ಪುಳಿಕುಕ್ಕು ಸಮೀಪ ರಸ್ತೆಗೆ ಬಿದ್ದ ಹಾಲು ಮಡ್ಡಿ ಮರ-ಬೈಕ್ ಸವಾರನಿಗೆ ಗಾಯ

0

ಕಡಬ: ಚಲಿಸುತ್ತಿದ್ದ ಬೈಕ್ ಮೇಲೆ ದೂಪದ (ಹಾಲು ಮಡ್ಡಿ) ಮರ ಬಿದ್ದು ಬೈಕ್ ಸವಾರ ಗಾಯಗೊಂಡ ಘಟನೆ ಕಡಬ ಪಂಜ ರಸ್ತೆಯ ತೆಕ್ಕಡ್ಕ ಸಮೀಪ ಫೆ.4ರಂದು ಸಂಜೆ ನಡೆದಿದೆ. ಖಾಸಗಿ ಹಣಕಾಸು ಸಂಸ್ಥೆಯೊಂದರಲ್ಲಿ ಪಿಗ್ಮಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಕೋಡಿಂಬಾಳ ಗ್ರಾಮದ ಪಟ್ನ ನಿವಾಸಿ ಯಶವಂತ ಎಂಬವರು ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಂಜೆಯ ವೇಳೆಗೆ ಯಶವಂತ ಅವರು ತನ್ನ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಏಕಾಏಕಿ ದೂಪದ ಮರದ ತುಂಡು ಬಿದ್ದು ಅವರು ಧರಿಸಿದ್ದ ಹೆಲ್ಮೆಟ್ ಪುಡಿಯಾಗಿದೆ ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೈ, ಕಾಲು, ಹಾಗೂ ತಲೆಗೆ ಸಣ್ಣ ಪುಟ್ಟ ಗಾಯವಾಗಿದ್ದು ಸ್ಥಳೀಯರು ಅವರನ್ನು ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಿದರೂ ಅಲ್ಲಿ ಸೂಕ್ತ ಚಿಕಿತ್ಸೆಯ ಸೌಲಭ್ಯ ಇಲ್ಲದ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿ ಬಳಿಕ ಅವರು ಚೇತರಿಸಿಕೊಂಡಿದ್ದಾರೆ. ರಸ್ತೆಗೆ ಮರ ಬಿದ್ದ ಹಿನ್ನೆಲೆಯಲ್ಲಿ ಕೆಲ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು ಸ್ಥಳಕ್ಕೆ ಅರಣ್ಯ ಇಲಾಖೆಯವರು, ಕಡಬ ಪೋಲಿಸರು ಭೇಟಿ ನೀಡಿ ಮರ ತೆರವುಗೊಳಿಸಿದ್ದಾರೆ.


ಪ್ರಾಣ ಹಿಂಡುತ್ತಿರುವ ಹಾಲು ಮಡ್ಡಿ ಮರ:
ಸುಬ್ರಹ್ಮಣ್ಯದಿಂದ ಮರ್ದಾಳದವರೆಗೆ ಕಡಬದಿಂದ ಪಂಜ ತನಕ ರಸ್ತೆ ಬದಿಯಲ್ಲಿರುವ ಹಾಲು ಮಡ್ಡಿ ಮರಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು ಇನ್ನಷ್ಟು ಜೀವ ಬಲಿ ತೆಗೆದುಕೊಳ್ಳಲು ಕಾಯುವಂತಿದೆ. ಅರಣ್ಯ ಇಲಾಖೆಯವರು ದುರ್ಘಟನೆಗಳು ನಡೆದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಮಜಾಯಿಸಿಕೆ ನೀಡಿ ಸಾರ್ವಜನಿಕರು ಪ್ರತಿಭಟಿಸದಂತೆ ಭರವಸೆಗಳನ್ನು ನೀಡಿ ಕಾಲಹರಣ ಮಾಡುತ್ತಿದ್ದಾರೆ.


ಎರಡು ತಿಂಗಳಲ್ಲಿ ಎರಡನೇ ಘಟನೆ:
ಕಳೆದ ನವಂಬರ್ 2 ರಂದು ಇದೇ ರಸ್ತೆಯ ಕೋಡಿಂಬಾಳ ಗ್ರಾಮದ ಪುಳಿಕುಕ್ಕು ಮುರಚೆಡುವು ಬಳಿ ಚಲಿಸುತ್ತಿದ್ದ ಸ್ಕೂಟಿಯ ಮೇಲೆ ಭಾರೀ ಗಾತ್ರದ ಹಾಲುಮಡ್ಡಿ ಮರ ಬಿದ್ದು ಸ್ಕೂಟಿ ಸವಾರ ಕಡಬ ತಾಲೂಕಿನ ಎಡಮಂಗಲ ಗ್ರಾಮದ ದೇವಸ್ಯ ಎಡಮಂಗಲ ಸಿ.ಎ. ಬ್ಯಾಂಕಿನ ಪಿಗ್ಮಿ ಸಂಗ್ರಾಹಕ ಸೀತಾರಾಮ ಗೌಡ (58) ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.


ಇದೀಗ ಮತ್ತೆ ಅದೇ ರಸ್ತೆ ಬದಿಯ ಅಪಾಯಕಾರಿ ಹಾಲುಮಡ್ಡಿ ಮರ ಯುವಕನ ಮೇಲೆ ಬಿದ್ದು ಅದೃಷ್ಟವಶಾತ್ ಪ್ರ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆ ಬದಿಯಲ್ಲಿ ಅಪಾಯಕಾರಿ ಹಾಲು ಮಡ್ಡಿ ಮರಗಳಿವೆ ಅದನ್ನು ತೆರವುಗೊಳಿಸಿ ಎಂದು ಅರಣ್ಯ ಇಲಾಖೆಗೆ ಸಾರ್ವಜನಿಕರು ಕೇಳಿಕೊಂಡರೂ ಇಲಾಖೆ ಎರಡು ಮೂರು ಮರಗಳನ್ನು ತೆರವುಗೊಳಿಸಿ ಕೈತೊಳೆದುಕೊಂಡಿರುವುದು ಬಿಟ್ಟರೆ ಉಳಿದ ಅಪಾಯಕಾರಿ ಹಾಲುಮಡ್ಡಿ ಮರಗಳನ್ನು ತೆರವು ಮಾಡದೆ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂಬ ಆಕ್ರೋಶ ನಾಗರಿಕ ವಲಯದಿಂದ ವ್ಯಕ್ತವಾಗುತ್ತಿದೆ. ಮೃತ ಸೀತಾರಾಮ ಗೌಡರಿಗೆ ಈವರೆಗೆ ನಯಾಪೈಸೆ ಪರಿಹಾರ ಸಿಕ್ಕಿಲ್ಲ. ಮಂಗಳವಾರದ ಘಟನೆಯಲ್ಲಿ ಗಾಯಗೊಂಡ ಯುವಕನ ಚಿಕಿತ್ಸಾ ವೆಚ್ಚವನ್ನೂ ಭರಿಸಲು ಅರಣ್ಯ ಇಲಾಖೆ ಮುಂದೆ ಬಂದಿಲ್ಲ ಎಂದು ಆರೋಪಿಸಲಾಗಿದೆ.


ಹಾಲು ಮಡ್ಡಿ ಮರ ಅಪಾಯಕಾರಿಯಾಗಿಲ್ಲ-ವರದಿ ನೀಡಿದ ಅರಣ್ಯ ಇಲಾಖೆ!:
ಈ ಹಿಂದೆ ಸಂಭವಿಸಿದ್ದ ಸೀತಾರಾಮ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಪಂಜ ವಲಯ ಅರಣ್ಯ ಕಛೇರಿಯಿಂದ ಕಂದಾಯ ಇಲಾಖೆಗೆ ಘಟನೆಯ ಬಗ್ಗೆ ವರದಿ ನೀಡಲಾಗಿದ್ದು, ಹಾಲು ಮಡ್ಡಿ ಮರ ಅಪಾಯಕಾರಿಯಾಗಿಲ್ಲ ಅಲ್ಲದೆ ಬೀಳುವ ಸ್ಥಿತಿಯಲ್ಲಿರಲಿಲ್ಲ ಎಂಬಿತ್ಯಾದಿ ವರದಿಗಳನ್ನು ನೀಡಿದೆ. ಈ ವರದಿ ಪರಿಣಾಮ ಮೃತ ಸೀತಾರಾಮ ಅವರ ಕುಟುಂಬ ಪರಿಹಾರದಿಂದ ವಂಚಿತರಾಗಿದ್ದಾರೆ. ವಿಪರ‍್ಯಾಸವೆಂದರೆ, ಸೀತಾರಾಮ ಅವರು ಚಲಿಸುತ್ತಿದ್ದ ಸ್ಕೂಟಿಯ ಮೇಲೆ ಮರ ಬಿದ್ದು ಅವರು ಸಾವನ್ನಪ್ಪಿದ ಸಂದರ್ಭದಲ್ಲಿ ಮರ ತೆರವುಗೊಳಿಸಲು ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ ಸಂದರ್ಭ ಸ್ಥಳೀಯ ರಾಜಕೀಯ ಪ್ರಮುಖರು ಇಲಾಖೆಯ ಪರವಾಗಿ ಮಾತನಾಡಿ ಪ್ರತಿಭಟನಾಕಾರರನ್ನು ಮನವೊಲಿಸಿದ್ದರು.


ಜೀವಕ್ಕೆ ಅಪಾಯವಾಗುತ್ತಿರುವ ಹಾಲುಮಡ್ಡಿ ಮರಗಳು:
ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಹಾಗೂ ಕಡಬ-ಪಂಜ ಮುಖ್ಯರಸ್ತೆಯ ಬದಿಯಲ್ಲಿರುವ ಮೇಣ ತೆಗೆದು ಬುಡ ಶಿಥಿಲಗೊಂಡ ಅಪಾಯಕಾರಿ ಹಾಲುಮಡ್ಡಿ ಮರಗಳನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ಕಳೆದ ಹಲವಾರು ವರ್ಷಗಳಿಂದ ಅರಣ್ಯ ಇಲಾಖೆಗೆ ಅಗ್ರಹಿಸುತ್ತಲೇ ಬಂದಿದ್ದಾರೆ. ರಸ್ತೆ ಬದಿಯಲ್ಲಿರುವ ಅಪಾಯಕಾರಿ ಹಾಲು ಮಡ್ಡಿ ಮರಗಳನ್ನು ತೆರವುಗೊಳಿಸಬೇಕು ಮುಂದಕ್ಕೆ ರಸ್ತೆ ಪಕ್ಕದ ಹಾಲುಮಡ್ಡಿ ಮರಗಳಿಂದ ಮೇಣ ತೆಗೆಯಲು (ಟ್ಯಾಪಿಂಗ್) ಅವಕಾಶ ನೀಡಬಾರದು ಎಂದು ಗ್ರಾಮ ಸಭೆಗಳಲ್ಲಿ ಅಗ್ರಹಿಸಿದರೂ ಅರಣ್ಯ ಇಲಾಖೆಯವರು ಯಾವುದೇ ಮುಂಜಾಗೃತಾ ಕ್ರಮ ಕೈಗೊಳ್ಳದೇ ಇರುವುದರಿಂದ ಈಗ ಅಮಾಯಕ ಜೀವಗಳು ಬಲಿಯಾಗುವಂತಾಗಿದೆ. ಕೆಲವು ವರ್ಷಗಳ ಹಿಂದೆ ಐತ್ತೂರಿನ ಬಜಕೆರೆ ಸೇತುವೆ ಬಳಿಯೂ ಮರ ಬಿದ್ದು ಕಲ್ಲಾಜೆಯ ಯುವಕನೊಬ್ಬ ಮೃತಪಟ್ಟಿದ್ದರು. ಪ್ರತಿ ವರ್ಷ ಮಳೆಗಾಲದಲ್ಲಿ ಹಾಲುಮಡ್ಡಿ ಮರಗಳು ವಿದ್ಯುತ್ ಲೈನ್ ಮೇಲೆ ಮುರಿದುಬಿದ್ದು ರಸ್ತೆ ಸಂಚಾರಕ್ಕೆ ತೊಡಕಾಗುವುದು, ಅಂಗಡಿಗಳು, ವಾಹನಗಳು ಹಾನಿಗೀಡಾಗುವುದು ಮಾತ್ರವಲ್ಲದೇ ವಿದ್ಯುತ್ ಕಂಬಗಳು ಮುರಿದು ಮೆಸ್ಕಾಂಗೆ ಲಕ್ಷಾಂತರ ರೂ. ನಷ್ಟ ಉಂಟಾಗುತ್ತಿದೆ. ಆದರೂ ಅರಣ್ಯ ಇಲಾಖಾಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಮರ ಬಿದ್ದು ಇನ್ನಷ್ಟು ಜೀವ ಬಲಿಯಾಗುವ ಮೊದಲು ಅರಣ್ಯ ಇಲಾಖೆಯವರು ಅಪಾಯಕಾರಿ ಮರಗಳನ್ನು ತೆರವು ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here