ರಾಮಕುಂಜ: ಕಡಬ ತಾಲೂಕಿನ ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವ ಫೆ.9ರಿಂದ 13ರ ತನಕ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಹಾಗೂ ಉತ್ಸವ ಸಮಿತಿ ತಿಳಿಸಿದೆ.
ಫೆ.9ರಂದು ರಾತ್ರಿ 7ರಿಂದ ಧ್ವಜಾರೋಹಣ, ಬಲಿ ಹೊರಟು ಉತ್ಸವ ನಂತರ ಮಹಾಪೂಜೆ ನಡೆಯಲಿದೆ. ಫೆ.10ರಂದು ಬೆಳಿಗ್ಗೆ ಹಸಿರುವಾಣಿ ಸಮರ್ಪಣೆ, 10.30ರಿಂದ ಬಲಿ ಹೊರಟು ಉತ್ಸವ, ಮಧ್ಯಾಹ್ನ ಮಹಾಪೂಜೆ ನಡೆಯಲಿದೆ. ಸಂಜೆ ಶ್ರೀ ದೇವರ ಬಲಿ ಹೊರಟು ಉತ್ಸವ, ಕೆರೆಕರೆ, ಈರಕೀಮಠ, ಕುಕ್ಕೇರಿಕಟ್ಟೆ, ಸಂಪ್ಯಾಡಿ ಕಟ್ಟೆ, ಶಾರದಾಂಬಾ ಕಟ್ಟೆ, ಕೆದಿಲ ಕಟ್ಟೆಗಳಲ್ಲಿ ಕಟ್ಟೆಪೂಜೆ ನಡೆಯಲಿದೆ.
ಫೆ.11-ದರ್ಶನ ಬಲಿ:
ಫೆ.11ರಂದು ಬೆಳಿಗ್ಗೆ ನಂದಾದೀಪೋತ್ಸವ, ಉತ್ಸವ ನಡೆಯಲಿದೆ. ಮಧ್ಯಾಹ್ನ 11ಕ್ಕೆ ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30ರಿಂದ ದೇವರ ಬಲಿ ಹೊರಡುವುದು, ದಂಡತೀರ್ಥ ಕೆರೆ ಉತ್ಸವ, ದೇವರ ಗುಡ್ಡೆ, ತಾವೂರು ದಾರಿಯ ಕಟ್ಟೆಪೂಜೆಗಳು ನಡೆದು ಶ್ರೀ ರಾಮ ಸಂದರ್ಶನೋತ್ಸವ ನಡೆಯಲಿದೆ. ಬಳಿಕ ಶಾಲಾ ಕಾಲೇಜು ಬಳಿಯ ಕಟ್ಟೆಪೂಜೆಗಳು, ದೈವಗಳ ಭಂಡಾರ ಹಿಡಿಯುವುದು, ವಸಂತ ಕಟ್ಟೆ ಉತ್ಸವ, ಮಹಾಪೂಜೆ ನಡೆಯಲಿದೆ.
ಫೆ.12-ಬ್ರಹ್ಮರಥೋತ್ಸವ:
ಫೆ.12ರಂದು ಬೆಳಿಗ್ಗೆ ಬಲಿ ಹೊರಟು ಉತ್ಸವ, 48 ತೆಂಗಿನಕಾಯಿಗಳ ಶ್ರೀ ಗಣಪತಿ ಹೋಮ, ಮಧ್ಯಾಹ್ನ ಮಹಾಪೂಜೆ ನಡೆಯಲಿದೆ. ರಾತ್ರಿ ಬಲಿ ಹೊರಟು ಉತ್ಸವ, 9.30ರಿಂದ ಬ್ರಹ್ಮರಥೋತ್ಸವ, ಶ್ರೀ ಭೂತಬಲಿ, ಶಯನೋತ್ಸವ ನಡೆಯಲಿದೆ. ಫೆ.13ರಂದು ಬೆಳಿಗ್ಗೆ ಕವಾಟೋದ್ಘಾಟನೆ, ಅಭಿಷೇಕ, ಮಧ್ಯಾಹ್ನ ಮಹಾಪೂಜೆ ನಡೆಯಲಿದೆ. ಸಂಜೆ 5ರಿಂದ ಅವಭೃತ ಸವಾರಿ, ರಾಮಕುಂಜದಿಂದ ಆತೂರು, ಕೆ.ಸಿ.ಫಾರ್ಮ್, ಕೊಯಿಲ ದೇವಸ್ಥಾನ, ಹೊಳೆ ಬದಿಯವರೆಗಿನ ಎಲ್ಲಾ ಕಟ್ಟೆಪೂಜೆಗಳು, ಅವಭೃತ ನಡೆಯಲಿದೆ. ರಾತ್ರಿ ಧ್ವಜಾವರೋಹಣ, ಮಹಾಪೂಜೆ, ಮಂತ್ರಾಕ್ಷತೆ ವಿತರಣೆ ನಡೆಯಲಿದೆ.
ಫೆ.14,15-ದೈವಗಳ ನೇಮ:
ಫೆ.14ರಂದು ಬೆಳಿಗ್ಗೆ ಸಂಪ್ರೋಕ್ಷಣೆ, ನಾಗಾರಾಧನೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ ನಡೆಯಲಿದೆ. ರಾತ್ರಿ ಕಲೆಂಬಿತ್ತಾಯ, ಕಲ್ಲುರ್ಟಿ, ಅಂಗಣ ಪಂಜುರ್ಲಿ ದೈವಗಳ ನೇಮ ನಡೆಯಲಿದೆ. ಫೆ.15ರಂದು ಬೆಳಿಗ್ಗೆ ಶ್ರೀ ಶಿರಾಡಿ, ರುದ್ರಚಾಮುಂಡಿ, ಕಲೆಂಬಿಲತ್ತಾಯ, ಗಿಳಿರಾಮ, ಗುಳಿಗ ದೈವಗಳ ನೇಮ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ:
ಫೆ.11ರಂದು ಬೆಳಿಗ್ಗೆ 11ರಿಂದ ಯಕ್ಷಶ್ರೀ ಮಹಿಳಾ ಹವ್ಯಾಸಿ ಬಳಗ ಪುತ್ತೂರು ಇವರಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ರಾತ್ರಿ ಶ್ರೀ ರಾಮಕುಂಜೇಶ್ವರ ಮಿತ್ರವೃಂದ, ರಾಮಕುಂಜ ಇವರ ಆಶ್ರಯದಲ್ಲಿ 33ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮ ಬೆನಕ ಆರ್ಟ್ಸ್ ಕುಡ್ಲ ಅರ್ಪಿಸುವ ಚಿತ್ರಾಪುರದ ಸತ್ಯ ಕಥಾ ಆಧಾರಿತ ತುಳು ಪೌರಾಣಿಕ ನಾಟಕ ’ಪೊರಿಪುದಪ್ಪೆ ಜಲದುರ್ಗೆ’ ಪ್ರದರ್ಶನಗೊಳ್ಳಲಿದೆ. ಫೆ.12ರಂದು ರಾತ್ರಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮೂಲ್ಕಿ ಇವರಿಂದ ಯಕ್ಷಗಾನ ಬಯಲಾಟ’ಮಹಿಮೆದ ಉಳ್ಳಾಲ್ದಿ’ ಪ್ರದರ್ಶನಗೊಳ್ಳಲಿದೆ.