ನೆಲ್ಯಾಡಿ: ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ ಸಂಭವಿಸಿ ಸವಾರರು ಗಾಯಗೊಂಡಿರುವ ಘಟನೆ ಬಜತ್ತೂರು ಗ್ರಾಮದ ಪೆರಿಯಡ್ಕ ಎಂಬಲ್ಲಿ ಫೆ.17ರಂದು ಮಧ್ಯಾಹ್ನ ನಡೆದಿದೆ.
ಮೊಹಮ್ಮದ್ ಸಿನಾನ್ ಎಂಬವರು ಕೆಎ 21 ಇಇ 3562 ನೋಂದಾವಣೆ ನಂಬರ್‌ನ ಮೋಟಾರ್ ಸೈಕಲ್‌ನಲ್ಲಿ ಮಹಮ್ಮದ್ ಅಜೀಂ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೆಮ್ಮಾರ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಬಂದವರು ಬಜತ್ತೂರು ಗ್ರಾಮದ ಪೆರಿಯಡ್ಕ ಎಂಬಲ್ಲಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿದ ಪರಿಣಾಮ ಗೋಳಿತ್ತೊಟ್ಟು ನಿವಾಸಿ ನೌಷದ್ ಎಂಬವರು ಸಪ್ವಾನ್ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಪುತ್ತೂರು ಕಡೆಯಿಂದ ಕೆಮ್ಮಾರ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸ್ಕೂಟರ್ (ಕೆಎ 21, ಇಡಿ 0398)ನ ಬಲಬದಿ ಹ್ಯಾಂಡಲ್‌ಗೆ ತಾಗಿದ ಪರಿಣಾಮ ಎರಡೂ ದ್ವಿಚಕ್ರ ವಾಹನ ಸವಾರರು ಮತ್ತು ಸಹಸವಾರರು ವಾಹನಗಳ ಸಮೇತ ರಸ್ತೆಗೆ ಬಿದ್ದಿದ್ದಾರೆ.
ಘಟನೆಯಲ್ಲಿ ನೌಷಾದ್‌ಗೆ ಯಾವುದೇ ಗಾಯವಾಗಿರುವುದಿಲ್ಲ. ಉಳಿದಂತೆ ಸಪ್ವಾನ್, ಮೊಹಮ್ಮದ್ ಸಿನಾನ್, ಮಹಮ್ಮದ್ ಅಜೀಂರವರು ಗಾಯಗೊಂಡಿದ್ದು ಗಾಯಾಳುಗಳನ್ನು ಪುತ್ತೂರು ಪ್ರಗತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ನೌಷಾದ್ ಅವರು ನೀಡಿದ ದೂರಿನಂತೆ ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.