ನಮ್ಮ ಸಂಸ್ಕೃತಿ-ಸ್ವಚ್ಚ ಸಂಸ್ಕೃತಿ ಸ್ವಚ್ಚತಾ ಅಭಿಯಾನ ಸಮಾರೋಪ

0

ಸ್ವಚ್ಚತೆ, ನರೇಗಾ, ತೆರಿಗೆ ವಸೂಲಾತಿ ಸಾಧನೆ-ಗ್ರಾ.ಪಂ.ಗಳಿಗೆ ಪ್ರಶಂಸನಾ ಪತ್ರ
ವಸತಿ ಯೋಜನೆ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರ ವಿತರಣೆ

ಪುತ್ತೂರು: ಪುತ್ತೂರು ತಾಲೂಕು ಆಡಳಿತ, ತಾಲೂಕು ಪಂಚಾಯತ್ ಪುತ್ತೂರು, ನಗರಸಭೆ ಪುತ್ತೂರು ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ನಡೆದ ‘ನಮ್ಮ ಸಂಸ್ಕೃತಿ-ಸ್ವಚ್ಚ ಸಂಸ್ಕೃತಿ-ಸ್ವಚ್ಚ ಪುತ್ತೂರು’ ಹತ್ತು ದಿನಗಳ ಸ್ವಚ್ಚತಾ ಅಭಿಯಾನದ ಸಮಾರೋಪ ಸಮಾರಂಭ ಮತ್ತು ಪುತ್ತೂರು, ಬಂಟ್ವಾಳ ತಾಲೂಕು ಪಂಚಾಯತ್ ವ್ಯಾಪ್ತಿಯ 2022-23ನೇ ಸಾಲಿನ ಬಸವ ವಸತಿ ಹಾಗೂ ಡಾ|ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆಗಳ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರ ವಿತರಣಾ ಸಮಾರಂಭ ಪುತ್ತೂರು ಪುರಭವನದಲ್ಲಿ ಫೆ.4 ರಂದು ನಡೆಯಿತು.


ಶಾಸಕ ಅಶೋಕ್ ಕುಮಾರ್ ರೈ ಅವರು ಕಲ್ಪವೃಕ್ಷಕ್ಕೆ ನೀರೆರೆಯುವ ಮೂಲಕ ಸಮಾರಂಭ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರ ವಿತರಿಸಿ ಮಾತನಾಡಿ ಕಳೆದ 5 ವರ್ಷದಿಂದ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಒಂದೇ ಒಂದು ವಸತಿ ಯೋಜನೆ ಮಂಜೂರಾಗಿರಲಿಲ್ಲ. ನಾನು ಶಾಸಕನಾದ ಮೇಲೆ ಸಚಿವರೊಂದಿಗೆ, ಸಂಬಂಧಪಟ್ಟ ನಿಗಮದ ಅಧಿಕಾರಿಗಳೊಂದಿಗೆ ಮಾತನಾಡಿ, ಪುತ್ತೂರು ಕ್ಷೇತ್ರದ ಬಡವರಿಗೆ 300 ವಸತಿ ಯೋಜನೆಗಳನ್ನು ಮಂಜೂರು ಮಾಡಿ ತಂದಿದ್ದೇನೆ. ಇಂದು ಫಲಾನುಭವಿಗಳಿಗೆ ಅದರ ಹಕ್ಕುಪತ್ರ ನೀಡಲಾಗುತ್ತದೆ. ಇದೊಂದು ಪುತ್ತೂರಿನ ಇತಿಹಾಸದ ಪುಟದಲ್ಲಿ ದಾಖಲಾಗುವ ಕಾರ್ಯಕ್ರಮವಾಗಿದೆ. ಅಧಿಕಾರಿಗಳು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಿದ್ದಾರೆ ಎಂದರು. ಪುತ್ತೂರು ಕ್ಷೇತ್ರದಲ್ಲಿ ಯಾರು ಕೂಡಾ ವಸತಿ, ನಿವೇಶನ ರಹಿತರಾಗಿರಬಾರದು. ಇದರೊಂದಿಗೆ ವಿದ್ಯುತ್, ನೀರು ಎಲ್ಲರಿಗೂ ದೊರಕಬೇಕು ಎಂದು ಶಾಸಕರು ತಿಳಿಸಿದರು.


ಬಸವ ವಸತಿ ಯೋಜನೆಯಲ್ಲಿ 190, ಡಾ|ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆಯಲ್ಲಿ 60 ಹಾಗೂ ಮೀನುಗಾರಿಕಾ ಇಲಾಖಾ ಯೋಜನೆಯಲ್ಲಿ 50 ವಸತಿಗಳನ್ನು ಮಂಜೂರು ಮಾಡುವ ಕೆಲಸ ಮಾಡಿದ್ದೇನೆ. ಅಲ್ಲದೆ 500 ವಸತಿಗಳಿಗಾಗಿ ಸರಕಾರಕ್ಕೆ ಬೇಡಿಕೆ ಇಟ್ಟಿದ್ದೇನೆ ಎಂದ ಶಾಸಕರು, ವಸತಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಸಿಗುವ ರೂ.2 ಲಕ್ಷದಲ್ಲಿ ಮನೆ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಮನೆ ನಿರ್ಮಾಣಕ್ಕೆ ಕನಿಷ್ಟ ರೂ.4 ಲಕ್ಷವಾದರೂ ಬೇಕಾಗುತ್ತದೆ. 4ಲಕ್ಷ ರೂ. ನೀಡುವ ಬಗ್ಗೆ ಈಗಾಗಲೇ ಸರಕಾರಕ್ಕೆ ಮನವಿ ಸಲ್ಲಿಸಿದ್ದೇನೆ. ಇದರ ಬಗ್ಗೆ ಕ್ಯಾಬಿನೆಟ್‌ನಲ್ಲಿ ಕೂಡ ಚರ್ಚೆಯಾಗಿದೆ ಎಂದರು.


ಬಡವರ ನಿವೇಶನಕ್ಕಾಗಿ 35 ಎಕ್ರೆ ಜಮೀನು ಗುರುತು:

ಪುತ್ತೂರು ಹಾಗೂ ಬಂಟ್ವಾಳ ತಾಲೂಕಿನ 11 ಪಂಚಾಯತ್ ವ್ಯಾಪ್ತಿಯಲ್ಲಿ 35 ಎಕರೆ ಜಮೀನನ್ನು ಬಡವರ ನಿವೇಶನಕ್ಕಾಗಿ ಗುರುತಿಸಲಾಗಿದೆ. ಈ ನಿವೇಶನಕ್ಕೆ ರಸ್ತೆ, ನೀರು, ವಿದ್ಯುತ್ ನೀಡುವ ಮೂಲಕ ಇದನ್ನು ಮಾಡೆಲ್ ಸೈಟ್‌ಗಳನ್ನಾಗಿ ಮಾಡುವ ಗುರಿ ಇದೆ. ಸರಕಾರ ನೀಡುವ ಪಂಚ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಸಹಾಯವಾಗಿದೆ. ಗೃಹಲಕ್ಷ್ಮೀ ಯೋಜನೆಯಿಂದ ಆರೋಗ್ಯ, ವಿದ್ಯಾಭ್ಯಾಸ ಪಡೆಯಲು ಅನುಕೂಲವಾಗಿದೆ ಎಂದು ಶಾಸಕ ರೈ ಹೇಳಿದರು.


ಸ್ವಚ್ಚ ಪುತ್ತೂರು ಕ್ಷೇತ್ರವನ್ನಾಗಿ ಅಧಿಕಾರಿಗಳು ಮಾಡಿದ್ದಾರೆ-ಮಹಮ್ಮದ್ ಬಡಗನ್ನೂರು:

ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿ ಇದು ತಾಲೂಕಿನಲ್ಲಿ ವಿಶೇಷವಾದ ಕಾರ್ಯಕ್ರಮ. 5 ವರ್ಷಗಳಿಂದ ವಸತಿ ಯೋಜನೆ ಬರಲಿಲ್ಲ. ಶಾಸಕರು ಇದೀಗ 250 ಮನೆಗಳನ್ನು ವಸತಿ ಯೋಜನೆಯಲ್ಲಿ ತಂದು ಹಂಚಿದ್ದಾರೆ. ಶಾಸಕರು ಅಭಿವೃದ್ಧಿ ಪರ ಚಿಂತನೆಗಳಿಂದ ಮುನ್ನಲೆಗೆ ಬಂದಿದ್ದಾರೆ ಎಂದರು. ಸ್ವಚ್ಚ ಸಂಸ್ಕೃತಿಗೆ ಪೂರಕವಾಗಿ ತಾಲೂಕಿನಾದ್ಯಂತ ಸ್ವಚ್ಚತಾ ಕೆಲಸ ನಡೆದಿದೆ. ಹತ್ತು ದಿನದಲ್ಲಿ 10 ಟನ್‌ಗಳಷ್ಟು ಕಸ ಸಂಗ್ರಹ ಮಾಡಿದ್ದಾರೆ. ಸುಂದರ ಪುತ್ತೂರು ಕ್ಷೇತ್ರವನ್ನಾಗಿ ಮಾಡಲು ನಗರಸಭೆ ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳು ಕೆಲಸ ಮಾಡಿದ್ದಾರೆ ಇದು ಶ್ಲಾಘನೀಯ ಎಂದರು.


ಬಡವರಿಗೆ ವಸತಿ ಹಂಚಿಕೆ ಕೆಲಸ ಶ್ಲಾಘನೀಯ-ಜಯರಾಮ:

ವಸತಿ ಯೋಜನೆಗಳ ನೋಡಲ್ ಅಧಿಕಾರಿ ಜಯರಾಮ ಮಾತನಾಡಿ ಇದೊಂದು ವಿನೂತನ ಕಾರ್ಯಕ್ರಮ. ಪುತ್ತೂರು ಕ್ಷೇತ್ರದಾದ್ಯಂತ ಸ್ವಚ್ಚತೆಯಾಗಿ ಸ್ವಚ್ಚ ಪುತ್ತೂರು ಕ್ಷೇತ್ರವನ್ನು ಅಧಿಕಾರಿಗಳು ಮಾಡಿ ತೋರಿಸಿಕೊಟ್ಟಿದ್ದಾರೆ ಎಂದರು. ಶಾಸಕರು ಪುತ್ತೂರು ಕ್ಷೇತ್ರಕ್ಕೆ ವಸತಿ ಯೋಜನೆಗಳನ್ನು ತರುವ ಮೂಲಕ ಬಡವರ ಮನೆ ನಿರ್ಮಾಣದ ಕನಸು ನನಸು ಮಾಡಿದ್ದಾರೆ. ಇದು ಶ್ಲಾಘನೀಯ ಎಂದರು. ತಾಲೂಕು ಪಂಚಾಯತ್ ಯೋಜನಾಧಿಕಾರಿ ಸಂಧ್ಯಾ, ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಗ್ಯಾರಂಟಿ ಯೋಜನೆಗಳ ತಾಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ, ನಗರಸಭಾ ಪೌರಾಯುಕ್ತ ಮಧು ಎಸ್.ಮನೋಹರ್, ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿ, ತಾಲೂಕು ಪಂಚಾಯತ್ ಎನ್‌ಆರ್‌ಎಲ್‌ಎಮ್ ಯೋಜನೆ ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ವಂದಿಸಿದರು.

31 ಗ್ರಾ.ಪಂ.ಗಳ 250 ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರ

ಪುತ್ತೂರು ತಾಲೂಕು ಮತ್ತು ಬಂಟ್ವಾಳ ತಾಲೂಕಿನ 31 ಗ್ರಾಮ ಪಂಚಾಯತ್‌ಗಳ 250 ಫಲಾನುಭವಿಗಳಿಗೆ ವಸತಿ ಯೋಜನೆ ಮಂಜೂರಾತಿ ಹಕ್ಕುಪತ್ರ ವಿತರಿಸಲಾಯಿತು. 2022-23ನೇ ಸಾಲಿನ ಬಸವ ವಸತಿ ಯೋಜನೆಯ 190 ಫಲಾನುಭವಿಗಳಿಗೆ ಹಾಗೂ ಡಾ|ಬಿ.ಆರ್.ಅಂಬೇಡ್ಕರ್ ಹೆಚ್ಚುವರಿ ವಸತಿ ಯೋಜನೆಯ ೬೦ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರವನ್ನು ಶಾಸಕರು ವಿತರಿಸಿದರು.

10 ದಿನಗಳ ಸ್ವಚ್ಚತಾ ಅಭಿಯಾನ ಕೈಗೊಂಡ ನಗರಸಭೆ, 22 ಗ್ರಾ.ಪಂ.ಗಳಿಗೆ ಪ್ರಶಂಸನಾ ಪತ್ರ

ನಮ್ಮ ಸಂಸ್ಕೃತಿ-ಸ್ವಚ್ಚ ಸಂಸ್ಕೃತಿ ಸ್ವಚ್ಚ ಪುತ್ತೂರು ಕಾರ್ಯಕ್ರಮದ ಅಂಗವಾಗಿ 10 ದಿನಗಳ ಕಾಲ ನಡೆದ ಸ್ವಚ್ಚತಾ ಅಭಿಯಾನದಲ್ಲಿ ವಿವಿಧ ರೀತಿಯ ಸ್ವಚ್ಚತಾ ಕಾರ್ಯ ಚಟುವಟಿಕೆ ನಡೆಸಿ ಸ್ವಚ್ಚ ಪರಿಸರವನ್ನಾಗಿಸಿ ಸುಸ್ಥಿರತೆ ಕಾಯ್ದುಕೊಳ್ಳಲು ಕ್ರಮ ಕೈಗೊಂಡ ಪುತ್ತೂರು ನಗರಸಭೆ ಮತ್ತು 22 ಗ್ರಾಮ ಪಂಚಾಯತ್‌ಗಳಿಗೆ ಪ್ರಶಂಸನಾ ಪತ್ರ ಮತ್ತು ಹೂವಿನ ಕುಂಡ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here