800 ವರ್ಷಗಳ ಇತಿಹಾಸ ಹೊಂದಿರುವ ವಿಟ್ಲ ಭಗವಾನ್ ಶ್ರೀ ೧೦೦೮ ಚಂದ್ರನಾಥ ಸ್ವಾಮಿ ಬಸದಿ
ಪ್ರಾಚೀನ ಭಾರತದಲ್ಲಿ ಹುಟ್ಟಿದ ಧರ್ಮವಾದ ಜೈನ ಧರ್ಮವು ಜ್ಞಾನೋದಯ, ಶುದ್ಧತೆ ಮತ್ತು ಅಹಿಂಸೆಯ ಮಾರ್ಗವನ್ನು ಕಲಿಸುತ್ತದೆ. ‘ಅಹಿಂಸೆ’ ತತ್ವವು ಜೈನ ಧರ್ಮದ ಅತ್ಯಂತ ಕೇಂದ್ರ ಬೋಧನೆಯಾಗಿದೆ. ಕಾಯಾ, ವಾಚಾ, ಮನಸ ಇವೆಲ್ಲವನ್ನೂ ಬದುಕು ಮತ್ತು ಬದುಕಲು ಬಿಡಿ ಎಂಬ ಧ್ಯೇಯವಾಕ್ಯದೊಂದಿಗೆ, ಸಮಾಜದಲ್ಲಿ ಶಾಂತಿ ಕಾಪಾಡುವಲ್ಲಿ ಜೈನ ಧರ್ಮ ವಿಶೇಷ ಪಾತ್ರ ವಹಿಸಿದೆ.
ಭೂಮಂಡಲದಲ್ಲೇ ಅತಿಶಯವೆನಿಸಿದ ತುಳುನಾಡಿನ ಸಾಂಸ್ಕೃತಿಕ, ರಾಜಕೀಯ, ಧಾರ್ಮಿಕ, ಸಾಮಾಜಿಕ ಪರಂಪರೆಗಳಿಗೆ ಜೈನರಸರು ನೀಡಿದ ಕೊಡುಗೆ ಅಪಾರ. ಸಮನ್ವತೆಯ ಹರಿಕಾರರಾಗಿ ಧರ್ಮ ಸೌರಭವನ್ನು ತುಳುನಾಡಿನ ಮೂಲ ಮಣ್ಣಿನಲ್ಲಿ ಬೆರೆಸಿ ಕೋಮು ಸಾಮರಸ್ಯದ ಸೊಬಗನ್ನು ವಿಶ್ವದಾದ್ಯಂತ ಪಸರಿಸಿದ ಜೈನಧರ್ಮವು ತುಳುನಾಡಿನಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ.
![](https://puttur.suddinews.com/wp-content/uploads/2025/02/WhatsApp-Image-2025-02-11-at-6.45.26-PM.jpeg)
ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಎಂಬ ಪರಿಸರದಲ್ಲಿ ಜೈನ ಧರ್ಮದವರು ಪುರಾತನ ಕಾಲದಲ್ಲಿ ನಿರ್ಮಿಸಿದ ಭಗವಾನ್ ಶ್ರೀ ೧೦೦೮ ಚಂದ್ರನಾಥ ಸ್ವಾಮಿ ಬಸದಿಯು ಪಂಚಕಲ್ಯಾಣ ಮಹೋತ್ಸವ ಸಂಭ್ರಮಕ್ಕೆ ಸಜ್ಜಾಗಿದೆ.
ವಿಟ್ಲ ಭಗವಾನ್ ಶ್ರೀ ೧೦೦೮ ಚಂದ್ರನಾಥ ಸ್ವಾಮಿ ಬಸದಿ ವಿಟ್ಲ ಪುತ್ತೂರು ಮುಖ್ಯ ರಸ್ತೆಯ ಹಿಂದಿನ ಜೈನ ಪೇಟೆ ಎಂದೇ ಕರೆಯಲ್ಪಡುವ ಈಗಿನ ಮೇಗಿನಪೇಟೆ ಎಂಬಲ್ಲಿ ಹಲವಾರು ವಿಶೇಷತೆಗಳೊಂದಿಗೆ ಎಲ್ಲಾ ವರ್ಗದ ಜನರ ಗಮನ ಸೆಳೆಯುತ್ತಿದೆ. ವಿಟ್ಲದ ಹಿರಿಮೆಗೆ ಇನ್ನೊಂದು ಗರಿಮೆ ಎಂಬಂತೆ ವಿಟ್ಲ ಜೈನ ಬಸದಿಯು ತನ್ನ ಹೊಸ ರೂಪದೊಂದಿಗೆ ವಿಶೇಷ ಆಕರ್ಷಣೆಯಾಗಿ ಕಣ್ಮನ ಸೆಳೆಯುತ್ತಿದೆ.
ದಕ್ಷಿಣ ಭಾರತದ ಜೈನಕಾಶಿ ಎಂದೇ ಕರೆಯಲ್ಪಡುವ ಮೂಡಬಿದಿರೆಯ ಜೈನ ಮಠಕ್ಕೆ ಒಳಪಟ್ಟ ವಿಟ್ಲ ಬಸದಿಯು 800 ವರ್ಷಗಳ ಇತಿಹಾಸ ಹೊಂದಿದೆ. ಈ ಹಿಂದೆ ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿದ್ದ ಮಂಜಯ್ಯ ಹೆಗ್ಡೆಯವರು ಮತ್ತು ಪುಟ್ಟಸ್ವಾಮಿ ಎಂಬ ಅಣ್ಣತಮ್ಮಂದಿರ ಕಾಲಘಟ್ಟದಲ್ಲಿ ಮಂಜಯ್ಯ ಹೆಗ್ಡೆಯವರ ಅಡಳಿತದ ಸಮಯದಲ್ಲಿ ಇಲ್ಲಿ ಚಂದ್ರನಾಥ ಸ್ವಾಮಿಯ ಗುಡಿಯ ಜೀರ್ಣೋದ್ಧಾರ ಕಾರ್ಯಗಳನ್ನು ಮಾಡಲಾಗಿತ್ತು. ಇವರ ಕಾಲಾವಧಿಯಲ್ಲಿ ಪ್ರತೀ ದಿನ ಎರಡು ಹೊತ್ತು ನಿತ್ಯ ಪೂಜಾ ವಿಧಿ ವಿಧಾನಗಳು ನಡೆಯುತ್ತಿತ್ತು.
2022ನೇ ಸೆ. 5 ರಂದು ವಿಟ್ಲ ಜೈನ ಬಸದಿಯಲ್ಲಿ ಶಿಲನ್ಯಾಸ ಕಾರ್ಯಕ್ರಮ ನಡೆದು, ಕೆಲಸ ಕಾರ್ಯಗಳಿಗೆ ಚಾಲನೆ ನೀಡಲಾಗಿತ್ತು. ಇದೀಗ ಜೈನ ಧರ್ಮದ 24 ತೀರ್ಥಂಕರರಲ್ಲಿ 8 ನೇ ತೀರ್ಥಂಕರರಾದ ಭ|| ಶ್ರೀ ಚಂದ್ರನಾಥ ಸ್ವಾಮಿ ಮತ್ತು 24 ನೇ ತೀರ್ಥಂಕರರಾದ ಭ|| ಶ್ರೀ ಮಹಾವೀರ ಸ್ವಾಮಿ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವ, ಹಾಗೂ ಯಕ್ಷಿ ಶ್ರೀ ಜ್ವಾಲಾಮಾಲಿನಿ ಅಮ್ಮನವರ ಮತ್ತು ಯಕ್ಷಿ ಶ್ರೀ ಪದ್ಮಾವತಿ ಅಮ್ಮನವರ ಮಹೋತ್ಸವ ಸಂಭ್ರಮಕ್ಕೆ ಸಜ್ಜಾಗಿದೆ.
ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನಕ್ಕೂ ವಿಟ್ಲ ಜೈನ ಬಸದಿಗೂ ಅವಿನಾಭಾವ ಸಂಬಂಧವಿದೆ. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಜೈನ ಬಸದಿಗೆ ವಿಶೇಷ ಗೌರವ ಸ್ಥಾನಮಾನ ನೀಡಲಾಗುತ್ತದೆ. ಅದಲ್ಲದೆ ವಿಟ್ಲ ಪರಿಸರದಲ್ಲಿ ನಡೆಯುವ ಪ್ರತಿಯೊಂದು ಧಾರ್ಮಿಕ ಕ್ಷೇತ್ರಗಳಿಗೆ ಸಂಬಂಭಪಟ್ಟ ಧಾರ್ಮಿಕ ಕಾರ್ಯಗಳ ಹಸಿರು ಹೊರಕಾಣಿಕೆ ಮೆರವಣಿಗೆ, ಇವೆಲ್ಲವೂ ಜೈನ ಬಸದಿಯಿಂದಲೇ ಹೊರಡುವುದು ಇಲ್ಲಿನ ವಿಶೇಷತೆ.
ವಿಟ್ಲ ಜೈನ ಬಸದಿಗೆ ಎಲ್ಲರಿಗೂ ಮುಕ್ತ ಪ್ರವೇಶ:
ಎಲ್ಲರೂ ಬಸದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಬಹುದೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಸೃಷ್ಟಿಯಾಗಿದೆ. ಇದಕ್ಕೆಲ್ಲಾ ಉತ್ತರವೆಂಬಂತೆ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ್ದು, ’ಇದು ಜೈನರ ಬಸದಿ ಅಲ್ಲ.., ಇದು ವಿಟ್ಲದ ಬಸದಿ’. ಆದ ಕಾರಣ ಎಲ್ಲಾ ಧರ್ಮದವರಿಗೂ ಪ್ರೇವೇಶವಿದೆ. ದಿನದಲ್ಲಿ ಎರಡು ಹೊತ್ತು ಪೂಜೆ ಪುರಸ್ಕಾರಗಳು ನಡೆಯುತ್ತದೆ. ಈ ಹಿಂದೆ ಈ ಬಸದಿಯಲ್ಲಿ ಅನೇಕ ಮನದಿಚ್ಚೆ, ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ದೊರಕಿದ ಅದೆಷ್ಟೋ ನಿದರ್ಶನಗಳಿವೆ. ಎಲ್ಲಾ ಭಕ್ತಾದಿಗಳು ಬಸದಿಗೆ ಬಂದು ತಮ್ಮ ಇಷ್ಟಾರ್ಥಗಳನ್ನು ಇಲ್ಲಿ ಬೇಡಿಕೊಳ್ಳಬಹುವುದು.
ನವಿಲು ಜಿನಾಲಯ:
ನವಿಲು ಜಿನಾಲಯದಂತೆ ವಿಶೇಷ ಆಕಾರ ವೈಶಿಷ್ಟ್ಯತೆಗಳನ್ನು ಹೊಂದಿರುವ ಈ ಬಸದಿಯಲ್ಲಿ ನವಿಲನ್ನು ಹೋಲುವ ಆಕಾರ, ಬಣ್ಣ, ಆಕೃತಿಯನ್ನು ನೀಡಲಾಗಿದೆ. ಬಸದಿಯ ಹೊರನೋಟದ ಮೇಲ್ಭಾಗದಲ್ಲಿ ಕಲಶ ಜೋಡಿಸುವ ಜಾಗದಲ್ಲಿ ನವಿಲಿನ ತಲೆಯ ಆಕೃತಿ ಜೋಡಿಸಲಾಗಿದ್ದು, ಅದರ ಕೆಳ ಭಾಗದಲ್ಲಿ ನವಿಲಿನ ಕಂಠದ ನೀಲಿ ಬಣ್ಣದ ತಾಮ್ರ ದ ಹೊದಿಕೆ ನೀಡಲಾಗಿದೆ. ಅದರ ಕೆಳ ಭಾಗದ ಚಾವಣಿಯಲ್ಲಿ ನವಿಲಿನ ಗರಿಯ ಹಸಿರು ಮತ್ತು ನೀಲಿ ಬಣ್ಣದ ಹೊದಿಕೆ ಮುದ್ರಿಸಲಾಗಿದೆ. ಒಟ್ಟಾಗಿ ಹೊರ ಭಾಗದಿಂದ ನೋಡುವ ಭಕ್ತಾದಿಗಳ ಕಣ್ಣಿಗೆ ಈ ಬಸದಿಯು ನವಿಲಿನಂತೆ ಆಕರ್ಷಿಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ಬಸದಿಯು ನವಿಲು ಬಸದಿ ಎಂದು ಪ್ರವಾಸಿ ತಾಣವಾಗುವ ಬಹಳಷ್ಟು ಅವಕಾಶಗಳಿವೆ.
ಈ ಬಸದಿಯಲ್ಲಿ ಪ್ರಮುಖವಾಗಿ ಭಗವಾನ್ ಶ್ರೀ ೧೦೦೮ ಚಂದ್ರನಾಥ ಸ್ವಾಮಿ, ಭಗವಾನ್ ಶ್ರೀ ೧೦೦೮ ಶ್ರೀ ಮಹಾವೀರ ಸ್ವಾಮಿ, ಯಕ್ಷಿ ಶ್ರೀ ಪದ್ಮಾವತಿ ಅಮ್ಮನವರ ಹಾಗೂ ಯಕ್ಷಿ ಶ್ರೀ ಜ್ವಾಲಮಾಲಿನಿ ಅಮ್ಮನವರಿಗೆ ಮುಂದಿನ ದಿನಗಳಲ್ಲಿ ಪ್ರತೀದಿನ ಎರಡು ಹೊತ್ತು ಪೂಜೆ ಪುರಸ್ಕಾರಗಳು ನಡೆಯುತ್ತದೆ. ಜೊತೆಗೆ ಪಂಚಪರಮೇಷ್ಠಿ ಶ್ರೀ ಪಾರ್ಶ್ವನಾಥ ಮತ್ತು ಕ್ಷೇತ್ರಪಾಲನ ಮತ್ತು ನಾಗದೇವರರ ಆರಾಧನೆ ಮಾಡಲಾಗುತ್ತದೆ.
ಈಗಿನ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಿ.ವಿನಯ ಕುಮಾರ್ ರವರ ಮುಂದಾಳತ್ವದಲ್ಲಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಜೀರ್ಣೋದ್ಧಾರ ಮತ್ತು ಪಂಚಕಲ್ಯಾಣ ಮಹೋತ್ಸವ ಸಮಿತಿ ಅಧ್ಯಕ್ಷರಾದ ಜೀತೇಶ್ ಎಂ., ಕಾರ್ಯದರ್ಶಿ ದರ್ಶನ್ ಜೈನ್ ರವರ ನೇತೃತ್ವದಲ್ಲಿ ಬಸದಿಯು ಎಲ್ಲಾ ಕಾರ್ಯಚಟುವಟಿಕೆಗಳು ನಡೆದುಕೊಂಡು ಬಂದಿದ್ದು, ಪಂಚಕಲ್ಯಾಣ ಮಹೋತ್ಸವ ಕಾರ್ಯಕ್ರಮ ನಡೆಸುವ ಹಂತ ತಲುಪಿದೆ.
ವಿಟ್ಲದಲ್ಲಿ ಪುರಾತನ ಇತಿಹಾಸ ಹೊಂದಿರುವ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಒಂದು ಕಡೆಯಾದರೆ, ಇನ್ನೊಂದು ಕಡೆ ಸಾವಿರಾರು ವರ್ಷಗಳ ಆಳ್ವಿಕೆಯೊಂದಿಗೆ ಹೆಸರುವಾಸಿಯಾದ ವಿಟ್ಲ ಅರಮನೆ, ಇನ್ನೊಂದು ಕಡೆ ಸನ್ಯಾಸಿ ಮಠಾಧೀಶರುಗಳ ಜೋಗಿ ಮಠ ಇದ್ದು, ಇದರೊಂದಿಗೆ ವಿಟ್ಲ ಜೈನ ಬಸದಿಯೂ ಪ್ರವಾಸಿಗರನ್ನು ಹಾಗೂ ಭಕ್ತಾದಿಗಳನ್ನು ಆಕರ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಫೆ. 13 ರಿಂದ ಫೆ. 17 ರವರೆಗೆ ಜೈನಬಸದಿಯಲ್ಲಿ ಭಗವಾನ್ ಶ್ರೀ ೧೦೦೮ ಚಂದ್ರನಾಥ ಸ್ವಾಮಿ ಬಸದಿ ತೀರ್ಥಂಕರರ ಮತ್ತು ಭಗವಾನ್ ಶ್ರೀ ೧೦೦೮ ಶ್ರೀ ಮಹಾವೀರ ಸ್ವಾಮಿ ತೀರ್ಥಂಕರರ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ಮತ್ತು ನೂತನ ಬಿಂಬ ಪ್ರತಿಷ್ಠೆ, ಹಾಗೂ ಯಕ್ಷಿ ಶ್ರೀ ಪದ್ಮಾವತಿ ಅಮ್ಮನವರ ಹಾಗೂ ಯಕ್ಷಿ ಶ್ರೀ ಜ್ವಾಲಮಾಲಿನಿ ಅಮ್ಮನವರ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮ ವಿಜ್ರಂಭಣೆಯಿಂದ ನಡೆಯಲಿದ್ದು, ಊರ – ಪರವೂರ ಸಾವಿರಾರು ಭಕ್ತರು ಸೇರುವ ನಿರೀಕ್ಷೆ ಇರಿಸಲಾಗಿದೆ.
ಬೆಳಿಗ್ಗೆ ಗಂಟೆ 6.55ರಿಂದ ಇಂದ್ರ ಪ್ರತಿಷ್ಠೆ, ಗಂಟೆ 7.55ರ ಕುಂಭ ಲಗ್ನದಲ್ಲಿ ತೋರಣ ಮುಹೂರ್ತ, ವಿಮಾನಶುದ್ಧಿ ವಿಧಾನ, ದಿವಾಗಂಟೆ 12.15ರ ಅಭಿಜಿನ್ ಲಗ್ನದಲ್ಲಿ ಮುಖವಸ್ತ್ರ ಉದ್ಘಾಟನೆ, ಅಪರಾಹ್ನ ಗಂಟೆ 2.00 ರಿಂದ ನಾಂದಿ ಮಂಗಲ ಪೂಜಾ ವಿಧಾನ, ವಾಸ್ತು ಪೂಜಾ ವಿಧಾನ, ನವಗ್ರಹ ಮಹಾಶಾಂತಿ, ದಿಕ್ಪಾಲಕ ಬಲಿ ವಿಧಾನ, ಮೃತ್ತಿಕಾ ಸಂಗ್ರಹಣೆ, ಅಂಕುರಾರ್ಪಣೆ, ಸಂಜೆ ಗಂಟೆ 5.05ರ ಕರ್ಕಾಟಕ ಲಗ್ನದಲ್ಲಿ ಪಂಚಕಲ್ಯಾಣ ಮಂಟಪ ಪ್ರವೇಶ, ಸಂಜೆ ಗಂಟೆ 6.45ರ ಸಿಂಹ ಲಗ್ನದಲ್ಲಿ ಶ್ರೀ ಕ್ಷೇತ್ರಪಾಲ ಪ್ರತಿಷ್ಠೆ, ಸಂಜೆ ಗಂಟೆ 4.30ಕ್ಕೆ ಅಗ್ರೋದಕ ಮೆರವಣಿಗೆ, ಅಭಿಷೇಕ ಪೂಜೆ, ಮಹಾಮಂಗಳಾರತಿ ನಡೆಯಲಿದೆ.
ಸಾಯಂಕಾಲ ೫ ಗಂಟೆಯಿಂದ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ಭಾರತಭೂಷಣ ಸ್ವಸ್ತಿಶ್ರೀ ಡಾ॥ ಚಾರುಕೀರ್ತಿ ಭಟ್ಟಾರಕರವರು ಆಶೀರ್ವಚನ ನೀಡಲಿದ್ದಾರೆ.
ಮೂಡಬಿದಿರೆ ಶ್ರೀ ಜೈನಮಠದ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಮಹಾಸ್ವಾಮಿಜಿ, ಕಾರ್ಕಳ ಜೈನಮಠದ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಜಿರವರು ದಿವ್ಯ ಸಾನಿಧ್ಯ ಕರುಣಿಸಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿಯಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಭಾ ಕಾರ್ಯಕ್ರಮವನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ। ಪದ್ಮಪ್ರಸಾದ್ ಅಜಿಲರು ಉದ್ಘಾಟಿಸಲಿದ್ದಾರೆ. ವಿಟ್ಲ ಅರಮನೆಯ ಬಂಗಾರು ಅರಸರು ಗೌರವ ಉಪಸ್ಥಿತಿ ವಹಿಸಲಿದ್ದಾರೆ. ದ.ಕ.ಸಂಸದರಾದ ಕ್ಯಾ.ಬ್ರಿಜೇಶ್ ಚೌಟ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅರಳ ರಾಜೇಂದ್ರ ಶೆಟ್ಟಿ, ಮಾಜಿ ಸಚಿವರಾದ ಅಭಯಚಂದ್ರ ಜೈನ್, ಸುರೇಶ ಬಲ್ಲಾಳ್, ಬಲ್ಲಾಳ್ಬಾಗ್, ಮಂಗಳೂರು ಮೊದಲಾದವರು ಉಪಸ್ಥಿತರಿರಲಿದ್ದಾರೆ.
ಹಸಿರುವಾಣಿ, ಅಗ್ರೋದಕ ಮೆರವಣಿಗೆ:
ವಿಟ್ಲ ಭಗವಾನ್ ಶ್ರೀ ೧೦೦೮ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ನಡೆಯಲಿರುವ ಪಂಚಕಲ್ಯಾಣ ಮಹೋತ್ಸವದ ಅಂಗವಾಗಿ ಫೆ.೧೩ರಂದು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಿಂದ ಬಸದಿಯ ವರೆಗೆ ಸಾರ್ವಜನಿಕರಿಂದ ಹಸಿರುವಾಣಿ, ಅಗ್ರೋದಕ ಮೆರವಣಿಗೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಯಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರರಿಗೆ ಪೂರ್ಣಕುಂಭ ಸ್ವಾಗತ ನಡೆಯಲಿದೆ.