ಬೋಳಂತೂರು ಬೀಡಿ ಉದ್ಯಮಿಯ ಮನೆ ದರೋಡೆ ಪ್ರಕರಣ : ಕೇರಳದ ತ್ರಿಶೂರಿನ ಓರ್ವ ಪೊಲೀಸ್ ಸೇರಿ ಮತ್ತೆ ನಾಲ್ವರ ಬಂಧನ

0

ವಿಟ್ಲ : ಬಂಟ್ವಾಳ ತಾಲೂಕಿನ ಬೋಳಂತೂರು ನಾರ್ಶದ ಬೀಡಿ ಉದ್ಯಮಿ ಸುಲೈಮಾನ್ ಹಾಜಿರವರ ಮನೆಯಲ್ಲಿ ಇಡಿ ಅಧಿಕಾರಿಗಳ ಸೋಗಿನಲ್ಲಿ ಬಂದ ತಂಡದಿಂದ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ರಾಜ್ಯದ ಓರ್ವ ಪೊಲೀಸ್ ಸೇರಿದಂತೆ ನಾಲ್ವರು ಆರೋಪಿಗಳನ್ನು ವಿಟ್ಲ ಠಾಣಾ ಪೊಲೀಸರ ತಂಡ ಬಂಧಿಸಿದೆ.

ತ್ರಿಶೂರು ಜಿಲ್ಲೆಯ ಕೊಡಂಗಲ್ಲೂರು ಪೊಲೀಸ್ ಠಾಣೆಯಲ್ಲಿ ಎಎಸ್ ಐ ಆಗಿರುವ ಶಹೀರ್ ಬಾಬು (49 ವ.), ಇಕ್ಬಾಲ್ ಪರ್ಲಿಯ ಬಂಟ್ವಾಳ(38 ವ.), ಸಿರಾಜುದ್ದೀನ್ ನಾರ್ಶ(37 ವ.) ಮತ್ತು ಅಬ್ಸಾರ್ ಬಜಾಲ್ (28 ವ.) ಅವರು ಬಂಧಿತ ಆರೋಪಿಗಳು.

ಕೇರಳದ ಕೊಡಂಗಲ್ಲೂರು ಪೊಲೀಸ್ ಠಾಣೆಯ ಎಎಸ್ ಐ ಶಹೀರ್ ಬಾಬುರವರು ಇಡಿ ತಂಡವನ್ನು ಕಟ್ಟಿ ಅವರ ಯೋಜನೆಯಂತೆ ಈ ದಾಳಿ ನಡೆದಿತ್ತೆನ್ನಲಾಗಿದೆ. ಘಟನೆ ನಡೆದ ಬಳಿಕ ತನ್ನ ಪಾಲಿನ ಮೊತ್ತವನ್ನು ಪಡೆದುಕೊಂಡು ಎಂದಿನಂತೆ ತಮ್ಮ ಕೆಲಸಕ್ಕೆ ಮರಳಿದ್ದರೆನ್ನಲಾಗಿದೆ. ಈತ ಮಂಗಳೂರಿಗೆ ಬಂದು ಯಾವ ರೀತಿಯಲ್ಲಿ ಯೋಜನೆ ರೂಪಿಸಬೇಕೆಂದು ಮಾರ್ಗದರ್ಶನ ಮಾಡುತ್ತಿದ್ದ. ಇಡಿ ಅಧಿಕಾರಿಗಳಂತೆ ನಟಿಸಲು ಮತ್ತು ದರೋಡೆ ನಡೆಸಲು ಹಾಗೂ ತಪ್ಪಿಸಿಕೊಳ್ಳಲು ಸಮಗ್ರ ಮಾಹಿತಿ ನೀಡಿದ್ದ.
ಶಹಿರ್ ಬಾಬು ಘಟನೆ ನಡೆಯುವ ಆಸೂಪಾಸಿನ ದಿನಗಳಲ್ಲಿ ಆಗಾಗ ರಜೆ ತೆಗೆಯುತ್ತಿದ್ದರೆನ್ನಲಾಗಿದೆ. ಆರಂಭದಲ್ಲಿ ವಿಟ್ಲ ಪೊಲೀಸರು ತಂಡ ರಚಿಸಿ, ಖಚಿತ ಮಾಹಿತಿಯೊಂದಿಗೆ ಕೇರಳಕ್ಕೆ ತೆರಳಿ ದಾಳಿ ಮಾಡುವ ಮಾಹಿತಿ ಈತನಿಗೆ ತಿಳಿದು, ದರೋಡೆಕೋರರು ಪರಾರಿಯಾಗುವಂತೆ ಮಾಡಿದ್ದ.

ಜ. 3 ರಂದು ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಬೋಳಂತೂರಿನ ನಾರ್ಶ ಎಂಬಲ್ಲಿ ಸಿಂಗಾರಿ ಬೀಡಿ ಮಾಲಕ ಸುಲೈಮಾನ್ ಹಾಜಿ ಮನೆಗೆ ಇಡಿ ಅಧಿಕಾರಿಗಳ ಹೆಸರಲ್ಲಿ ದಾಳಿ ಮಾಡಿ ದರೋಡೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೇರಳದ ಕೊಟ್ಟಾಯಂ ನಿವಾಸಿ ಅನಿಲ್ ಫೆರ್ನಾಂಡಿಸ್, ಸಚಿನ್ ಮತ್ತು ಶಬಿನ್ ಎನ್ನುವ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಇಡಿ ಅಧಿಕಾರಿಯಂತೆ ನಟಿಸಿದ ಪ್ರಧಾನ ಆರೋಪಿಗಾಗಿ ವ್ಯಾಪಕ ಶೋಧ ನಡೆಸಲಾಗುತ್ತಿದೆ.

LEAVE A REPLY

Please enter your comment!
Please enter your name here