವೃದ್ಧಿ ಮೆಚ್ಚಿ ಕಾಂಗ್ರೆಸ್ಗೆ ಸೇರ್ಪಡೆಯಾಗಲು ಸಾಧ್ಯವಿಲ್ಲ. ಈಗಿನ ಶಾಸಕರು ಅವರಿಗಾಗಿ ಮಾಡುವ ಕೆಲಸವಿಲ್ಲ. ಯುವ ಕಾರ್ಯಕರ್ತರಿಗಾಗಿ ಹಿಂದಿನ ಸರಕಾರ, ಶಾಸಕರ ಅವಧಿಯಲ್ಲಿ ಕೆದಂಬಾಡಿಯಲ್ಲಿ ಎಂಆರ್ಎಫ್ ಘಟಕವನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಪಕ್ಷಾತೀತವಾಗಿ ಉದ್ಯೋಗ ನೀಡಿದ್ದು ಕಾಂಗ್ರೆಸ್ನ ಬೂತ್ ಸಮಿತಿ ಅಧ್ಯಕ್ಷರ ಪತ್ನಿಯೂ ಉದ್ಯೋಗದಲ್ಲಿದ್ದಾರೆ. ಗ್ರಾಮದ 23 ಮಂದಿ ಉದ್ಯೋಗ ದೊರೆತಿದೆ. ಹೀಗಾಗಿ ಅವರು ಅಭಿವೃದ್ಧಿ ಮೆಚ್ಚಿ ಸೇರ್ಪಡೆಯಾಗಲು ಸಾಧ್ಯವಿಲ್ಲ. ಇನ್ಯಾವುದೋ ಕಾರಣಕ್ಕೆ ಕಾಂಗ್ರೆಸ್ ಪಕ್ಷದವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರಬಹುದು ಎಂದರು.
ಶಾಸಕರಿಂದ ಖಾಲಿ ಗೋಣಿ ಚೀಲ ಮಾತ್ರ ನಿರೀಕ್ಷಿಸಲು ಸಾಧ್ಯ:
10ಕೋಟಿ ಗೋಣಿ ಚೀಲ ಇದೆ ಎಂದು ಶಾಸಕರು ಹೇಳಿಕೆಯನ್ನು ಲೇವಡಿ ಮಾಡಿದ ರತನ್ ರೈಯವರು ಈ ಶಾಸಕರಿಂದ ಖಾಲಿ ಗೋಣಿ ಚೀಲ ಮಾತ್ರ ನಿರೀಕ್ಷಿಸಲು ಸಾಧ್ಯ ಎಂದು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಜನ ಸಾಮಾನ್ಯರಿಗೂ ತಿಳಿದಿದೆ. ನಿಮ್ಮಲ್ಲಿ ಗೋಣಿ ಚೀಲ ಇದೆ. ಅದನ್ನು ಪ್ರತಿ ಭಾಷಣದಲ್ಲಿ ನಾವು ಕೇಳುತ್ತಿದ್ದು ಅದಕ್ಕೆ ಸಿಮೆಂಟ್ ಯಾವಾಗ ತುಂಬಿಸುತ್ತೀರಿ ಎಂದು ಪ್ರಶ್ನಿಸಿದರು. ಕಳೆದ ಶಾಸಕರ ಅವಧಿಯಲ್ಲಿ ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕಿನ ವ್ಯಾಪ್ತಿಗೆ ಕೆದಂಬಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಸಂಬಂಧಿಸಿ ರೂ.2ಕೋಟಿ ವೆಚ್ಚದಲ್ಲಿ ಎಂಆರ್ಎಫ್ ಘಟಕವನ್ನು ಸುಮಾರು ಗೋಣಿ ಸಿಮೆಂಟ್ ಬಳಸಿಕೊಂಡು ಮಾಡಲಾಗಿದೆ. ಸುಮಾರು 16 ಕೋಟಿಯಷ್ಟು ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆದಿದೆ. ಹೀಗಾಗಿ ಸೇರ್ಪಡೆಗೊಂಡವರು ಅಭಿವೃದ್ಧಿ ಮೆಚ್ಚಿ ಬಂದವರಲ್ಲ. ಸುಮಾರು 40 ವರ್ಷಗಳಿಂದ ಬಾಕಿಯಿದ್ದ ಬೋಳೋಡಿ ಮತ್ತು ಸನ್ಯಾಸಿ ಗುಡ್ಡೆಗೆ ರೂ.1ಕೋಟಿ ವೆಚ್ಚದಲ್ಲಿ ಸಂಪರ್ಕ ರಸ್ತೆಯು ಕಳೆದ ಅವಧಿಯಲ್ಲಿ ಆಗಿದ್ದು ಸೇರ್ಪಡೆಗೊಂಡಿರುವವರು ಈ ಹಿಂದೆ 12 ಕೀ.ಮೀ ಸುತ್ತು ಬಳಸಿ ಬರಬೇಕಿದ್ದ ರಸ್ತೆ ಈಗ ಕೇವಲ 3ಕೀ.ಮಿ ಹತ್ತಿರ ಆಗಿದೆ.
ಕಾಂಗ್ರೆಸ್ ಪಕ್ಷದವರನ್ನು ಸೇರಿಸುವ ಪರಿಸ್ಥಿತಿ ಬಂದಿದೆ. ಯಾವುದೋ ಕಾರಣಕ್ಕೆ ಕಾಂಗ್ರೆಸ್ನಲ್ಲಿ ಸಕ್ರಿಯವಾಗಿಲ್ಲದವರು ಪಕ್ಷಕ್ಕೆ ಸೇರ್ಪಡೆಯಾಗಿರಬಹುದು. ಈಗಿನ ಶಾಸಕರು ಹಾಗೂ ಕಾಂಗ್ರೆಸ್ನವರಿಂದ ಕೆದಂಬಾಡಿಯಲ್ಲಿ ಕಳೆದ ಎರಡು ವರ್ಷಗಳಿಂದ ಯಾವುದೇ ಅಭಿವೃದ್ಧಿಗಳು ನಡೆದಿಲ್ಲ. ಹಲವು ಬ್ಯಾನರ್ಗಳು ಕಂಡಿದ್ದು ಬಿಟ್ಟರೆ ಅಲ್ಲಿಗೆ ಸಿಮೆಂಟ್ ಬಂದಿಲ್ಲ. ಗೋಣಿಯೂ ಬಂದಿಲ್ಲ. ಹಾರೆ ಪಿಕ್ಕಾಸಿನಿಂದ ಗುದ್ದಲಿಪೂಜೆಗಳು ಮಾತ್ರ ಆಗಿದೆ. ಕೆದಂಬಾಡಿ ದರ್ಬೆಯಿಂದ ಆಲಡ್ಕ ದೇವಸ್ಥಾನದ ತನಕ ರಸ್ತೆ ಅಭಿವೃದ್ಧಿ ಕಳೆದ ಅವಧಿಯಲ್ಲಿ ಕೊನೆ ಸಂದರ್ಭದಲ್ಲಿ ರೂ.10ಲಕ್ಷ ಬಿಡುಗಡೆಯಾಗಿತ್ತು. ಯಾವುದೋ ಕಾರಣಕ್ಕೆ ಅದು ಕಾಮಗಾರಿ ನಡೆದಿಲ್ಲ. ಆ ರಸ್ತೆಗೆ ಖಾಲಿ ಗೋಣಿಗೆ ಸಿಮೆಂಟ್ ತುಂಬಿಸಿ ಅಭಿವೃದ್ಧಿ ಮಾಡಿ. ಈಗಾಗಲೇ ನಿರ್ಮಾಣವಾಗಿರುವ ಸಂಪರ್ಕ ರಸ್ತೆಗೆ ಕಾಂಕ್ರಿಟೀಕರಣಕ್ಕೆ ನಿಮ್ಮ ಗೋಣಿಯಲ್ಲಿ ಸಿಮೆಂಟ್ ತುಂಬಿಸಿ ಯಾವಾಗ ತರುತ್ತೀರಿ. ಅಲ್ಲದೆ ಹಲವು ರಸ್ತೆಗಳ ಅಭಿವೃದ್ಧಿಯಾಗಬೇಕಿದ್ದು ಸಿಮೆಂಟ್ ತಂದು ನೀವೂ ಕೆದಂಬಾಡಿ ಗ್ರಾಮದ ಅಭಿವೃದ್ಧಿಯಲ್ಲಿ ಕೈಜೋಡಿಸುವಂತೆ ವಿನಂತಿಸಿದರು.
ಯಾವುದೇ ಕಾಮಗಾರಿ ನಡೆಸದೆ ಪ್ರಚಾರಗಳ ಮಾಡುವುದಲ್ಲ. ಸರಿಯಲ್ಲ. ಕಳೆದ ಅವಧಿಯಲ್ಲಿ ಆಲಡ್ಕ ಸದಾಶಿವ ದೇವಸ್ಥಾನದಲ್ಲಿ ರೂ.70ಲಕ್ಷ, ಎಲಿಯ ವಿಷ್ಣುಮೂರ್ತಿ ದೇವಸ್ಥಾನಕ್ಕೆ ರೂ.74ಲಕ್ಷದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆದಿದೆ. ಅಲ್ಲಿ ಇನ್ನ ಸಾಕಷ್ಟು ಅಭಿವೃದ್ಧಿಗಳು ನಡೆಯಬೇಕಿದ್ದು ನಿಮ್ಮ ಅವಧಿಯಲ್ಲಿ ನಿಮ್ಮ ಖಾಲಿ ಗೋಣಿಯಲ್ಲಿ ಸಿಮೆಂಟ್ ತಂದು ಅಭಿವೃದ್ಧಿ ಮಾಡಿ. ಕೇವಲ ಗೋಣಿ ತರುವುದಲ್ಲ. ಅಭಿವೃದ್ಧಿ ಆದ ಬಳಿಕ ಖಾಲಿ ಗೋಣಿ ವ್ಯಾಪರಕ್ಕೆ ಹೊರಡಿ. ನಮ್ಮ ಗ್ರಾಮಕ್ಕೆ ಸಿಮೆಂಟ್ ಗೋಣಿ ಬರಲೇಬೇಕು. ಗ್ರಾಮದ ಅಭಿವೃದ್ಧಿಯಾಗಬೇಕು. ಅದಕ್ಕೆ ನಮ್ಮ ಬೆಂಬಲವಿದೆ. ಆದರೆ ಖಾಲಿ ಗೋಣಿ ಮಾತ್ರ ಬೇಡ. ಜಲಜೀವನ್ ಮಿಷನ್ ಯೋಜನೆಯು ಗ್ರಾಮಕ್ಕೆ ಬಂದ ಬಳಿಕ ನಾವು ಬ್ಯಾನರ್ ಹಾಕಿದ್ದೇವೆ. 2ಕೋಟಿ ಎಂಆರ್ಎಫ್,2ಕೋಟಿ ಜಲಜೀವನ್ ಮಿಷನ್ ಸೇರಿದಂತೆ ಒಟ್ಟು ರೂ.16 ಕೋಟಿಯ ಅಭಿವೃದ್ಧಿ ಕಾಮಗಾರಿಗಳು ಕಳೆದ ಅವಧಿಯಲ್ಲಿ ನಡೆದಿದೆ. ತಿಂಗಳಾಡಿ ದರ್ಬೆಯಿಂದ ಆಲಡ್ಕ ತನಕ ಹದಗೆಟ್ಟ ರಸ್ತೆ ದುರಸ್ಥಿಗೆ 2 ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತರು ಪ್ರಯತ್ನಿಸುತ್ತಿದ್ದರೂ ಆಗಿಲ್ಲ. ಅಲ್ಲಿಗೆ ಖಾಲಿ ಗೋಣಿ ಮಾತ್ರ. ಸಿಮೆಂಟ್ ಬಂದಿಲ್ಲ. ಅಭಿವೃದ್ಧಿಗಳು ಭಾಷಣಕ್ಕೆ ಸೀಮಿತವಾಗಿರದೇ ಅಭಿವೃದ್ಧಿ ಮಾಡುವಂತೆ ಅವರು ತಿಳಿಸಿದರು.
ಕೆದಂಬಾಡಿ ಗ್ರಾ.ಪಂ ಅಧ್ಯಕ್ಷೆ ಸುಜಾತ, ಸದಸ್ಯ ಕೃಷ್ಣ ಕುಮಾರ್ ಇದ್ಯಪೆ, ಕೆದಂಬಾಡಿ ಶಕ್ತಿ ಕೇಂದ್ರದ ಶರತ್ ಮತ್ತು ಪುರುಷೋತ್ತಮ ಗೌಡ ಮುಡಾಳ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.