ಉಪ್ಪಿನಂಗಡಿಯಲ್ಲಿ ಸೂರ್ಯ ಆಸ್ಪತ್ರೆ ಉದ್ಘಾಟನೆ

0

ಉತ್ತಮ ಆರೋಗ್ಯ ಸೇವೆಯಿಂದ ಊರಿನ ಅಭಿವೃದ್ಧಿ ಸಾಧ್ಯ: ಡಾ. ಎಂ. ಶಾಂತರಾಮ ಶೆಟ್ಟಿ

ಉಪ್ಪಿನಂಗಡಿ: ಊರು, ಪಟ್ಟಣ ಅಭಿವೃದ್ಧಿ ಹೊಂದಲು ಆ ಊರಿನಲ್ಲಿ ದೊರಕುವ ಆರೋಗ್ಯ ಸೇವೆಯೂ ಮುಖ್ಯವಾಗುತ್ತದೆ. ಅದೇ ರೀತಿಯಾಗಿ ವ್ಯಕ್ತಿ ಆರೋಗ್ಯವಂತನಾಗಿರಲು ವಿದ್ಯೆ, ಶುದ್ಧ ವಾತಾವರಣ, ಜನರ ಪ್ರೀತಿ, ವಾತ್ಸಲ್ಯವೂ ಮುಖ್ಯವಾಗುತ್ತದೆ. ಇದು ಇಲ್ಲದಿದ್ದರೆ ಯಾವುದೂ ಇಲ್ಲ ಎಂದು ನಿಟ್ಟೆ ವಿಶ್ವವಿದ್ಯಾಲಯದ ಉಪ ಕುಲಪತಿ, ಮಂಗಳೂರು ತೇಜಸ್ವಿ ಆಸ್ಪತ್ರೆಯ ಅಧ್ಯಕ್ಷರಾದ ಡಾ. ಎಂ. ಶಾಂತಾರಾಮ ಶೆಟ್ಟಿ ಹೇಳಿದರು.


ಉಪ್ಪಿನಂಗಡಿಯಲ್ಲಿ ನೂತನವಾಗಿ ಆರಂಭಗೊಂಡ ಸೂರ್ಯ ಆಸ್ಪತ್ರೆಯನ್ನು ಫೆ.17ರಂದು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ವೈದ್ಯರುಗಳು ನೀಡುವ ಸೇವೆ ನಮ್ಮ ಪಾಲಿಗೆ ದೇವರು ಕೊಟ್ಟಿರುವ ಕೊಡುಗೆಯಾಗಿರುತ್ತದೆ. ಅದೇ ರೀತಿಯಲ್ಲಿ ಉಪ್ಪಿನಂಗಡಿಯಲ್ಲಿ ಸೇವೆಗೆ ಅಣಿಯಾದ ಈ ಆಸ್ಪತ್ರೆ ಈ ಭಾಗದ ಜನರಿಗೆ ದೊರೆತ ಕೊಡುಗೆಯಾಗಿದ್ದು, ಈ ಆಸ್ಪತ್ರೆ ಜನರ ಆರೋಗ್ಯ ಕಾಪಾಡುವಲ್ಲಿ ಯಶಸ್ವಿಯಾಗಲಿ ಎಂದರು.


ಉದ್ಘಾಟನೆಗೊಂಡ ಈ ಆಸ್ಪತ್ರೆಯಲ್ಲಿ ಎಲ್ಲವೂ ವ್ಯವಸ್ಥಿತವಾಗಿದೆ. ಸವಲತ್ತು, ಸೌಲಭ್ಯಗಳು, ಆಧುನಿಕತೆಯ ಯಂತ್ರೋಪಕರಣ, ಆಪರೇಷನ್ ಥಿಯೇಟರ್ ಎಲ್ಲವೂ ಪೂರ್ಣ ಪ್ರಮಾಣದಲ್ಲಿ ಇದೆ. ಮುಂದೆ ಇದು 100 ಬೆಡ್‌ನ ಆಸ್ಪತ್ರೆಯಾಗಲಿ ಮತ್ತು ಮೆಡಿಕಲ್ ಕಾಲೇಜು ಆಗುವಂತಾಗಲಿ ಎಂದು ಶುಭ ಹಾರೈಸಿದರು.


ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ಬ್ರಿಜೇಶ್ ಚೌಟ ಮಾತನಾಡಿ, ಅಕ್ಷರ, ಆರೋಗ್ಯ, ಅಕ್ಷಯ ಈ ಮೂರೂ ಕ್ಷೇತ್ರ ಜನರನ್ನು ಆಕರ್ಷಿಸಿಸುತ್ತದೆ. ಈ ಪೈಕಿ ಉಪ್ಪಿನಂಗಡಿ ಅತೀ ಅವಶ್ಯಕತೆಯಾಗಿದ್ದ ಆಸ್ಪತ್ರೆ ಇಲ್ಲಿನ ಅಗತ್ಯತೆಗೆ ಅನುಗುಣವಾಗಿ ನಿರ್ಮಾಣ ಆಗಿದೆ. ವೈದ್ಯರು ದೇವರು ಮೆಚ್ಚುವ ಕೆಲಸ ಮಾಡುವವರು. ಅವರ ಕೆಲಸದಲ್ಲಿ ಪಾವಿತ್ರ್ಯತೆ ಇದ್ದು, ಇಲ್ಲಿ ನಿರ್ಮಾಣ ಆಗಿರುವ ಆಸ್ಪತ್ರೆಯ ಉದ್ದೇಶ ಫಲಿಸಲಿ, ಗ್ರಾಮೀಣ ಭಾಗದಲ್ಲಿ ಈ ರೀತಿಯ ಸೇವೆಗೆ ಈ ಆಸ್ಪತ್ರೆ ಪ್ರೇರಣೆ ಆಗಲಿ ಎಂದರು.


ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಉಪ್ಪಿನಂಗಡಿಯಲ್ಲಿ ಆಸ್ಪತ್ರೆ ನಿರ್ಮಾಣ ಆಗಿರುವುದು ಇಲ್ಲಿನ ಅಭಿವೃದ್ಧಿಗೆ ಸೇರಿದ ಗರಿ. ಉಪ್ಪಿನಂಗಡಿಯಲ್ಲಿ ಪೂರ್ಣ ಪ್ರಮಾಣದ ಆಸ್ಪತ್ರೆ ಇಲ್ಲದ ಕಾರಣ ಈ ಭಾಗದ ಮತ್ತು ಇದರ ಸುತ್ತಮುತ್ತಲಿನ ನೆಲ್ಯಾಡಿ, ಬೆಳ್ತಂಗಡಿ ಗಡಿ ಭಾಗದವರು, ಕಡಬ ತಾಲೂಕು ವ್ಯಾಪ್ತಿಯವರು, ಬಂಟ್ವಾಳ ಭಾಗದವರು ಪುತ್ತೂರು ಅಥವಾ ಮಂಗಳೂರು ಆಸ್ಪತ್ರೆಯನ್ನು ಅವಲಂಭಿಸಬೇಕಾಗಿತ್ತು. ಆದರೆ ಇದೀಗ ಇಲ್ಲಿನ ಕೊರತೆಯನ್ನು ಇಲ್ಲಿನ ಸೂರ್ಯಂಬೈಲ್ ಮನೆಯವರು ನೀಗಿಸಿದ್ದಾರೆ. ಇಲ್ಲಿ ಆಸ್ಪತ್ರೆ ನಿರ್ಮಾಣ ಆಗುವುದರೊಂದಿಗೆ ಸುಮಾರು 75 ಮಂದಿಗೆ ಉದ್ಯೋಗ ದೊರಕಿದೆ. ಇದು ಉಪ್ಪಿನಂಗಡಿಯ ಅಭಿವೃದ್ಧಿಗೆ ಪೂರಕವಾಗಿದೆ. ಇದರ ಅಭಿವೃದ್ಧಿಗಾಗಿ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.


ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಈ ಭಾಗದ ಕೊರತೆಯೊಂದು ನೀಗಿದಂತಾಗಿದೆ. ಎಲ್ಲಾ ಮೂಲ ಸೌಕರ್ಯದೊಂದಿಗೆ ಉತ್ತಮ ರೀತಿಯ ಆರೋಗ್ಯ ಸೇವೆ ದೊರಕುವಂತಾಗಲಿ ಎಂದು ಶುಭ ಹಾರೈಸಿದರು.


ಸೂರ್ಯಂಬೈಲ್ ಫಾರ್ಮ್‌ನ ಶಾಂತಾರಾಮ ಎಸ್. ಮತ್ತು ಶ್ರೀಮತಿ ಶಶಿಮಂಗಳ ದೀಪ ಬೆಳಗಿಸಿದರು. ಕರ್ನಾಟಕ ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್ ಆಸ್ಪತ್ರೆ ಕಟ್ಟಡವನ್ನು ಉದ್ಘಾಟಿಸಿದರು.


ಸನ್ಮಾನ:
ಆಸ್ಪತ್ರೆಯ ನಿರ್ಮಾಣ ಕಾರ್ಯದ ಎಂಜಿನಿಯರ್ ಅರುಣ್ ಕುಮಾರ್ ಮತ್ತು ಗ್ರಾಮ ಪಂಚಾಯತ್ ಸದಸ್ಯ ಯು.ಟಿ. ತೌಸೀಫ್‌ರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲಲಿತ, ಪುತ್ತೂರು ತಾಲೂಕು ವೈದ್ಯಾಧಿಕಾರಿ ಡಾ. ದೀಪಕ್ ರೈ, ಸೂರ್ಯಂಬೈಲ್ ಕುಟುಂಬದ ಮಹೇಶ್, ಶ್ರೀಮತಿ ಸ್ಮಿತಾ ಸಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಮಾರಂಭದಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಯಕ್, ಸದಸ್ಯರಾದ ಎ. ಕೃಷ್ಣ ರಾವ್ ಅರ್ತಿಲ, ದೇವಿದಾಸ ರೈ, ವೆಂಕಪ್ಪ ಪೂಜಾರಿ, ಡಾ. ರಮ್ಯಾ ರಾಜಾರಾಮ್, ಹಿರಿಯ ವೈದ್ಯ ಡಾ. ಕೆ.ಜಿ. ಭಟ್, ಡಾ. ಎಂ.ಆರ್. ಶೆಣೈ, ಡಾ. ರಾಜಾರಾಮ್, ಡಾ. ರಘು, ಡಾ. ಸುಪ್ರೀತ್ ಲೋಬೋ, ಉಪ್ಪಿನಂಗಡಿ ಮಾಲಿಕ್ ದೀನಾರ್ ಮಸೀದಿ ಅಧ್ಯಕ್ಷ ಹೆಚ್. ಯೂಸುಫ್ ಹಾಜಿ, ಕೋಟಿ-ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ದೇವಸ್ಥಾನ ಸಮಿತಿಯ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ಸಿ.ಎ. ಬ್ಯಾಂಕ್ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು, ಮಾಜಿ ಅಧ್ಯಕ್ಷ ಕೆ.ವಿ. ಪ್ರಸಾದ್, ನಿರ್ದೇಶಕ ಶ್ರೀರಾಮ ಪಾತಾಳ, ಹಿರಿಯರಾದ ಯು.ಕೆ. ಅಯ್ಯೂಬ್, ಉಪ್ಪಿನಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯರಾದ ಸುರೇಶ್ ಅತ್ರಮಜಲು, ಲೋಕೇಶ್ ಬೆತ್ತೋಡಿ, ಅಬ್ದುಲ್ ರಹಿಮಾನ್, ಸ್ಥಳೀಯ ಪ್ರಮುಖರಾದ ರಾಮಚಂದ್ರ ಮಣಿಯಾಣಿ, ನಝೀರ್ ಮಠ, ವಿಶ್ವನಾಥ ಶೆಟ್ಟಿ ಕಂಗ್ವೆ, ಯು.ಟಿ. ಇರ್ಷಾದ್, ಚಂದಪ್ಪ ಮೂಲ್ಯ, ಅಂಬಾ ಪ್ರಸಾದ್ ಪಾತಾಳ, ಶಿವಪ್ರಕಾಶ್ ಭಟ್, ಕೈಲಾರು ರಾಜಗೋಪಾಲ ಭಟ್, ಯು.ಜಿ. ರಾಧಾ, ಕೃಷ್ಣಪ್ರಸಾದ್ ಬೊಳ್ಳಾವು, ಉದಯ ಕಶ್ಯಪು ಮತ್ತಿತರರು ಉಪಸ್ಥಿತರಿದ್ದರು.
ಆಸ್ಪತ್ರೆಯ ಪ್ರಧಾನ ವೈದ್ಯ ಡಾ. ರಾಜೇಶ್ ಎಸ್. ಸ್ವಾಗತಿಸಿದರು. ಡಾ. ಚಂದ್ರಲೇಖಾ ವಂದಿಸಿದರು. ವಿನ್ಸಿ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here