ಭಂಡಾರಿ ಸಮಾಜ ಸಂಘ, ಮಹಿಳಾ ಭಂಡಾರಿ ಸಮಾಜ ಸಂಘ, ಭಂಡಾರಿ ಯುವ ವೇದಿಕೆಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾಸಭೆ

0

ಪುತ್ತೂರು: ಪುತ್ತೂರು ತಾಲೂಕಿನ ಭಂಡಾರಿ ಸಮಾಜ ಸಂಘ, ಮಹಿಳಾ ಭಂಡಾರಿ ಸಮಾಜ ಸಂಘ, ಭಂಡಾರಿ ಯುವ ವೇದಿಕೆ ಇವುಗಳ ಜಂಟಿ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮಹಾಸಭೆಯು ಫೆ.9 ರಂದು ಬಪ್ಪಳಿಗೆ ಜೈನ ಭವನದಲ್ಲಿ ನೆರವೇರಿತು.


ಮಹಾಸಭೆಯಲ್ಲಿ ಬಾರ್ಕೂರು ಭಂಡಾರಿ ಮಹಾಮಂಡಲದ ಅಧ್ಯಕ್ಷ ಶಶಿಧರ್ ಭಂಡಾರಿ ಕಾರ್ಕಳರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಪುತ್ತೂರು ತಾಲೂಕಿನಲ್ಲಿನ 160 ಭಂಡಾರಿ ಕುಟುಂಬದಲ್ಲಿ ಬಡತನ ರೇಖೆಗಳಿಗಿಂತ ಕಡಿಮೆ ಇರುವವರು ಕಡಿಮೆ ಸಂಖ್ಯೆಯಲ್ಲಿ ಇದ್ದಾರೆ. ಸಮುದಾಯದಲ್ಲಿ ಉತ್ತಮ ಮಟ್ಟದಲ್ಲಿ ಇರುವ ಸ್ಥಿತಿವಂತರು ಮನಸ್ಸು ಮಾಡಿದರೆ ಸಮುದಾಯ ಬೆಳೆಯುತ್ತದೆ. ಸಮುದಾಯ ಬಾಂಧವರು ಸಂಘಟಿತರಾಗಿ ಕಾರ್ಯ ನಿರ್ವಹಿಸಿದಾಗ ಸಮುದಾಯ ಅಭಿವೃದ್ಧಿ ಹೊಂದುತ್ತದೆ ಮಾತ್ರವಲ್ಲ ಸಮುದಾಯದ ಸ್ವಂತ ಭವನ ಹೊಂದಲು ಕಾರಣವಾಗುತ್ತದೆ ಎಂದರು.


ಅಧ್ಯಕ್ಷತೆ ವಹಿಸಿದ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ ಮಾತನಾಡಿ, ತಾಲೂಕು ಭಂಡಾರಿ ಸಮಾಜ ಸಂಘವು ಪರಿವರ್ತನೆ ಹೊಂದಿದ್ದಲ್ಲಿ ಬಲಯುತ ಸಂಘಟನೆಯಾಗಿ ಹೊರ ಹೊಮ್ಮಬಲ್ಲುದು. ಇದಕ್ಕೆ ತಾಲೂಕಿನ 160 ಕುಟುಂಬಗಳ ಸಹಕಾರ ಬೇಕಾಗಿದೆ. ಸಮಾಜದಲ್ಲಿ ಇತರ ಸಮುದಾಯದವರು ಹೇಗೆ ಬೆಳೆಯುತ್ತಿದ್ದಾರೆ, ಅವರಲ್ಲಿನ ಹೊಂದಾಣಿಕೆ ಹೇಗೆ ಇದೆ ಎಂಬುದನ್ನು ನಾವು ಅರಿತುಕೊಳ್ಳಬೇಕಾಗಿದೆ. ಸರಕಾರದ ಸವಲತ್ತು, ಸರಕಾರಿ ಉದ್ಯೋಗ ನಮ್ಮ ಸಮುದಾಯದವರಿಗೆ ಸಿಗಬೇಕಾದರೆ ಅದು ಸಂಘದಿಂದ ಮಾತ್ರ ಸಾಧ್ಯವಾಗುತ್ತದೆ ಎಂದ ಅವರು ಶಾಸಕರ ಮುತುವರ್ಜಿಯಿಂದ ಸಂಘಕ್ಕೋಸ್ಕರ ಕೋಡಿಂಬಾಡಿಯಲ್ಲಿ ಹತ್ತು ಸೆಂಟ್ಸ್ ಜಾಗಕ್ಕೆ ಸಿಎಂರವರು ಸಹಿ ಹಾಕಿದ್ದು, ಮುಂದಿನ ಮೂರು ತಿಂಗಳಲ್ಲಿ ಇದು ಕಾರ್ಯಗತಗೊಳ್ಳಲಿದ್ದು ಇಲ್ಲಿ ಭಂಡಾರಿ ಸಮುದಾಯ ಭವನ ನಿರ್ಮಾಣವಾಗಲಿಕ್ಕಿದೆ ಎಂದರು.


ಭಂಡಾರಿ ಸಮಾಜ ಸಂಘದ ಗೌರವಾಧ್ಯಕ್ಷ ವಿನಯ ಭಂಡಾರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 35ವರ್ಷ ಹಿಂದೆ ಭಂಡಾರಿ ಸಮಾಜ ಸಂಘವು ಪ್ರಾರಂಭವಾಗಿದ್ದು ಹಲವಾರು ಅಧ್ಯಕ್ಷರು ಸಮುದಾಯವನ್ನು ಉತ್ತಮ ರೀತಿಯಲ್ಲಿ ಮುಂದುವರೆಸಿಕೊಂಡು ಹೋಗಿರುತ್ತಾರೆ ಮಾತ್ರವಲ್ಲ ಹತ್ತು ವರ್ಷದ ಹಿಂದೆ ಸಮಿತಿಯು ನೋಂದಾವಣೆಗೊಳಿಸಲಾಗಿದೆ. ಸಮಾಜಕ್ಕೆ ಸರಕಾರದಿಂದ ಹತ್ತು ಸೆಂಟ್ಸ್ ಸ್ವಂತ ಜಾಗ ಬೇಕು ಎನ್ನುವ ಆಶಯವಿದ್ದು, ಭಂಡಾರಿ ಸಮಾಜವು ಇನ್ನೂ ಉತ್ತಮಗೊಳ್ಳಬೇಕಾದರೆ ದೇಣಿಗೆ ಕೊಡುವ ಮನಸ್ಸು ಸಮಾಜ ಬಾಂಧವರು ಮಾಡಬೇಕು ಎಂದರು.


ಮೌನ ಪ್ರಾರ್ಥನೆ:
ಈ ಸಂದರ್ಭದಲ್ಲಿ ಅಗಲಿದ ಭಂಡಾರಿ ಸಮಾಜದ ಹಿರಿಯ ಚೇತನರಿಗೆ ಒಂದು ನಿಮಿಷಗಳ ಮೌನ ಪ್ರಾರ್ಥನೆಯನ್ನು ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.


ಗೌರವ:
ಇತ್ತೀಚೆಗೆ ನಿಧನರಾದ ಭಂಡಾರಿ ಸಮಾಜ ಸಂಘದ ಮಾಜಿ ಅಧ್ಯಕ್ಷ ಸುರೇಂದ್ರ ಭಂಡಾರಿರವರ ಸ್ಮರಣಾರ್ಥ ಅವರ ಕುಟುಂಬಿಕರು ಅನ್ನದಾನ ಸೇವೆಯನ್ನು ಹಮ್ಮಿಕೊಂಡಿದ್ದು, ಈ ನಿಟ್ಟಿನಲ್ಲಿ ದಿ.ಸುರೇಂದ್ರ ಭಂಡಾರಿರವರ ಪತ್ನಿ ಸುಮ ಸುರೇಂದ್ರ ಭಂಡಾರಿ, ಪುತ್ರ ಲತೇಶ್, ಪುತ್ರಿ ಶ್ರುತಿಕಾ, ಸಹೋದರ ವಸಂತ್ ಭಂಡಾರಿರವರಿಗೆ ಜೊತೆಗೆ ವಿದ್ಯಾರ್ಥಿವೇತನ ನೀಡಿ ಸಹಕರಿಸಿದ ಪುಷ್ಪಲತಾ ಪ್ರತಿಷ್ಠಾನ ಮಂಜಲ್ಪಡ್ಪು ಇದರ ಗಿರೀಶ್ ಭಂಡಾರಿ ಹಾಗೂ ಪೂರ್ಣೇಶ್ ಭಂಡಾರಿರವರುಗಳನ್ನು ಸಂಘದ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಶ್ರಾವಣಿ ಹಾಗೂ ಲವಣಿ ಪ್ರಾರ್ಥಿಸಿದರು. ಮಹಿಳಾ ಭಂಡಾರಿ ಸಮಾಜ ಸಂಘದ ಅಧ್ಯಕ್ಷೆ ಮಮತಾ ಹರೀಶ್, ಭಂಡಾರಿ ಸಮಾಜ ಸಂಘದ ಕಾರ್ಯದರ್ಶಿ ಹರೀಶ್ ಭಂಡಾರಿ ಕುಂಜೂರುಪಂಜ, ಅಂಕತ್ತಡ್ಕ ಪೂಂಜಿರೋಟು ಶ್ರೀ ಬ್ರಹ್ಮ ಬೈದರ್ಕಳ ನೇತ್ರಾವತಿ ಗರಡಿ ಅಧ್ಯಕ್ಷ ಪದ್ಮನಾಭ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸತೀಶ್ ಭಂಡಾರಿ, ಸೀತಾರಾಮ ಭಂಡಾರಿ ಬರೆಪ್ಪಾಡಿ, ಶ್ವೇತಾ ಭಂಡಾರಿ, ಬಾಲಕೃಷ್ಣ ಭಂಡಾರಿ, ಗುರುಪ್ರಸಾದ್, ವಸಂತ ಭಂಡಾರಿ, ಮಹಾಬಲ ಭಂಡಾರಿ, ಗಿರೀಶ್ ಭಂಡಾರಿರವರು ಶಾಲು ಹೊದಿಸಿ, ಹೂ ನೀಡಿ ಸ್ವಾಗತಿಸಿದರು. ಮಹಿಳಾ ಭಂಡಾರಿ ಸಮಾಜ ಸಂಘದ ಕಾರ್ಯದರ್ಶಿ ಪ್ರಮೀಳಾ ದಿನೇಶ್ ವರದಿ ಮಂಡಿಸಿದರು. ಭಂಡಾರಿ ಸಮಾಜ ಸಂಘದ ಕೋಶಾಧಿಕಾರಿ ನವೀನ್ ಎಂ.ಮೂಡಂಬೈಲು ಲೆಕ್ಕಪತ್ರ ಮಂಡಿಸಿದರು. ಅನಿತಾ ಸುರೇಶ್, ಗೀತಾ, ರಶ್ಮಿರವರು ಸನ್ಮಾನಿತರ ಪತ್ರ ವಾಚಿಸಿದರು. ಯುವ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಕಾರ್ತಿಕ್ ಮಜಲುಮಾರು ವಂದಿಸಿದರು. ಅನುಷಾ ಭಂಡಾರಿ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.


ಸನ್ಮಾನ..
ಸುಮಾರು 50 ವರ್ಷಗಳಿಂದ ಕುಲ ಕಸುಬಿನ ಜೊತೆಗೆ ಕೃಷಿ ಚಟುವಟಿಕೆಯನ್ನು ಮಾಡುತ್ತಿರುವ ಭಂಡಾರಿ ಸಮಾಜದ ಹಿರಿಯರಾದ ಕೃಷ್ಣಪ್ಪ ಭಂಡಾರಿ ಬೆಳಂದೂರು, ಸಂಪ್ಯ ಖಜಾನೆಮೂಲೆಯ ಜನಾರ್ದನ ಭಂಡಾರಿ, ತಾರಿಗುಡ್ಡೆ ಚಂದ್ರಶೇಖರ ಭಂಡಾರಿ ಹಾಗೂ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಹಾಗೂ ನಾಟಕಗಳಲ್ಲಿ ಭಾಗವಹಿಸಿದ ಗಣರಾಜ್ ಭಂಡಾರಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ರಾಶಿ, ಮನೀಶ್ ಪಿ.ಎಸ್‌ರವರನ್ನು ಸನ್ಮಾನಿಸಲಾಯಿತು.

ವಿದ್ಯಾರ್ಥಿವೇತನ/ವೈದ್ಯಕೀಯ ನೆರವು..
ಎಸೆಸ್ಸೆಲ್ಸಿ ವಿದ್ಯಾರ್ಥಿಗಳಾದ ಆಶ್ಲೇಷ್, ರಕ್ಷಾ, ಕಿರಣ ಭಂಡಾರಿ, ತೃಪ್ತಿ ಬರೆಪ್ಪಾಡಿ, ಸುಶಾಂತ್, ಕೀರ್ತೇಶ್‌ರವರಿಗೆ ಪುಷ್ಪಲತಾ ಪ್ರತಿಷ್ಠಾನ ಮಂಜಲ್ಪಡ್ಪು ಇವರಿಂದ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ಕುಟುಂಬದಲ್ಲಿ ಮೂವರು ಅನಾರೋಗ್ಯದಲ್ಲಿರುವ ಆಶಾ ಅಳಕೆಮಜಲು ಕುಟುಂಬಕ್ಕೆ ಭಂಡಾರಿ ಸಮಾಜ ಸಂಘದಿಂದ ವೈದ್ಯಕೀಯ ವೆಚ್ಚಕ್ಕೆ ರೂ.೫ ಸಾವಿರ ನೆರವನ್ನು ಹಸ್ತಾಂತರಿಸಲಾಯಿತು.

ಸತ್ಯನಾರಾಯಣ ಪೂಜೆ..
ಬೆಳಿಗ್ಗೆ ಅರ್ಚಕರಾದ ಮುರಳೀಧರ ಬಳ್ಳಿತ್ತಾಯ, ಭಾಸ್ಕರ ಕೆದಿಲಾಯ, ಬಾಲಕೃಷ್ಣ ಭಟ್‌ರವರ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಜರಗಿದ್ದು ನೂರಾರು ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು

LEAVE A REPLY

Please enter your comment!
Please enter your name here