*ಸಮಾಜವನ್ನು ಒಟ್ಟುಗೂಡಿಸುವ ಶಕ್ತಿ ದೈವರಾಧನೆಗೆ ಇದೆ: ಮಾಣಿಲ ಶ್ರೀ
*ಧರ್ಮಕೇಂದ್ರಗಳ ಅಭಿವೃದ್ಧಿಯೊಂದಿಗೆ ಧರ್ಮ ಜಾಗೃತಿ ಸಾಧ್ಯ: ತ್ರಿವೇಣಿ ಪಲ್ಲತ್ತಾರು
ಪುತ್ತೂರು: ಸಮಾಜದ ಎಲ್ಲಾ ಜನರನ್ನು ಸೇರಿಸಿಕೊಂಡು ಒಂದು ಸಮಾಜವನ್ನು ಒಟ್ಟುಗೂಡಿಸುವ ಶಕ್ತಿ ದೈವರಾಧನೆಗೆ ಇದೆ. ಹಿಂದಿನ ಕಾಲದಲ್ಲಿ ವಿದ್ಯೆ ಕಡಿಮೆ ಇದ್ದರೂ ದೈವದ ಆರಾಧನೆಯನ್ನು ಬಹಳ ಶ್ರದ್ಧೆಭಕ್ತಿಯಿಂದ ಮಾಡುತ್ತಿದ್ದರು. ಇಂತಹ ಶ್ರದ್ಧೆ,ಭಕ್ತಿ ಇದ್ದಾಗ ಮಾತ್ರ ದೈವ ದೇವರ ಅನುಗ್ರಹ ಪ್ರಾಪ್ತಿಯಾಗಲು ಸಾಧ್ಯವಿದೆ ಎಂದು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಹೇಳಿದರು.
ಅವರು ಅರಿಯಡ್ಕ ಗ್ರಾಮದ ದರ್ಬೆತ್ತಡ್ಕ ಶೇಷಗಿರಿ ಎಂಬಲ್ಲಿ ಶ್ರೀ ಧರ್ಮದೈವ ಮತ್ತು ಪರಿವಾರ ದೈವಗಳ ದೈವಸ್ಥಾನ ಕುಂಟಾಪು ಇಲ್ಲಿ ಶ್ರೀ ಧರ್ಮದೈವ ಮತ್ತು ಪರಿವಾರ ದೈವಗಳ ಹಾಗೂ ನಾಗನ ಪ್ರತಿಷ್ಠಾ ಕಲಶೋತ್ಸವದ ಅಂಗವಾಗಿ ಫೆ.16 ರಂದು ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ದೈವಗಳ ಆರಾಧನೆಯಲ್ಲಿ ಕಟ್ಟುಪಾಡು, ರೀತಿ ನೀತಿಗಳನ್ನು ಮೀರದೆ ಆರಾಧನೆ ಮಾಡಬೇಕು, ದೈವಕ್ಕೆ ಅಮಲು ಪದಾರ್ಥದ ಅವಶ್ಯಕತೆ ಇಲ್ಲ ಎಂದು ಸ್ವಾಮೀಜಿಯವರು ಹಿಂದಿನ ಕಾಲದಲ್ಲಿ ಕಲಿ ಬೆಲ್ಲ( ಶೇಂದಿ ಮತ್ತು ಬೆಲ್ಲ)ದ ನೀರನ್ನು ಇಟ್ಟು ಆರಾಧನೆ ಮಾಡುತ್ತಿದ್ದರು ಎಂದು ಹೇಳಿದರು. ಇಂದಿನ ಯಾಂತ್ರಿಕೃತ ಜೀವನದಲ್ಲಿ ಯುವ ಜನಾಂಗ ದೈವ ದೇವರ ಆರಾಧನೆಯ ಬಗ್ಗೆ ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಮಾಣಿಲ ಶ್ರೀಗಳ ಹೇಳಿದರು.
ಧರ್ಮಕೇಂದ್ರಗಳ ಅಭಿವೃದ್ಧಿಯೊಂದಿಗೆ ಧರ್ಮ ಜಾಗೃತಿ ಸಾಧ್ಯ: ತ್ರಿವೇಣಿ ಪಲ್ಲತ್ತಾರು
ಮುಖ್ಯ ಅತಿಥಿಯಾಗಿದ್ದ ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಾತನಾಡಿ, ದೈವರಾಧನೆಯು ನಮ್ಮಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ತುಂಬುವುದರೊಂದಿಗೆ ಹಿಂದೂ ಧರ್ಮದ ಬಗ್ಗೆ ತಿಳಿದುಕೊಳ್ಳುವಂತೆ ಮಾಡುತ್ತದೆ. ಕುಂಟಾಪು ಶೇಷಗಿರಿಯಂತಹ ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಬ್ಬರ ಸಹಕಾರದಿಂದ ದೈವದ ಗುಡಿ ನಿರ್ಮಾಣದೊಂದಿಗೆ ಪ್ರತಿಷ್ಠೆ ನಡೆದಿರುವುದು ಖುಷಿ ತಂದಿದೆ. ಇಂತಹ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೊಂಡರೆ ಸಮಾಜದಲ್ಲಿ ಧರ್ಮ ಜಾಗೃತಿಗೊಳ್ಳಲು ಸಾಧ್ಯವಿದೆ ಎಂದು ಅವರು ಹೇಳಿ ಶುಭ ಹಾರೈಸಿದರು.
ದೈವರಾಧನೆಯಲ್ಲಿ ಶ್ರದ್ಧೆ, ಭಕ್ತಿ ಮುಖ್ಯ: ಪ್ರಕಾಶ್ಚಂದ್ರ ರೈ ಕೈಕಾರ
ಸಭಾಧ್ಯಕ್ಷತೆ ವಹಿಸಿದ್ದ ಶ್ರೀಧರ್ಮದೈವ ಮತ್ತು ಪರಿವಾರ ದೈವಗಳ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಮಾತನಾಡಿ, ಶ್ರದ್ಧೆ, ಭಕ್ತಿಯಿಂದ ಯಾವಾಗ ನಾವು ದೈವ ದೇವರ ಆರಾಧನೆ ಮಾಡುತ್ತೇವೋ ಆಗ ಮಾತ್ರ ನಮಗೆ ದೇವರ ಅನುಗ್ರಹ ಪ್ರಾಪ್ತಿಯಾಗಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಶೇಷಗಿರಿಯ ಸಮಸ್ತ ಜನರು ಕೂಡ ಬಹಳ ಉತ್ತಮ ರೀತಿಯಲ್ಲಿ ದೈವದ ಕೆಲಸಕ್ಕೆ ಸಹಕಾರ ಕೊಟ್ಟಿದ್ದಾರೆ. ಪ್ರತಿಯೊಬ್ಬರಿಗೆ ದೈವದೇವರ ಅನುಗ್ರಹ ಪ್ರಾಪ್ತಿಯಾಗಲಿ ಎಂದು ಹೇಳಿ ಸಹಕರಿಸಿದ ಸರ್ವರಿಗೂ ಧನ್ಯವಾದಗಳನ್ನು ಅರ್ಪಿಸಿದರು.

ಪ್ರೀತಿ ಹಂಚುವ ಮೂಲಕ ದೇಶ ಕಟ್ಟುವ: ದುರ್ಗಾಪ್ರಸಾದ್ ರೈ ಕುಂಬ್ರ
ಅತಿಥಿಯಾಗಿದ್ದ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಮಾತನಾಡಿ, ಅರಿಯಡ್ಕ ಮತ್ತು ಒಳಮೊಗ್ರು ಈ ಎರಡೂ ಗ್ರಾಮದಲ್ಲೂ ದೇವಸ್ಥಾನಗಳಿಲ್ಲ ಆದರೆ ದೈವಸ್ಥಾನವಿದೆ. ನಾವು ದೈವ ದೇವರನ್ನು ಪ್ರೀತಿ ಮತ್ತು ಭಕ್ತಿಯಿಂದ ಆರಾಧಿಸಿದಾಗ ನಮಗೆ ಆರಾಧನೆಯ ಫಲ ಸಿಗುತ್ತದೆ. ಆದ್ದರಿಂದ ಪ್ರೀತಿ ಹಂಚುವ ಮೂಲಕ ನಾವು ದೇಶ ಕಟ್ಟುವ ಕೆಲಸಕ್ಕೆ ನಾಂದಿ ಹಾಡಬೇಕಾಗಿದೆ ಎಂದು ಹೇಳಿ ಶುಭ ಹಾರೈಸಿದರು.
ಕರ್ನಾಟಕ ರಾಜ್ಯ ಮೊಗೇರ ಸಂಘದ ಗೌರವ ಸಲಹೆಗಾರರಾದ ಡಾ.ರಘು ಬೆಳ್ಳಿಪ್ಪಾಡಿ,ಸಾರ್ವಜನಿಕ ಒತ್ತೆಕೋಲ ಸಮಿತಿಯ ಸ್ಥಾಪಕಾಧ್ಯಕ್ಷ ಶ್ರೀಧರ ಮಣಿಯಾಣಿ ಕುತ್ಯಾಡಿ, ವಿದ್ಯಾ ಇಲಾಖೆಯ ನಿವೃತ್ತ ಅಧಿಕಾರಿ, ಯಕ್ಷಗಾನ ಕಲಾವಿದ ಸುಂದರ ಪೆರ್ಲ, ಕುಂಟಾಪು ತರವಾಡು ಮನೆಯ ಹಿರಿಯರಾದ ಸೀತಾರಾಮ ಮಣಿಯಾಣಿ ಕುಟ್ಲುಬಾಗಿಲುರವರುಗಳು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಉದ್ಯಮಿ ಮೋಹನದಾಸ ರೈ ಕುಂಬ್ರ,ಅರಿಯಡ್ಕ ಗ್ರಾಪಂ ಉಪಾಧ್ಯಕ್ಷೆ ಮೀನಾಕ್ಷಿ ಪಾಪೆಮಜಲು, ಜಿಲ್ಲಾ ಪ್ರಶಸ್ತಿ ಪುರಸ್ಕೃತ ರಾಜೇಶ್ ಕೆ.ಮಯೂರ, ದರ್ಬೆತ್ತಡ್ಕ ಸಾರ್ವಜನಿಕ ಒತ್ತೆಕೋಲ ಸಮಿತಿ ಅಧ್ಯಕ್ಷ ರವೀಂದ್ರ ಮಣಿಯಾಣಿ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಂಜುನಾಥ ಬಂಗ್ಲೆಗುಡ್ಡೆ, ಕುಂಬ್ರ ಹೊಸಮ್ಮ ಹೂವಿನ ಅಂಗಡಿ ಮಾಲಕ ಸದಾಶಿವ ಕುಂಬ್ರ, ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದ ಕೋಶಾಧಿಕಾರಿ ತಿಲಕ್ ರೈ ಕುತ್ಯಾಡಿ,ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ವಾಸು ಮಣಿಯಾಣಿ ಕುರಿಂಜ, ಕೋಟಿ ಚೆನ್ನಯ ನೇತ್ರಾವತಿ ಗರಡಿಯ ಮುಖ್ಯಸ್ಥ ಜಯರಾಮ ಪೂಜಾರಿ ಕುಕ್ಕುತ್ತಡಿ, ವಕೀಲ ಉದಯಚಂದ್ರ ಕೆ, ಶ್ರೀ ಧರ್ಮದೈವ ಮತ್ತು ಪರಿವಾರ ದೈವಗಳ ದೈವಸ್ಥಾನದ ಹಿರಿಯರಾದ ಚೋಮ ಮುಗೇರ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ತಿಲಕ್ ರೈ ಕುತ್ಯಾಡಿ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಜತೆ ಕಾರ್ಯದರ್ಶಿ ಮೋಹನ್ ದರ್ಬೆತ್ತಡ್ಕ ವಂದಿಸಿದರು. ಶಿವಪ್ರಸಾದ್ ಬೆಟ್ಟಂಪಾಡಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸಮಿತಿಗಳ ಪದಾಧಿಕಾರಿಗಳ ಸಹಕರಿಸಿದ್ದರು.
ಪ್ರತಿಷ್ಠಾ ಕಲಶೋತ್ಸವ
ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಾಗ ಪ್ರತಿಷ್ಠೆ, ಧರ್ಮದೈವ ಮತ್ತು ಪರಿವಾರ ದೈವಗಳ ಪ್ರತಿಷ್ಠೆ ನಡೆದು ಕಲಶೋತ್ಸವ ನಡೆಯಿತು. ಬೆಳಿಗ್ಗೆ ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ ನಡೆದು 8.48 ರ ಮೀನಾ ಲಗ್ನದ ಶುಭ ಮುಹೂರ್ತದಲ್ಲಿ ನಾಗಪ್ರತಿಷ್ಠೆ ಮತ್ತು ಧರ್ಮದೈವ ಅಣ್ಣಪ್ಪ ಪಂಜುರ್ಲಿ ಹಾಗೂ ಪರಿವಾರ ದೈವಗಳ ಪ್ರತಿಷ್ಠೆ, ಸಾನಿಧ್ಯ ಕಲಶಾಭಿಷೇಕ, ತಂಬಿಲ ಸೇವೆ ನಡೆದು ಮಂಗಳಾರತಿ, ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.