ಕಾಣಿಯೂರು: ಶಾಲೆಯಲ್ಲಿ ಮಕ್ಕಳಿಗೆ ಸಾಮಾನ್ಯ ಜ್ಞಾನದ ಜೊತೆಗೆ ವ್ಯವಹಾರಿಕ ಜ್ಞಾನ ದೊರೆಯಬೇಕು ಎಂಬ ಉದ್ದೇಶದಿಂದ ಫೆ.25ರಂದು ದೋಳ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೆಟ್ರಿಕ್ ಮೇಳ ಚಿಣ್ಣರ ಜಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾಣಿಯೂರು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿರುವ ಲೋಕಯ್ಯ ಪರವ ದೋಳ್ಪಾಡಿ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಕಾಣಿಯೂರು ಕ್ಲಸ್ಟರ್ ಸಿ. ಆರ್. ಪಿ ಯಶೋದಾರವರು ಮಾತನಾಡಿ, ಗಣಿತದ ಜ್ಞಾನ, ವ್ಯಾಪಾರ ಮನೋಭಾವ, ವ್ಯಾಪಾರದಲ್ಲಿ ಲಾಭ ನಷ್ಟ ಹಾಗೂ ವ್ಯವಹಾರಿಕ ಜೀವನ ನಿರ್ವಹಣೆಯ ಮಹತ್ವ ತಿಳಿಯ ಪಡಿಸುವ ಉದ್ದೇಶದಿಂದ ಶಾಲೆಗಳಲ್ಲಿ ಮೆಟ್ರಿಕ್ ಮೇಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ
ಎಂದರು.

ಈ ಸಂದರ್ಭದಲ್ಲಿ ಶಾಲಾ ಎಸ್. ಡಿ. ಎಮ್. ಸಿ ಅಧ್ಯಕ್ಷ ದಯಾನಂದ ಕೂರೇಲು, ಉಪಾಧ್ಯಕ್ಷೆ ನವೀನಾ ವೇದವ್ಯಾಸ ರೈ, ಎಸ್. ಡಿ. ಎಮ್. ಸಿ ಸದಸ್ಯರು, ಕಾಣಿಯೂರು ಗ್ರಾಮ ಪಂಚಾಯತ್ ಸದಸ್ಯರು, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಶಾಲಾ ಮುಖ್ಯ ಗುರು ಜಯಣ್ಣ ಎಸ್, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು, ಪಾಲಕ ಪೋಷಕರು, ದೋಳ್ಪಾಡಿ ಹೈ ಸ್ಕೂಲ್ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಕಾಣಿಯೂರು ಅರೋಗ್ಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ವಿಭಿನ್ನ ರೀತಿಯಲ್ಲಿ ಚಾಲನೆ ನೀಡಲಾಯಿತು. ಮೆರವಣಿಗೆಯ ಮೂಲಕ ಸರ್ವರನ್ನು ಸ್ವಾಗತಿಸುವ ಮೂಲಕ ಆರಂಭವಾದ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂತು. ಮಾರುಕಟ್ಟೆ ಹೇಗೆ ಇರುತ್ತದೆ, ಮಾರುಕಟ್ಟೆಯಲ್ಲಿ ವ್ಯಾಪಾರ ಹೇಗೆ ನಡೆಯುತ್ತದೆ, ವ್ಯಾಪಾರ ವಹಿವಾಟು ಪಠ್ಯಕ್ಕೆ ಹೇಗೆ ಅನುಕೂಲವಾಗುತ್ತದೆ ಎನ್ನುವುದನ್ನು ತಿಳಿಯಪಡಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಮೇಳದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿತ್ತು. ವಿದ್ಯಾರ್ಥಿಗಳು ತಾವು ಮನೆಯಿಂದ ತಂದಿರುವ ಸೋರೆಕಾಯಿ, ಬಸಳೆ, ತೊಂಡೆಕಾಯಿ, ಹರಿವೆ ಸೊಪ್ಪು, ಪಪ್ಪಾಯಿ, ಕಲ್ಲಂಗಡಿ, ತಿಮಾರೆ, ಔಷಧಿ ಸಸ್ಯಗಳು, ಹಣ್ಣಿನ ಗಿಡಗಳು, ಮನೆಯಲ್ಲೇ ತಯಾರಿಸಿದ ತಿಂಡಿಗಳು, ಉಪ್ಪಿನಕಾಯಿ, ವಿವಿಧ ರೀತಿಯ ಹಣ್ಣಿನ ಜ್ಯೂಸ್, ಮಜ್ಜಿಗೆ, ಸೀಬೆಹಣ್ಣು, ಮಾವಿನಕಾಯಿ ಹೀಗೆ ಮುಂತಾದ ವಸ್ತುಗಳನ್ನು ಮಾರಾಟ ಮಾಡಿದರು. ಶಿಕ್ಷಕರು, ಪಾಲಕರು ಮತ್ತು ಸಾರ್ವಜನಿಕರು ವಿದ್ಯಾರ್ಥಿಗಳೊಂದಿಗೆ ವ್ಯಾಪಾರ ಮಾಡಿ ತಮಗಿಷ್ಟವಾದ ವಸ್ತುಗಳನ್ನು ಖರೀದಿಸಿದ್ದು, ಉತ್ತಮ ಸ್ಪಂದನೆ ದೊರೆತು ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂತು.