ನೆಲ್ಯಾಡಿ: ನೆಲ್ಯಾಡಿ ಭಾಗದಲ್ಲಿ ಕೂಲಿ ಕೆಲಸ ಮಾಡಿಕೊಂಡು ಪುತ್ಯೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಛತ್ತೀಸ್‌ಘಡ ಮೂಲದ ಯುವಕನೋರ್ವ ಬಾಡಿಗೆ ಮನೆ ಸಮೀಪವೇ ಮರವೊಂದಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಫೆ.16ರಂದು ಬೆಳಿಗ್ಗೆ ನಡೆದಿದೆ.
ಛತ್ತೀಸ್‌ಘಡ ರಾಜ್ಯದ ಪಾಲಿ ತಾಲೂಕಿನ ಕಟಪುರ ನಿವಾಸಿ ನವೀನ್ ಕುಮಾರ್(29ವ.)ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಹಾಗೂ ಛತ್ತೀಸ್‌ಘಡ ಮೂಲದ ಇತರರು ನೆಲ್ಯಾಡಿ ಗ್ರಾಮದ ಪುತ್ಯ ಎಂಬಲ್ಲಿ ಪದ್ಮಾನಂದ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದರು. ನವೀನ್‌ಕುಮಾರ್ ಜೊತೆಗಿದ್ದ ವಿಜಯಕುಮಾರ್ ಹಾಗೂ ಅವರ ತಮ್ಮ ಆಶಿಶ್ ಕುಮಾರ್ ಫೆ.15ರಂದು ರಾತ್ರಿ ಊಟ ಮಾಡಿ ಮಲಗಿದ್ದು ಈ ವೇಳೆ ನವೀನ್ ಕುಮಾರ್ ಫೋನಿನಲ್ಲಿ ಮಾತನಾಡುತ್ತಿದ್ದರು. ವಿಜಯಕುಮಾರ್ ಅವರಿಗೆ ರಾತ್ರಿ 2.40 ಗಂಟೆಗೆ ಎಚ್ಚರವಾದಾಗ ನವೀನ್ ಕುಮಾರ್ ಮನೆಯಲ್ಲಿ ಇಲ್ಲದೇ ಇದ್ದು, ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು. ಫೆ.16ರಂದು ಬೆಳಿಗ್ಗೆ ಬಾಡಿಗೆ ಮನೆಯಿಂದ ಸುಮಾರು 200 ಮೀಟರ್ ದೂರದಲ್ಲಿ ಖಾಲಿ ಜಾಗದಲ್ಲಿದ್ದ ಮರವೊಂದಕ್ಕೆ ನವೀನ್ ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.
ನವೀನ್ ಕುಮಾರ್ ಅವರು ಮನೆಯ ಹಣಕಾಸಿನ ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವಿಜಯ ಕುಮಾರ್ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.